ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಪಾರ್ಲಿಮೆಂಟ್ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿಗಳ ವಿಧಾನ ಸಭಾ ಕ್ಷೇತ್ರಗಳಿಗಾಗಿ ನಡೆಯುವ ಉಪ ಚುನಾವಣೆಗಳಲ್ಲಿ ಈ ಕ್ಷೇತ್ರಗಳ ಮತದಾರರು ಸರ್ವಾಧಿಕಾರಿ, ಕೋಮುವಾದಿ ಹಾಗೂ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಏಜೆಂಟ್ ಗಿರಿಯಲ್ಲಿ ತೊಡಗಿ ಜನತೆಗೆ ಹಾಗೂ ದೇಶಕ್ಕೆ ವಂಚನೆ ಮಾಡುತ್ತಿರುವ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸುವ ಮೂಲಕ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ) ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದೇಶವನ್ನು ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ಒತ್ತೆ ಇಡುವ ದೇಶ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಇದರ ಭಾಗವಾಗಿಯೇ ಇಡೀ ದೇಶ ಕರೋನಾದಿಂದ ಬಾಧಿತವಾಗಿರುವಾಗ, ಪಾರ್ಲಿಮೆಂಟ್ ಹಾಗೂ ವಿಧಾನ ಸಭೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ರೈತ ಹಾಗೂ ಕಾರ್ಮಿಕ ವಿರೋಧಿಯಾದ ಕಾಯ್ದೆಗಳನ್ನು ಅಂಗೀಕರಿಸಿದೆ. ಇದರಿಂದ ರೈತ ಸಂಕುಲವೇ ನಾಶವಾಗುವ ಮತ್ತು ಕೃಷಿ ಭೂಮಿಗಳು ರೈತರ ಕೈನಿಂದ ಕಾರ್ಪೋರೇಟ್ ಕಂಪನಿಗಳ ವಶವಾಗುವ ಅಪಾಯವನ್ನು ಹೇರಿದೆ. ಮುಂಗಡ ಕೃಷಿ ವ್ಯಾಪಾರದಿಂದ ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳಿಂದ ಒಂದೆಡೆ ಎಲ್ಲಾ ರೈತರು ಹೈನುಗಾರರು, ಕುರಿ, ಕೋಳಿ ಮೀನು ಹಾಗೂ ಹಂದಿ ಸಾಕಾಣೆದಾರರು, ಎಪಿಎಂಸಿಗಳ ಕೋಟ್ಯಾಂತರ ಕೆಲಸಗಾರರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಾಲೀಕರು ಹಾಗೂ ಕೊಟ್ಯಾಂತರ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ. ಹೈನೋದ್ಯಮ, ಮಾಂಸೋದ್ಯಮ, ಚರ್ಮೋದ್ಯಮ, ಔಷದೋದ್ಯಮಗಳು ಪರಭಾರೆಯಾಗಲಿವೆ. ದೇಶದ ಗ್ರಾಹಕರು ಕಾಳಸಂತೆಯ ಲೂಟಿಗೊಳಗಾಗಲಿದ್ದಾರೆ.
ದೇಶದ ಸಾರ್ವಜನಿಕ ಆಸ್ತಿಗಳು ಹಾಗೂ ಸಾರ್ವಜನಿಕ ಉದ್ದಿಮೆಗಳಾದ ರೈಲ್ವೆ, ಬ್ಯಾಂಕ್ ವಿಮೆ, ಬಿ.ಎಸ್.ಎನ್.ಎಲ್, ವಿಮಾನಯಾನ, ವಿದ್ಯುತ್ ರಂಗ ಮುಂತಾದವುಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡಲಾಗಿದೆ ಮತ್ತು ವಹಿಸಿಕೊಡಲಾಗುತ್ತಿದೆ.
ಬಿಜೆಪಿ ಜನತೆಯ ಬದುಕುವ ಹಕ್ಕು, ಉದ್ಯೋಗದ ಭದ್ರತೆಯ ಹಕ್ಕು ಆಹಾರದ ಹಕ್ಕು, ವಿವಾಹದ ಹಕ್ಕು, ಅಲ್ಪ ಸಂಖ್ಯಾತರ ನಾಗರೀಕ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಮೇಲೆ ದಾಳಿ ನಡೆಸಿ ದೇಶವನ್ನು ಸರ್ವಾಧಿಕಾರದೆಡೆಗೆ ಬಹಳ ವೇಗವಾಗಿ ಮುನ್ನಡೆಸುತ್ತದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಾಯನಿಕ ಗೊಬ್ಬರಗಳ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೆರಿಸಿ ಜನತೆಯನ್ನು ಲೂಟಿಗೊಳ ಪಡಿಸಲಾಗುತ್ತಿದೆ.
ದೇಶವನ್ನು ಕೋಮು ಆಧಾರದಲ್ಲಿ ವಿಭಜಿಸುವ ಶಕ್ತಿಗಳ ಜೊತೆ ಕೈ ಜೋಡಿಸುತ್ತಾ ಜನತೆಯನ್ನು ಒಡೆದಾಳಲು ಕ್ರಮ ವಹಿಸುತ್ತಿದೆ.
ಅದ್ದರಿಂದ ದೇಶದ ಸ್ವಾತಂತ್ರ್ಯ, ಸ್ವಾವಲಂಬನೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಬಿಜೆಪಿಯನ್ನು ಜನತೆ ನಿರ್ಣಯಕವಾಗಿ ಸೋಲಿಸುವುದು ಅಗತ್ಯವಿದೆ.
ಯು. ಬಸವರಾಜ
ಕಾರ್ಯದರ್ಶಿ (11.04.2021)