ರೋಸಾ ಲಕ್ಸಂಬರ್ಗ್ 150 ನೇ ವಾರ್ಷಿಕ ಆಚರಣೆ ಕುರಿತು ಸಿಪಿಐ(ಎಂ) ಪೊಲೀಟ್ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್ ಅವರು ಬರೆದಿರುವ ಲೇಖನ.
ರೋಸಾ ಲಕ್ಸಂಬರ್ಗ್ ಮಹಾನ್ ಕಮ್ಯುನಿಸ್ಟ್ ಕ್ರಾಂತಿಕಾರಿ ನಾಯಕರುಗಳಲ್ಲಿ – ಮೊದಲ ಮಹಿಳೆ, ಕ್ರಾಂತಿಯ ಪ್ರಯತ್ನದಲ್ಲಿ ಹುತಾತ್ಮರಾದವರು, ಪರಿಷ್ಕರಣವಾದದ ವಿರುದ್ಧ ಮೊದಲ ದನಿ ಎತ್ತಿದವರು – ಇತ್ಯಾದಿಗಳಿಂದ ವಿಶಿಷ್ಟರಾದವರು. ಪ್ರಸಿದ್ಧ ಮಹಿಳಾ ನಾಯಕಿ ಕ್ಲಾರಾ ಜೆಟ್ಕಿನ್ ‘ಕ್ರಾಂತಿಯ ಬೆಂಕಿ’ ಮತ್ತು ಲೆನಿನ್ ಅವರು ‘ಎತ್ತರದಲ್ಲಿ ಹಾರುವ ಹದ್ದು’ ಎಂದು ಅವರನ್ನು ಕರೆದಿದ್ದರು. ಅವರ ಹುಟ್ಟಿನ 150ನೇ ವಾರ್ಷಿಕದ ಸಂದರ್ಭದಲ್ಲಿ ವಿಶೇಷ ಲೇಖನ.
ಮಾರ್ಚ್ 5, 2021 ರೋಸಾ ಲಕ್ಸಂಬರ್ಗ್ ಅವರ 150ನೇ ಜನ್ಮದಿನ. ಲಕ್ಸಂಬರ್ಗ್ ಅವರ ಸಂಗಾತಿಗಳು ಅವರನ್ನು ‘ರೆಡ್ ರೋಸಾ’(ಕೆಂಪು ರೋಸಾ) ಎಂದೇ ಕರೆಯುತ್ತಿದ್ದರು. ಅವರೊಬ್ಬ ಮಾರ್ಕ್ಸ್ವಾದಿ, ಅಂತರ್ರಾಷ್ಟ್ರೀಯವಾದಿ, ಕ್ರಾಂತಿಕಾರಿ ಮತ್ತು ಕಾರ್ಮಿಕ ವರ್ಗದ ಪ್ರಾಯೋಗಿಕ ಹೋರಾಟಗಳಲ್ಲಿ ಭಾಗಿಯಾಗುವವರು. ಅದಮ್ಯ ಇಚ್ಛಾಶಕ್ತಿಯುಳ್ಳ ಮತ್ತು ಯಾರಿಗೂ ಬಗ್ಗದ ಮಹಿಳೆ ರೆಡ್ ರೋಸಾ. ಅವರ ಬಲ ಮತ್ತು ಧೈರ್ಯವು, ಶೋಷಕರಲ್ಲಿ ನಡುಕವನ್ನುಂಟು ಮಾಡುತ್ತಿತ್ತು. ಅವರು ಪುರುಷರ ಅಬೇಧ್ಯ ಕೋಟೆಗಳಂತಿದ್ದ ಹಲವು ಕ್ಷೇತ್ರಗಳನ್ನು ಬೇಧಿಸಿ ಹೊಕ್ಕ ಧೀರ ಮಹಿಳೆ. ಕಾರ್ಮಿಕ ವರ್ಗದ ದ್ರೋಹಿಗಳು ಮತ್ತು ಆಳುವ ವರ್ಗದ ಏಜೆಂಟರುಗಳಿಂದ ಭೀಕರವಾಗಿ ಕೊಲೆಯಾದ ನೂರು ವರ್ಷಗಳ ನಂತರವೂ ಆಕೆಯ ಕೆಲಸ ಮತ್ತು ಮೇಲ್ಪಂಕ್ತಿಯನ್ನೂ ಇನ್ನೂ ನೆನೆಸಿಕೊಳ್ಳಲಾಗುತ್ತಿರುವ ಅಪ್ರತಿಮ ಮಹಿಳೆ.
ಜೊಮೆಸ್ಕ್ ಎಂಬ ಪೋಲಿಶ್ ನಗರದ ಮಧ್ಯಮವರ್ಗದ ಯಹೂದಿ ಕುಟುಂಬದಲ್ಲಿ ರೋಸಾ ಜನಿಸಿದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅವರು ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದರು. ಅವರ ಅನಾರೋಗ್ಯದ ಕಾರಣದಿಂದ ದೇಹದ ಸೊಂಟ ಮತ್ತು ಕಾಲುಗಳಲ್ಲಿ ತೀವ್ರ ನೋವನ್ನು ಜೀವನದುದ್ದಕ್ಕೂ ಅನುಭವಿಸಿದರು. ಆದರೆ ಆಕೆಯ ದುರ್ಬಲವಾದ ಮೈಕಟ್ಟು ಮತ್ತು ದೈಹಿಕ ದೌರ್ಬಲ್ಯಗಳು ಸಮಾಜವಾದದ ಬಗೆಗಿನ ಆಕೆಯ ಅಪಾರ ಬದ್ಧತೆಯನ್ನು, ಚೈತನ್ಯವನ್ನು ಕುಂದಿಸಲಿಲ್ಲ.
ರೋಸಾ ಅವರ ರಾಜಕೀಯ ಜೀವನವು ಅವರ 16ನೇ ವಯಸ್ಸಿನಲ್ಲಿ ಪೋಲೆಂಡಿನ ಪ್ರೊಲೆಟಾರಿಯಟ್ (ಶ್ರಮಜೀವಿ) ಪಕ್ಷಕ್ಕೆ ಸೇರಿದಾಗ ಪ್ರಾರಂಭವಾಯಿತು. ಆ ಸಮಯದಲ್ಲಿ ಆ ಪಕ್ಷವು ತೀವ್ರ ದಬ್ಬಾಳಿಕೆಯಲ್ಲಿತ್ತು. ಅವರ ಮೊದಲ ಹೋರಾಟವೆಂದರೆ ಸಾವಿರಾರು ಕಾರ್ಮಿಕರನ್ನು ಅಣಿನೆರೆದ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಿದ್ದು. ಹೋರಾಟಗಳನ್ನು ಹತ್ತಿಕ್ಕಲು ಸರಕಾರವು ಪಕ್ಷದ ನಾಲ್ಕು ಜನ ಮುಖಂಡರನ್ನು ಗಲ್ಲಿಗೇರಿಸಿತ್ತು. ರೋಸಾ ಮತ್ತು ಇತರರು ರಹಸ್ಯವಾಗಿ ಭೇಟಿಯಾಗುವ ಸಂದರ್ಭಗಳು ಏರ್ಪಟ್ಟವು ಏಕೆಂದರೆ ಅವರಲ್ಲಿ ಅನೇಕರ ಹೆಸರು ಪೊಲೀಸರ ಪಟ್ಟಿಯಲ್ಲಿತ್ತು. ಸಂಗಾತಿಗಳು ರೋಸಾಳನ್ನು ಸ್ವಿಜರ್ಲ್ಯಾಂಡಿಗೆ ಹೋಗಲು ನೀಡಿದ ಸಲಹೆಯ ಮೇರೆಗೆ ಆಕೆ 1889 ರಲ್ಲಿ ಅಲ್ಲಿಗೆ ಹೋದರು.
ಆಗ ಸ್ವಿಜರ್ಲ್ಯಾಂಡ್, ರಷ್ಯಾ ಮತ್ತು ಪೋಲೆಂಡಿನ ಅನೇಕ ಹೋರಾಟಗಾರರ ಕೇಂದ್ರವಾಗಿತ್ತು. ಇವರಲ್ಲಿ ರಷ್ಯಾದ ಮಾರ್ಕ್ಸ್ವಾದಿ ಕಾರ್ಮಿಕ ವಿಮೋಚನಾ ಗುಂಪು ಸೇರಿತ್ತು. ಈ ಗುಂಪನ್ನು 1883 ರಲ್ಲಿ ಜಾರ್ಜಿ ಪ್ಲೆಖಾನೋವ್, ವೇರಾ ಜಾಸುಲಿಚ್ ಮತ್ತು ಲಿಯೋ ಡಾಯಿಟ್ಶ್ ಸ್ಥಾಪಿಸಿದ್ದರು. ರೋಸಾ ಅವರು ಲಿಯೋ ಜೋಗಿಚಸ್ (ಅವರ ಮುಂದಿನ ಜೀವನದುದ್ದಕ್ಕೂ ಬಾಳಸಂಗಾತಿಯಾದ ಲಿತುವೇನಿಯನ್ ಮಾರ್ಕ್ಸ್ವಾದಿ) ಜೊತೆಗೆ ಜ್ಯೂರಿಚ್ ವಿಶ್ವವಿದ್ಯಾಲಯವನ್ನು ಸೇರಿದರು. ರೋಸಾ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. “ಪೋಲೆಂಡಿನ ಕೈಗಾರಿಕಾ ಅಭಿವೃದ್ಧಿ” ವಿಷಯದ ಕುರಿತು ತಮ್ಮ ಡಾಕ್ಟರೇಟ್ ಪ್ರಬಂಧವನ್ನು ಬರೆದಿದ್ದರು. ರೋಸಾ ಮತ್ತು ಲಿಯೋ ಜೊತೆ ಸೇರಿ ಪೋಲೆಂಡ್ ರಾಜಸತ್ತೆ ಮತ್ತು ಲಿಥುವಾನಿಯದ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿಯನ್ನು ಸ್ಥಾಪಿಸಿದರು.
ಆ ದಿನಗಳಲ್ಲಿ ಜರ್ಮನಿಯು ಕಾರ್ಮಿಕ ಚಳುವಳಿಯ ಕೇಂದ್ರವಾಗಿತ್ತು. ಇದರೊಂದಿಗೆ ಮಾರ್ಕ್ಸ್ವಾದಿ ಚಿಂತನೆಗಳ ಮತ್ತು ಕ್ರಿಯೆಗಳ ಕೇಂದ್ರವೂ ಆಗಿತ್ತು. ಜರ್ಮನಿಯಲ್ಲಿ ಮುಖ್ಯ ಮಾರ್ಕ್ಸ್ವಾದಿ ಪಕ್ಷವೆಂದರೆ “ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಜರ್ಮನಿ (ಎಸ್.ಪಿ.ಡಿ) ಆಗಿತ್ತು. ಜರ್ಮನಿಯ ಪೌರತ್ವವನ್ನು ಪಡೆದು ರೋಸಾ 1898ರಲ್ಲಿ ಸ್ವಿಜರ್ಲ್ಯಾಂಡ್ ನಿಂದ ಹೊರಟು ಬರ್ಲಿನ್ ಗೆ ಬಂದರು. ಜರ್ಮನ್ ನಿಯಂತ್ರಣದಲ್ಲಿರುವ ಪೊಲೀಶ್ ಪ್ರದೇಶದಲ್ಲಿ ಎಸ್.ಪಿ.ಡಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಕೆಲಸ ಮಾಡುತ್ತಿದ್ದರಿಂದ, ರೋಸಾ ಮೊದಲಿಗೆ ಪಕ್ಷದ ಪೋಲಿಶ್ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡರು. ಆದರೆ ಬರಿಯ ಪೋಲಿಶ್ ಪರಿಣತೆ ಮಾತ್ರವಾಗಿ ಮುಂದುವರೆಯುವುದು ರೋಸಾಗೆ ಇಷ್ಟವಿರಲಿಲ್ಲ. ಇತರ ಹಲವು ವಾಗ್ವಾದಗಳು ರೋಸಾರನ್ನು ಕರೆಯುತ್ತಿದ್ದವು.
ಜರ್ಮನ್ ಸಮಾಜವಾದಿ ಚಳುವಳಿಯು ಎರಡು – ಕ್ರಾಂತಿಕಾರಿ ಮತ್ತು ಪರಿಷ್ಕರಣವಾದಿ ಪ್ರವೃತ್ತಿಯ – ಮುಖ್ಯ ಮತ್ತು ಸ್ಪರ್ಧಾತ್ಮಕ ಬಣಗಳಾಗಿ ಒಡೆದಿತ್ತು. ಪರಿಷ್ಕರಣವಾದಿಗಳು, ವ್ಯವಸ್ಥೆಯೊಳಗೆ ಕೆಲಸ ಮಾಡಬೇಕು ಮತ್ತು ಸಂಸತ್ತಿನ ಕೆಲಸಕ್ಕೆ ಆದ್ಯತೆ ಕೊಡಬೇಕು ಎಂದು ಪ್ರತಿಪಾದಿಸಿದರು. ಅವರ ಮುಖ್ಯ ವಕ್ತಾರ ಎಡ್ವರ್ಡ್ ಬರ್ನ್ಸ್ಟೈನ್ ಆಗಿದ್ದರು. ಜರ್ಮನ್ ಪ್ರಭುತ್ವವು ತನ್ನ ಕಾನೂನುಗಳನ್ನು ಎತ್ತಿ ಹಿಡಿಯುವಂತೆ ಮತ್ತು ತನ್ನ ಕಾರ್ಮಿಕ ವರ್ಗದ ಕುರಿತು ಉದಾರ ಭಾವನೆ ಇರುವಂತೆ ಮಾಡಲು ಎಸ್.ಪಿ.ಡಿ ಒತ್ತಡ ಹೇರಬೇಕು. ಜರ್ಮನ್ ಪ್ರಭುತ್ವದ ದಿಕ್ಕು ಈಗಾಗಲೇ ಸಮಾಜವಾದದ ಕಡೆಗೆ ಇದೆ. ಅದನ್ನು ಆ ವಿಕಾಸದ ಹಾದಿಯಲ್ಲಿ ತಳ್ಳುವುದು ಎಸ್.ಪಿ.ಡಿ ಕೆಲಸವಾಗಿದೆ, ಎಂದು ಬರ್ನ್ಸ್ಟೈನ್ ವಾದಿಸಿದರು. ರೋಸಾ ಬರೆದ ‘ಸುಧಾರಣೆ ಅಥವಾ ಕ್ರಾಂತಿ’ ಎಂಬ ಕಿರುಪುಸ್ತಕ ಪರಿಷ್ಕರಣಾವಾದದ ಕಟುಟೀಕೆಯಾಗಿತ್ತು. ಶ್ರಮಜೀವಿಗಳು ಅಧಿಕಾರವನ್ನು ವಶಪಡಿಸಿಕೊಂಡು ಉತ್ಪಾದನಾ ಪ್ರಕ್ರಿಯೆಯನ್ನು ಪರಿವರ್ತಿಸಿದರೆ ಮಾತ್ರ, ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ ವೈರುಧ್ಯವನ್ನು ನಿವಾರಿಸಬಹುದು. ‘ವಿಕಾಸ ಹೊಂದುತ್ತಿರುವ ಸಮಾಜವಾದʼದ ಮೂಲಕ ಇದು ಸಾಧ್ಯವಿಲ್ಲ ಎಂದು ರೋಸಾ ನಂಬಿದ್ದರು.
ಅಗಸ್ಟ್ ಬೆಬೆಲ್, ಕಾರ್ಲ್ ಕೌಟಸ್ಕಿ, ವಿಲ್ಹೆಲ್ಮ್ ಲೈಬ್ನಿಕ್ತ್ ಮತ್ತು ರೋಸಾ ಲಕ್ಸಂಬರ್ಗ್ ಅವರನ್ನು ಒಳಗೊಂಡ ಎಸ್.ಪಿ.ಡಿ ಯ ಎಡಪಂಥಿಯರು ಬರ್ನ್ಸ್ಟೈನ್ ರನ್ನು ವಿರೋಧಿಸಿದರು. ಜರ್ಮನಿಗೆ ಬಂದು ಕೇವಲ 2 ವರ್ಷಗಳಾಗಿದ್ದ ರೋಸಾ ಲಕ್ಸಂಬರ್ಗ್ ಬರ್ನ್ಸ್ಟೈನ್ ಅವರ ಮೇಲೆ ಸೈಧ್ಧಾಂತಿಕ ದಾಳಿಯ ಮುಂದಾಳತ್ವ ವಹಿಸಿದರು. 1900ರಲ್ಲಿ ಮೊದಲು ಪ್ರಕಟವಾದ ಅವರ ಅದ್ಭುತ ಪ್ರಬಂಧ “ಸುಧಾರಣೆ ಅಥವಾ ಕ್ರಾಂತಿ” ಪಕ್ಷದಲ್ಲಿ ಬಹಳ ಚರ್ಚೆಗೆ ಒಳಗಾಯಿತು. ಶತಮಾನಗಳ ನಂತರವೂ ಪ್ರಸ್ತುತವಾಗುವ ಕೆಲವು ಮೂಲಭೂತ ಪ್ರಶ್ನೆಗಳನ್ನು ಈ ಪ್ರಬಂಧವು ಹುಟ್ಟುಹಾಕುತ್ತದೆ. ಇದು ಕಾರ್ಯವ್ಯೂಹ ಮತ್ತು ಕಾರ್ಯತಂತ್ರಗಳ ನಡುವಿನ ಸಂಬಂಧವನ್ನು ಅತ್ಯಂತ ಸರಳವಾದ, ಸ್ಪಷ್ಟವಾದ ಮತ್ತು ನಿಸ್ಸಂದಿಗ್ಧವಾದ ರೀತಿಯಲ್ಲಿ ನಿರೂಪಿಸುತ್ತದೆ. (ಕ್ರಾಂತಿ ಮತ್ತು) ವ್ಯವಸ್ಥೆಯೊಳಗಿನ ಸಾಮಾಜಿಕ ಸುಧಾರಣೆಯ ಹೋರಾಟಗಳ ನಡುವೆ ಯಾವುದೇ ವಿರೋಧಾಭಾಸಗಳಿಲ್ಲ ಎಂದು ಅದು ತೋರಿಸುತ್ತದೆ. ಚುನಾವಣೆಯಲ್ಲಿ ಭಾಗವಹಿಸುವ ಪ್ರಾಮುಖ್ಯತೆಯನ್ನು ರೋಸಾ ಎಂದಿಗೂ ಕಡೆಗಣಿಸಿರಲಿಲ್ಲ. ಜನರನ್ನು ಸಜ್ಜುಗೊಳಿಸಲು ಸಹಾಯಕವಾಗುವ ಬಂಡವಾಳಶಾಹಿ ಒದಗಿಸಿದ ಕಾರ್ಯವಿಧಾನಗಳನ್ನು ಬಳಸುವುದರ ಕುರಿತು ಅವರು ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಇದಕ್ಕೆ ಸಮಾನಾಂತರವಾಗಿ ರಷ್ಯಾದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿದ್ದವು ಮತ್ತು ಅವುಗಳು ಅಂತಿಮವಾಗಿ ಬೋಲ್ಶೆವಿಕ್ ಮತ್ತು ಮೆನ್ಶೆವಿಕ್ ಗಳ ನಡುವಿನ ವಿಭಜನೆಗೆ ಕಾರಣಗಳಾದವು. ಅಲ್ಲೂ ‘ಪಾರ್ಲಿಮೆಂಟರಿವಾದʼ (ಬೂರ್ಜ್ವಾ ಪಾರ್ಲಿಮೆಂಟರಿ ವ್ಯವಸ್ಥೆಯ ಮೂಲಕವೇ ಸಮಾಜವಾದ ಸಾಧಿಸಬಹುದು) ಮತ್ತು ‘ಆರ್ಥಿಕವಾದ’ (ಕಾರ್ಮಿಕ ವರ್ಗದ ಆರ್ಥಿಕ ಬೇಡಿಕೆಗಳಿಗೆ ಮಾತ್ರ ಆದ್ಯತೆ ನೀಡಿ ಅದಕ್ಕೆ ಸೀಮಿತಗೊಳ್ಳುವುದು) ವಿವಾದಾತ್ಮಕ ವಿಷಯಗಳಾಗಿದ್ದವು. ಆ ಸಮಯದಲ್ಲಿಯೇ ಬರ್ನ್ಸ್ಟೈನ್ ನ ಸಿದ್ಧಾಂತದ, ಪರಿಷ್ಕರಣಾವಾದಿ ಸಿದ್ಧಾಂತದ ವಿವಿಧ ಅಂಶಗಳು ಮತ್ತು ಅದರ ವರ್ಗದ ಬೇರುಗಳ ವಿಶ್ಲೇಷಣೆ ಕುರಿತು ಬರೆದ ರೋಸಾಳ ಕಿರುಪುಸ್ತಕವು ಅವುಗಳ ಬಗ್ಗೆ ಹೊಸ ಹಾದಿಗಳನ್ನು ತೆರೆದಿಡುತ್ತವೆ. ಆದ್ದರಿಂದ ವರ್ಗ ಸಹಕಾರದ ವಿರುದ್ಧದ ಅಂತರರಾಷ್ಟ್ರೀಯ ಹೋರಾಟಕ್ಕೆ ರೋಸಾ ನೀಡಿದ ಕೊಡುಗೆ ಇತರರಿಗಿಂತ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ಹೇಳಬಹುದು.
ಈ ಅದ್ಭುತ ಕ್ರಾಂತಿಕಾರಿಗೆ ಸಿದ್ಧಾಂತ ಮಾತ್ರ ಸಾಕಾಗಲಿಲ್ಲ. ಆಕೆ ಸದಾ ಯಾವುದಾದರೂ ಕಾರ್ಯಾಚರಣೆಯಲ್ಲಿ ಧುಮುಕುತ್ತಿದ್ದರು. 1905ರಲ್ಲಿ, ರಷ್ಯಾದಲ್ಲಿ ಮೊದಲ ಕ್ರಾಂತಿಕಾರಿ ದಂಗೆ ನಡೆದಾಗ, ರೋಸಾ ರಷ್ಯಾದ ಹಿಡಿತದಲ್ಲಿರುವ ಪೋಲೆಂಡಿನ ಭಾಗಕ್ಕೆ ಯಾರಿಗೂ ತಿಳಿಯದ ರೀತಿಯಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಸಭೆಗಳನ್ನು ನಿಷೇಧಿಸಲಾಗಿತ್ತು. ಆದರೂ ಕಾರ್ಮಿಕರು ತಮ್ಮ ಭದ್ರಕೋಟೆಯಾದ ಕಾರ್ಖಾನೆಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದರು. ರೋಸಾ ಕಾನೂನುಬಾಹಿರವಾಗಿ ಪತ್ರಿಕೆಯೊಂದನ್ನು ಹೊರತಂದು ಎಲ್ಲಾ ಕಾರ್ಮಿಕರಿಗೆ ಹಂಚುತ್ತಿದ್ದರು. ಮಾರ್ಚ್ 1906 ರಲ್ಲಿ ಆಕೆಯನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ನಾಲ್ಕು ತಿಂಗಳ ನಂತರ, ಅವರು ಅನಾರೋಗ್ಯ ಮತ್ತು ಜರ್ಮನ್ ಪಾಸ್ಪೋರ್ಟ್ ನ ಆಧಾರದ ಮೇಲೆ ಅಧಿಕಾರಿಗಳು ಆಕೆಯನ್ನು ಬಿಡುಗಡೆ ಮಾಡಿದರು. ಅವರನ್ನು ರಷ್ಯಾದಿಂದ ಗಡಿಪಾರು ಮಾಡಲಾಯಿತು.
ಪರಿಷ್ಕರಣವಾದಿಗಳ ಜೊತೆಗೆ ಮತ್ತು ಕಾರ್ಲ್ ಕೌತ್ಸ್ಕಿ ನೇತೃತ್ವದ ಗುಂಪಿನೊಂದಿಗೆ ನ ರೋಸಾ ಅವರ ಭಿನ್ನಾಭಿಪ್ರಾಯಗಳು ತೀಕ್ಷ್ಣವಾಗಿ ಮತ್ತು ಕಹಿಯಾಗಿ ಬೆಳೆಯುತ್ತಾ ಹೋದವು. ಸಾಮ್ರಾಜ್ಯಶಾಹಿ ಆಕಾಂಕ್ಷೆಗಳಿಂದ ಹುಟ್ಟಿಬೆಳೆಯುವ ಜರ್ಮನ್ ಆಳುವ ವರ್ಗಗಳ ಯುದ್ಧ ಮತ್ತು ಮಿಲಿಟರಿವಾದದ ಅಪಾಯಗಳ ಬಗ್ಗೆ ಅವರು ಮೊದಲೇ ಎಚ್ಚರಿಸಿದ್ದರು ಮತ್ತು ಯುದ್ಧ ಅನಿವಾರ್ಯ ಎಂದು ಅವರಿಗೆ ಮನವರಿಕೆಯಾಗಿತ್ತು. ತನ್ನ ಪಕ್ಷದಲ್ಲಿನ ಮತ್ತು ಇತರ ಅನೇಕ ಯುರೋಪಿಯನ್ ಸಮಾಜವಾದಿ ಪಕ್ಷಗಳಲ್ಲಿನ ಪರಿಷ್ಕರಣಾವಾದಿ ಪ್ರವೃತ್ತಿಗಳು ಯುದ್ಧವನ್ನು, ಸಾಮ್ರಾಜ್ಯಶಾಹಿ ಲಾಭಕ್ಕಾಗಿ ರಾಷ್ಟ್ರೀಯವಾದಿ ಉನ್ಮಾದದಲ್ಲಿ ಕಾರ್ಮಿಕರು ಕಾರ್ಮಿಕರೊಡನೆ ಸೆಣಾಸಾಡುವ ರಕ್ತದೋಕುಳಿಯನ್ನಾಗಿ ಪರಿವರ್ತಿಸುತ್ತದೆ. ಇದು ಈ ಸಂದರ್ಭದ ಕ್ರಾಂತಿಕಾರಿ ಸಾಧ್ಯತೆಗಳನ್ನು ನಾಶಪಡಿಸುತ್ತದೆ ಎಂದು ರೋಸಾ ಆತಂಕಿತರಾಗಿದ್ದರು. ಅವರು ಮಿಲಿಟರಿವಾದ ಮತ್ತು ಕೈಸರ್ ವಿರುದ್ಧ ಪ್ರಬಂಧಗಳ ಸರಣಿಯನ್ನು ಬರೆದರು. ಜರ್ಮನಿಯಲ್ಲಿದ್ದುಕೊಂಡು, ಅಂದರೆ ಭೀಕರ ಪಶುವಿನ ನೆರಳಲ್ಲೇ ಇದ್ದುಕೊಂಡೇ, ಸಂಕುಚಿತ ರಾಷ್ಟ್ರೀಯವಾದದ ವಿರುದ್ಧ ರೋಸಾ ಅವರ ಧೀರಹೋರಾಟ, ನಂತರ ಎರಡನೇ ಅಂತರಾಷ್ಟ್ರೀಯದಲ್ಲಿ ಲೆನಿನ್ ನೇತೃತ್ವದ ಸಂಕುಚಿತ ರಾಷ್ಟ್ರೀಯವಾದದ ವಿರುದ್ಧ ಹೋರಾಟಕ್ಕೆ ಮುಂಚಿತವಾಗಿಯೇ ನಡೆದಿತ್ತು ಎನ್ನುವುದರಲ್ಲಿ ಆಶ್ಚರ್ಯವೇನು ಇಲ್ಲ. ಅವರು ಹಲವಾರು ಬಾರಿ ಜೈಲಿಗೆ ಹೋಗಿದ್ದರು, ಆದರೆ ಜೈಲಿನಲ್ಲಿದ್ದ ತನ್ನ ಹೆಚ್ಚಿನ ಅವಧಿಯನ್ನು ಲೇಖನಗಳನ್ನು ಬರೆಯಲು ಬಳಸಿದರು.
1907ರಲ್ಲಿ, ರಷ್ಯಾದ ಸಾಮಾಜಿಕ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ರೋಸಾ ಲೆನಿನ್ ಅವರನ್ನು ಭೇಟಿಯಾದರು. ಭೇಟಿಯಾದ ಸಂದರ್ಭದಲ್ಲಿ ಅವರ ಮಧ್ಯೆ ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚೆ ಆಯಿತು ಎಂಬುದರ ಬಗ್ಗೆ ದಾಖಲೆಗಳಿಲ್ಲ. ಆದರೆ ಯುರೋಪಿನ ಅನೇಕ ಪಕ್ಷಗಳನ್ನು ಆವರಿಸಿರುವ ಪರಿಷ್ಕರಣವಾದಿ ಪ್ರವೃತ್ತಿಯ ವಿರುದ್ಧ ಹೋರಾಡುವ ಬಗ್ಗೆ ಇಬ್ಬರು ಸಮಾನಮನಸ್ಕರಾಗಿದ್ದರು ಎಂದು ಮಾತ್ರ ಹೇಳಬಹುದು. ಅದರ ಸ್ವಲ್ಪ ಸಮಯದ ನಂತರ ಅವರು ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ ನಡೆದ ಸಮಾಜವಾದಿಗಳ ಎರಡನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡರು. ಎಲ್ಲಾ ಕಾರ್ಮಿಕ ಪಕ್ಷಗಳು ಯುದ್ಧದ ವಿರೋಧದಲ್ಲಿ ಒಂದಾಗಬೇಕು ಎಂದು ಅವರು ಮಂಡಿಸಿದ ನಿರ್ಣಯವನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಮಹಿಳಾ ಕಾರ್ಮಿಕರ ಸಮಸ್ಯೆಗಳನ್ನು ಸ್ಟುಟ್ಗಾರ್ಟ್ ಸಮ್ಮೇಳನದ ಅಜೆಂಡಾಗೆ ತರಲು ಅವರ ಆಪ್ತ ಒಡನಾಡಿಯಾದ ಕ್ಲಾರಾ ಜೆಟ್ಕಿನ್ ಉಪಕ್ರಮಗಳನ್ನು ರೋಸಾ ಬೆಂಬಲಿಸಿದರು.
ಮಾಡಿದ “ತಪ್ಪುಗಳನ್ನು” ಮೀರಿಸುವಷ್ಟು ರೋಸಾ ಅವರ ಕೊಡುಗೆಗಳಿರುವುದರಿಂದಾಗಿಯೇ, ಅವರ ಸಂಪೂರ್ಣ ಕೃತಿಗಳನ್ನು ಪ್ರಕಟಿಸಬೇಕೆಂದು ಲೆನಿನ್ ಅವರು ಬಯಸಿದ್ದರು. ಜರ್ಮನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯಲ್ಲಿ ಪರಿಷ್ಕರಣಾವಾದದ ವಿರುದ್ಧದ ಹೋರಾಟದಲ್ಲಿ, ಬರ್ನ್ಸ್ಟೈನ್ ಮತ್ತು ಕೌತ್ಸ್ಕಿ ಯಂತಹ ಹಿರಿಯ ನಾಯಕರನ್ನು ಎದುರು ಹಾಕಿಕೊಂಡು, ರೋಸಾ ಅವರು ಅಗ್ರಗಣ್ಯರಾಗಿದ್ದರು. ಅವರು ಯುದ್ಧದ ಬಗ್ಗೆ ಸಾಮಾಜಿಕ ಪ್ರಜಾಪ್ರಭುತ್ವವಾದಿಗಳ ಉಗ್ರ ರಾಷ್ಟ್ರೀಯತಾವಾದಿ ನಿಲುವುಗಳನ್ನು ಸ್ವೀಕರಿಸಲು ನಿರಾಕರಿಸುವ ನಿಜವಾದ ಅಂತರರಾಷ್ಟ್ರೀಯವಾದಿ ಆಗಿದ್ದರು. ಅವರಿಗೆ ವರ್ಗ ಹೋರಾಟದಲ್ಲಿ ನಂಬಿಕೆಯಿತ್ತು. ಅತಿಯಾದ ಕೇಂದ್ರೀಕರಣದ ಅಪಾಯಗಳ ಬಗ್ಗೆ ಆಕೆಯ ವಿಚಾರಗಳು ಲೆನಿನ್ ನೇತೃತ್ವದ ಪಕ್ಷಕ್ಕೆ ಸಂಬಂಧಿಸಿದಂತೆ ತಪ್ಪಾಗಿ ಪ್ರತಿಪಾದಿತವಾಗಿರಬಹುದು. ಆದರೆ ನಂತರದ ವರ್ಷಗಳಲ್ಲಿ ಅನೇಕ ಸಮಾಜವಾದಿ ದೇಶಗಳಲ್ಲಿನ ಪಕ್ಷಗಳಲ್ಲಿ ಆಕೆ ನಿರೂಪಿಸಿದ ಅನೇಕ ಅಪಾಯಗಳು ನಿಜವಾದವು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ರೋಸಾ 1907 ಮತ್ತು 1919ರಲ್ಲಿ ನಡೆದ ಅವರ ಹತ್ಯೆಯ ನಡುವಿನ ಅವಧಿಯಲ್ಲಿ ಅನೇಕ ಪ್ರಮುಖ ಕೃತಿಗಳನ್ನು ಬರೆದಿದ್ದಾರೆ. 1913 ರಲ್ಲಿ, ಅವರು ಬರೆದ “ಬಂಡವಾಳದ ಶೇಖರಣೆ : ಸಾಮ್ರಾಜ್ಯಶಾಹಿಯ ವಿವರಣೆಗೆ ಒಂದು ಕೊಡುಗೆ” ಪುಸ್ತಕದ ಮೂಲಕ ಬಂಡವಾಳದ ಶೇಖರಣೆಯ ವಿಷಯದ ಚರ್ಚೆಯಲ್ಲಿ ತೊಡಗಿಸಿಕೊಂಡರು. ಬಂಡವಾಳಶಾಹಿಯು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಗೆ ವಿಸ್ತರಿಸಿದ್ದು ಮತ್ತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಇದು ಸೃಷ್ಟಿಸಿದ ಆಂತರಿಕ ವಿರೋಧಾಭಾಸಗಳನ್ನು ರೋಸಾ ಗಮನಿಸಿದ್ದರು. ಸಾಮ್ರಾಜ್ಯಶಾಹಿಯು ಬಂಡವಾಳಶಾಹಿ ಶೇಖರಣೆಯ ಆಂತರಿಕ ನಿಯಮಗಳ ನೇರ ಬೆಳವಣಿಗೆಯಾಗಿದೆ ಎಂದು ಅವರು ವಾದಿಸಿದರು. ಬೇರೊಂದು ರೀತಿಯಲ್ಲಿ ಹೇಳುವುದಾದರೆ ಬಂಡವಾಳಶಾಹಿಯು ಸಾಮ್ರಾಜ್ಯಶಾಹಿಯಾಗುವ ಪ್ರವೃತ್ತಿ ತೋರುತ್ತಿದೆ. ಹಾಗಾಗಿ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವಲ್ಲದ ಬಂಡವಾಳಶಾಹಿಯ ವಿರುದ್ಧ ಯಾವುದೇ ಹೋರಾಟ ಸಾಧ್ಯವಿಲ್ಲ. “ಅಂತರಾಷ್ಟ್ರೀಯ ಶ್ರಮಜೀವಿಗಳು ಸಾಮ್ರಾಜ್ಯಶಾಹಿಯ ವಿರುದ್ಧ ತಮ್ಮ ಸಂಪೂರ್ಣ ಶಕ್ತಿ ಮತ್ತು ತೀವ್ರ ತ್ಯಾಗಮಾಡುವ ಧೈರ್ಯದಿಂದ ಎದ್ದು ನಿಂತಾಗ ಮತ್ತು ‘ಯುದ್ಧದ ಮೇಲಿನ ಯುದ್ಧ’ ಎಂಬ ಘೋಷಣೆಯನ್ನು ತಮ್ಮ ಪ್ರಾಯೋಗಿಕ ರಾಜಕಾರಣದ ಮಾರ್ಗಸೂಚಿಯನ್ನಾಗಿ ಮಾಡಿದಾಗ ಮಾತ್ರ ಸಮಾಜವಾದದ ಅಂತಿಮ ಗುರಿ ಈಡೇರುವುದು ಸಾಧ್ಯ.” ಎಂದು ರೋಸಾ ಅವರು ಜೈಲಿನಲ್ಲಿದ್ದಾಗ ಬರೆಯುತ್ತಾರೆ.
ತಮ್ಮ ಕೆಲಸದ ಮೂಲಕ, ಬರಹಗಳ ಮೂಲಕ, ಹಲವಾರು ಸಭೆಗಳಲ್ಲಿ ಭಾಗವಹಿಸುವ ಮೂಲಕ ಜನರನ್ನು ಯುದ್ಧದ ವಿರುದ್ಧ ಸಂಘಟಿಸಲು ಮತ್ತು ಸಜ್ಜುಗೊಳಿಸಲು ರೋಸಾ ತಮ್ಮ ಎಲ್ಲಾ ಶಕ್ತಿಗಳನ್ನು ಮೀಸಲಾಗಿಟ್ಟರು. ಹಾಗೇನಾದರೂ ಯುದ್ಧ ಪ್ರಾರಂಭವಾದರೆ ಸಾರ್ವತ್ರಿಕ ಮುಷ್ಕರವನ್ನು ಆಯೋಜಿಸುವುದು ಅವರ ಪ್ರಯತ್ನವಾಗಿತ್ತು. “ಮಿಲಿಟರಿವಾದದ ಎರಡು ರೂಪಗಳಾದ – ಯುದ್ಧ ಮತ್ತು ಸಶಸ್ತ್ರ ಶಾಂತಿ – ಬಂಡವಾಳಶಾಹಿಯ ಕೂಸುಗಳು ಮತ್ತು ತಾರ್ಕಿಕ ಫಲಿತಗಳು. ಆದ್ದರಿಂದ ಬಂಡವಾಳಶಾಹಿಯ ವಿನಾಶದಿಂದ ಮಾತ್ರ ಅವನ್ನು ಹೋಗಲಾಡಿಸುವುದು ಸಾಧ್ಯ. ಹಾಗಾಗಿ ಶಸ್ತ್ರಾಸ್ತ್ರಗಳ ಅಗಾಧ ಹೊರೆಯಿಂದ ವಿಮೋಚನೆಯನ್ನು ಮತ್ತು ವಿಶ್ವಶಾಂತಿಯನ್ನು ಬಯಸುವವರು ಸಮಾಜವಾದವನ್ನು ಸಹ ಬಯಸಬೇಕು” ಎಂದು ಹೇಳಿದರು.
1910 ರಲ್ಲಿ, ರೋಸಾ ಮತ್ತು ಅವರ ಒಡನಾಡಿಗಳಾದ ಕ್ಲಾರಾ ಜೆಟ್ಕಿನ್, ಪ್ರಾನ್ಸ್ ಮೆಹರಿಂಗ್ ಮತ್ತು ಕಾರ್ಲ್ ಲೈಬ್ನಿಖ್ತ್, ಎಸ್.ಪಿ.ಡಿ ತನ್ನ ಪರಿಷ್ಕರಣಾವಾದಿ ನಿಲುವನ್ನು ಬದಲಾಯಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಅವರು ಎಸ್.ಪಿ.ಡಿ ಯಿಂದ ದೂರ ಸರಿದರು ಮತ್ತು ‘ಅಂತರ್ರಾಷ್ಟ್ರೀಯವಾದಿಗಳು’ ಎಂಬ ಪ್ರತ್ಯೇಕ ಗುಂಪನ್ನು ರಚಿಸಿದರು. ಈ ಗುಂಪು ನಂತರ ‘ಸ್ಪಾರ್ಟಕಸ್ ಲೀಗ್’ ಮತ್ತು ಆಫ್ ಜರ್ಮನಿಯ ಕಮ್ಯುನಿಸ್ಟ್ ಪಾರ್ಟಿ ಆಗಿ ಬೆಳೆಯಿತು. ಯುದ್ಧದ ವಿರುದ್ಧದ ಅವರ ಹಲವು ಚಟುವಟಿಕೆಗಳು ಅವರ ವಿರುದ್ಧ ಹಲವಾರು ಪ್ರಕರಣಗಳಿಗೆ ಕಾರಣವಾದವು. “ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಅವಿಧೇಯತೆಯ ಪ್ರಚೋದನೆ” ಮಾಡಿದ್ದಾರೆ ಎಂದು ಆರೋಪಿಸಲಾಯಿತು.
ಆಗಸ್ಟ್ 1914ರಲ್ಲಿ ಜರ್ಮನ್ ಸಾಮ್ರಾಜ್ಯ ರಷ್ಯಾದ ವಿರುದ್ಧ ಯುದ್ಧ ಘೋಷಿಸಿತು. ಈ ಘೋಷಣೆಯ ಮರುದಿನವೇ ಸಂಸತ್ತಿನಲ್ಲಿನ ಎಸ್.ಪಿ.ಡಿ ಪ್ರತಿನಿಧಿಗಳು ಸೇರಿದಂತೆ ಎಲ್ಲ ಯುದ್ಧದ ಹಣಕಾಸು ಮತ್ತು ಕಡ್ಡಾಯ ಮಿಲಿಟರಿ ಸೇವೆಗೆ ಒಪ್ಪಿದರು. ಈ ಯುದ್ಧದ ಸಮಯದಲ್ಲಿ ಎಸ್.ಪಿ.ಡಿ ಎಲ್ಲಾ ಮುಷ್ಕರಗಳಿಂದ ದೂರವಿರುವುದಾಗಿ ಸರ್ಕಾರಕ್ಕೆ ಭರವಸೆ ನೀಡಿ ಆ ಕುರಿತ ಒಪ್ಪಂದಕ್ಕೆ ಸಹಿಹಾಕಿತು. ಲೈಬ್ನಿಖ್ತ್ ಮತ್ತು ರೋಸಾ ನೇತೃತ್ವದ ಸ್ಪಾರ್ಟಕಸ್ ಲೀಗ್ ಈ ದ್ರೋಹವನ್ನು ಖಂಡಿಸಿತು ಮತ್ತು ಅದರ ವಿರುದ್ಧ ತೀವ್ರವಾಗಿ ಹೋರಾಡಿತು. ಜೂನಿಯಸ್ ಎಂಬ ಗುಪ್ತನಾಮದಲ್ಲಿ ‘ಸಾಮಾಜಿಕ ಪ್ರಜಾಪ್ರಭುತ್ವದ ಬಿಕ್ಕಟ್ಟು’ ಎಂಬ ಯುದ್ಧ-ವಿರೋಧಿ ಕಿರುಪುಸ್ತಕವನ್ನು ರೋಸಾ ಅವರು ಬರೆದಿದ್ದರು. ಮುಂದಿನ ಒಂದು ವರ್ಷದೊಳಗೆ ಅವರನ್ನು ಬಂಧಿಸಲಾಯಿತು.
ಯುದ್ಧದ ಸಮಯದಲ್ಲಿ ಅನುಭವಿಸಿದ ಕಷ್ಟ-ನಷ್ಟಗಳು ಹೆಚ್ಚಾದಂತೆ ಜರ್ಮನಿಯಲ್ಲಿ ಯುದ್ಧದ ವಿರುದ್ಧ ಅತೃಪ್ತಿಯೂ ಬೆಳೆಯಿತು. ರಷ್ಯಾದಲ್ಲಿ ಲೆನಿನ್ ನೇತೃತ್ವದಲ್ಲಿ ಬೊಲ್ಶೆವಿಕರಿಗೆ ಯುದ್ಧ ತಂದ ಅಗಾಧ ವಿನಾಶವನ್ನು, ಝಾರ್ ನನ್ನು ಉರುಳಿಸುವ ಯುದ್ಧಘೋಷವಾಗಿ ಪರಿವರ್ತಿಸುವುದು ಸಾಧ್ಯವಾಯಿತು. ಲೆನಿನ್ ಮತ್ತು ಬೊಲ್ಶೆವಿಕ್ ನಾಯಕತ್ವದಲ್ಲಿ ರಷ್ಯಾದಲ್ಲಿ ಮೊದಲ ಕಾರ್ಮಿಕರ ಪ್ರಭುತ್ವ ಸ್ಥಾಪಿತವಾದಾಗ ರೋಸಾ ಜೈಲಿನಲ್ಲಿದ್ದರು. ಜರ್ಮನ್ ಸಾಮ್ರಾಜ್ಯವು ಯುದ್ಧದಿಂದ ಸೋತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ಆದರೆ ರಷ್ಯಾದ ಕ್ರಾಂತಿಯ ಪ್ರಭಾವವು ಜರ್ಮನಿಯಲ್ಲಿ ಬಿರುಗಾಳಿಯಂತೆ ಬೀಸಿತು. ಮುಂದಿನ ನವೆಂಬರ್ ನಲ್ಲಿ ಕೀಲ್ ಎಂಬಲ್ಲಿನ ಇಂಪಿರಿಯಲ್ ಜರ್ಮನ್ ನೌಕಾಪಡೆಯ 40 ಸಾವಿರ ನಾವಿಕರು ದಂಗೆ ಎದ್ದರು. ಕಾರ್ಮಿಕರ ಮತ್ತು ಸೈನಿಕರ ಮಂಡಳಿಗಳು, ಸೋವಿಯತ್ ನ ಮಾದರಿಯಲ್ಲಿ ಜರ್ಮನಿಯ ಕೆಲವು ಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡವು. ಅದೇ ತಿಂಗಳಲ್ಲಿ ರೋಸಾ ಮತ್ತು ಲೈಬ್ನಿಖ್ತ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆದರೆ ಕಿಲ್ ಮಂಡಳಿಗಳು ಹೆಚ್ಚುಕಾಲ ಉಳಿಯಲು ಸಾಧ್ಯವಾಗಲಿಲ್ಲ. ಎಸ್.ಪಿ.ಡಿ ಮತ್ತೊಮ್ಮೆ ಸಮಾಜವಾದಿ ತತ್ವಕ್ಕೆ ದ್ರೋಹ ಬಗೆದಿತು. ಆ ಪಕ್ಷದ ಆಗಿನ ನಾಯಕ ಫ್ರೆಡ್ರಿಕ್ ಎಬರ್ಟ್ ಅಧಿಕಾರ ವಹಿಸಿಕೊಂಡರು. ಆ ಮೇಲಿನ ಎಲ್ಲ ಘಟನೆಗಳನ್ನು ನೋಡಿದರೆ ಎಬರ್ಟ್ ಮತ್ತು ಎಸ್.ಪಿ.ಡಿ ಆಳುವ ವರ್ಗಗಳ ಏಜೆಂಟರಾಗಿ ಕಾರ್ಯನಿರ್ವಹಿಸಿದರು ಎಂಬುದು ಗೊತ್ತಾಗುತ್ತದೆ.
ಜನವರಿ 1919 ರಲ್ಲಿ ಮತ್ತೊಮ್ಮೆ ದಂಗೆ ಉಂಟಾಯಿತು ಮತ್ತು ಬರ್ಲಿನ್ ನಲ್ಲಿ ಎರಡನೇ ಕ್ರಾಂತಿಕಾರಿ ಅಲೆ ಶುರುವಾಯಿತು. ಈ ಕ್ರಾಂತಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತಿಳಿದ ರೋಸಾ ಕಡಿಮೆ ಉತ್ಸಾಹದಿಂದ ಇದ್ದರು, ಆದರೆ ಅವರು ಕಾರ್ಮಿಕರನ್ನು ಬೆಂಬಲಿಸಿದರು. ಎಸ್.ಪಿ.ಡಿ ನೇತೃತ್ವದ ಸರಕಾರದ ಸೂಚನೆಯ ಮೇರೆಗೆ ಕ್ರಾಂತಿಕಾರಿಗಳ ವಿರುದ್ಧ ದಬ್ಬಾಳಿಕೆ ಪ್ರಾರಂಭವಾಯಿತು. ಜನವರಿ 15ರಂದು ಅರೆಸೈನಿಕ ಪಡೆಗಳು ನೂರಾರು ಕಾರ್ಮಿಕರ ಮೇಲೆ ಗೋಳಿಬಾರು ಮಾಡಿದರು. ಸಾವಿರಾರು ಕಾರ್ಮಿಕರನ್ನು ಬಂಧಿಸಿದರು. ರೋಸಾ ಮತ್ತು ಲೈಬ್ನಿಖ್ತ್ ಅವರನ್ನು ಸಹ ಸೆರೆಹಿಡಿಯಲಾಯಿತು. ಇಬ್ಬರನ್ನು ಅತ್ಯಂತ ಕ್ರೂರವಾಗಿ ಕೊಲೆಮಾಡಲಾಯಿತು. ನದಿಗೆ ಎಸೆಯಲಾದ ರೋಸಾ ಅವರ ಶವ ಸುಮಾರು ಐದು ತಿಂಗಳ ನಂತರ ಪತ್ತೆಯಾಯಿತು. ಬರ್ಲಿನ್ ನಲ್ಲಿ ಮತ್ತೆ ‘ವ್ಯವಸ್ಥೆ’ ಸ್ಥಾಪಿತವಾಯಿತು.
ಅಂತರಾಷ್ಟ್ರೀಯ ಕಮ್ಯುನಿಸ್ಟ್ ಚಳುವಳಿಯ ವಲಯಗಳಲ್ಲಿ ರೋಸಾ ಅವರಿಗೆ ಸಿಗಬೇಕಾದ ಅರ್ಹವಾದ ಸ್ಥಾನ ಸಿಕ್ಕಿಲ್ಲ ಎಂಬುದು ಚಾರಿತ್ರಿಕ ಅನ್ಯಾಯ. ಕೆಲವು ಪ್ರಮುಖ ವಿಷಯಗಳಲ್ಲಿ ರೋಸಾ ಅವರ ನಿಲುವುಗಳು ತಪ್ಪಾಗಿವೆ ನಿಜ. ಲೆನಿನ್ ಅವರ ಕೇಂದ್ರೀಕೃತ ಪಕ್ಷದ ಪರಿಕಲ್ಪನೆಯನ್ನು, ಅದು ಇಲ್ಲದೆ ಕ್ರಾಂತಿಯು ಗಂಭೀರ ಅಪಾಯಕ್ಕೆ ಸಿಲುಕುವ ಸಂದರ್ಭದಲ್ಲಿ ಅವರು ಟೀಕಿಸಿದರು. ಆಕೆಯ ಕ್ರೂರ ಹತ್ಯೆ ಮತ್ತು ಆ ಮೇಲಿನ ಸೋವಿಯತ್ ಒಕ್ಕೂಟದದಲ್ಲಿನ ಹಲವು ಬೆಳವಣಿಗೆಗಳ ನಂತರ, ಸೋವಿಯೆಟ್ ಪಕ್ಷವನ್ನು ವಿರೋಧಿಸಲು ಅವರ ಕೆಲವು ಪ್ರತಿಪಾದನೆಗಳನ್ನು ಬಳಸಿಕೊಳ್ಳಲಾಯಿತು. ರೋಸಾ ಅವರನ್ನು ಶ್ರೇಷ್ಠ ಕಮ್ಯುನಿಸ್ಟ್ ನಾಯಕರರಲ್ಲಿ ಒಬ್ಬರನ್ನಾಗಿ ಸೇರಿಸಲು ಹಿಂಜರಿಕೆಗೆ ಇದು ಕಾರಣವಾಗಿರಬಹುದು. ಆದರೆ ಈ ಮಹಾನ್ ಕ್ರಾಂತಿಕಾರಿಯ ಕೊಡುಗೆಯ ಕುರಿತು ಒಟ್ಟಂದಾಜು ಮಾಡುವಲ್ಲಿ ಲೆನಿನ್ ತೆಗೆದುಕೊಂಡ ಧೋರಣೆ ತೀರಾ ವಿಭಿನ್ನವಾಗಿತ್ತು.
ಎರಡನೇ ಸೋಶಲಿಸ್ಟ್ ಅಂತರ್ರಾಷ್ಟ್ರೀಯದಲ್ಲಿ, ವಿಶೇಷವಾಗಿ ಕೇಂದ್ರೀಕೃತ ಪಕ್ಷದ ವಿಷಯದ ಕುರಿತು, ಪರಿಷ್ಕರಣವಾದಿಗಳು ಮಾಡಿದ ರೋಸಾ ಅವರ ಪ್ರಬಂಧಗಳ ದುರ್ಬಳಕೆ ಅಥವಾ ಆಯ್ದ ಬಳಕೆಯ ಬಗ್ಗೆ ಬರೆಯುತ್ತಾ ಲೆನಿನ್ ತಮ್ಮ “ಒಬ್ಬ ಪ್ರಚಾರಕನ ಟಿಪ್ಪಣಿಗಳು’ ನಲ್ಲಿ ರೋಸಾ ಅವರ ಬಗ್ಗೆ ಹೀಗೆ ಬರೆದಿದ್ದಾರೆ :
“ಇದಕ್ಕೆ ಉತ್ತರವಾಗಿ ಒಂದು ಹಳೆಯ ರಶ್ಯನ್ ನೀತಿ ಕಥೆಯ ಒಂದೆರಡು ಸಾಲುಗಳನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ. ‘ಹದ್ದುಗಳು ಕೆಲವೊಮ್ಮೆ ಕೋಳಿಗಿಂತ ಕೆಳಕ್ಕೆ ಹಾರಬಲ್ಲವು, ಆದರೆ ಕೋಳಿಗಳು ಎಂದಿಗೂ ಹದ್ದಿನ ಎತ್ತರಕ್ಕೆ ಏರಲು ಸಾಧ್ಯವಿಲ್ಲ….’ .. ..ಆಕೆ ಮಾಡಿದ ತಪ್ಪುಗಳ ಹೊರತಾಗಿಯೂ ಅವರು ನಮಗೆ ಎತ್ತರದಲ್ಲಿ ಹಾರುವ ಹದ್ದಿನಂತೆ ಇರುತ್ತಾರೆ. ಪ್ರಪಂಚದಾದ್ಯಂತ ಕಮ್ಯುನಿಸ್ಟರು ಅವರ ನೆನಪುಗಳನ್ನು ಮತ್ತು ಜೀವನಚರಿತ್ರೆಯನ್ನು ಸದಾಕಾಲ ನೆನೆಯುತ್ತಾರೆ. ಅವರ ಸಂಪೂರ್ಣ ಕೃತಿಗಳು (ಅವನ್ನು ಪ್ರಕಟಿಸುವಲ್ಲಿ ಜರ್ಮನ್ ಕಮ್ಯುನಿಸ್ಟರು ಬಹಳ ವಿಳಂಬ ಮಾಡುತ್ತಿದ್ದಾರೆ.. ..ಅವರು ಹೋರಾಟಗಳಲ್ಲಿ ಎದುರಿಸುತ್ತಿರುವ ಅಗಾಧ ಕಷ್ಟನಷ್ಟಗಳನ್ನು ಗಮನದಲ್ಲಿಟ್ಟುಕೊಂಡೂ ಈ ವಿಳಂಬವನ್ನು ಭಾಗಶಃ ಮಾತ್ರವೇ ಕ್ಷಮಿಸಬಹುದು) ಪ್ರಪಂಚದಾದ್ಯಂತ ಅನೇಕ ತಲೆಮಾರುಗಳ ಕಮ್ಯುನಿಸ್ಟರಿಗೆ ತರಬೇತಿ ನೀಡಲು ಉಪಯುಕ್ತ ಕೈಪಿಡಿಗಳಾಗಿ ಕಾರ್ಯನಿರ್ವಹಿಸುತ್ತವೆ.”
ಮಾಡಿದ “ತಪ್ಪುಗಳನ್ನು” ಮೀರಿಸುವಷ್ಟು ರೋಸಾ ಅವರ ಕೊಡುಗೆಗಳಿರುವುದರಿಂದಾಗಿಯೇ, ಅವರ ಸಂಪೂರ್ಣ ಕೃತಿಗಳನ್ನು ಪ್ರಕಟಿಸಬೇಕೆಂದು ಲೆನಿನ್ ಅವರು ಬಯಸಿದ್ದರು. ಜರ್ಮನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯಲ್ಲಿ ಪರಿಷ್ಕರಣಾವಾದದ ವಿರುದ್ಧದ ಹೋರಾಟದಲ್ಲಿ, ಬರ್ನ್ಸ್ಟೈನ್ ಮತ್ತು ಕೌತ್ಸ್ಕಿ ಯಂತಹ ಹಿರಿಯ ನಾಯಕರನ್ನು ಎದುರು ಹಾಕಿಕೊಂಡು, ರೋಸಾ ಅವರು ಅಗ್ರಗಣ್ಯರಾಗಿದ್ದರು. ಅವರು ಯುದ್ಧದ ಬಗ್ಗೆ ಸಾಮಾಜಿಕ ಪ್ರಜಾಪ್ರಭುತ್ವವಾದಿಗಳ ಉಗ್ರ ರಾಷ್ಟ್ರೀಯತಾವಾದಿ ನಿಲುವುಗಳನ್ನು ಸ್ವೀಕರಿಸಲು ನಿರಾಕರಿಸುವ ನಿಜವಾದ ಅಂತರರಾಷ್ಟ್ರೀಯವಾದಿ ಆಗಿದ್ದರು. ಅವರಿಗೆ ವರ್ಗ ಹೋರಾಟದಲ್ಲಿ ನಂಬಿಕೆಯಿತ್ತು. ಅತಿಯಾದ ಕೇಂದ್ರೀಕರಣದ ಅಪಾಯಗಳ ಬಗ್ಗೆ ಆಕೆಯ ವಿಚಾರಗಳು ಲೆನಿನ್ ನೇತೃತ್ವದ ಪಕ್ಷಕ್ಕೆ ಸಂಬಂಧಿಸಿದಂತೆ ತಪ್ಪಾಗಿ ಪ್ರತಿಪಾದಿತವಾಗಿರಬಹುದು. ಆದರೆ ನಂತರದ ವರ್ಷಗಳಲ್ಲಿ ಅನೇಕ ಸಮಾಜವಾದಿ ದೇಶಗಳಲ್ಲಿನ ಪಕ್ಷಗಳಲ್ಲಿ ಆಕೆ ನಿರೂಪಿಸಿದ ಅನೇಕ ಅಪಾಯಗಳು ನಿಜವಾದವು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸ್ಪಾರ್ಟಕಸ್ ಲೀಗ್ ಕಮ್ಯುನಿಸ್ಟ್ ಪಕ್ಷವಾಗಿ ಪರಿವರ್ತಿಸಿದ ಒಂದು ತಿಂಗಳಲ್ಲೇ ಅವರು ಹುತಾತ್ಮರಾದರು. ಪ್ರಮುಖ ನಾಯಕರು ಹುತಾತ್ಮರಾದ ನಂತರ ಶೀಘ್ರದಲ್ಲೇ ಶಿಥಿಲಗೊಂಡ ಪಕ್ಷವನ್ನು ಬಲಪಡಿಸಲು ಆಕೆಗೆ ಅವಕಾಶ ಸಿಗಲಿಲ್ಲ. ಆದ್ದರಿಂದ ಕಾರ್ಮಿಕರ ಚಳುವಳಿಯಿಂದ ಸಾಮೂಹಿಕ ಪಕ್ಷವನ್ನು ಸ್ವಯಂಪ್ರೇರಿತವಾಗಿ ಹೊಮ್ಮಬಹುದು ಎಂಬ ತನ್ನ ಹಿಂದಿನ ಆಲೋಚನೆಗಳನ್ನು ಮರುಪರಿಶೀಲಿಸಲು ಸಹ ಆಕೆಗೆ ಅವಕಾಶ ಸಿಗಲಿಲ್ಲ. ಐತಿಹಾಸಿಕ ಅನುಭವವು ಲೆನಿನ್ ಅವರ ಪರಿಕಲ್ಪನೆಯ ಪ್ರಜಾಸತ್ಥಾತ್ಮಕ ಕೇಂದ್ರೀಕರಣವನ್ನು ಆಧರಿಸಿದ ಪಕ್ಷದ ಪರಿಕಲ್ಪನೆಯ ಸಿಂಧುತ್ವ ಮತ್ತು ಅವಶ್ಯಕತೆಯನ್ನು ತೋರಿಸಿದೆ. ಆದರೂ, ಮಾಜಿ ಸಮಾಜವಾದಿ ದೇಶಗಳ ಪಕ್ಷಗಳಲ್ಲಿ ಪ್ರಜಾಸತ್ತಾತ್ಮಕ ಕೇಂದ್ರೀಕರಣದ ಆಚರಣೆಯಲ್ಲಿ ಬಂದ ಭಾರೀ ವಿಕೃತಿಗಳು, ಪ್ರಜಾಸತ್ತಾತ್ಮಕ ಕೇಂದ್ರೀಕರಣವನ್ನೇ ಪ್ರಶ್ನಿಸದೆ ವಿಕೃತಿಗಳನ್ನು ತರಬಹುದಾದ ಅತಿ-ಕೇಂದ್ರೀಕರಣದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು, ರೋಸಾ ಅದರ ಕುರಿತು ಮಾಡಿದ ವಿಮರ್ಶೆಯ ಗಂಭೀರ ಮರುಪರಿಶೀಲನೆಯ ಅಗತ್ಯವನ್ನು ಮುನ್ನೆಲೆಗೆ ತಂದಿವೆ.
ಜರ್ಮನಿ ಮತ್ತು ಪೋಲೆಂಡಿನಲ್ಲಿ ಪಕ್ಷದ ಸ್ಥಾಪಿತ ನಾಯಕರು ರೋಸಾ ಅವರನ್ನು ಇಷ್ಟಪಡದಿರುವ ಸ್ವಯಂವಿದಿತ ಅಂಶವಲ್ಲದೆ, ರೋಸಾ, ಅವರ ಕೃತಿಗಳನ್ನು ಹಾಗೂ ಪರಂಪರೆಯನ್ನು ವಿರೂಪಗಳಿಸುವ ಮತ್ತು ಅಂಚಿಗೆ ತಳ್ಳಲು ಕಾರಣವಾದ ಮತ್ತೊಂದು ಅಂಶವೆಂದರೆ, ನಿಸ್ಸಂದೇಹವಾಗಿ ಈ ಸೈದ್ಧಾಂತಿಕ ಸವಾಲು ಒಬ್ಬ ಮಹಿಳೆಯಿಂದ ಬಂತು ಎಂಬುದು. ಇಲ್ಲಿ ಒತ್ತಿ ಹೇಳಬೇಕಾದ ಅಂಶವೆಂದರೆ ರೋಸಾ ಅವರು ಯಾವುದೇ ಮುಲಾಜಿಲ್ಲದೆ ತನ್ನ ರಾಜಕೀಯ ನಂಬಿಕೆಗಳನ್ನು ಅನುಸರಿಸಿದ್ದರು. ಮಹಿಳೆಯರು ಎಸ್.ಪಿ.ಡಿ ಯಲ್ಲಿ ಬಲವಾದ ಪಾತ್ರವಹಿಸಿದ್ದರು. ಆದರೆ ಮಹಿಳೆಯರ ಸಿದ್ಧಾಂತಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿರಲಿಲ್ಲ. ರೋಸಾ ತನ್ನ ಕೆಲಸದ ಮೂಲಕ ಪರೋಕ್ಷವಾಗಿ, ಪಕ್ಷದೊಳಗಿನ ಲಿಂಗ ಅಸಮಾನತೆಯನ್ನು ತನಗಾಗಿ ಅಲ್ಲದೇ ತನ್ನ ಕೃತಿಗಳ ಸ್ಥಾನಮಾನ ಪ್ರತಿಪಾದಿಸುವ ಸಲುವಾಗಿ ಸಹ ಪ್ರಶ್ನಿಸಿದ್ದರು. ಆ ಮೂಲಕ ಅವರು ಪಕ್ಷದೊಳಗಿನ ಪುರುಷಾಧಿಪತ್ಯದ ಧೋರಣೆಗಳನ್ನು ಮತ್ತು ಲಿಂಗಾಧಾರಿತ ಆಚರಣೆಗಳನ್ನು ಪ್ರಶ್ನಿಸಿದ್ದರು ಮತ್ತು ಅದರಿಂದಾಗಿ ಮುಂದೆ ಇತರ ಮಹಿಳಾ ಕ್ರಾಂತಿಕಾರಿಗಳು ಎದ್ದುನಿಲ್ಲಲು ಅಗತ್ಯವಾದ ಬುನಾದಿ ಹಾಕಿದ್ದರು.
ರೋಸಾ ಅವರ ಆಪ್ತ ಸ್ನೇಹಿತೆ ಮತ್ತು ಸಂಗಾತಿ ಕ್ಲಾರಾ ಜೆಟ್ಕಿನ್ ಅತ್ಯಂತ ಆತ್ಮೀಯ ಶ್ರದ್ಧಾಂಜಲಿ ಅರ್ಪಿಸುತ್ತಾ “ಅವರು ಖಡ್ಗ, ಅವರು ಕ್ರಾಂತಿಯ ಬೆಂಕಿ. ರೋಸಾ ಅಂತರ್ರಾಷ್ಟ್ರೀಯ ಸಮಾಜವಾದದ ಇತಿಹಾಸದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿ ಉಳಿಯಲಿದ್ದಾರೆ” ಎಂದು ಹೇಳಿದ್ದರು. ಅದು ಅಕ್ಷರಶಃ ನಿಜ ಕೂಡಾ.
ಅನುವಾದ: ಲವಿತ್ರ ವಸ್ತ್ರದ