ವಿಫಲಗೊಂಡಿರುವ ‘ವಿಶ್ವ ಗುರು’ – ಮೋದಿ-ಷಾ ಜೋಡಿ ಎರಡನೇ ಅಲೆಯ ಅನಾಹುತಕ್ಕೆ ಕ್ರಿಮಿನಲ್ ಹೊಣೆಗಾರರು

prakash karat
ಪ್ರಕಾಶ್‌ ಕಾರಟ್‌

ಸಾವು ಮತ್ತು ವಿನಾಶದ ಎರಡನೇ ಅಲೆ ಎದುರಿಸಲು ದೇಶ ಒಂದಿಷ್ಟೂ ಸಿದ್ಧವಾಗಿಲ್ಲದಿದ್ದುದಕ್ಕೆ ಮೋದಿ ಸರ್ಕಾರವೇ ಹೊಣೆ ಎಂಬುದಕ್ಕೆ ಈಗ ಎಳ್ಳಷ್ಟೂ ಸಂದೇಹವಿಲ್ಲ. ಮೋದಿ ಸರ್ಕಾರದ ಸಂತೃಪ್ತ ಮನೋಭಾವ, ಕೆಟ್ಟ ನಿರ್ವಹಣೆ ಮತ್ತು ದೂರದೃಷ್ಟಿಯಿಲ್ಲದ ಧೋರಣೆಯಿಂದಾಗಿಯೇ ಭಾರತದ ಮೇಲೆ ಈ ಸಾರ್ವಜನಿಕ ಆರೋಗ್ಯ ವಿಪತ್ತು ಎರಗಿದೆ. ದೀರ್ಘಕಾಲದಿಂದ ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸಿದ್ದು ಹಾಗೂ ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಿಸಲು ನಡೆಸಿದ ಪ್ರಯತ್ನಗಳ ದುಷ್ಫಲವೂ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 17ರಂದು ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಚುನಾವಣಾ ರ‍್ಯಾಲಿಗೆ ದೊಡ್ಡ ಸಂಖ್ಯೆಯಲ್ಲಿ ಬಂದದ್ದಕ್ಕಾಗಿ ಜನಗಳನ್ನು ಅಭಿನಂದಿಸುತ್ತಿರುವಾಗಲೇ ಕೊವಿಡ್-19 ಹೊಸ ಪ್ರಕರಣಗಳು 2,34,000 ದಾಟಿತ್ತು. ತಾವು ಯಾವತ್ತೂ ರ‍್ಯಾಲಿಯಲ್ಲಿ ಈ ಪರಿಯ ಜನಸ್ತೋಮ ಕಂಡಿರಲಿಲ್ಲ ಎಂದು ಅವರು ಸಾರಿದರು.

Election2021 & covid 2021-what arally

ವಾವ್! ಎಂತಹಾ ರ್ಯಾಲಿ!  ಕೃಪೆ:ಸತೀಶ ಆಚಾರ್ಯ /ಫೇಸ್‍ಬುಕ್

ಸಾವಿರಾರು ಜನರ ಜೀವನವನ್ನು ಅಪಾಯಕ್ಕೊಡುವ ಈ ನಿರ್ದಯ ರಾಜಕೀಯವು ಎಲ್ಲೆಡೆ ಮಹಾಸೋಂಕಿನ ವಿನಾಶಲೀಲೆಗೆ ಮೋದಿ-ಷಾ ಜೋಡಿಯ ಕ್ರಿಮಿನಲ್ ಹೊಣೆಗಾರಿಕೆ ಒಳ್ಳೆಯ ಉದಾಹರಣೆಯಾಗಿದೆ. ಒಂದು ವಾರ ಕಾಲ ದೇಶದಲ್ಲಿ ದೈನಿಕ ಕೊವಿಡ್-19 ಪ್ರಕರಣಗಳ ಸಂಖ್ಯೆ ಎರಡು ಲಕ್ಷ ದಾಟುತ್ತಿದ್ದಾಗ, ಬಂಗಾಳದಲ್ಲಿ ಮೋದಿ ಮತ್ತು ಷಾ, ಸರದಿಯಂತೆ ಪ್ರಚಾರ ರ‍್ಯಾಲಿಗಳಲ್ಲಿ ಭಾಷಣ ಮಾಡುತ್ತಿದ್ದರು.

ಜನರ ಮೇಲೆರಗಿರುವ ಅನಾಹುತ ಅತ್ಯಂತ ಯಾತನಾಮಯ. ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗುತ್ತಿಲ್ಲ. ರೋಗಿಗಳಿಗೆ ಆಮ್ಲಜನಕ ಲಭ್ಯವಾಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಕೊವಿಡ್ ಟೆಸ್ಟ್ ನಡೆಯುತ್ತಿಲ್ಲ. ಲಸಿಕೆಗಳು ಖಾಲಿಯಾಗಿವೆ. ಸತ್ತವರ ಅಂತ್ಯಕ್ರಿಯೆ ನಡೆಸಲು ಸ್ಮಶಾನಗಳಲ್ಲಿ ಸ್ಥಳವಿಲ್ಲ.

ಇಂಥ ಮಾನವ ನಿರ್ಮಿತ ಆಪತ್ತಿನ ನಡುವೆಯೇ ಮೋದಿ ಮತ್ತು ಷಾ ಬಂಗಾಳವನ್ನು ತೆಕ್ಕೆಗೆ ಹಾಕಿಕೊಳ್ಳಲು ಹೊರಟಿದ್ದಾರೆ. ಏನಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕೆಂಬುದಷ್ಟೇ ಅವರ ಗುರಿ. ಜನರ ಪಾಡು ಏನಾದರೆ ನಮಗೇನು ಎಂಬ ತಾತ್ಸಾರ ಭಾವನೆ.

ಸಾವು ಮತ್ತು ವಿನಾಶದ ಎರಡನೇ ಅಲೆ ಎದುರಿಸಲು ದೇಶ ಒಂದಿಷ್ಟೂ ಸಿದ್ಧವಾಗಿಲ್ಲದಿದ್ದುದಕ್ಕೆ ಮೋದಿ ಸರ್ಕಾರವೇ ಹೊಣೆ ಎಂಬುದಕ್ಕೆ ಈಗ ಎಳ್ಳಷ್ಟೂ ಸಂದೇಹವಿಲ್ಲ.

ಜಗತ್ತಿಗೇ ಸ್ಪೂರ್ತಿಎಂಬ ಭ್ರಮೆ

ಜನವರಿಯಲ್ಲಿ, ಮಹಾಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಿದೆ ಎಂದು ಮೋದಿ ಘೋಷಿಸಿದರು. ಜನವರಿ 29ರಂದು ‘ವಿಶ್ವ ಆರ್ಥಿಕ ವೇದಿಕೆ’ಯ ದಾವೋಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಕೊವಿಡ್-19 ಮಹಾಸೋಂಕನ್ನು ನಿಭಾಯಿಸುವಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸುತ್ತ, “ಭಾರತ ಕೊವಿಡ್-19ನ್ನು ನಿರ್ವಹಿಸುವ ಮೂಲಕ ಜಗತ್ತನ್ನು ಮಹಾ ದುರಂತದಿAದ ರಕ್ಷಿಸಿದೆ’ ಎಂದಿದ್ದರು. “ಸದ್ಯಕ್ಕೆ ನಮ್ಮಲ್ಲಿ ಎರಡು ಭಾರತದಲ್ಲಿ ಮಾಡಿದ ಲಸಿಕೆಗಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಗಳು ಲಭ್ಯವಾಗಲಿವೆ. ಇತರ ದೇಶಗಳಿಗೂ ದೊಡ್ಡ ಪ್ರಮಾಣದಲ್ಲಿ ಹಾಗೂ ವೇಗವಾಗಿ ಬೆಂಬಲ ನೀಡಲು ಇದರಿಂದ ಸಾಧ್ಯವಾಗುತ್ತದೆ” ಎಂದೂ ಅವರು ಹೇಳಿದ್ದರು.

ಫೆಬ್ರವರಿಯಲ್ಲಿ, ಭಾರತದ ಕೊವಿಡ್-ವಿರೋಧಿ ಹೋರಾಟ ಇಡೀ ಜಗತ್ತಿಗೆ ಸ್ಫೂರ್ತಿದಾಯಕವಾಗಿದೆ ಎಂದು ಮೋದಿ ಹೇಳಿದ್ದರು. ಮಾರ್ಚ್ 11ರಂದು ನಡೆದ ಕ್ವಾಡ್ ಸಮ್ಮೇಳನದಲ್ಲಿ, ಭಾರತ-ಶಾಂತಸಾಗರ ವಲಯಕ್ಕೆ ಲಸಿಕೆ ಸರಬರಾಜು ಮಾಡುವ ಮಹಾನ್ ಪಾತ್ರವನ್ನು ಭಾರತಕ್ಕೆ ವಹಿಸಲಾಯಿತು. ಅಮೆರಿಕ ಅಧ್ಯಕ್ಷ ಬೈಡೆನ್ ಭಾರತಕ್ಕೆ ಈ ಕೆಲಸ ವಹಿಸಿದ್ದರು. ಆದರೆ, ಅದೇ ಹೊತ್ತಿಗೆ ಲಸಿಕೆ ತಯಾರಿಸಲು ಬೇಕಾದ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುವುದನ್ನು ಅಮೆರಿಕ ನಿಷೇಧಿಸಿತ್ತು.

ಭಾರತ “ವಿಶ್ವ ಗುರು’ವಿನ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಮೋದಿಯವರು ಉಬ್ಬಿ ಹೋಗಿದ್ದರು. ವಿಶ್ವ ಗುರು ಎಂಬುದು ಆರ್‌ಎಸ್‌ಎಸ್‌ನ ಬಹುಪ್ರಿಯ ಪದಪುಂಜ. ಆದರೆ ದುರದೃಷ್ಟವಶಾತ್, ಇಂಥದ್ದೊಂದು ದುರಹಂಕಾರಕ್ಕೆ ದೇಶವೇ ಭಾರಿ ಬೆಲೆ ತೆರುವಂತೆ ಆಗಿದೆ.

ಈ ಸಂಕೇತವನ್ನು ಅನುಸರಿಸಿ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ “ಭಾರತ ಕೊವಿಡ್-19 ಆಟದ ಕೊನೆ ಹಂತದಲ್ಲಿದೆ’ ಎಂದು ಮಾರ್ಚ್ ನಲ್ಲಿ ಘೋಷಿಸಿದ್ದರು. ವಾಸ್ತವವಾಗಿ ದೇಶದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದ ಸಮಯದಲ್ಲಿ ಅವರು ಮಾತನ್ನು ಹೇಳಿದ್ದರು. ಸರಳ ಸಂಗತಿಯೆAದರೆ, ವ್ಯಾಧಿಯ ವಿರುದ್ಧ ಯಶಸ್ಸು ಸಾಧಿಸಲಾಗಿದೆ ಎಂದು ಘೋಷಿಸಿದ್ದರಿಂದ ಸರಕಾರ ಮತ್ತು ಆರೋಗ್ಯ ಅಧಿಕಾರಿಗಳು ತಮ್ಮ ಅಸ್ತ್ರಗಳನ್ನು ಕೆಳಗೆ ಇಳಿಸಿದ್ದರು ಎನ್ನುವುದು ಸ್ಪಷ್ಟ.

covid 2021-journey of disaster200421

ಸೆಪ್ಟಂಬರ್‍ ನಲ್ಲಿ ದುರಹಂಕಾರ; ನವಂಬರ್‍ ನಲ್ಲಿ ವಿಜಯದ ಕೇಕೆ
ಫೆಬ್ರುವರಿಯಲ್ಲಿ ರಾಜಕೀಯ; ಎಪ್ರಿಲ್‍ನಲ್ಲಿ……………………………..
ಕೃಪೆ: ಸಂದೀಪ್‍ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

ಜನರ ನಿರ್ಲಕ್ಷ್ಯ ಎಂಬ ದೂಷಣೆ

ವೈರಸ್ ಮತ್ತೆ ಮೇಲೆದ್ದು ಬಂದು ಹಾವಳಿ ಆರಂಭಿಸಿದಾಗ ಆಳುವ ವಲಯಗಳು ಜನರ ನಿರ್ಲಕ್ಷö್ಯವೇ, ಕೊವಿಡ್ ನಡವಳಿಕೆಗಳನ್ನು ಪಾಲಿಸದಿದ್ದುದೇ ಇದಕ್ಕೆ ಹೊಣೆಯೆಂದು ದೂರಲು ಆರಂಭಿಸಿದವು. ವಾಸ್ತವವಾಗಿ ಒಂದು ಹೊಸ ದುಪ್ಪಟ್ಟು ರೂಪಾಂತರಿ ಭಾರತೀಯ ಪ್ರಭೇದದ ವೈರಾಣು ಇರುವಿಕೆ ಕುರಿತ ಹೆಚ್ಚುತ್ತಿರುವ ಪುರಾವೆಯನ್ನು ಕಡೆಗಣಿಸಲಾಯಿತು. ಈ ಪ್ರಬೇಧದ ಮೊದಲ ಸ್ಯಾಂಪಲ್ ಕಳೆದ ವರ್ಷ ಅಕ್ಟೋಬರ್ 5ರಂದೇ ಜಿನೋಮ್ ಸೀಕ್ವೆನ್ಸಿಂಗ್‌ನಿಂದ ಗೊತ್ತಾಗಿತ್ತು ಎನ್ನುವುದು ಈಗ ತಿಳಿದು ಬಂದಿರುವ ಸಂಗತಿ. ಆದರೆ ಜೀನ್ ಸೀಕ್ವೆನ್ಸಿಂಗ್ ಮುಂದುವರಿಸಲು ಸರಿಯಾದ ಮಾರ್ಗದರ್ಶನ ನೀಡಲಿಲ್ಲ ಅಥವಾ ಪ್ರಯತ್ನಗಳನ್ನು ನಡೆಸಿಲ್ಲ. ತುಂಬಾ ದುಬಾರಿ ಹಾಗೂ ಹೆಚ್ಚು ಸಮಯ ಬೇಕಾಗುವ ಈ ಪ್ರಕ್ರಿಯೆಗೆ ಕೇವಲ 80 ಕೋಟಿ ರೂಪಾಯಿ ಒದಗಿಸಲಾಗಿತ್ತೆನ್ನುವುದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿಯಿಂದ ತಿಳಿದು ಬಂದಿದೆ. ಹೆಚ್ಚು ಸೋಂಕುಕಾರಕವಾದ ಪ್ರಭೇದವನ್ನು ಪತ್ತೆ ಹಚ್ಚುವಲ್ಲಿ ವೈಫಲ್ಯ ಹಾಗೂ ಅದು ಹರಡಿದ್ದೇ ಈ ಎಲ್ಲದರ ಒಟ್ಟಾರೆ ಫಲಶೃತಿಯಾಗಿದೆ.

ಮಹಾರಾಷ್ಟ್ರ, ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೆ ರೋಗಿಗಳು ಸಾಯುತ್ತಿದ್ದಾರೆ. ಮೊದಲ ಅಲೆಯ ನಂತರ ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದಾದ್ಯಂತ 150 ಜಿಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸ್ಥಾವರ ಸ್ಥಾಪಿಸಲು ಕೇವಲ 200 ಕೋಟಿ ರೂಪಾಯಿಯ ಟೆಂಡರ್‌ಅನ್ನು ಆರೋಗ್ಯ ಸಚಿವಾಲಯದ ಸಂಸ್ಥೆಯೊಂದು ಕರೆದಿತ್ತೆನ್ನುವುದು ಈಗ ತಿಳಿದು ಬಂದಿದೆ. ಮಹಾಸೋಂಕು ದಾಂಗುಡಿಯಿಟ್ಟ ಎಂಟು ತಿಂಗಳ ನಂತರ ಇದನ್ನು ಮಾಡಲಾಗಿತ್ತು. ಈ ವರ್ಷದ ಮಾರ್ಚ್ ಹೊತ್ತಿಗೆ ಕೇವಲ 33 ಸ್ಥಾವರಗಳನ್ನು ಸ್ಥಾಪಿಸಲಾಗಿದೆ.

ಅವೈಜ್ಞಾನಿಕ ಲಸಿಕೆ ನೀತಿ

ಇನ್ನು, ಲಸಿಕೆಗಳ ಬಗ್ಗೆ ಹೇಳುವುದಾದರೆ, ಭಾರತದಲ್ಲೇ ತಯಾರಾದ (ಮೇಡ್ ಇನ್ ಡಿಂಡಿಯಾ) ಎರಡು ಲಸಿಕೆಗಳು ಲಭ್ಯವಿದ್ದು ಲಸಿಕೆ ಅಭಿಯಾನದ ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಅದು ಸಾಕಾಗುತ್ತದೆ ಎಂದು ಮೋದಿ ಸರ್ಕಾರ ಟಾಂಟಾಂ ಬಾರಿಸಿತ್ತು. ನಿಜ ಹೇಳಬೇಕೆಂದರೆ ಮೇಡ್ ಇನ್ ಇಂಡಿಯಾ ಲಸಿಕೆ ಎನ್ನುವುದೇ ಒಂದು ಬೋಗಸ್ ಘೋಷಣೆ. ಯಾಕೆಂದರೆ ಪ್ರಮುಖ ಲಸಿಕೆಯಾದ ಕೋವಿಶೀಲ್ಡ್ಅನ್ನು ಅಸ್ಟ್ರ ಜೆನೆಕಾ-ಆಕ್ಸ್ಫರ್ಡ್ ಯೋಜನೆ ಅಭಿವೃದ್ಧಿಪಡಿಸಿದ್ದು ಅದನ್ನು ಭಾರತದಲ್ಲಿ ಉತ್ಪಾದಿಸಲು ಪುಣೆಯ ಸೀರಂ ಸಂಸ್ಥೆಗೆ ಲೈಸೆನ್ಸ್ ನೀಡಲಾಗಿದೆ, ಅಷ್ಟೆ. ಲಭ್ಯವಿರುವ ಕಡೆಯಿಂದೆಲ್ಲ ದೊಡ್ಡ ಪ್ರಮಾಣದಲ್ಲಿ ಲಸಿಕೆ ಬುಕ್ ಮಾಡಲು ವಿಫಲವಾದ ಮೋದಿ ಸರ್ಕಾರ ಈಗ ಬ್ರಿಡ್ಜ್ ಟ್ರಯಲ್ ನಡೆಸಬೇಕೆಂಬ ನಿಯಮದಿಂದ ವಿನಾಯ್ತಿ ಕೊಟ್ಟು ವಿದೇಶಗಳಿಂದ ವ್ಯಾಕ್ಸಿನ್ ಪಡೆಯಲು ಪ್ರಯತ್ನಿಸುತ್ತಿದೆ.

covid 2021-one vaccine-different prices

ಒಂದು ಲಸಿಕೆ, ಹಲವು ಬೆಲೆಗಳು…….ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್‍ ಕ್ರಾನಿಕಲ್

ಇದೀಗ ಹೊಸ ಲಸಿಕೆ ನೀತಿ ಪ್ರಕಟಿಸುವ ಮೂಲಕ, ಸಾರ್ವತ್ರಿಕವಾಗಿ ಉಚಿತವಾಗಿ ಲಸಿಕೆ ನೀಡುವ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣುಚಿಕೊಂಡಿದೆ. 45ಕ್ಕಿಂತ ಕೆಳಗಿನ ವಯಸ್ಸಿನ ಜನರಿಗೆ ಲಸಿಕೆ ನೀಡುವ ಭಾರವನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ವರ್ಗಾಯಿಸಲಾಗಿದೆ. ಉತ್ಪಾದಕರಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ಲಸಿಕೆ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 35,000 ಕೋಟಿ ರೂಪಾಯಿ ನಿಗದಿಪಡಿಸಿದೆ. ಆದರೆ ಅದರ ಅತ್ಯಲ್ಪ ಭಾಗವನ್ನು ಮಾತ್ರ ಖರ್ಚು ಮಾಡಿದೆ. ಲಸಿಕೆ ಅಭಿಯಾನದ ಮುಂದಿನ ಸುತ್ತುಗಳ ವೆಚ್ಚವನ್ನು ಭರಿಸುವಂತೆ ರಾಜ್ಯ ಸರ್ಕಾರಗಳನ್ನು ಕೇಂದ್ರ ಒತ್ತಾಯಿಸುತ್ತಿದೆ.

ಹಿಂದುತ್ವ ಕಣ್ಣುಪಟ್ಟಿ

ಮಹಾಸೋಂಕು ಕಾಡಿದ ಇಡೀ ವರ್ಷದುದ್ದಕ್ಕೂ ಕೇಂದ್ರ ಸರ್ಕಾರ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಕ್ಕಾಗಿ ಸಾಕಷ್ಟು ಮತ್ತು ಸಮರ್ಪಕವಾದ ಹೆಚ್ಚುವರಿ ವೆಚ್ಚವನ್ನು ಮಾಡಿಲ್ಲ. ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹೆಚ್ಚು ಹಣ ಖರ್ಚು ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.

ಈ ನಿರ್ಲಕ್ಷ್ಯ ಮತ್ತು ಆತ್ಮತೃಪ್ತಿಯ ಜೊತೆಯಲ್ಲಿ ಸರ್ಕಾರದ ಅವೈಜ್ಞಾನಿಕ ಹಾಗೂ ಕಣ್ಣುಪಟ್ಟಿ ಕಟ್ಟಿಕೊಂಡÀ ಹಿಂದುತ್ವ ದೃಷ್ಟಿಕೋನವೂ ಇದರ ಹಿಂದೆ ಇರುವುದನ್ನು ಗಮನಿಸಬೇಕು. ಅಂಧ ಶ್ರದ್ಧೆ ಮತ್ತು ಮೂಢನಂಬಿಕೆಯನ್ನು ಪೋಷಿಸುವ ಒಂದು ಪ್ರಮುಖ ಉದಾಹರಣೆಯೆಂದರೆ, ಲಕ್ಷಾಂತರ ಜನರು ಬಂದು ಸೇರಿದ ಹರಿದ್ವಾರದ ಕುಂಭಮೇಳ ನಡೆಯಲು ಅವಕಾಶ ಕೊಟ್ಟಿದ್ದು. 12 ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳ 2022ರಲ್ಲಿ ನಡೆಯಬೇಕಿತ್ತು. ಆದರೆ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದಂತೆ ಅದನ್ನು ಮುಂಚಿತವಾಗಿ ಆಯೋಜಿಸಲಾಗಿತ್ತು. ಉತ್ತರಾಖಂಡದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರ, ಹೀಗೆ ಎರಡೂ ಸರ್ಕಾರಗಳು ಯಾವುದೇ ನಿಯಮ-ನಿರ್ಬಂಧಗಳ ಗೋಜಿಲ್ಲದೆ ಕುಂಭ ಮೇಳ ನಡೆಸಲು ಖುಲ್ಲಂಖುಲ್ಲಾ ಅನುಮತಿ ನೀಡಿದ್ದವು. ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದಲ್ಲದೆ ಶರವೇಗದಲ್ಲಿ ವ್ಯಾಪಿಸುತ್ತಿರುವ ಸಾಂಕ್ರಾಮಿಕತೆ ಬಗ್ಗೆ ಜಾಗತಿಕ ಗಮನ ಕೇಂದ್ರೀಕರಣಗೊಂಡ ನಂತರವಷ್ಟೆ ಮೋದಿ, ಕುಂಭದ ಕೊನೆ ಹಂತ ಸಾಂಕೇತಿಕವಾಗಿರಬೇಕೆAದು ಮನವಿ ಮಾಡಿದರು.

ಮೋದಿ ಸರ್ಕಾರದ ಆತ್ಮತೃಪ್ತಿ, ಕೆಟ್ಟ ನಿರ್ವಹಣೆ ಮತ್ತು ದೂರದೃಷ್ಟಿಯಿಲ್ಲದ ಧೋರಣೆಯಿಂದಾಗಿಯೆ ಭಾರತದ ಮೇಲೆ ಈ ಸಾರ್ವಜನಿಕ ಆರೋಗ್ಯ ವಿಪತ್ತು ಎರಗಿದೆ. ದೀರ್ಘಕಾಲದಿಂದ ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸಿದ್ದು ಹಾಗೂ ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಿಸಲು ನಡೆಸಿದ ಪ್ರಯತ್ನಗಳ ಫಲವೂ ಇದಾಗಿದೆ.

ಆಶಾವಾದದ ಮಿಣುಕು ದ್ವೀಪ

ಆದರೆ, ಹತಾಶೆಯ ಮಹಾಸಾಗರದ ನಡುವೆಯೂ ಆಶಾವಾದದ ಚಿಕ್ಕ ದ್ವೀಪವೊಂದು ಕಾಣಿಸಿದೆ. ಅದು ಮುಂದಿನ ದಾರಿ ತೋರಿಸುತ್ತದೆ. ಮಹಾರಾಷ್ಟç ಮತ್ತು ದೆಹಲಿಯಂಥ ಅಭವೃದ್ಧಿ ಹೊಂದಿದ ಹಾಗೂ ಶ್ರೀಮಂತ ರಾಜ್ಯಗಳು ಆಕ್ಸಿಜನ್‌ಗಾಗಿ ಪರದಾಡುತ್ತಿದ್ದಾಗ, ಕೇರಳದಲ್ಲಿ ಪ್ರಾಣವಾಯುವಿನ ಕೊರತೆ ಇಲ್ಲ. ವಾಸ್ತವವಾಗಿ ಕೇರಳದಲ್ಲಿ ಹೆಚ್ಚುವರಿ ಮೆಡಿಕಲ್ ಆಕ್ಸಿಜನ್ ಇತ್ತು. ಅದು ಕೊವಿಡ್-19 ವಿರುದ್ಧದ ಹೋರಾಟದಲ್ಲಿ ನೆರವಾಗಲು ತಮಿಳು ನಾಡು, ಕರ್ನಾಟಕ, ಗೋವಾ ಮತ್ತು ಲಕ್ಷದ್ವೀಪಕ್ಕೆ ಆಕ್ಸಿಜನ್ ಸರಬರಾಜು ಮಾಡಿದೆ. ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಅದು ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಿದೆ. ಹೆಚ್ಚುವರಿ ಆಕ್ಸಿಜನ್ ಹೊಂದಲು ಇದುವೇ ಕಾರಣವಾಗಿದೆ. ಎಪ್ರಿಲ್ 2020ಕ್ಕೆ ಹೋಲಿಸಿದರೆ, ವೈದ್ಯಕೀಯ ಆಮ್ಲಜನಕ ಉತ್ಪಾದನೆ 50 ಲೀಟರ್ ಪ್ರತಿ ನಿಮಿಷದಿಂದ , ಎಪ್ರಿಲ್ 20021ರಲ್ಲಿ 1250 ಲೀಟರ್ ಪ್ರತಿನಿಮಿಷಕ್ಕೆ ಏರಿದೆ.

ಕೇರಳ ರಾಜ್ಯ ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಯೋಜಿತ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದು ಹಾಗೂ ಅದಕ್ಕೆ ನೀಡಿದ ಆದ್ಯತೆಯೇ ಇದಕ್ಕೆ ಕಾರಣವಾಗಿದೆ. ಕೇರಳದಲ್ಲಿ ಕೊವಿಡ್ ಚಿಕಿತ್ಸೆ ಅಗತ್ಯವಾದ ಶೇಕಡ 95ಕ್ಕೂ ಹೆಚ್ಚು ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದಿದ್ದಾರೆನ್ನುವುದು ಗಮನಾರ್ಹ ವಿಚಾರ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಿದೆ.

ಬೇರೆ ರಾಜ್ಯಗಳಂತಲ್ಲದೆ, ಕೇರಳದಲ್ಲಿ ಒಂದಿನಿತೂ ವ್ಯರ್ಥವಾಗದೆ ಲಸಿಕೆಯನ್ನು ನೂರಕ್ಕೆ ನೂರರಷ್ಟು ಬಳಸಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಹೇಳಿದೆ. 88 ಲಕ್ಷ ಕುಟುಂಬಗಳಿಗೆ ಈಗಲೂ ಉಚಿತ ಆಹಾರ ಕಿಟ್ ವಿತರಿಸಲಾಗುತ್ತಿದೆ. ಯಾರೂ ಹಸಿವಿನಿಂದ ಇರಬಾರದು ಎನ್ನುವುದೇ ರಾಜ್ಯದ ಎಲ್‌ಡಿಎಫ್ ಸರ್ಕಾರದ ಧ್ಯೇಯವಾಗಿದೆ. ಅಂದರೆ, ಸಾರ್ವಜನಿಕ ಆರೋಗ್ಯಕ್ಕೆ ಬದ್ಧತೆಯಿದ್ದರೆ ಹಾಗೂ ರಾಜಕೀಯ ಇಚ್ಛಾಶಕ್ತಿಯಿದ್ದರೆ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಬಹುದು ಎನ್ನುವುದನ್ನು ಇದು ತೋರಿಸಿಕೊಟ್ಟಿದೆ.

ದೇಶದ ಸಾರ್ವಜನಿಕ ಆರೋಗ್ಯ ವಿಪತ್ತಿನೊಂದಿಗೆ ಅನಿವಾರ್ಯವಾಗಿಯೇ ಇನ್ನೊಂದು ಸುತ್ತಿನ ಆರ್ಥಿಕ ಬಿಕ್ಕಟ್ಟು ಹಾಗೂ ಉದ್ಯೋಗ ನಷ್ಟ ಉಂಟಾಗಲಿದೆ. ಪ್ರಸಕ್ತ ಬಿಕ್ಕಟ್ಟನ್ನು ಎದುರಿಸಬೇಕಾದರೆ ಮೋದಿ ಸರ್ಕಾರ ಸಂಕುಚಿತ, ಪಂಥವಾದಿ, ನವ ಉದಾರವಾದಿ-ಹಿಂದುತ್ವ ದೃಷ್ಟಿಕೋನವನ್ನು ಬಿಟ್ಟುಬಿಡಬೇಕು. ಮತ್ತು ಜನರಿಗೆ ಪರಿಹಾರ ಒದಗಿಸಲು ಆರ್ಥಿಕ ಹಾಗೂ ಭೌತಿಕ, ಹೀಗೆ ಎಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕು.

ಅನು: ವಿಶ್ವ

COVID 2021-VISHWAGURU

ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ

Leave a Reply

Your email address will not be published. Required fields are marked *