ಪಶ್ಚಿಮ ಬಂಗಾಲದ 17ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ಒಂದು ಮಹತ್ವದ ಘಟನೆ. ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಸಂಯುಕ್ತ ಮೋರ್ಚಾಕ್ಕೆ ತೀವ್ರ ನಿರಾಸೆಯಾಗಿದೆ. ಈ ಬಗ್ಗೆ ಮೋರ್ಚಾದ ಅಂಗ ಪಕ್ಷಗಳಲ್ಲಿ ಮತ್ತು ಸಂಯುಕ್ತ ಮೋರ್ಚಾದಲ್ಲಿ ಜಂಟಿಯಾಗಿ ವಿಮರ್ಶೆಗಳನ್ನು ನಡೆಸಿ ಅದರಿಂದ ಪಾಠ ಕಲಿಯಲಾಗುವುದು ಎಂದು ಎಡರಂಗದ ಅಧ್ಯಕ್ಷ ಬಿಮನ್ ಬಸು ಹೇಳಿದ್ದಾರೆ. ಆದರೆ, ಮೊದಲ ನೋಟಕ್ಕೆ, ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ತೃಣಮೂಲ ಕಾಂಗ್ರೆಸಿಗೆ ಪ್ರಯೋಜನವಾಗಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಪಡೆದಿತ್ತು ಮತ್ತು ಈ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿತು, ಆರೆಸ್ಸಸನ್ನು, ಸಂಘ ಪರಿವಾರವನ್ನು ಬಳಸಿತು, ಎಲ್ಲ ಜಿಲ್ಲೆಗಳನ್ನು ಕವರ್ ಮಾಡಲು ಹಲವು ಹೆಲಿಕ್ಯಾಪ್ಟರುಗಳನ್ನು ಬಳಸಿತು. ಆದರೂ ಜನಗಳು ಅದನ್ನು ಸೋಲಿಸಿದ್ದಾರೆ. ಆದರೆ ಅದು ಬಂಗಾಳದ ಸಾಮಾಜಿಕ ಹಂದರದಲ್ಲಿ ಒಂದು ಶಾಶ್ವತ ಗಾಯವನ್ನು ಉಂಟುಮಾಡಿದೆ, ಇದು ಮುಂದೆ ಬಂಗಾಳದ ಸಂಸ್ಕೃತಿಗೆ ಮತ್ತು ಸಮಾಜಕ್ಕೆ ಹಾನಿಯುಂಟು ಮಾಡಬಹುದು ಎಂಬ ಭೀತಿಯನ್ನು ಬಿಮನ್ ಬಸು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಎಲ್ಲ ಟಿಎಂಸಿ-ವಿರೋಧಿ ಶಕ್ತಿಗಳ ಹೊಣೆಗಾರಿಕೆ ಹೆಚ್ಚಿದೆ. ಸಂಯುಕ್ತ ಮೋರ್ಚಾ ಸಂವಿಧಾನದ ನಿಬಂಧನೆಗಳನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಜಾತ್ಯತೀತತೆಯನ್ನು ರಕ್ಷಿಸಬೇಕಾಗಿದೆ, ದುಡಿಯುವ ಜನಗಳ ಜೀವನೋಪಾಯದ ಹೋರಾಟವನ್ನು ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ಚುನಾವಣೆಗಳಲ್ಲಿ ಸಂಯುಕ್ತ ಮೋರ್ಚಾದ ಪ್ರಚಾರದಲ್ಲಿ ಪಾತ್ರ ವಹಿಸಿದ ಕಾರ್ಮಿಕ ವರ್ಗವನ್ನು ಅಭಿನಂದಿಸುತ್ತ ಬಿಮನ್ ಬಸು, ಮತಗಣನೆಯ ನಂತರ ರಾಜ್ಯದಲ್ಲಿ ಶಾಂತಿ ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಮಹಾಸೋಂಕನ್ನು ಎದುರಿಸುವಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರ ತಮ್ಮ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಆಗ್ರಹಪಡಿಸುತ್ತಲೇ ಸಂಯುಕ್ತ ಮೋರ್ಚಾ ಇಂತಹ ಸಮಯದಲ್ಲಿ ಜನತೆಯ ಬೆಂಬಲಕ್ಕೆ ನಿಲ್ಲುವ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಸಮರೋಪಾದಿಯಲ್ಲಿ ಮುಂದುವರೆಸಬೇಕು ಎಂದು ಅವರು ಹೇಳಿದ್ದಾರೆ.