ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಆಮ್ಲಜನಕ ದೊರೆಯದೇ 24 ಸಾವುಗಳು ಸಂಭವಿಸಿವೆಯೆಂಬ ಅಘಾತಕಾರಿ ವರದಿ ಬಂದಿದೆ. ಇದು ಸರಕಾರದ ದಿವ್ಯ ನಿರ್ಲಕ್ಷ್ಯ ಮತ್ತು ದುರಾಡಳಿತದ ಫಲವಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಇದರಿಂದಾಗಿ ಅಮಾಯಕ ಪ್ರಜೆಗಳು ಸಾವಿಗೀಡಾಗಬೇಕಾಯಿತು ಅದರಿಂದಾಗಿ ಆ ಕುಟುಂಬಗಳು ತೀವ್ರ ದುಃಖವನ್ನು ಅನುಭವಿಸಬೇಕಾಗಿ ಬಂದಿತು. ಈ ಸಾವುಗಳಿಗೆ ಸರಕಾರವೇ ನೇರ ಹೊಣೆಗಾರನಾಗಿದೆ.
ಉನ್ನತ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸರಕಾರ ಹೇಳಿರುವುದು ತನ್ನ ಹೊಣೆಗಾರಿಕೆಯನ್ನು ಮುಚ್ಚಿಟ್ಟುಕೊಳ್ಳುವ ದುರುಳ ತಂತ್ರವಾಗಿದೆ. ತಕ್ಷಣವೇ, ಸದರಿ ಪ್ರಕರಣವನ್ನು ಸ್ವತಂತ್ರವಾದ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಲು ಮತ್ತು ಆ ಮೂಲಕ ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ.
ಅದೇ ರೀತಿ, ಸಾವಿಗೀಡಾದ ನಾಗರೀಕರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ಸಿಪಿಐ(ಎಂ) ವ್ಯಕ್ತಪಡಿಸುತ್ತದೆ. ಸದರಿ ಕುಟುಂಬಗಳಿಗೆ ತಕ್ಷಣವೇ, ರಾಜ್ಯ ಸರಕಾರ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಒತ್ತಾಯಿಸುತ್ತದೆ.
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ