ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ತುರ್ತು ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ರಾಜ್ಯ ಸರಕಾರವು ಕಾರ್ಮಿಕ ವಿರೋಧಿ ಸಂಹಿತೆಗಳ ತಿದ್ದುಪಡಿಗೊಳಿಸಲು ಕಾರ್ಯಪ್ರವೃತ್ತರಾಗಿರುವುದು ಕಾರ್ಮಿಕ ವರ್ಗದ ಮೇಲೆ ಅತ್ಯಂತ ಆತಂಕ ಎದುರಾಗಿದೆ. ರಾಜ್ಯ ಸರಕಾರ ಕಾರ್ಮಿಕ ಸಂಹಿತೆಗಳ ನಿಯಮಾವಳಿ ರಚನೆಗೆ ತೊಡಗಿಸಿಕೊಂಡಿರುವುದು ತೀವ್ರವಾಗಿ ಖಂಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದ ಮನವಿ ಪತ್ರದ ವಿವರ ಹೀಗಿವೆ…..
————————
ಇವರಿಗೆ,
ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪರವರು
ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ,
ವಿಧಾನಸೌಧ, ಬೆಂಗಳೂರು.
ಮಾನ್ಯರೇ,
ವಿಷಯ: ಲೂಟಿಕೋರ ಕಾರ್ಪೋರೇಟ್ ಪರ, ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳ ಜಾರಿಯ ಎಲ್ಲ ಕ್ರಮಗಳನ್ನು ನಿಲ್ಲಿಸಲು ಸಿಪಿಐ(ಎಂ) ಒತ್ತಾಯ.
ಕರ್ನಾಟಕ ರಾಜ್ಯ ಕೋವಿಡ್ – 19 ರಿಂದ ತೀವ್ರವಾಗಿ ಬಾಧೆಗೊಳಗಾಗಿರುವುದು ಮತ್ತು ರಾಜ್ಯದಲ್ಲಿ ಕೋವಿಡ್-19ರ ತುರ್ತು ಪರಿಸ್ಥಿತಿ ಇರುವುದು ತಮಗೆ ತಿಳಿದಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಂಪನ್ಮೂಲ ಹಾಗೂ ಶಕ್ತಿಗಳನ್ನು ಬಳಸಿ ಅದನ್ನು ಎದುರಿಸಬೇಕಾದ ಸರಕಾರ, ತನ್ನ ಆಡಳಿತಾಧಿಕಾರಿಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿ ಬಲಪಡಿಸಲು ಬೇಕಾದ ಕೆಲಸಕ್ಕೆ, ಕಾರ್ಮಿಕ ಸಂಹಿತೆಗಳ ನಿಯಮಾವಳಿ ರಚನೆಗೆ ತೊಡಗಿಸಿಕೊಂಡಿರುವುದು ತೀವ್ರ ಖಂಡನೀಯವಾಗಿದೆ.
ಕೋವಿಡ್-19 ನ್ನು ಎದುರಿಸಲು ಕಾರ್ಮಿಕರನ್ನು ಅವರ ಸಂಘಟಿತ ಶಕ್ತಿಯನ್ನು ಬಳಸಿಕೊಳ್ಳಬೇಕಾದ ಈ ಸಂದರ್ಭದಲ್ಲಿ, ಕೋವಿಡ್ ಬಾಧೆಯ ಜೊತೆ, ಇದುವರೆಗೆ ಕಾರ್ಮಿಕರು ಸಮರ ಶೀಲ ಹೋರಾಟ ನಡೆಸಿ ಗಳಿಸಿದ ಎಲ್ಲಾ ಹಕ್ಕುಗಳನ್ನು ನಾಶಮಾಡಿ, ಮತ್ತಷ್ಟು ವ್ಯಾಪಕವಾದ ಗುಲಾಮಗಿರಿಗೆ ಅವರನ್ನು ದೂಡುವ ದುರುಳ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಆತಂಕಗಳನ್ನು ಅವರ ಮೇಲೆ ಬಲವಂತವಾಗಿ ಹೇರಿ, ಬೀದಿಗಿಳಿಯುವಂತೆ ಮಾಡುವುದು ಮತ್ತು ಜನತೆಯ ಸಂಕಷ್ಠದ ಸಮಯವನ್ನು ಈ ರೀತಿ ಕಾರ್ಪೋರೇಟ್ ಲೂಟಿಗಾಗಿ ಬಳಸಿಕೊಳ್ಳುತ್ತಿರುವುದು ತಮ್ಮ ಸರಕಾರದ ಅಮಾನವೀಯ ಕ್ರೌರ್ಯವನ್ನು ತೋರುತ್ತದೆ. ಇದೆಲ್ಲವೂ ಸ್ಪಷ್ಟವಾಗಿ ತಮ್ಮ ಸರಕಾರ ಕಾರ್ಪೋರೇಟ್ ಕಂಪನಿಗಳ ಒತ್ತಡಕ್ಕೆ ಮಣಿಯುತ್ತಿರುವುದನ್ನು ತೋರಿಸುತ್ತದೆ.
ತಕ್ಷಣವೇ, ಲೂಟಿಕೋರರ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸುವ ಎಲ್ಲಾ ಕ್ರಮಗಳನ್ನು ಕರ್ನಾಟಕ ಸರಕಾರ ಈ ಕೂಡಲೇ ನಿಲ್ಲಿಸಬೇಕೆಂದು ಮತ್ತು ರಾಜ್ಯವನ್ನು ಕೋವಿಡ್ ಸಂಕಟದಿಂದ ಪಾರು ಮಾಡಲು ಎಲ್ಲಾ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮತ್ತೊಮ್ಮೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಬಲವಾಗಿ ಆಗ್ರಹಿಸುತ್ತದೆ.
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ