ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಒಳಗೊಂಡು ಜನಸಾಮಾನ್ಯರು ಅತ್ಯಂತ ಸಂಕಷ್ಟದಲ್ಲಿ ಒಳಗಾಗಿರುವ ಹಿನ್ನೆಲೆಯಲ್ಲಿ ಸರಕಾರವು ಸೂಕ್ತವಾದ ಮತ್ತು ಸಮಗ್ರವಾದ ಕಾರ್ಯಯೋಜನೆಯನ್ನು ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿಯು ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ ಅದರ ಪೂರ್ಣ ಮಾಹಿತಿ ಕೆಳಗಿನಂತಿವೆ.
————————————————–
ಇವರಿಗೆ,
ಮಾನ್ಯ ಪ್ರಧಾನ ಮಂತ್ರಿಗಳು,
ಭಾರತ ಸರಕಾರ, ಪಾರ್ಲಿಮೆಂಟ್ ಭವನ, ನವದೆಹಲಿ.
ಇವರಿಗೆ,
ಮಾನ್ಯ ಶ್ರೀ ಯಡಿಯೂರಪ್ಪರವರು,
ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ, ವಿಧಾನಸೌಧ, ಬೆಂಗಳೂರು
ಮಾನ್ಯರೇ,
ಕರ್ನಾಟಕ ರಾಜ್ಯ ಮತ್ತೊಮ್ಮೆ ಕೋವಿಡ್-19ರ ಎರಡನೇ ಅಲೆಯ ಅತ್ಯಂತ ಗಂಭೀರವಾದ ಬಾಧೆಗೊಳಗಾಗುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ.
ಮಾಹಿತಿಯಂತೆ, ಪ್ರತಿ ದಿನ ಸರಾಸರಿ ಸುಮಾರು 40 ಸಾವಿರಕ್ಕೂ ಹೆಚ್ಚಿನ ಹೊಸ ಸೋಂಕಿತರು ಕಂಡು ಬಂರುತ್ತಿದ್ದಾರೆ. ಕಳೆದೆರಡು ವಾರಗಳಿಂದ ಸೋಂಕಿತರ ಸಂಖ್ಯೆ ತೀವ್ರ ಆಘಾತಕಾರಿಯಾಗಿ ಬೆಳೆಯುತ್ತಲೇ ಇದೆ. ಸಾವುಗಳ ಸಂಖ್ಯೆಯು ಬೆಳೆಯುತ್ತಲೇ ಇದೆ. ಇನ್ನೂ ಮುಂದೆಯೂ ಮತ್ತಷ್ಠು ವೇಗವಾಗಿ ಹೆಚ್ಚಳಗೊಳ್ಳುವ ಅಪಾಯದ ಕುರಿತು ತಜ್ಞರು ಎಚ್ಚರಿಸಿದ್ದಾರೆ.
ಆದರೆ, ಕೋವಿಡ್-19 ಎರಡನೇ ಅಲೆಯ ಸೋಂಕಿನ ಬೆಳವಣಿಗೆಯ ಅಪಾಯದ ಕುರಿತು ತಜ್ಞರು ಮಾಹಿತಿ ನೀಡಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಕಾಲಿಕ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಇರುವುದು ತೀವ್ರ ಅಪರಾಧಿ ದುಷ್ಕೃತ್ಯದ ಉದಾಸೀನವಾಗಿದೆ. ಈ ದುಷ್ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಸರಕಾರಗಳ ನಿರ್ಲಕ್ಷ್ಯದಿಂದಾಗಿ ರಾಜ್ಯದ ಜನತೆ ಈ ಸಾಂಕ್ರಾಮಿಕಕ್ಕೆ ವ್ಯಾಪಕವಾಗಿ ಬಲಿಯಾಗುವಂತಾಗಿದೆ. ಅದರ ಹೊಣೆಗಾರಿಕೆ ನಿಮ್ಮದೇ ಆಗಿರುತ್ತದೆ ಸರಕಾರಗಳು ಕೇವಲ ತೋರಿಕೆಯ ಆತಂಕವನ್ನು ಕಪಟತನದಿಂದ ವ್ಯಕ್ತಪಡಿಸುತ್ತಿರುವುದನ್ನು ಬಿಟ್ಟರೇ, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೈಗೊಂಡ ಕ್ರಮಗಳು ಏನೇನು ಇಲ್ಲವಾಗಿದೆ. ಜಗತ್ತಿನ ಅನುಭವದಂತೆ ಮಾರ್ಪಾಟುಗೊಂಡ ಅಥವಾ ಎರಡನೇ ಅಲೆಯ ವೈರಾಣು ಧಾಳಿ ನಿಯಂತ್ರಿಸಲು, ಅದನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಎರಡೂ ಸರಕಾರ ಮಾಡಿಕೊಳ್ಳಲಿಲ್ಲವೆಂದು ಹೇಳಲೇ ಬೇಕಾಗಿದೆ.
ಕಳೆದ ವರ್ಷದ ಕೋವಿಡ್ ಧಾಳಿಯ ಅನುಭವವನ್ನು ಕ್ರೋಢೀಕರಿಸಿಕೊಂಡು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿಲ್ಲವೇಕೆ ಎಂದು ತಾವು ನಾಗರೀಕರಿಗೆ ಉತ್ತರಿಸಬೇಕಾಗಿದೆ.
ಪರಿಣಾಮವಾಗಿ, ಈಗ ಬೆಳೆಯುತ್ತಿರುವ ಸೋಂಕಿತರ ಸಂಖ್ಯೆಗೆ ಅನುಸಾರವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳು, ಆಮ್ಲಜನಕ, ಔಷಧಿಗಳು, ಲಸಿಕೆಗಳು ಮತ್ತು ಶೂಶೃಕರು ದೊರೆಯುತ್ತಿಲ್ಲವೆಂಬುದು ಸೋಂಕಿತರ ಹಾಗೂ ಅವರ ಕುಟುಂಬದ ಸದಸ್ಯರ ಅಳಲಾಗಿದೆ. ಇದರಿಂದಾಗಿ ಹಲವು ಸೋಂಕಿತರು ಮರಣ ಹೊಂದಿದ್ದಾರೆ. ಖಾಸಗೀ ಆಸ್ಪತ್ರೆಗಳು, ಜನಗಳ ಈ ದುಸ್ಥಿತಿಯನ್ನು ಬಳಸಿಕೊಂಡು ಸುಲಿಗೆಗೆ ನಿಂತಿವೆ. ಔಷಧಿಗಳನ್ನು ಹಾಗೂ ಬೆಡ್‌ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಬಿಡಲಾಗಿದೆ. ಮಾತ್ರವಲ್ಲಾ, ಸದರಿ ಸಂದರ್ಭಗಳನ್ನು ಕೋಮುವಾದಿ ಮತಾಂಧ ಶಕ್ತಿಗಳು ಜನತೆಯನ್ನು ವಿಭಜಿಸಿ ಆಳಲು ಬಿಡಲಾಗಿದೆ. ಇದೆಲ್ಲವೂ, ರಾಜ್ಯದ ನಾಗರೀಕರಲ್ಲಿ ಮತ್ತಷ್ಠು ಭೀತಿಯುಂಟಾಗಿದೆ.
ಮೊದಲೇ, ರಾಜ್ಯವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಜೊತೆಗೆ ಕಳೆದ ಎರಡು-ಮೂರು ವರ್ಷಗಳ ಬರಗಾಲ ಮತ್ತು ಪ್ರವಾಹಗಳು ಇನ್ನಷ್ಟು ಸಂಕಷ್ಟಗಳನ್ನು ಜನತೆಯ ಮೇಲೆ ಅದಾಗಲೇ ಹೇರಿದ್ದವು. ಕಳೆದ ವರ್ಷದಿಂದ ಈ ಕೋವಿಡ್ ಬಾಧೆ, ಅವೈಜ್ಞಾನಿಕ ಲಾಕ್‌ಡೌನ್ ಅದರ ದುಷ್ಪರಿಣಾಮಗಳು ಮತ್ತು ಇದೀಗ ಮುಂದುವರೆದ ವೈರಸ್ ದಾಳಿ ಅದನ್ನೆದುರಿಸಲು ಮತ್ತೊಮ್ಮೆ ಮುಂಜಾಗ್ರತಾ ಕ್ರಮಗಳಿಲ್ಲದ ಲಾಕ್‌ಡೌನ್ ಘೋಷಣೆ ರಾಜ್ಯವನ್ನು ಮತ್ತಷ್ಟು ನಲುಗುವಂತೆ ಮಾಡಿದೆ.
ಇಂತಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಪರಿಹಾರದ ಕ್ರಮಗಳನ್ನು ಕೈಗೊಳ್ಳುವಂತೆ ನಾವು ಹಲವು ಬಾರಿ ಒತ್ತಾಯ ಮಾಡುತ್ತಾ ಬಂದರೂ ತಮ್ಮ ಸರಕಾರ ಆ ಕುರಿತು ಗಮನವನ್ನೇ ಹರಿಸಲಿಲ್ಲ.
ಇದರಿಂದಾಗಿ, ಜನತೆಯ ಸಂಕಷ್ಟಗಳನ್ನು, ಅವರುಗಳೇ ಪರಿಹರಿಸಿಕೊಳ್ಳುವಂತೆ ಅವರ ಮೇಲೆಯೇ ನಿರ್ಧಯಿಯಾಗಿ ತಮ್ಮ ಸರಕಾರಗಳು ಬಿಟ್ಟು ಬಿಟ್ಟುದರಿಂದ, ಸಾಮಾನ್ಯರು, ಬಡವರು, ತಮ್ಮ ಬಳಿ ಇದ್ದ ಸಣ್ಣ ಪುಟ್ಟ ಆಸ್ತಿಗಳನ್ನು ಉಳ್ಳವರಿಗೆ ದುಬಾರಿ ಬಡ್ಡಿಯ ಸಾಲಕ್ಕಾಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಮತ್ತು ಸಾಲಬಾಧಿತರಾಗಿದ್ದಾರೆ. ಇದರಿಂದ ಶ್ರೀಮಂತರು ಭಾರೀ ಶ್ರೀಮಂತರಾದರು, ಬಡವರು ಮತ್ತಷ್ಟು ಕಡುಬಡವರಾಗುತ್ತಿದ್ದಾರೆ.
ಈಗ ರಾಜ್ಯವು ಮರಳಿ ಮತ್ತಷ್ಟು ದುಸ್ಥಿತಿಯ ಕಡೆ ಚಲಿಸುವಂತಾಗಿದೆ. ಒಂದೆರಡು ತಿಂಗಳಿನಿಂದ ಉದ್ಯೋಗ ಹರಸಿ ಹೊರಟಿದ್ದ ವಲಸೆ ಕಾರ್ಮಿಕರು, ಬೆಳೆಯುತ್ತಿರುವ ಸೋಂಕಿನ ಕಾರಣದಿಂದ ಆತಂಕಗೊಂಡು ಮರಳಿ ಸ್ವಂತ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈಗಿನ ಲಾಕ್‌ಡೌನ್ ಕಾರಣದಿಂದ ನಿರುದ್ಯೋಗ ಮತ್ತೊಮ್ಮೆ ಬೃಹದಾಕಾರವಾಗಿ ಬೆಳೆಯಲಿದೆ. ಇವರಿಗೆ ಯಾವುದೇ ಪರಿಹಾರವನ್ನು ಘೋಷಿಸಿಲ್ಲ. ಅಪೌಷ್ಠಿಕತೆಯಿಂದ ಬಳಲುವ ಜನರು, ಪೌಷ್ಠಿಕತೆಯನ್ನು ಪಡೆದು ರೋಗ ನಿರೋಧಕ ಶಕ್ತಿ ವಿಸ್ತರಿಸಿಕೊಳ್ಳಲು ಯಾವುದೇ ಕ್ರಮಗಳಿಲ್ಲ.
ಮತ್ತೊಂದು ಕಡೆ, ತಮ್ಮ ಹಾಗೂ ಕೇಂದ್ರ ಸರಕಾರಗಳು ಜಾರಿ ಮಾಡುತ್ತಿರುವ ಲೂಟಿಕೋರ ಕಾರ್ಪೋರೇಟ್ ಪರವಾದ ನೀತಿಗಳು, ಜನತೆಯನ್ನು ಇನ್ನಷ್ಟು ಆತಂಕಿತರನ್ನಾಗಿಸಿ ಇಂತಹ ವೈರಾಣು ಧಾಳಿಯ ನಡುವೆಯೂ ಅವರು ಬೀದಿಗಿಳಿಯುವಂತೆ ಬಲವಂತ ಮಾಡಿದೆ.
ಆದ್ದರಿಂದ, ರಾಜ್ಯವನ್ನು ಇಂತಹ ದುಸ್ಥಿತಿಯಿಂದ ಮತ್ತು ತೀವ್ರತರವಾದ ಆತಂಕಗಳಿಂದ ಮೇಲೆತ್ತಲು ಮತ್ತು ಈ ಸಂಕಷ್ಟಗಳನ್ನು ಜನತೆ ಐಕ್ಯತೆಯಿಂದ ಎದುರಿಸುವಂತಾಗಲು, ಈ ಕೂಡಲೇ, ರಾಜ್ಯದಲ್ಲಿ ಕೋವಿಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಕೆಳಕಂಡ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳುವಂತೆ ಈ ಮೂಲಕ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು:
1) ರೈತರು ಹಾಗೂ ಕಾರ್ಮಿಕರ ಮತ್ತು ನಾಗರೀಕರ ವಿರೋಧಿಯಾದ ಕಾಯ್ದೆಗಳು, ಭೂಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ- 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಕಾರ್ಮಿಕ ಸಂಹಿತೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗಳನ್ನು ತಕ್ಷಣ ವಾಪಾಸು ಪಡೆಯಬೇಕು.
2) ಕೋವಿಡ್ ಸೋಂಕಿತರಿಗೆ ಉಚಿತ ಶೂಶೃಷೆ ಒದಗಿಸಲು ಮತ್ತು ಖಾಸಗೀ ಆಸ್ಪತ್ರೆಗಳ ಸುಲಿಗೆಗಳಿಂದ ರಕ್ಷಿಸಲು ಎಲ್ಲಾ ಖಾಸಗೀ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಸರಕಾರದ ವಶಕ್ಕೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಅರ್ಧದಷ್ಠು ಹಾಸಿಗೆಗಳನ್ನು ಕೋವಿಡ್ ಬಾಧಿತರಿಗೆ ಮೀಸಲಿಡಬೇಕು. ಮುಂಜಾಗ್ರತೆಯ ಕ್ರಮವಾಗಿ, ಶಾಲಾ ಕಾಲೇಜ್, ಹಾಸ್ಟೆಲ್ ಹಾಗೂ ಕಲ್ಯಾಣ ಮಂಟಪ, ಹೋಟೆಲ್ ಮುಂತಾದವುಗಳನ್ನು ಆಸ್ಪತ್ರೆಗಳಾಗಿ ಬಳಸಲು ಅಗತ್ಯ ಸಿದ್ಧತೆಯನ್ನು ಕೈಗೊಳ್ಳಬೇಕು. ಈ ಎಲ್ಲದರ ನಿರ್ವಹಣೆಗೆ ಅಗತ್ಯ ಸಿಬ್ಬಂದಿ, ಔಷಧಿ, ಆಮ್ಲಜನಕ, ವೆಂಟಿಲೇಟರ್ ಗಳನ್ನು ಹಾಗೂ ಅದಕ್ಕಾಗಿ ಹಣಕಾಸು ನೆರವನ್ನು ಘೋಷಿಸಬೇಕು.
ರಾಜ್ಯದ ಎಲ್ಲ ವಯೋಮಾನದವರಿಗೆ ಕೇಂದ್ರ ಸರಕಾರ ಉಚಿತವಾಗಿ ಲಸಿಕೆಯನ್ನು ಒದಗಿಸಬೇಕು.
ಔಷಧಿಗಳ ಹಾಗೂ ಬೆಡ್ ಗಳ ಕಾಳಸಂತೆಯನ್ನು ತಡೆಯಲು ಕಠಿಣ ಕ್ರಮವಹಿಸಬೇಕು. ಇವುಗಳ ಲಭ್ಯತೆಯ ಪರಿಸ್ಥಿತಿಯ ಮಾಹಿತಿ ರಾಜ್ಯದಾದ್ಯಂತ ಸಾಮಾನ್ಯರಿಗೆ ಆನ್‌ಲೈನ್ ಹಾಗೂ ಮತ್ತಿತರೆಡೆ ತಿಳಿಯುವಂತೆ ಅಗತ್ಯ ಪಾರದರ್ಶಕತೆಗೆ ಕ್ರಮವಹಿಸಬೇಕು.
ಈ ಅಪಾರಾಧಧ ದಂಧೆಯಲ್ಲಿ ಪಾಲ್ಗೊಂಡವರನ್ನು ಶಿಕ್ಷಿಸಲು ತನಿಖೆಗೆ ಕ್ರಮವಹಿಸಬೇಕು. ಸದರಿ ಸಂದರ್ಭವನ್ನು ಕೋಮುವಾದಕ್ಕೆ ಬಳಸಿ ವಿಭಜನೆಗೆ ಕ್ರಮವಹಿಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
3) ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೆ ಮತ್ತು ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಮಾಸಿಕ 10,000 ರೂಗಳ ನೆರವು ಒದಗಿಸಬೇಕು. ರಾಜ್ಯದ ಎಲ್ಲರಿಗೆ ತಲಾ 10 ಕೆಜಿ ಸಮಗ್ರ ಆಹಾರಧಾನ್ಯಗಳನ್ನು ಮತ್ತು ಕೋವಿಡ್ ಸುರಕ್ಷಿತ ಕ್ರಮಗಳನ್ನು ಕೋವಿಡ್ ನಿಯಂತ್ರಣಕ್ಕೆ ಬಂದು ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಒದಗಿಸಬೇಕು. ನ್ಯಾಯಬೆಲೆ ಅಂಗಡಿಗಳ ಬಿಪಿಎಲ್ ಕಾರ್ಡದಾರರ ತಲಾ ಪಡಿತರವನ್ನು 2 ಕೆಜಿಗೆ ಕಡಿತ ಮಾಡಿರುವುದನ್ನು ವಾಪಾಸು ಪಡೆಯಬೇಕು.
ಎಲ್ಲಾ ಸಾಮಾಜಿಕ ಪಿಂಚಣಿದಾರರ ಬಾಕಿ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಈ ಮಾಸಿಕ ಸಹಾಯಧನವನ್ನು ಕನಿಷ್ಠ 3,000 ರೂಗಳಿಗೆ ಹೆಚ್ಚಿಸಬೇಕು.
4) ಉದ್ಯೋಗ ಖಾತ್ರಿ ಕೆಲಸವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಕನಿಷ್ಠ 200 ದಿನಗಳ ಕಾಲ ಕನಿಷ್ಠ 424 ರೂ.ಗಳ ಕೂಲಿಯಂತೆ ಕೋವಿಡ್ ಸುರಕ್ಷತೆಯೊಂದಿಗೆ ಜಾರಿಗೊಳಿಸಲು ಕ್ರಮವಹಿಸಬೇಕು. ಅಗತ್ಯ ಹಣಕಾಸು ಒದಗಿಸಬೇಕು.
5) ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ನೀಡಿ ಸರಕಾರವೇ ನೇರವಾಗಿ ಖರೀದಿಸಬೇಕು. ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯ ಪ್ರಸ್ಥಾಪವನ್ನು ವಾಪಾಸಾಗುವಂತೆ ಕ್ರಮವಹಿಸಬೇಕು.
6) ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ಪಾದಕ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಅಗತ್ಯ ಸೇವೆಯಲ್ಲೂ ಶೇ.50 ರಷ್ಟು ಸಿಬ್ಬಂದಿಯನ್ನು ಸುರಕ್ಷತಾ ಕ್ರಮಗಳೊಂದಿಗೆ .ಬಳಸಬೇಕು.
7) ವೃದ್ಧರು ಅಂಗವಿಕಲರು, ಒಂಟಿ ಜೀವನ ನಡೆಸುವ ಅಸಹಾಯಕರುಗಳನ್ನು ಗುರುತಿಸಿ ಅವರಿಗೆ ನೇರ ಊಟದ ಪ್ಯಾಕೇಟ್ ಗಳನ್ನು ವಹಿಸಲು ಕ್ರಮ ಕೈಗೊಳ್ಳಬೇಕು.
8) ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳ ಎಲ್ಲ ರೀತಿಯ ಸಾಲಗಳನ್ನು ಕೂಡಲೇ ಮನ್ನಾ ಮಾಡಬೇಕು.
9) ಕೋವಿಡ್ ಮರಣಗಳಿಗೆ ಕನಿಷ್ಠ 10 ಲಕ್ಷ ರೂಗಳ ಪರಿಹಾರವನ್ನು ಘೋಷಿಸಬೇಕು.
ವಂದನೆಗಳೊಂದಿಗೆ,
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ