ಕೋವಿಡ್ ರೋಗಿಗಳ ಹಾಸಿಗೆ ಹಂಚಿಕೆ ವಿಚಾರಗಳ ಕಾಳಸಂತೆ ಹಗರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಲು ಮತ್ತು ಕೋಮು ವಿಭಜನೆಯ ತಂತ್ರದ ಮೂಲಕ ತನಿಖೆಯ ಜಾಡು ತಪ್ಪಿಸಲು ಯತ್ನಿಸಿದ ಚುನಾಯಿತ ಪ್ರತಿನಿಧಿಗಳ ಮೇಲೆ ಕಾನೂನು ಕ್ರಮವಹಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ರಾಜ್ಯದಲ್ಲಿ ಎರಡನೇ ಕೋವಿಡ್ ಅಲೆ ವ್ಯಾಪಕ ಗೊಳ್ಳುತ್ತಿರುವಾಗ ಸರಕಾರ ಮುಂಜಾಗ್ರತಾ ಕ್ರಮಗಳನ್ನು ವಹಿಸುವಲ್ಲಿ ಪಾತಕ ನಿರ್ಲಕ್ಷ್ಯ ವಹಿಸುದುದರಿಂದ ಕೋವಿಡ್ ಬಾಧಿತರು ಮತ್ತು ಅವರ ಕುಟುಂಬಗಳು ತೀವ್ರ ರೀತಿಯಲ್ಲಿ ಪರಿತಪಿಸುವಂತಾಯಿತು. ಅನೇಕರಿಗೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ, ವೆಂಟಿಲೇಟರ್, ಔಷಧಿಗಳು ದೊರೆಯದೇ ಅವರು ಬೀದಿಗಳಲ್ಲಿ, ಅಂಬುಲೆನ್ಸ್ಗಳಲ್ಲಿಯೇ ಸಾವಿಗೀಡಾಗುವ ದುರಂತ ಸಂಭವಿಸಿತು. ಇದನ್ನು ರಾಜ್ಯದ ಜನತೆ ಗಮನಿಸಿದೆ.
ಇದಕ್ಕೆ ಪ್ರಮುಖವಾದ ಕಾರಣಗಳು ಎರಡು, ಮೊದಲನೆಯದು, ಸರಕಾರ ತಜ್ಞರ ಮುನ್ಸೂಚನೆಯ ವರದಿಯಂತೆ ಕೋವಿಡ್ ಎರಡನೇ ಅಲೆಯನ್ನು ನಿರೀಕ್ಷಿಸಿ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಸಿದ್ದತೆ, ವ್ಯವಸ್ಥೆಗೆ ಕ್ರಮ ವಹಿಸದಿರುವುದಾದರೇ, ಎರಡನೇಯದು, ಕೋವಿಡ್ ಬಾಧಿತರ ಪ್ರಮಾಣವು ದಿನದಿನಕ್ಕೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳು ಮತ್ತು ಮೆಡಿಕಲ್ ಹಾಗೂ ಆಮ್ಲಜನಕ ವ್ಯವಹಾರಿಗಳು, ಒಂದೆಡೆ ರೋಗಿಗಳಿಗೆ ಮೀಸಲಿಡುವ ಹಾಸಿಗೆಗಳನ್ನು ಮತ್ತೊಂದೆಡೆ ಔಷಧಿ, ವೈದ್ಯಕೀಯ ಆಮ್ಲಜನಕವನ್ನು ಮತ್ತು ಲಸಿಕೆಗಳ ಕೃತಕ ಅಭಾವ ಸೃಷ್ಟಿ ಮಾಡಿ, ಲೂಟಿಗೆ ಮುಂದಾದ ಲೂಟಿಕೋರ ಕಾಳಸಂತೆಯಾಗಿದೆ. ರಾಜ್ಯದ ಜನರು ಈ ರೀತಿಯಲ್ಲಿ ಧಾರುಣ ಸಾವುಗಳಿಗೆ ತುತ್ತಾಗುತ್ತಿರುವಾಗ ಸರಕಾರ ಅದನ್ನು ವ್ಯಾಪಕವಾಗಿ ತಡೆಯಲು ಅಗತ್ಯ ಕ್ರಮಗಳಿಗೆ ಮುಂದಾಗದಿರುವುದು ಕಾರಣವಾಗಿದೆ.
ಇದು ಬಹು ದೊಡ್ಡ ಕೊಲೆಗಡುಕ ಅಪರಾಧವಾಗಿದೆ. ಪ್ರಜೆಗಳನ್ನು ಕೊಲ್ಲುವ ಇಂತಹ ನೀಚ ಹಾಗೂ ಕೊಲೆಗಡುಕ ಅಪರಾಧ ಮತ್ತು ಸರಕಾರದ ಪಾತಕ ನಿರ್ಲಕ್ಷ್ಯವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ.
ಸಾವಿರಾರು ಅಮಾಯಕ ನಾಗರೀಕರ ಸಾವಿಗೆ ಕಾರಣವಾದ ಈ ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಹಾಗೂ ಔಷಧಿ ಮತ್ತು ಲಸಿಕೆಗಳ ಅಭಾವ ಉಂಟುಮಾಡಿ ಲೂಟಿ ಮಾಡಲು ಮುಂದಾದ ಈ ಕಾಳ ಸಂತೆಯನ್ನು ಅಮೂಲಾಗ್ರವಾಗಿ ಪರಿಶೋಧಿಸಿ ಇವುಗಳ ಹಿಂದಿನ ಅಪರಾಧಿ ಶಕ್ತಿಗಳನ್ನು ಮತ್ತು ಜನತೆಯ ಮುಂದೆ ತೆರೆದಿಡಲು, ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆಯನ್ನು ನಡೆಸಲು ಅಗತ್ಯ ಕ್ರಮವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಸರಕಾರದ ಬಹುದೊಡ್ಡ ಪಾತಕ ನಿರ್ಲಕ್ಷ್ಯವು, ಕಾಳ ಸಂತೆಗೆ ಅಪ್ರತ್ಯಕ್ಷ ಬೆಂಬಲವು ಇದರಲ್ಲಿರುವುದರಿಂದ ಅಧಿಕಾರಿಗಳ ಮಟ್ಟದ ತನಿಖೆ ಖಂಡಿತಾ ಇಂತಹ ಪಾತಕ ದುಷ್ಕೃತ್ಯವನ್ನು ಬಯಲುಗೆಳೆಯಲಾರದಾದುದರಿಂದ ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆಯ ಅಗತ್ಯವಿದೆಯೆಂದು ಸಿಪಿಐ(ಎಂ) ವಿವರಿಸಿದೆ.
ಕೋವಿಡ್ ಎರಡನೇ ಧಾಳಿಯ ಪ್ರಕೃತಿ ವಿಕೋಪದ ಅಲೆಯನ್ನು ಕೇವಲ ರಾಜ್ಯ ಸರಕಾರ ಮಾತ್ರವಲ್ಲಾ ಇಡೀ ರಾಜ್ಯದ ನಾಗರೀಕರು, ರೈತರು, ಕಾರ್ಮಿಕರನ್ನು ಒಳಗೊಂಡು ಬಲವಾದ ಒಕ್ಕೊರಲಿನ ಐಕ್ಯತೆಯಿಂದ ಎದುರಿಸಲು ಅಗತ್ಯ ಕ್ರಮವಹಿಸಬೇಕೆಂದು ರಾಜ್ಯ ಸರಕಾರವನ್ನು ಕೋವಿಡ್ ಮೊದಲ ಅಲೆಯಿಂದಲೂ ನಿರಂತರವಾಗಿ ಸಿಪಿಐ(ಎಂ) ಒತ್ತಾಯಿಸುತ್ತಲೇ ಬರುತ್ತಿದೆ. ಆದರೇ ಸರಕಾರ ಈ ಕುರಿತು ಕಿಂಚಿತ್ತೂ ಕ್ರಮವಹಿಸುತ್ತಿಲ್ಲ.
ಬದಲಿಗೆ, ಆಡಳಿತ ಪಕ್ಷದ ಸಂಸದ ಹಾಗೂ ಶಾಸಕರುಗಳು ಕೋಮು ಆಧಾರದಲ್ಲಿ ಜನತೆಯನ್ನು ವಿಭಜಿಸಿ ಜನರ ಗಮನವನ್ನು ಬೇರೆಡೆ ಸೆಳೆದು, ಕೋವಿಡ್ ನಿಭಾಯಿಸುವಲ್ಲಿ ಸರಕಾರದ ಪಾತಕ ಉಪೇಕ್ಷೆಯನ್ನು ಮತ್ತು ಕಾಳಸಂತೆಯ ದಂಧೆಯನ್ನು ಮುಚ್ಚಿ ಹಾಕುವ ಹಾಗೂ ತನಿಖೆಯ ಜಾಡಿನ ದಿಕ್ಕು ತಪ್ಪಿಸುವ ದುಷ್ಕೃತ್ಯದಲ್ಲಿ ತೊಡಗಿರುವುದನ್ನು ಕಣ್ಣು ಮುಚ್ಚಿಕೊಂಡು ಗಮನಿಸುತ್ತದೆ. ಚುನಾಯಿತ ಪ್ರತಿನಿಧಿಗಳ ಇಂತಹ ದುರ್ನಡೆಯನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ.
ಇಂತಹ ದುಷ್ಕೃತ್ಯವನ್ನು ಬಲವಾಗಿ ವಿರೋಧಿಸಿ, ಇವರ ಮೇಲೆ ಅಗತ್ಯ ಕಠಿಣ ಕಾನೂನಿನ ಕ್ರಮಗಳನ್ನು ಕೈಗೊಳ್ಳುವ ಬದಲು, ಅಂತಹ ದುಷ್ಠ ಸಂಚುಗಳಿಗೆ ಮೌನ ಸಮ್ಮತಿಯನ್ನು ನೀಡಿ, ನೆರವಾಗುವಂತೆ ರಾಜ್ಯ ಸರಕಾರ ನಡೆದುಕೊಳ್ಳುತ್ತಿರುವುದು ತೀವ್ರ ಕಳವಳಕಾರಿಯಾದ ಸಂಗತಿಯಾಗಿದೆ. ಇದು, ರಾಜ್ಯ ಸರಕಾರಕ್ಕೆ ಪಾತಕ ಕಾಳಸಂತೆಯನ್ನು ನಿಗ್ರಹಿಸಲು ಮತ್ತು ಜನತೆಯನ್ನು ರಕ್ಷಿಸಲು ನಿಜವಾದ ಕಾಳಜಿ ಇಲ್ಲವೆಂಬುದನ್ನು ಎತ್ತಿ ತೋರಿಸುತ್ತದೆ.
ರಾಜ್ಯ ಸರಕಾರ, ಈ ಕೂಡಲೇ ಜನತೆಯನ್ನು ಕೋಮು ಆಧಾರದಲ್ಲಿ ವಿಭಜಿಸುವ ದುಷ್ಢ ತಂತ್ರವನ್ನು ಹೆಣೆದ ಇವರ ಮೇಲೆ ಕಠಿಣ ಕಾನೂನಿನ ಕ್ರಮಗಳನ್ನು ಕೈಗೊಳ್ಳಲು ಸಿಪಿಐ(ಎಂ) ಒತ್ತಾಯಿಸುತ್ತದೆ.
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ