“ದೇಶದ, ಜನಗಳ ಹಿತದೃಷ್ಟಿಯಿಂದ ಈಗಲಾದರೂ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಿ”
ಕೋವಿಡ್ ಮಹಾಸೋಂಕನ್ನು ಎದುರಿಸಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಪಕ್ಷಗಳ ಮುಖಂಡರು ಮತ್ತೊಮ್ಮೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಈ ಮುಖಂಡರು ವೈಯಕ್ತಿಯವಾಗಿಯೂ, ಜಂಟಿಯಾಗಿಯೂ ಹಲವು ಬಾರಿ ವಿನಂತಿಸಿಕೊಂಡಿದ್ದರೂ ಏನೂ ಮಾಡಿರದಿದ್ದರೂ, ಈಗ ದೇಶದಲ್ಲಿ ಈ ಮಹಾಸೋಂಕು ಒಂದು ಮಾನವ ಅನಾಹುತದ ಅಭೂತಪೂರ್ವ ಆಯಾಮವನ್ನು ಪಡೆದುಕೊಂಡಿರುವ ಸನ್ನಿವೇಶದಲ್ಲಾದರೂ ದೇಶದ ಮತ್ತು ನಮ್ಮ ಜನತೆಯ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಕೈಗೊಳ್ಳಲೇಬೇಕಾದ, ಜಾರಿಗೊಳಿಸಲೇಬೇಕಾದ ಕ್ರಮಗಳತ್ತ ಗಮನ ಸೆಳೆಯಲು ಜಂಟಿಯಾಗಿ ಮತ್ತೊಂದು ಪತ್ರವನ್ನು ಬರೆದಿದ್ದಾರೆ.
ಈ ಜಂಟಿ ಪತ್ರಕ್ಕೆ ಸೋನಿಯಾ ಗಾಂಧಿ(ಕಾಂಗ್ರೆಸ್), ಹೆಚ್.ಡಿ.ದೇವೇಗೌಡ(ಜೆಡಿ-ಎಸ್), ಶರದ್ ಪವಾರ್(ಎನ್.ಸಿ.ಪಿ.), ಉದ್ಧವ್ ಠಾಕ್ರೆ(ಶಿವಸೇನಾ), ಮಮತಾ ಬ್ಯಾನರ್ಜಿ(ಟಿಎಂಸಿ), ಎಂ ಕೆ ಸ್ಟಾಲಿನ್(ಡಿಎಂಕೆ). ಹೇಮಂತ್ ಸೋರೆನ್(ಜೆಎಂಎಂ), ಫಾರುಕ್ ಅಬ್ದುಲ್ಲ(ಜಮ್ಮು-ಕಾಶ್ಮೀರ ಜನತಾ ಮೈತ್ರಿಕೂಟ), ಅಖಿಲೇಶ್ ಯಾದವ್(ಎಸ್.ಪಿ.), ತೇಜಸ್ವಿ ಯಾದವ್(ಆರ್.ಜೆ.ಡಿ.) ಹಾಗೂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಸಹಿ ಮಾಡಿದ್ದಾರೆ.
ಈ ಪತ್ರದ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:
ಪ್ರಿಯ ಪ್ರಧಾನ ಮಂತ್ರಿಗಳೇ,
ನಮ್ಮ ದೇಶದಲ್ಲಿ ಕೋವಿಡ್ ಮಹಾಸೋಂಕು ಒಂದು ಮಾನವ ಅನಾಹುತದ ಅಭೂತಪೂರ್ವ ಆಯಾಮವನ್ನು ಪಡೆದುಕೊಂಡಿದೆ.
ನಾವು, ಈ ಹಿಂದೆ, ಮತ್ತೆ-ಮತ್ತೆ, ಸ್ವತಂತ್ರವಾಗಿಯೂ, ಜಂಟಿಯಾಗಿಯೂ, ಕೇಂದ್ರ ಸರಕಾರ ಅತ್ಯಗತ್ಯವಾಗಿ ಕೈಗೊಳ್ಳಲೇಬೇಕಾಗಿರುವ ಮತ್ತು ಜಾರಿಗೊಳಿಸಲೇಬೇಕಾಗಿರುವ ವಿವಿಧ ಕ್ರಮಗಳತ್ತ ನಿಮ್ಮ ಗಮನವನ್ನು ಸೆಳೆದಿದ್ದೇವೆ. ದುರದೃಷ್ಟವಶಾತ್, ನಿಮ್ಮ ಸರಕಾರ ಈ ಎಲ್ಲ ಸಲಹೆ-ಸೂಚನೆಗಳನ್ನು ಒಂದೋ ಉಪೇಕ್ಷಿಸಿದೆ ಅಥವ ನಿರಾಕರಿಸಿದೆ. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿ ಇಂತಹ ಒಂದು ಪ್ರಳಯಾಂತಕಾರಿ ಮಾನವ ದುರಂತದ ಸನ್ನಿವೇಶವನ್ನು ತಲುಪುವಂತೆ ಮಾಡಿದೆ.
ದೇಶವನ್ನು ಇಂತಹ ದುರಂತಮಯ ಸ್ಥಿತಿಗೆ ತಂದ ಕೇಂದ್ರ ಸರಕಾರ ಮಾಡಿದ ಮತ್ತು ಮಾಡದ ಎಲ್ಲ ಕೃತ್ಯಗಳ ವಿವರಕ್ಕೆ ಹೋಗದೆ, ನಾವು ಈ ಕೆಳಗಿನ ಕ್ರಮಗಳನ್ನು ನಿಮ್ಮ ಸರಕಾರ ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ ಎಂಬ ದೃಢ ಅಭಿಪ್ರಾಯವನ್ನು ಹೊಂದಿದ್ದೇವೆ:
- ಲಸಿಕೆಗಳನ್ನು, ಜಗತ್ತಿನಲ್ಲಿ ಮತ್ತು ದೇಶದೊಳಗೂ ಎಲ್ಲೆಲ್ಲಿ ಲಭ್ಯ ಇವೆಯೋ ಅವೆಲ್ಲಾ ಮೂಲಗಳಿಂದ ಕೇಂದ್ರೀಯವಾಗಿ ಪಡೆಯಬೇಕು.
- ತಕ್ಷಣವೇ ಒಂದು ಉಚಿತ, ಸಾಮೂಹಿಕ, ಸಾರ್ವತ್ರಿಕ ಲಸಿಕೆ ಅಭಿಯಾನವನ್ನು ದೇಶಾದ್ಯಂತ ಆರಂಭಿಸಬೇಕು.
- ದೇಶದೊಳಗೆ ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಕಡ್ಡಾಯ ಲೈಸೆನ್ಸಿಂಗ್ ಅಧಿಕಾರವನ್ನು ಪ್ರಯೋಗಿಸಬೇಕು.
- ಬಜೆಟಿನಲ್ಲಿ ಲಸಿಕೆಗೆಂದು ಎತ್ತಿಟ್ಟಿರುವ ರೂ.35,000ಕೋಟಿಯನ್ನು ಖರ್ಚು ಮಾಡಬೇಕು.
- ಸೆಂಟ್ರಲ್ ವಿಸ್ತಾ ನಿರ್ಮಾಣವನ್ನು ನಿಲ್ಲಿಸಬೇಕು. ಅದಕ್ಕೆ ಇಟ್ಟಿರುವ ಹಣವನ್ನು ಆಕ್ಸಿಜನ್ ಮತ್ತು ಲಸಿಕೆಗಳನ್ನು ಪಡೆಯಲು ಬಳಸಬೇಕು.
- ಲೆಕ್ಕ ಪರೀಕ್ಷಣೆಗಳಿಗೆ ಒಳಗಾಗದ ಖಾಸಗಿ ಟ್ರಸ್ಟ್ ನಿಧಿ ಪಿಎಂಕೇರ್ಸ್ ನಲ್ಲಿರುವ ಎಲ್ಲ ಹಣವನ್ನು ಹೆಚ್ಚು ಲಸಿಕೆಗಳನ್ನು, ಆಕ್ಸಿಜನನ್ನು ಮತ್ತು ಅಗತ್ಯ ವೈದ್ಯಕೀಯ ಸಾಧನಗಳನ್ನು ಖರೀದಿಸಲು ಬಳಸಬೇಕು.
- ಎಲ್ಲ ಉದ್ಯೋಗಹೀನರಿಗೆ ಕನಿಷ್ಟ ತಿಂಗಳಿಗೆ ರೂ.6,000 ಕೊಡಬೇಕು.
- ಅಗತ್ಯವಿರುವ ಎಲ್ಲರಿಗೂ ಆಹಾರಧಾನ್ಯಗಳ ಉಚಿತ ವಿತರಣೆ(ಕೇಂದ್ರೀಯ ಗೋದಾಮುಗಳಲ್ಲಿ ಒಂದು ಕೋಟಿ ಟನ್ ಗಳಿಗಿಂತಲೂ ಹೆಚ್ಚು ಆಹಾರಧಾನ್ಯಗಳು ಕೊಳೆಯುತ್ತಿವೆ)
- ಕೃಷಿ ಕಾಯ್ದೆಗಳನ್ನು ರದ್ದುಮಾಡಬೆಕು, ಈ ಮೂಲಕ ನಮ್ಮ ಅನ್ನದಾತರು ಮಹಾಸೋಂಕಿಗೆ ಬಲಿಯಾಗದಂತೆ ರಕ್ಷಿಸಿ ಅವರು ಭಾರತೀಯ ಜನತೆಗೆ ಉಣಬಡಿಸಲು ಆಹಾರ ಉತ್ಪಾದಿಸುವುದನ್ನು ಮುಂದುವರೆಸಲು ಸಾಧ್ಯವಾಗುವಂತೆ ಮಾಡಬೇಕು.