“ಕೇಂದ್ರ ಸರಕಾರ ಹಟಮಾರಿತನವನ್ನು ನಿಲ್ಲಿಸಿ ತಕ್ಷಣವೇ ಮಾತುಕತೆಗಳನ್ನು ಪುನರಾರಂಭಿಸಬೇಕು”
ರೈತರ ವೀರೋಚಿತ ಶಾಂತಿಯುತ ಹೋರಾಟ ಆರು ತಿಂಗಳುಗಳನ್ನು ಪೂರ್ಣಗೊಳಿಸಲಿರುವ ಮೇ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಕರೆಗೆ ದೇಶದ ಹನ್ನೆರಡು ಪ್ರಮುಖ ಪ್ರತಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಮೇ 12ರಂದು ಪ್ರಧಾನ ಮಂತ್ರಿಗಳಿಗೆ ಬರೆದ ತಮ್ಮ ಜಂಟಿ ಪತ್ರದಲ್ಲಿ “ಕೃಷಿ ಕಾಯ್ದೆಗಳನ್ನು ರದ್ದುಮಾಡಬೇಕು, ಈ ಮೂಲಕ ನಮ್ಮ ಲಕ್ಷಾಂತರ ಅನ್ನದಾತರು ಮಹಾಸೋಂಕಿಗೆ ಬಲಿಯಾಗದಂತೆ ರಕ್ಷಿಸಿ ಅವರು ಭಾರತೀಯ ಜನತೆಗೆ ಉಣಬಡಿಸಲು ಆಹಾರ ಉತ್ಪಾದಿಸುವುದನ್ನು ಮುಂದುವರೆಸಲು ಸಾಧ್ಯವಾಗುವಂತೆ ಮಾಡಬೇಕು” ಎಂದು ಹೇಳಿದ್ದನ್ನು ನೆನಪಿಸುತ್ತ ಮೇ 23ರ ಈ ಜಂಟಿ ಹೇಳಿಕೆಯಲ್ಲಿ ಪ್ರತಿಪಕ್ಷಗಳು, ತಕ್ಷಣವೇ ಕೃಷಿ ಕಾಯ್ದೆಗಳನ್ನು ರದ್ದುಮಾಡಬೇಕು ಮತ್ತು ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವ ಸಿ2+50% ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಯ ಕಾನೂನಾತ್ಮಕ ಹಕ್ಕು ಸಿಗುವಂತಾಗಬೇಕು ಎಂದು ಪುನರುಚ್ಛರಿಸಿವೆ.
ಕೇಂದ್ರ ಸರಕಾರ ಹಟಮಾರಿಯಾಗಿರುವುದನ್ನು ನಿಲ್ಲಿಸಿ ತಕ್ಷಣವೇ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಈ ನಿಟ್ಟಿನಲ್ಲಿ ಮಾತುಕತೆಗಳನ್ನು ಪುನರಾರಂಭಿಸಬೇಕು ಎಂದು ಈ ಪ್ರತಿಪಕ್ಷಗಳ ಹೇಳಿಕೆ ಆಗ್ರಹಿಸಿದೆ.
ಈ ಜಂಟಿ ಹೇಳಿಕೆಗೆ ಸೋನಿಯಾ ಗಾಂಧಿ(ಕಾಂಗ್ರೆಸ್), ಹೆಚ್.ಡಿ.ದೇವೇಗೌಡ(ಜೆಡಿ-ಎಸ್), ಶರದ್ ಪವಾರ್(ಎನ್.ಸಿ.ಪಿ.), ಮಮತಾ ಬ್ಯಾನರ್ಜಿ(ಟಿಎಂಸಿ), ಉದ್ಧವ್ ಠಕ್ರೆ(ಶಿವಸೇನಾ), ಎಂ ಕೆ ಸ್ಟಾಲಿನ್(ಡಿಎಂಕೆ). ಹೇಮಂತ್ ಸೋರೆನ್(ಜೆಎಂಎಂ), ಫಾರುಕ್ ಅಬ್ದುಲ್ಲ(ಜಮ್ಮು-ಕಾಶ್ಮೀರ ಜನತಾ ಮೈತ್ರಿಕೂಟ), ಅಖಿಲೇಶ್ ಯಾದವ್(ಎಸ್.ಪಿ.), ತೇಜಸ್ವಿ ಯಾದವ್(ಆರ್.ಜೆ.ಡಿ.) ಹಾಗೂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಸಹಿ ಮಾಡಿದ್ದಾರೆ.