ಕೊನೆಗೂ ರಾಜ್ಯದಲ್ಲಿ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಸಂಕಷ್ಟಕ್ಕೀಡಾದ ಕಾಯಕ ಸಮುದಾಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರದ ಪ್ಯಾಕೇಜ್ ಒಂದನ್ನು ಘೋಷಿಸಿದ್ದಾರೆ. ಇದೊಂದು ಕಾಟಾಚಾರದ ಪರಿಹಾರ ಪ್ಯಾಕೇಜ್ ಎಂಬುದಾಗಿ ವ್ಯಾಪಕ ಠೀಕೆಗೆ ಒಳಗಾಗಿದೆ.
ಸರ್ಕಾರವೇ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ 1,250 ಕೋಟಿ ರೂ.ಗಳನ್ನು ನೀಡಿದ್ದು ಈ ಮೊತ್ತವು ಒಟ್ಟು 4.34 ಕೋಟಿ ಫಲಾನುಭವಿಗಳ ನಡುವೆ ಹರಿದು ಹಂಚಿ ಹೋಗಲಿದೆ. ಅಂದರೆ ಕೇವಲ ತಲಾ ರೂ. 290 ರಷ್ಟು ಪರಿಹಾರ ದೊರೆಯಲಿದೆ. ಇದು ಕಾಟಾಚಾರದ ಪರಿಹಾರವಲ್ಲದೆ ಮತ್ತೇನು? ಇಷ್ಟು ಅತ್ಯಲ್ಪ ನೆರವಿನಿಂದ ಬಡ ದುಡಿಮೆಗಾರರ ಸಂಕಷ್ಟವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಯಾವುದೇ ಬಡ ಕುಟುಂಬ ಕೇವಲ ರೂ. 3000 ಪರಿಹಾರದಿಂದ ಕೋವಿಡ್ ನಿರ್ವಹಣೆ ಹೇಗೆ ಸಾಧ್ಯ?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೂ. 1,250 ಕೋಟಿ ರೂ. ಪ್ಯಾಕೇಜ್ ಎಂದಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ ಘೋಷಿತ ಒಟ್ಟು ಮೊತ್ತ ಕೇವಲ 1,111.82 ಕೋಟಿ ರೂ. ಮಾತ್ರ ಇದರಲ್ಲಿ ಕಟ್ಟಡ ಕಾರ್ಮಿಕರಿಗೆ, ಕಾರ್ಮಿಕರ ಕಲ್ಯಾಣ ನಿಧಿಯಿಂದ ರೂ. 494 ಕೋಟಿ ಸಿಗಲಿದೆ. ಇದು ಸರ್ಕಾರ ತನ್ನ ಕೈಯಿಂದ ನೀಡುವುದಿಲ್ಲ. ಸಹಕಾರ ಬ್ಯಾಂಕುಗಳು ನೀಡಿರುವ 134.38 ಕೋಟಿ ರೂ. ಸಾಲ ವಸೂಲಾತಿ ಗಡುವು ಮೂರು ತಿಂಗಳು ಮುಂದೂಡಲಾಗಿದೆ. ಇದು ಸರ್ಕಾರ ನೀಡುವ ಪರಿಹಾರ ಆಗುವುದಿಲ್ಲ. ಅವುಗಳನ್ನು ಕೈಬಿಟ್ಟರೆ ಉಳಿಯುವುದು ರೂ. 483.44 ಮಾತ್ರ. ಅಂದರೆ ಸರ್ಕಾರ ಘೋಷಿಸಿದ ರೂ. 1,250 ಕೋಟಿ ರೂ. ಪರಿಹಾರದಲ್ಲಿ ಬಡವರಿಗೆ ತಲುಪುವುದು ಕೇವಲ ರೂ. 483.44 ಮಾತ್ರ. ಈ ಕನಿಷ್ಠ ಪರಿಹಾರವಾದರೂ ಬಡ ಕುಟುಂಬಗಳಿಗೆ ಯಾವಾಗ ದೊರೆಯಬಹುದು? ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಸರ್ಕಾರಕ್ಕೆ ಎಷ್ಟು ದಿನ ಬೇಕು? ಈ ಷರತ್ತು ಬದ್ಧ ಪರಿಹಾರ ಪಡೆಯಲು ಬಡವರು ಎಷ್ಟು ದಿನ ಕಂಬದಿಂದ ಕಂಬಕ್ಕೆ ಒಡಾಡಬೇಕು? ಅಲ್ಪ ಮೊತ್ತದ ಈ ಪರಿಹಾರ ಕೂಡಲೇ ಎಲ್ಲ ಫಲಾನುಭವಿಗಳಿಗೆ ಯಾವುದೇ ಪಕ್ಷಪಾತ, ತಾರತಮ್ಯವಿಲ್ಲದೆ ದೊರೆಯುವಂತೆ, ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡುವರೆ?
ಸರ್ಕಾರ ಘೋಷಣೆ ಮಾಡಿದ್ದು ಯಾವ ಬಡ ಕುಟುಂಬಕ್ಕೂ ಸಾಲದು. ಬಡಜನರ ಮೇಲೆ ಕೋವಿಡ್ ದಾಳಿ ಮುಂದುವರೆಯಲಿದೆ. ಆದ್ದರಿಂದ ಪರಿಹಾರ ವಿತರಣೆ ನಿರಂತರ ಪ್ರಕ್ರಿಯೆಯಾಗಬೇಕು. ಪ್ರತಿಯೊಂದು ಕುಟುಂಬಕ್ಕೆ ಮುಂದಿನ 6 ತಿಂಗಳು ಯಾವುದೇ ಷರತ್ತು ವಿಧಿಸದೆ ಮಾಸಿಕವಾಗಿ ರೂ. 10,000 ಪರಿಹಾರ ವಿತರಣೆಯಾಗಬೇಕು. ಕೊರೊನಾಕ್ಕೆ ಬಲಿಯಾಗುತ್ತಿರುವ ಬಡಕುಟುಂಬಗಳ ಸದಸ್ಯರ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಾಧ್ಯವಾಗುವಂತೆ ಪ್ರತಿಯೊಂದು ಕುಟುಂಬದ ಸದಸ್ಯರಿಗೆ ಮಾಸಿಕವಾಗಿ ತಲಾ 10 ಕೆ.ಜಿ. ಅಕ್ಕಿಯನ್ನು ಮತ್ತು ಇತರ ದಿನಸಿ ಪದಾರ್ಥಗಳನ್ನು ಕಡ್ಡಾಯವಾಗಿ ವಿತರಿಸಬೇಕು. ಪಡಿತರ ಎಪಿಎಲ್, ಬಿಪಿಎಲ್ ಕಾರ್ಡುಗಳ ಅಗತ್ಯವನ್ನು ಒತ್ತಾಯಿಸಬಾರದು.
ಅಸಂಘಟಿತ ಕಾರ್ಮಿಕರ ಮಾದರಿಯಲ್ಲಿ ಕೃಷಿ ಕೂಲಿಕಾರರಿಗೆ ಪರಿಹಾರದ ಪ್ಯಾಕೇಜ್ ದೊರೆಯಬೇಕು. ಅವರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟವರಾಗಿರಬಹುದು ಅಥವ ಇಲ್ಲದಿರಬಹುದು. ಪರಿಹಾರ ಪ್ಯಾಕೇಜ್ ಎಲ್ಲರಿಗೂ ತಲ್ಲಪುವುದನ್ನು ಖಚಿತ ಪಡಿಸಿಕೊಳ್ಳಬೇಕು. ಆರ್ಥಿಕ ನೆರವು, ಆಹಾರ ಕಿಟ್ ಹಾಗೂ ವೈಧ್ಯಕೀಯ ಕಿಟ್ ಎಲ್ಲಾ ಬಡವರಿಗೆ, ಅವರ ಕುಟುಂಬಗಳಿಗೆ ಆದಷ್ಟು ಬೇಗ ತಲುಪುವಂತಾಗಬೇಕು.