ಅವಿಶ್ರಾಂತ ಹೋರಾಟಗಾರ ಹೆಚ್.ಎಸ್. ದೊರೈಸ್ವಾಮಿಯವರಿಗೆ ಎಡ-ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳ ನಮನ

ಸ್ವಾತಂತ್ರ್ಯ ಸೇನಾನಿ, ಪ್ರಜಾಪ್ರಭುತ್ವ ಪ್ರೇಮಿ, ದುಡಿಯುವ ಜನರ ಅಭ್ಯುದಯಕ್ಕಾಗಿ ದುಡಿದ ಅವಿಶ್ರಾಂತ ದುಡಿಮೆಗಾರ ಶ್ರೀ ಹಾರನಹಳ್ಳಿ ಶ್ರೀನಿವಾಸಯ್ಯ ದೊರೈಸ್ವಾಮಿಯವರು ತಮ್ಮ 104ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಗಲಿದ ಹಿರಿಯ ಸೇನಾನಿಗೆ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳ ಜಂಟಿ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.

ದೇಶ ಮತ್ತು ರಾಜ್ಯವು ಅತ್ಯಂತ ತೀವ್ರ ಸಂಕಷ್ಟದಲ್ಲಿರುವಾಗ ಹಿರಿಯ ಅನುಭವಿ ಹೋರಾಟಗಾರನ ಅಗಲಿಕೆ ಜನ ಚಳುವಳಿಗೆ ಸಂಕಟ ಉಂಟು ಮಾಡಿದೆ.

ಬ್ರಿಟಿಷರ ವಿರುದ್ಧ ಸಮರಶೀಲ ಹೋರಾಟದಲ್ಲಿ ತೊಡಗಿದ್ದ ಹೆಚ್‌ ಎಸ್‌ ದೊರೆಸ್ವಾಮಿಯವರು ಜೈಲುವಾಸವನ್ನು ಅನುಭವಿಸಿದ್ದರು, ಸ್ವಾತಂತ್ರ್ಯ ನಂತರ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ ಮತ್ತು ಸ್ವಾತಂತ್ರ್ಯ ನಂತರ ಜನರ ಪರಿಸ್ಥಿತಿ ಸುಧಾರಣೆಗಾಗಿ ತಮ್ಮನ್ನು ತಮ್ಮ ಕೊನೆಯ ದಿನಗಳವರೆಗೆ ತೊಡಗಿಸಿಕೊಂಡಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಿಂದ ಮತ್ತೊಮ್ಮೆ ಜೈಲುವಾಸ ಅನುಭವಿಸಿದ್ದರು.

ಶ್ರೀ ಎಚ್ ಎಸ್ ದೊರೆಸ್ವಾಮಿಯವರ ಅಗಲಿಕೆಯೊಂದಿಗೆ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ  ಕೊನೆಯ ಜೀವಂತ ಕೊಂಡಿ ಕಳಚಿದಂತಾಗಿದೆ. ಅವರ ಸರಳತೆ, ನೊಂದವರ ಕುರಿತ ಪ್ರೀತಿ, ನಿಸ್ವಾರ್ಥತೆ ಮತ್ತು ಹೋರಾಟದ ಕೆಚ್ಚು ಯುವಪೀಳಿಗೆಗೆ ಸ್ಫೂರ್ತಿಯಾಗಿತ್ತು. ಅವರ ಸಾವು ನಮ್ಮ ರಾಜ್ಯದ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ನಷ್ಟವಾಗಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅವರು ಸದಾ ಕಾಲ ಕೋಮುವಾದಿ ಚಿಂತನೆ ಹಾಗೂ ರಾಜಕೀಯಗಳ ವಿರುದ್ಧ ಗಟ್ಟಿ ದನಿಯಾಗಿದ್ದರು.

ಶಿಕ್ಷಣದ ವ್ಯಾಪಾರೀಕರಣ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗೀಕರಣ ವಿರುದ್ಧವೂ ಧ್ವನಿ ಎತ್ತಿದ್ದರು.

ಕೊಳಗೇರಿಗಳ ನಾಗರೀಕರ ನಾಗರೀಕ ಸೌಲಭ್ಯಗಳಿಗಾಗಿ ದುಡಿದು ಯಶ ಕಂಡವರು, ವಸತಿ ಹಾಗೂ ಭೂಹೀನರ ಭೂಮಿ ಹಕ್ಕಿಗಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು.

ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯುನಿಸ್ಟ್‌)-ಎಸ್‌ಯುಸಿಐ(ಸಿ), ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ, ಲೆನಿನ್ ವಾದಿ -ಲಿಬರೇಷನ್)-ಸಿಪಿಐ(ಎಂಎಲ್‌) ಲಿಬರೇಷನ್‌, ಫಾರ್ವರ್ಡ್ ಬ್ಲಾಕ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ-ಆರ್‌ಪಿಐ, ಸ್ವರಾಜ್ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಹೆಚ್‌ ಎಸ್‌ ದೊರೆಸ್ವಾಮಿ ಅವರಿಗೆ ಭಾವಪೂರ್ಣ ನಮನಗಳು.

Leave a Reply

Your email address will not be published. Required fields are marked *