ಲಕ್ಷದ್ವೀಪದಲ್ಲಿ ಗುಜರಾತ ಮಾದರಿ

KaratA copyಒಂದು ಶಾಂತಿಪೂರ್ಣ ತಾಣವಾಗಿದ್ದ ಲಕ್ಷದ್ವೀಪವನ್ನು ಆಡಳಿತಗಾರನ ಹಿಂದುತ್ವ ಪ್ರಯೋಗಕ್ಕಾಗಿ ಅಸಮಾಧಾನದ ಒಂದು ಕುದಿಯುವ ಹಂಡೆಯಾಗಿ ಪರಿವರ್ತಿಸಲಾಗಿದೆ. ಈತ ಮೋದಿಷಾ ಜೋಡಿಯ ಒಬ್ಬ ಏಜೆಂಟನಾಗಿ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಪ್ರದೇಶವೊಂದರಲ್ಲಿ  ಪ್ರಫುಲ್ ಪಟೇಲ್ ಧೋರಣೆಗಳಲ್ಲಿ ಕಾಶ್ಮೀರದ ಅನುಭವದ ಛಾಯೆ ಕಾಣುತ್ತದೆ. ಆದರೆ ಇಲ್ಲಿ ಅನುಸರಿಸುತ್ತಿರುವ ನಿಜವಾದ ಮಾದರಿಯೆಂದರೆ ಗುಜರಾತಿನದ್ದೇಅಂದರೆ ಹಿಂದುತ್ವ ಮತ್ತು ನವಉದಾರವಾದದ ಒಂದು ಕಲಬೆರಕೆಯನ್ನು ಹೇರಲಾಗುತ್ತಿದೆ. ಹೊರೆಯನ್ನು ಹೊರಬೇಕಾಗಿ ಬಂದಿರುವುದು 99ಶೇ. ಮುಸ್ಲಿಮರಿರುವ ಲಕ್ಷದ್ವೀಪದ ಜನಗಳದ್ದಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯರಾದ ಪ್ರಕಾಶ್‌ ಕಾರಟ್‌ ಅವರು ಬರೆದಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪ ಒಂದು ದ್ವೀಪಸಮೂಹ, ಸುಮಾರು 65,000 ಜನರ ನೆಲೆಬೀಡು. ಈ ನೀರವ, ಶಾಂತಿಪ್ರಿಯ ಜನಗಳನ್ನು ಒಂದು ನಿರ್ದಯ ಆಳ್ವಿಕೆಗೆ ಒಳಪಡಿಸಲಾಗಿದೆ, ಅದು ಅವರ ಜೀವನಶೈಲಿ, ಜೀವನೋಪಾಯಗಳು, ಆಹಾರ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ವಂಚಿಸ ಹೊರಟಿದೆ.

ಈ ದ್ವೀಪಕ್ಕೆ ಈ ಮಾರಕ ರೋಗ ಮೊದಲಿಗೆ ತಗಲಿದ್ದು ಕೊವಿಡ್-19 ವೈರಾಣುವಿನ ಸ್ವರೂಪದಲ್ಲಿ ಅಲ್ಲ, ಬದಲಾಗಿ ಡಿಸೆಂಬರ್ 2020ರಲ್ಲಿ ಒಬ್ಬ ಹೊಸ ಆಡಳಿತಗಾರ ಅಧಿಕಾರವಹಿಸಿಕೊಂಡಾಗ. ಅದುವರೆಗೆ, ಈ ಕೇಂದ್ರಾಡಳಿತ ಪ್ರದೇಶದ ಎಲ್ಲ ಆಡಳಿತಗಾರರು ಐಎಎಸ್ ಅಧಿಕಾರಿಗಳಾಗಿರುತ್ತಿದ್ದರು. ಮೊತ್ತ ಮೊದಲ ಬಾರಿಗೆ, ಗುಜರಾತಿನ ಒಬ್ಬ ರಾಜಕಾರಣಿಯನ್ನು ಈ ಹುದ್ದೆಗೆ ನೇಮಿಸಲಾಗಿದೆ. ಪ್ರಫುಲ್ ಖೋಡ ಪಟೇಲ್ ಈ ಹಿಂದೆ ಗುಜರಾತಿನ ಒಬ್ಬ ಎಂ.ಎಲ್.ಎ. ಆಗಿದ್ದರು, 2011ರಲ್ಲಿ ನರೇಂದ್ರ ಮೋದಿ ಸರಕಾರದಲ್ಲಿ ಗೃಹ ಇಲಾಖೆಯಲ್ಲಿ ರಾಜ್ಯ ದರ್ಜೆಯ ಮಂತ್ರಿಯೂ ಆಗಿದ್ದರು.

Lakshadweep
ವ್ಯಂಗ್ಯ ಚಿತ್ರ ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಈ ಮೊದಲು, ಆತ ವಿಲೀನಗೊಂಡ ದಾದ್ರ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದೀವ್‌ನ ಉದ್ಘಾಟನಾ ಆಡಳಿತಗಾರರು. ಅಲ್ಲಿ ಹಲವು ವಿಷಯಗಳಲ್ಲಿ, ಮುಖ್ಯವಾಗಿ ದಮನ್ ಕಡಲತೀರದಲ್ಲಿನ ಆದಿವಾಸಿಗಳ ವಾಸಸ್ಥಳಗಳನ್ನು ಧ್ವಂಸ ಮಾಡಿ ಅವರನ್ನು ನಿರ್ವಸಿತರನ್ನಾಗಿ ಮಾಡಿ, ಅದನ್ನು ಅವರು ಪ್ರತಿಭಟಿಸಿದಾಗ ಹಲವರನ್ನು ಜೈಲಿಗೆ ತಳ್ಳಿದ ವಿವಾದಾಸ್ಪದ ವ್ಯಕ್ತಿಯಾದರು.

ಇಲ್ಲೀಗ ಆತ ಲಕ್ಷದ್ವೀಪದ ಮೇಲೆ ಗುಜರಾತ್ ಮಾದರಿಯನ್ನು, ಅಂದರೆ ಹಿಂದುತ್ವ ಮತ್ತು ನವ-ಉದಾರವಾದದ ಒಂದು ಕಲಬೆರಕೆಯನ್ನು ಹೇರುತ್ತಿದ್ದಾರೆ. ಈ ಹೊರೆಯನ್ನು ಹೊರಬೇಕಾಗಿ ಬಂದಿರುವುದು 99ಶೇ. ಮುಸ್ಲಿಮರಿರುವ ಲಕ್ಷದ್ವೀಪದ ಜನಗಳು.

ಪಟೇಲ್ ಜನಗಳ ಭೂಮಿ ಹಕ್ಕುಗಳ ಮೇಲೆ ನೇರ ದಾಳಿಯನ್ನು ಮಾಡಿದ್ದಾರೆ. ಕರಡು ‘ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಬಂಧನೆ’ ಪಟ್ಟಣ ಯೋಜನೆಗೆ ಅಥವ ಇತರ ಅಭಿವೃದ್ಧಿ ಕಾರ್ಯಗಳಿಗೆ ಜನಗಳನ್ನು ಅವರ ಆಸ್ತಿಗಳಿಂದ ಎಬ್ಬಿಸಲು ಮತ್ತು ಬೇರಡೆಗಳಿಗೆ ಕಳಿಸಲು ಅವಕಾಶ ಕಲ್ಪಿಸುತ್ತದೆ. ಈ ಕರಾಳ ಭೂಮಿ ನೀತಿ ಅಭಿವೃದ್ಧಿ ಉದ್ದೇಶಗಳಿಗೆ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ಕೊಡುತ್ತದೆ- ಇದರಲ್ಲಿ ಕಟ್ಟಡಗಳು, ಇಂಜಿನಿಯರಿಂಗ್, ಕಲ್ಲು ಮತ್ತು ಇತರ ಗಣಿಗಾರಿಕೆಗಳೂ ಸೇರಿವೆ. ಇದು ಈ ದ್ವೀಪದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಧ್ವಂಸ ಮಾಡಲಿದೆ. ಈ ಆಡಳಿತಗಾರ ಡೈರಿ ಫಾರ್ಮ್‌ಗಳನ್ನು ಮುಚ್ಚಿಸಿದ್ದಾರೆ ಮತ್ತು (ಗುಜರಾತಿನ) ‘ಅಮುಲ್’ಗೆ ಇಲ್ಲಿಗೆ ಡೈರಿ ಉತ್ಪನ್ನಗಳನ್ನು ಪೂರೈಸಬೇಕೆಂದು ಹೇಳಿರುವುದಾಗಿ ವರದಿಯಾಗಿದೆ. ವಿವಿಧ ಇಲಾಖೆಗಳಲ್ಲಿ ನೂರಾರು ತಾತ್ಕಾಲಿಕ ಮತ್ತು ಗುತ್ತಿಗೆ ಕಾರ್ಮಿಕರನ್ನು ತೆಗೆದು ಹಾಕಲಾಗಿದೆ.

ಇವುಗಳಲ್ಲಿ ಅತಿ ಕೆಟ್ಟ ಹಲ್ಲೆ ಎಂದರೆ ಮೀನುಗಾರರ ಮೇಲೆ ನಡೆಸಿರುವಂತದ್ದು. ಇಲ್ಲಿ ಬಹುಪಾಲು ಜನರಿಗೆ ಮೀನುಗಾರಿಕೆ ಜೀವನಾಧಾರವಾಗಿದೆ. ಅವರು ತಮ್ಮ ಬಲೆಗಳು ಮತ್ತಿತರ ಸಾಧನಗಳನ್ನು ಇಡಲು ಕಡಲತಡಿಯಲ್ಲಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಷೆಡ್‌ಗಳನ್ನು ಪಟೇಲ್ ಆಡಳಿತ ಧ್ವಂಸ ಮಾಡಿದೆ, ಅದಕ್ಕೆ ಕೊಟ್ಟಿರುವ ಕಾರಣ ಅವು ಕರಾವಳಿ ಕಾವಲು ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು.

Lakshadweep-bigotry in island
ಮತಾಂಧತೆಯ ವೈರಸ್ ಈಗ ಈ ದ್ವೀಪವನ್ನೂ ತಟ್ಟಿದೆ. ವ್ಯಂಗ್ಯಚಿತ್ರ: ಸಂದೀಪ್ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ

ಇಲ್ಲಿನ ಜನಗಳ ಆಹಾರಾಭ್ಯಾಸಗಳ ಮೇಲೆ ಹಲ್ಲೆ ನಡೆಸುವ ಯೋಜಿತ ಪ್ರಯತ್ನ ನಡೆದಿದೆ.

ಶಾಲಾ ಮಕ್ಕಳಿಗೆ ಮತ್ತು ಹಾಸ್ಟೆಲುಗಳಲ್ಲಿ ಮಾಂಸಾಹಾರಿ ಆಹಾರ ವಸ್ತುಗಳನ್ನು ನಿಲ್ಲಿಸಲಾಗಿದೆ. ರಾಸುಗಳನ್ನು ಕಡಿಯುವುದು, ಸಾಗಿಸುವುದು, ಗೋಮಾಂಸದ ಮಾರಾಟ ಮತ್ತು ಖರೀದಿಯನ್ನು ಕಾನೂನುಬಾಹಿರಗೊಳಿಸಲಾಗಿದೆ. ಇಲ್ಲಿ ಮದ್ಯಪಾನವನ್ನು ಇಲ್ಲಿಯ ಜನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗಾಗಿ ನಿಷೇಧಿಸಲಾಗಿತ್ತು. ಈಗ ನಾಲ್ಕು ದ್ವೀಪಗಳಲ್ಲಿ ಪ್ರವಾಸೋದ್ಯಮದ ಹೆಸರಲ್ಲಿ ಮದ್ಯ ಮಾರಾಟಕ್ಕೆ  ಅನುಮತಿಯನ್ನು ಕೊಡಲಾಗುತ್ತದೆ.

ಪಂಚಾಯತು ಕಾಯ್ದೆಯನ್ನು ತಿದ್ದುಪಡಿ ಮಾಡಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರನ್ನು ಚುನಾವಣಾ ಸ್ಪರ್ಧೆಗೆ ಅನರ್ಹರನ್ನಾಗಿ ಮಾಡಲಾಗಿದೆ. ಮುಸ್ಲಿಮರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹಡೆಯುತ್ತಾರೆ ಎಂಬ ಗ್ರಹಿಕೆಯಿಂದ ಹೀಗೆ ಮಾಡಲಾಗಿದೆ.

ಕೇರಳದೊಂದಿಗೆ ಪಾರಂಪರಿಕ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿದು ಹಾಕುವ ಒಂದು ಪ್ರಯತ್ನ ನಡೆಸಲಾಗುತ್ತಿದೆ. ಈ ದ್ವೀಪಗಳಿಂದ ಹಡಗುಗಳು ಸಾಮಗ್ರಿಗಳನ್ನು ಕೊಹಿಕ್ಕೋಡ್ ಜಿಲ್ಲೆಯ ಬೇಪುರ್ ಬಂದರಿಗೆ ಒಯ್ಯುತ್ತಿದ್ದವು. ಈಗ ಇಂತಹ ಸಾಮಗ್ರಿ ಸಾಗಾಟವನ್ನು ಕರ್ನಾಟಕದ ಮಂಗಳೂರು ಬಂದರಿಗೆ ತಿರುಗಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.

2020ರ ವರ್ಷಾದ್ಯಂತ ಲಕ್ಷದ್ವೀಪ ಕೋವಿಡ್ ವೈರಾಣುವಿನಿಂದ ಮುಕ್ತವಾಗಿತ್ತು. ಏಕೆಂದರೆ ಇಲ್ಲಿಂದ ಮುಖ್ಯ ಭೂಭಾಗಕ್ಕೆ ಹೋಗುವವರು ಮತ್ತು ಅಲ್ಲಿಂದ ಈ ದ್ವೀಪಸಮೂಹಕ್ಕೆ ಬರುವವರು ಕಟ್ಟುನಿಟ್ಟಾದ ಕ್ವಾರಂಟೈನ್ ಕ್ರಮಗಳನ್ನು ಅನುಸರಿಸಬೇಕಾಗಿತ್ತು. ಉದಾಹರಣೆಗೆ, ಈ ಕೇಂದ್ರಾಡಳಿತ ಪ್ರದೇಶಕ್ಕೆ ಯಾರೇ ಬಂದರೂ ಅವರು ಹದಿನಾಲ್ಕು ದಿನಗಳ ಕ್ವಾರಂಟೈನ್ ನಲ್ಲಿ ಇರಬೇಕಾಗಿತ್ತು. ಆದರೆ, ಹೊಸ ಆಡಳಿತಗಾರ ಈ ಕ್ವಾರಂಟೈನ್ ನಿರ್ಬಂಧಗಳನ್ನು ತೆಗೆದು, ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಯಿದ್ದರೆ ಸಾಕು ಎಂದು ಮಾಡಿದರು. ಇಲ್ಲಿ ಕೋವಿಡ್‌ನ ಮೊದಲ ಪ್ರಕರಣ ಜನವರಿ ತಿಂಗಳಲ್ಲಿ ಕಾಣಿಸಿಕೊಂಡಿತು. ಇದುವರೆಗೆ 7000ಕ್ಕಿಂತ ಹೆಚ್ಚು ಕೇಸುಗಳು ದಾಖಲಾಗಿವೆ, ಇದು ಇಲ್ಲಿಯ ಜನಸಂಖ್ಯೆಯ 10ಶೇ.ಕ್ಕಿಂತಲೂ ಹೆಚ್ಚು.

Lakshadweep-modistyle beutifying
ವ್ಯಂಗ್ಯ ಚಿತ್ರ ಕೃಪೆ: ಸತೀಶ್‌ ಆಚಾರ್ಯ

ಗುಜರಾತ್ ಮಾದರಿಯೊಂದಿಗಿನ ಇನ್ನೊಂದು ಸಾಮ್ಯತೆ ಎಂದರೆ ಭಿನ್ನಮತದ ಸರ್ವಾಧಿಕಾರಶಾಹಿ ದಮನ, ಮತ್ತು ಇದಕ್ಕಾಗಿ ಕರಾಳ ಕಾನೂನುಗಳ ಬಳಕೆ. ಗೂಂಡಾ ನಿಯಂತ್ರಣ ಕಾಯ್ದೆ ಸಮಾಜ-ವಿರೋಧಿಗಳನ್ನು ದಮನ ಮಾಡಲು ಒಂದು ವರ್ಷದವರೆಗೆ ನಿರೋಧಕ ಬಂಧನದ ಪ್ರಸ್ತಾವನೆಯನ್ನು ಇಟ್ಟಿದೆ.

ಅಪರಾಧ ದರ ಅತ್ಯಂತ ಕಡಿಮೆ ಮಟ್ಟದಲ್ಲಿರುವ ಒಂದು ಪ್ರದೇಶದಲ್ಲಿ ಇಂತಹ ಪ್ರಸ್ತಾವನೆಯನ್ನು ಇಡಲಾಗಿದೆ. ಈಗಾಗಲೇ ಈ ಎಲ್ಲ ಜನ-ವಿರೋಧಿ ಕ್ರಮಗಳನ್ನು ಪ್ರತಿಭಟಿಸುವವವರನ್ನು ಬಂಧಿಸಲಾಗುತ್ತಿದೆ ಮತ್ತು ಮಾಧ್ಯಮಗಳನ್ನು ದಮನ ಮಾಡಲಾಗುತ್ತಿದೆ. ಆನ್‌ಲೈನ್ ಸುದ್ದಿ ತಾಣಗಳನ್ನು ಮುಚ್ಚಲಾಗುತ್ತಿದೆ; ಆಡಳಿತಗಾರರಿಗೆ ಸಂದೇಶಗಳನ್ನು ಕಳಿಸಿದರೆಂದು ಮೂವರು ಶಾಲಾ ವಿದ್ಯಾರ್ಥಿಗಳನ್ನೂ ಇತ್ತೀಚೆಗೆ ಬಂಧಿಸಲಾಗಿದೆ.

ಒಂದು ಶಾಂತಿಪೂರ್ಣ ತಾಣವಾಗಿದ್ದ ಲಕ್ಷದ್ವೀಪವನ್ನು ಆಡಳಿತಗಾರನ ಹಿಂದುತ್ವ ಪ್ರಯೋಗಕ್ಕಾಗಿ ಅಸಮಾಧಾನದ ಒಂದು ಕುದಿಯುವ ಹಂಡೆಯಾಗಿ ಪರಿವರ್ತಿಸಲಾಗಿದೆ. ಈತ ಮೋದಿ-ಷಾ ಜೋಡಿಯ ಒಬ್ಬ ಏಜೆಂಟನಾಗಿ ಕೆಲಸ ಮಾಡುತ್ತಿದ್ದಾರೆ, ಏಕೆಂದರೆ ಪಟೇಲ್ ಒಂದು ಕೇಂದ್ರಾಡಳಿತ ಪ್ರದೇಶದ ಆಡಳಿತಗಾರನಾಗಿ ಅಮಿತ್ ಷಾ ಅಡಿಯಲ್ಲಿರುವ ಗೃಹ ಇಲಾಖೆಗೆ ಮಾತ್ರ ಉತ್ತರದಾಯಿಯಾಗಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ಪ್ರದೇಶವೊಂದರಲ್ಲಿ ಪಟೇಲರ ಧೋರಣೆಗಳು ಕಾಶ್ಮೀರದ ಅನುಭವದ ಛಾಯೆಯನ್ನು ತೋರುತ್ತಿವೆ. ಆದರೆ ಇಲ್ಲಿ ಅನುಸರಿಸುತ್ತಿರುವ ನಿಜವಾದ ಮಾದರಿಯೆಂದರೆ ಗುಜರಾತಿನದ್ದೇ-ಪರಿಸರವನ್ನು ನಾಶಪಡಿಸುವ, ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಿಂದುತ್ವ ಮೌಲ್ಯಗಳನ್ನು ಹೇರುವ, ಭಿನ್ನಮತವನ್ನು ನಿರ್ದಯವಾಗಿ ಹತ್ತಿಕ್ಕುವ ಮತ್ತು ಒಂದು ಮಹಾ ಸಾಂಕ್ರಾಮಿಕದ ಸಮಯದಲ್ಲಿ ಮಾನವ ಜೀವದ ಬಗ್ಗೆ ಒಂದು ನಿರ್ಮಮ ಉಪೇಕ್ಷೆಯ ಅಭಿವೃದ್ಧಿ ಮಾದರಿ.

ಲಕ್ಷದ್ವೀಪದ ಜನತೆ ತಮ್ಮ ಬದುಕಿನ ಮೇಲೆ ಈ ಹಲ್ಲೆಗಳನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಈ ದಾಳಿಗಳ ವಿರುದ್ದ ಹೋರಾಟದಲ್ಲಿ ಅವರು ಏಕಾಂಗಿಗಳಲ್ಲ. ಲಕ್ಷದ್ವೀಪದೊಂದಿಗೆ ನಿಕಟ ಪಾರಂಪರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಕೇರಳ(ಇಲ್ಲಿನ ಜನಗಳ ಭಾಷೆ ಮಲೆಯಾಳಂನ ಒಂದು ಆಡುಭಾಷೆ) ಒಂದಾಗಿ ಈ ದ್ವೀಪದ ಜನಗಳ ಹಕ್ಕುಗಳ ರಕ್ಷಣೆಗೆ ಎದ್ದು ನಿಂತಿದೆ. ಪ್ರತಿಯೊಂದು ರಾಜಕೀಯ ಮತ್ತು ಸಾಮಾಜಿಕ ಸಂಘಟನೆ(ಬಿಜೆಪಿ ಮತ್ತು ಆರೆಸ್ಸೆಸ್ ಬಿಟ್ಟು) ಲಕ್ಷದ್ವೀಪದ ಜನಗಳೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸಿದ್ದಾರೆ.

ಪಟೇಲ್‌ರನ್ನು ಆಡಳಿತಗಾರನಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಆಗ್ರಹ ಬಲವಾಗುತ್ತಿದೆ. ಆತ ಭಾರತದ ಈ ಶಾಂತಿಯುತ ಮತ್ತು ಸುಂದರ ಭಾಗಕ್ಕೆ ಸರಿಪಡಿಸಲಾಗದ ಅನಾಹುತ ಉಂಟು ಮಾಡುವ ಮೊದಲು ಮೋದಿ ಸರಕಾರ ಈ ಆಗ್ರಹಕ್ಕೆ ಕಿವಿಗೊಡಬೇಕಾಗುತ್ತದೆ.

Leave a Reply

Your email address will not be published. Required fields are marked *