ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ಗ್ರಾಮೀಣ ಭಾರತದಲ್ಲಿ ತೀವ್ರವಾಗಿ ಪಸರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಬಡವರ ಆತ್ಮ ವಿಶ್ವಾಸದ ಮೇಲೆ ಬಹುಕಾಲ ಉಳಿಯಲಿರುವ ಕೆಟ್ಟ ಪರಿಣಾಮ ಬೀರಿದೆ.
ಕೋವಿಡ್ ಎರಡನೇ ಅಲೆಯು ದೇಶದ ನಗರಗಳ ಮೇಲೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುತ್ತದೆ. ಆದರೆ ಸಾವಿನ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೆ ನಿಖರವಾದ ಕಾರಣ ಪತ್ತೆಯಾಗಬೇಕಷ್ಟೆ. ಸರ್ಕಾರ ನೀಡುವ ಅಂಕೆ ಸಂಖ್ಯೆಗಳ ಬಗ್ಗೆಯೇ ಅನುಮಾನ ಹುಟ್ಟುವಂತಿದೆ.
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ. ಹಳ್ಳಿಗಾಡಿನಲ್ಲಿ ಅದು ಶರವೇಗದಲ್ಲಿ ಹಬ್ಬುತ್ತಿದೆ. ಅನೇಕ ಮಂದಿ ಹಳ್ಳಿ ಮಂದಿಯನ್ನು ಅದು ಬಲಿ ಪಡೆದಿದೆ. ಆದರೆ ಸರ್ಕಾರದ ಮುಂಜಾಗ್ರತೆ ಹಾಗೂ ಲಸಿಕೆ ವಿಷಯದಲ್ಲಿ ಕಾಳಜಿ ಏನೂ ಸಾಲದಾಗಿದೆ.
ನಮ್ಮ ಹಳ್ಳಿಗಳ ಕುರಿತಾದ ಪಕ್ಷಪಾತ ಬ್ರಿಟಿಷರ ಕಾಲದಿಂದಲೇ ಆರಂಭವಾಗಿತ್ತು. ನಮ್ಮ ಶತಮಾನಗಳಷ್ಟು ಹಳೆಯದಾದ ಗ್ರಾಮೀಣ ಅರ್ಥವ್ಯವಸ್ಥೆಯನ್ನು ಧ್ವಂಸ ಮಾಡಿದ್ದೇ ಬ್ರಿಟಿಷರು. ಬ್ರಿಟಿಷರ ನಂತರ ಅಧಿಕಾರ ವಹಿಸಿಕೊಂಡ ಭಾರತದ ಬಂಡವಾಳಿಗರು ಸಹ ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ಕಿಂಚಿತ್ತೂ ಅನುಕೂಲ ಮಾಡಲಿಲ್ಲ. ಈಗಲೂ ಈ ತಾರತಮ್ಯ ಮುಂದುವರೆದಿದೆ.
ನಮ್ಮ ದೇಶ ಭಾರತ ಈಗಲೂ ಗ್ರಾಮೀಣ ಭಾರತವಾಗಿದೆ. ಆದರೆ ಈ ದೇಶದ ಪ್ರಜೆಗಳಿಗೆ ಚುನಾವಣೆಗಳಲ್ಲಿ ಮತಹಾಕುವ ಅಧಿಕಾರ ಮಾತ್ರ ಇದೆ. ಆದರೆ ಇಲ್ಲಿ ದುಡ್ಡಿದ್ದವರಿಗೆ ಮಾತ್ರ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಇಲ್ಲಿ ದುಡ್ಡಿದ್ದವರಿಗೆ ಶಿಕ್ಷಣ, ದುಡ್ಡಿದ್ದವರಿಗೆ ಆರೋಗ್ಯ, ದುಡ್ಡಿದ್ದವರಿಗೆ ಮಾನ ಮರ್ಯಾದೆ. ದುಡ್ಡಿಲ್ಲದವರಿಗೆ, ಆಸ್ತಿ ಇಲ್ಲದವರಿಗೆ ಇಲ್ಲಿ ಉಚಿತ ಉಪದೇಶ ಮಾತ್ರ.
ಹೀಗಾಗಿ ಕೊರೊನಾ ಸೊಂಕಿಗೆ ಬಲಿಯಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನ ಪ್ರಾಣತೆತ್ತರು. ನಮ್ಮ ಹಳ್ಳಿಗಳಲ್ಲಿ ಜನರಿಗೆ ಆಸ್ಪತ್ರೆಗಳಿಲ್ಲ. ಕನಿಷ್ಠ ಆರೋಗ್ಯ ಕೇಂದ್ರಗಳಿಲ್ಲ. ಆರೋಗ್ಯ ಕೇಂದ್ರಗಳಿದ್ದರೂ ಅಲ್ಲಿ ವೈದ್ಯರಿರುವುದಿಲ್ಲ. ವೈದ್ಯರಿದ್ದರೂ ತುರ್ತಾಗಿ ಬೇಕಾಗುವ ಜೀವ ರಕ್ಷಕ ಔಷಧಿಗಳಿರುವುದಿಲ್ಲ. ಐಸಿಯು ಘಟಕಗಳಾಗಲಿ ವೆಂಟಿಲೇರ್ಸ್ ಅಂತಹ ಅತ್ಯಗತ್ಯ ಉಪಕರಣಗಳಿಲ್ಲ. ಕೊರೊನಾ ಅಲೆ ಗ್ರಾಮೀಣ ಪ್ರದೇಶಕ್ಕೆ ಹರಡುತ್ತಿದ್ದಂತೆ ಇದೆಲ್ಲವೂ ಬಯಲಾಗಿದೆ. ಸರ್ಕಾರಕ್ಕೆ ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಅಸಾಧ್ಯವಾಗಿದೆ. ನಮ್ಮ ಆರೋಗ್ಯ ವ್ಯವಸ್ಥೆಗೆ ತುರ್ತು ಚಿಕಿತ್ಸೆ ಬೇಕಾಗಿದೆ. ಆರೋಗ್ಯ ಜನತೆಯ ಹಕ್ಕಾಗಬೇಕಾಗಿದೆ.
ಕೇವಲ ಶ್ರೀಮಂತರಿಗೆ ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆಗಳಿದ್ದರೆ ಸಾಲದು. ಸರ್ಕಾರ ನೆರೆಯರೊಡನೆ ಹೊಡೆದಾಡಲು ಶಸ್ತ್ರಾಸ್ತ್ರಗಳನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡುವುದನ್ನು ಬಿಟ್ಟು ಸಾರ್ವಜನಿಕ ಆರೋಗ್ಯಕ್ಕಾಗಿ ಅತಿ ಹೆಚ್ಚು ಹಣವನ್ನು ವಿನಿಯೋಗಿಸಬೇಕು. ದೊಡ್ಡ ದೊಡ್ಡ ಕೋಟ್ಯಾಧಿಪತಿಗಳಿಗೆ ತೆರಿಗೆ ರಿಯಾಯ್ತಿ ನೀಡುವುದನ್ನು ಬಿಟ್ಟು ಆ ಹಣವನ್ನು ಮುಲಾಜಿಲ್ಲದೆ ವಸೂಲಿ ಮಾಡಿ ಸಾರ್ವಜನಿಕ ಆಹಾರ, ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆಯೋಗ್ಯ, ಸಾರ್ವಜನಿಕ ವಸತಿಯಂತಹ ಕಾರ್ಯಗಳಿಗೆ ತೊಡಗಿಸಬೇಕು. ನಗರಗಳ ಶ್ರೀಮಂತರ ಬೆಳವಣಿಗೆಯೊಂದೇ ಬೆಳವಣಿಗೆ ಅಲ್ಲ. ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು, ನಡೆದಾಡಲು ಸರಿಯಾದ ರಸ್ತೆಗಳು, ಮಾತೃ ಭಾಷಾ ಶಾಲೆಗಳು, ಇಂತಹ ಸಾಂಕ್ರಾಮಿಕ ರೋಗವನ್ನು ತಡೆಯಲು ಪರಿಣಾಮಕಾರಿ ಕ್ರಮಗಳು ಸರ್ಕಾರದ ಆಧ್ಯತೆಯಾಗಬೇಕು. ರೋಗದ ಬಗ್ಗೆ ಜಾಗೃತಿ ಹುಟ್ಟಿಸಬೇಕೇ ಹೊರತು ಗ್ರಾಮೀಣ ಜನತೆಯಲ್ಲಿ ರೋಗದ ಕುರಿತು ಭೀತಿಯನ್ನು ಹರಡುವುದಲ್ಲ.
ಎಲ್ಲ ಗ್ರಾಮೀಣ ಬಡ ಕುಟುಂಬಗಳಿಗೆ ರೂ. 10 ಸಾವಿರ ದರದಲ್ಲಿ ಕನಿಷ್ಠ 6 ತಿಂಗಳು ಆರ್ಥಿಕ ಪ್ಯಾಕೇಜ್ ನೀಡಬೇಕು ಹಾಗೂ ಆಹಾರ ಮತ್ತು ಔಷಧಿಗಳ ಪ್ಯಾಕೇಜ್ ನೀಡಬೇಕು.