ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಾಜಿ ಅಧ್ಯಕ್ಷರು, ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಆಗಿದ್ದ ಕಾಂ. ಕೆ. ಗೋವಿಂದ ಶೆಟ್ಟಿಗಾರ್ (88 ವರ್ಷ) ಅವರು ಜೂನ್ 3 ರಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.
ಕುಂದಾಪುರದ ಪ್ರಭಾಕರ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಆರಂಭಿಸಿದ ಅವರು ಅನಂತರ ಕೋಟೇಶ್ವರದ ತನ್ನ ಊರಿನಲ್ಲಿ ಸೈಕಲ್ ಅಂಗಡಿಯನ್ನು ತೆರೆದು ಸ್ವಯಂ ಉದ್ಯೋಗದಲ್ಲಿ ಪ್ರಖ್ಯಾತರಾದರು.
1970 ರಲ್ಲಿ ಸಿಪಿಐ(ಎಂ) ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಿದ ಅವರು ಭೂಸುಧಾರಣೆ ಕಾನೂನು ಜಾರಿಗಾಗಿ, ಗೇಣಿದಾರ ರೈತರ ಭೂಮಿ ಖಾಯಂತಿಗಾಗಿ ನಡೆದ ಹೋರಾಟದಲ್ಲಿ ಸಕ್ರೀಯವಾಗಿದ್ದು ಭೂರಹಿತರಿಗೆ, ಗೇಣಿದಾರರಿಗೆ ಭೂಮಿ ಕೊಡಿಸಿರುವುದು ಅವರ ಮಹತ್ವದ ಹೋರಾಟವಾಗಿತ್ತು.
ಕೋಟೇಶ್ವರ ಗ್ರಾಮಪಂಚಾಯತ್ಗೆ ಎರಡು ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಿದರು. ಊರಿನ ಜನರ ಹಲವಾರು ಸಮಸ್ಯೆಗಳನ್ನು ಕಾಂ. ಕರಿಯ ದೇವಾಡಿಗ, ಕಾಂ. ದಾಸಭಂಡಾರಿ ಜೊತೆ ಸೇರಿ ಮಾತುಕತೆಯ ಮೂಲಕ ಇತ್ಯರ್ಥ ಮಾಡಿ ಜನಾನುರಾಗಿಯಾಗಿ ಊರಿನ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಅವರು ಪತ್ಮಿ ಲಕ್ಷ್ಮಿ ಹಾಗು 4 ಪುತ್ರರು ಓರ್ವ ಪುತ್ರಿ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಗಲಿದ ಕಾಂ. ಗೋವಿಂದ ಶೆಟ್ಟಿಗಾರ್ ಅವರಿಗೆ ಸಿಪಿಐ(ಎಂ) ಕುಂದಾಪುರ ವಲಯ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದೆ.