ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಪ್ಯಾಲೆಸ್ತೀನೀ ಪ್ರಶ್ನೆ ಮತ್ತು ಎಲ್ಲ ಜನಗಳ ಮಾನವ ಹಕ್ಕುಗಳ ಮೇಲಿನ ನಿರ್ಣಯದ ಮೇಲಿನ ಮತದಾನದಲ್ಲಿ ಭಾರತದ ಗೈರು ಹಾಜರಿಯನ್ನು ಪ್ರತಿಭಟಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪ್ರಧಾನ ಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಪ್ಯಾಲೆಸ್ತೀನೀಯರಿಗೆ ತಮ್ಮ ಸ್ವಂತ ನಾಡನ್ನು ಹೊಂದುವ ನ್ಯಾಯಬದ್ಧ ಹಕ್ಕು ಇದೆ ಎಂಬುದಕ್ಕೆ ಭಾರತೀಯ ಜನತೆಯ ಬೆಂಬಲ ಇಂದು ನಿನ್ನೆಯದಲ್ಲ. ಅದು ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಬೆಂಬಲ. ಇದು ನಮ್ಮ ಸ್ವಾತಂತ್ರ್ಯ ಹೋರಾಟದ ಭಾಗವಾಗಿತ್ತು. ಒಂದು ರಾಷ್ಟ್ರೀಯ ಒಮ್ಮತವಾಗಿ ಈ ಬೆಂಬಲ ಮೂಡಿ ಬಂದಿತ್ತು. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಮತದಾನದಲ್ಲಿ ಭಾರತ ಭಾಗವಹಿಸದಿರುವುದು ಈ ರಾಷ್ಟ್ರೀಯ ಒಮ್ಮತದ ಉಲ್ಲಂಘನೆಯಾಗಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಭಾರತ ಸತತವಾಗಿ ವಿಶ್ವಸಂಸ್ಥೆಯ ಈ ಕುರಿತಾದ ಎಲ್ಲ ನಿರ್ಣಯಗಳನ್ನೂ ಪ್ರತಿಪಾದಿಸುತ್ತ ಬಂದಿದೆ, ಈ ನಿರ್ಣಯಗಳ ನಗ್ನ ಉಲ್ಲಂಘನೆಗಳನ್ನು ಮತ್ತು ಪ್ಯಾಲೆಸ್ತೀನೀ ನೆಲದ ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವುದನ್ನು ವಿರೋಧಿಸುತ್ತ ಬಂದಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಮೇ 17, 2021ರಂದು ಭದ್ರತಾ ಸಮಿತಿಯಲ್ಲಿ ಮಾತಾಡುತ್ತ “ನ್ಯಾಯುತ ಪ್ಯಾಲೆಸ್ತೀನೀ ಗುರಿ”ಗೆ ಭಾರತದ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಭಾರತ ಪ್ಯಾಲೆಸ್ತೀನೀ ಪ್ರಶ್ನೆಗೆ ಎರಡು ಪ್ರಭುತ್ವಗಳ ಪರಿಹಾರವನ್ನು ಬೆಂಬಲಿಸುತ್ತ ಬಂದಿದೆ. ಸಮಾನ ಸಾರ್ವಭೌಮ ಹಕ್ಕುಗಳಿರುವ ಎರಡು ಪ್ರಭುತ್ವಗಳು, ಇವುಗಳಲ್ಲಿ ಪ್ಯಾಲೆಸ್ತೀನೀ ಪ್ರಭುತ್ವದ ರಾಜಧಾನಿ ಪೂರ್ವ ಜೆರುಸಲೇಂ ಅಗಿರಬೇಕು ಎಂಬುದು ಈ ವಿವಾದಕ್ಕೆ ಪರಿಹಾರ ಎಂಬ ಭಾರತದ ನಿಲುವನ್ನು ಅವರು ತಮ್ಮ ಭಾಷಣದಲ್ಲಿ ಪುನರುಚ್ಚರಿಸಿದ್ದರು. ಆದರೆ, ಅದಾದ ಹತ್ತು ದಿನಗಳ ನಂತರ, ಇಸ್ರೇಲ್ ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ಅಧಿನಿರ್ಣಯಗಳಿಗೆ ಬದ್ಧವಾಗಿರಬೇಕು ಎಂದು ಕೇಳುವ ನಿರ್ಣಯದ ಮೇಲೆ ಮತದಾನದಲ್ಲಿ ಗೈರು ಹಾಜರಾಗುವ ಈ ಕ್ರಮ ಬಂದಿದೆ.
ಭಾರತದ ಈ ಕ್ರಮಕ್ಕೆ ಅಂತರ್ರಾಷ್ಟ್ರೀಯ ನಿರಾಶೆ, ವಿಸ್ಮಯ ಮತ್ತು ಪ್ರತಿಭಟನೆಗಳು ಸಾಲುಸಾಲಾಗಿ ವ್ಯಕ್ತವಾಗಿವೆ. ಈ ಗೈರುಹಾಜರಿ ಪ್ಯಾಲೆಸ್ತೀನಿಯರೂ ಸೇರಿದಂತೆ ಎಲ್ಲ ಜನಗಳ ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಮಹತ್ವದ ಕೆಲಸದ ಕತ್ತು ಹಿಸುಕುವಂತದ್ದು ಎಂದು ಹಲವು ಮಂದಿ ಸರಿಯಾಗಿಯೇ ಕಾಣುತ್ತಿದ್ದಾರೆ.
ಈ ತಿಪ್ಪರಲಾಗ, ಭಾರತದಲ್ಲಿ ಮಾನವ ಹಕ್ಕುಗಳನ್ನು, ಪ್ರಜಾಪ್ರಭುತ್ವ ಹಕ್ಕುಗಳನ್ನು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯವ ಮಟ್ಟ ಭಯಾನಕ ರೀತಿಯಲ್ಲಿ ಇಳಿಯುತ್ತಿರುವ ಸಂದರ್ಭದಲ್ಲಿ ಬಂದಿದೆ ಎಂದು ಹೇಳಲೇಬೇಕಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸೀತಾರಾಂ ಯೆಚುರಿಯವರು ಹೇಳಿದ್ದಾರೆ. ಭಾರತದ ಈ ಗೈರುಹಾಜರಿಯನ್ನು ಭಾರತದಲ್ಲಿ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿನ ಮಟ್ಟ ಕುಸಿಯುತ್ತಿರುವುದರ ಬಗ್ಗೆ ಜಾಗತಿಕ ಆತಂಕದೊಂದಿಗೆ ತಳುಕು ಹಾಕಲಾಗುತ್ತಿದೆ ಎಂದೂ ಯೆಚುರಿಯವರು ಪ್ರಧಾನ ಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಭಾರತ ಪ್ಯಾಲಿಸ್ತೀನೀ ಧ್ಯೇಯಕ್ಕೆ ತನ್ನ ನಿರಂತರ ಬೆಂಬಲವನ್ನು ಪುನರುಚ್ಛರಿಸಬೇಕು, ಅದು ಪ್ಯಾಲೆಸ್ತೀನೀ ಹೋರಾಟವನ್ನು ಬೆಂಬಲಿಸುವ ರಾಷ್ಟ್ರೀಯ ಒಮ್ಮತದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದಿರುವ ಸೀತಾರಾಂ ಯೆಚುರಿಯವರು, ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಈ ನಿರ್ಣಯದ ಅಂಗೀಕಾರದ ನಂತರ ರಚಿಸಿರುವ ಸ್ವತಂತ್ರ ತನಿಖಾ ಆಯೋಗದೊಂದಿಗೆ ಸಹಕರಿಸುವ ಒಂದು ನೇರ ನಿಲುವನ್ನು ತಳೆಯುವ ಬಗ್ಗೆ ತಕ್ಷಣ ಗಮನ ಹರಿಸಬೇಕು ಮತ್ತು ಇದನ್ನು ಸಕಾರಾತ್ಮಕವಾಗಿ ಪರಿಶೀಲಿಸಬೇಕು ಎಂದು ಕೋರಿದ್ದಾರೆ.