ಮೋದಿ ಸರಕಾರ ತನ್ನ ದೋಷಪೂರ್ಣ ಮತ್ತು ವಿನಾಶಕಾರಿ “ಉದಾರೀಕೃತ ಲಸಿಕೆ ನೀತಿ”ಯನ್ನು ರಾಜ್ಯಗಳಿಂದ ಬಲವಾದ ವಿರೋಧ, ಹಿಂದೊತ್ತಿನಿಂದಾಗಿ ಮತ್ತು ಸುಪ್ರೀಂ ಕೋರ್ಟಿನ ಟೀಕೆಯಿಂದಾಗಿ ಹಿಂತೆಗೆದುಕೊಳ್ಳಲೇಬೇಕಾಗಿ ಬಂದಿದೆ. ಎಲ್ಲ ನಾಗರಿಕರಿಗೆ ಉಚಿತ ಲಸಿಕೆಯ ಆಗ್ರಹವನ್ನು ಅದು ಒಪ್ಪಿಕೊಳ್ಳಬೇಕಾಗಿ ಬಂದಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಪ್ರಧಾನ ಮಂತ್ರಿಗಳು ತಮ್ಮ ರಾಷ್ಟ್ರೀಯ ಪ್ರಸಾರ ಭಾಷಣದ ಮೂಲಕ ರಾಜ್ಯ ಸರಕಾರಗಳ ಮೇಲೆ ಸುಳ್ಳು ಆಪಾದನೆಗಳನ್ನು ಹಾಕಿ, ಹೊಣೆಗಾರಿಕೆಯನ್ನು ಅವುಗಳ ಮೇಲೆ ದಾಟಿಸಲು ಪ್ರಯತ್ನಿಸಿರುವುದು ಖಂಡನಾರ್ಹ. ಜನಗಳು ಇದನ್ನು ತಿರಸ್ಕರಿಸುತ್ತಾರೆ ಎಂದು ಪೊಲಿಟ್ ಬ್ಯುರೊ ಹೇಳಿದೆ. “ಉದಾರೀಕೃತ ಲಸಿಕೆ ನೀತಿ” ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಧಾರವಾಗಿತ್ತು ಎಂಬುದನ್ನು ಪೊಲಿಟ್ ಬ್ಯುರೊ ನೆನಪಿಸಿದೆ.
ಆದರೂ ಈ ವಿಫಲ ಲಸಿಕೆ ನೀತಿಯನ್ನು ಪೂರ್ಣವಾಗಿ ಬದಲಿಸಿಲ್ಲ. ದ್ವಂದ್ವ ಬೆಲೆ ನಿರ್ಧಾರ ನೀತಿಯನ್ನು ಅದು ಮುಂದುವರೆಸುತ್ತಿದೆ. ಈಗಲೂ ಲಸಿಕೆ ಉತ್ಪಾದನೆಯ 25%ದಷ್ಟು ದೊಡ್ಡ ಪ್ರಮಾಣವನ್ನು ಖಾಸಗಿಯವರಿಗೆ ಮೀಸಲಿಡಲಾಗಿದೆ. ಇದು ಖಾಸಗಿ ತಯಾರಕರಿಗೆ ಸೂಪರ್ ಲಾಭಗಳನ್ನು ಲೂಟಿ ಹೊಡೆಯಲು ಒಂದು ಪರವಾನಿಗೆಯಲ್ಲದೆ ಬೇರೇನೂ ಅಲ್ಲ ಎಂದು ಸಿಪಿಐ(ಎಂ) ಹೇಳಿದೆ.
ಅಲ್ಲದೆ, ಲಸಿಕೆಯ ತೀವ್ರ ಕೊರತೆ ಇರುವ ಸಮಯದಲ್ಲಿ ಇಂತಹ ಒಂದು ಧೋರಣೆಯನ್ನು ಮುಂದುವರೆಸುವುದು, ಕೊರೊನಾ ವೈರಸ್ನ ಮೂರನೇ ಅಲೆಯೊಂದನ್ನು ಎದುರಿಸಲು ಸಾರ್ವತ್ರಿಕ ಲಸಿಕೀಕರಣದ ಅಗತ್ಯವನ್ನು ದುರ್ಬಲ ಮತ್ತು ಪೇಲವಗೊಳಿಸುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ. ಶ್ರೀಮಂತರು ಮಾತ್ರವೇ ಖಾಸಗಿ ಆಸ್ಪತ್ರೆಗಳ ವಿಪರೀತ ಬೆಲೆಗಳನ್ನು ತೆರಲು ಸಾಧ್ಯ.
ಖಾಸಗಿ ವಲಯಕ್ಕೆ ಈ 25% ಮೀಸಲಾತಿಯನ್ನು ಹಿಂತೆಗೆದೊಳ್ಳಬೇಕು ಮತ್ತು ಕೇಂದ್ರ ಸರಕಾರ ಭಾರತದೊಳಗೆ ಲಸಿಕೆ ತಯಾರಿಕೆದಾರರಿಂದ ಮತ್ತು ಜಗತ್ತಿನ ಇತರೆಡೆಗಳಿಂದ ಎಲ್ಲ ಲಸಿಕೆಗಳನ್ನು ಪಡೆದುಕೊಳ್ಳಬೇಕು ಹಾಗೂ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಅವನ್ನು ವಿತರಣೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.