ಕೋವಿಡ್ ಸಾಂಕ್ರಾಮಿಕದ ನಂತರ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಬಳಸಲು ಕೇಂದ್ರ ಸರಕಾರಕ್ಕೆ ಅವಕಾಶ ಸಿಕ್ಕನಂತರ ದೇಶದ ಒಕ್ಕೂಟ ಸ್ವರೂಪದ ಮೇಲೆ ದಾಳಿ ನಡೆಯದ ಹಾಗೂ ರಾಜ್ಯಗಳ ಹಕ್ಕುಗಳನ್ನು ದಮನಿಸದ ಒಂದು ದಿನವೂ ಇಲ್ಲ ಎನ್ನುವಂತಾಗಿದೆ. ಒಕ್ಕೂಟತತ್ವ ಮತ್ತು ಇಂತಹ ವ್ಯವಸ್ಥೆಯ ಜೀವಾಳವಾದ ವೈವಿಧ್ಯತೆಯ ಮೇಲಿನ ಈ ದಾಳಿಯು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೇಲಿನ ಒಟ್ಟಾರೆ ಆಕ್ರಮಣದ ಭಾಗವಾಗಿದೆ. ಹೀಗಾಗಿ ಇದನ್ನೆಲ್ಲ ವಿರೋಧಿಸಿ ಹೋರಾಡಬೇಕಿದೆ. ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳು ಈ ಹೋರಾಟದ ಮುಂಚೂಣಿಯಲ್ಲಿ ಇರಬೇಕು.
ಭಾರತದಲ್ಲಿ ಒಕ್ಕೂಟ ಸ್ವರೂಪದ ಮೇಲೆ ದಾಳಿ ನಡೆಯದ ಹಾಗೂ ರಾಜ್ಯಗಳ ಹಕ್ಕುಗಳನ್ನು ದಮನಿಸದ ಒಂದು ದಿನವೂ ಇಲ್ಲ ಎನ್ನುವಂತಾಗಿದೆ.
ಒಂದು ದಿನ, ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ನೀತಿಯನ್ನು ಏಕಪಕ್ಷೀಯವಾಗಿ ಪ್ರಕಟಿಸುತ್ತದೆ. ರಾಜ್ಯಗಳು ಕೇಂದ್ರದಿಂದ ಲಸಿಕೆ ಪಡೆದು ಅದಕ್ಕೆ ಹಣ ಪಾವತಿಸಬೇಕು ಎಂಬುದು ಅದರ ನಿರ್ದೇಶನ. ಇನ್ನೊಂದು ದಿನ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ದೆಹಲಿಗೆ ಕರೆಸಿಕೊಂಡು ಅವರ ನಿವೃತ್ತಿಯ ದಿನವೇ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ. ಇನ್ನೊಂದು ಸಲ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ದೆಹಲಿ ಸರ್ಕಾರದ ‘ಮನೆ ಬಾಗಿಲಿಗೆ ರೇಷನ್’ ಯೋಜನೆಯ ಜಾರಿಯನ್ನು ಸ್ಥಗಿತಗೊಳಿಸುತ್ತದೆ. ಇದ್ದಕ್ಕಿದ್ದಂತೆ, ಗ್ರಾಮೀಣ ಅಭಿವೃದ್ಧಿ ನಿಧಿಯಡಿ ನೂರಾರು ಕೋಟಿ ರೂಪಾಯಿ ಪಾವತಿಯನ್ನು ತಡೆ ಹಿಡಿದಿರುವ ಪ್ರಸಂಗವೊಂದು ಪಂಜಾಬ್ ಸರ್ಕಾರದ ಅರಿವಿಗೆ ಬರುತ್ತದೆ. ಅದು ಹೊಸ ರೈತ-ವಿರೋಧಿ ಕೃಷಿ ಕಾನೂನುಗಳಿಗೆ ಪಂಜಾಬ್ ಸರ್ಕಾರ ವಿರೋಧ ದಾಖಲಿಸಿದ್ದಕ್ಕೆ ಶಿಕ್ಷೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸತತ ಎರಡು ದಿನ 19 ರಾಜ್ಯಗಳ ಜಿಲ್ಲಾಧಿಕಾರಿಗಳ ಸಭೆಗಳನ್ನು ನಡೆಸಿದರು. ರಾಜ್ಯ ಸರ್ಕಾರಗಳನ್ನು ಬದಿಗೊತ್ತಿ ಅವರು ಈ ಸಭೆಗಳನ್ನು ನಡೆಸಿದರು. ಇದಕ್ಕೆ ನಾನೇನೂ ಕಮ್ಮಿಯಿಲ್ಲ ಎನ್ನುವಂತೆ ಕೇಂದ್ರ ಶಿಕ್ಷಣ ಸಚಿವರು ಹೊಸ ಶಿಕ್ಷಣ ನೀತಿ ಜಾರಿ ಕುರಿತು ರಾಜ್ಯಗಳ ಶಿಕ್ಷಣ ಮಂತ್ರಿಗಳ ಪಾಲ್ಗೊಳ್ಳುವಿಕೆ ಇಲ್ಲದೇ ರಾಜ್ಯಗಳ ಶಿಕ್ಷಣ ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ್ದಾರೆ.
ಈ ರೀತಿಯಾಗಿ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೇಂದ್ರ-ರಾಜ್ಯ ಸಂಬಂಧ ಕುರಿತ ಸಾಂವಿಧಾನಿಕ ಕ್ರಮಗಳೇ ಇರಬಹುದು, ರಾಜ್ಯಗಳ ಹಣಕಾಸು ಸಂಪನ್ಮೂಲಗಳ ಲೂಟಿಯೇ ಇರಬಹುದು ಅಥವಾ ರಾಜ್ಯ ಸರ್ಕಾರಗಳ ವಿಚಾರದಲ್ಲಿ ರಾಜ್ಯಪಾಲರು ಅಥವಾ ಉಪ ರಾಜ್ಯಪಾಲರ ‘ರಾಜಕೀಯ’ ಹಸ್ತಕ್ಷೇಪವೇ ಇರಬಹುದು- ಈ ಪಟ್ಟಿ ಬಹಳ ದೊಡ್ಡದಿದೆ.
ಸರ್ವಾಧಿಕಾರಶಾಹೀ ಕೇಂದ್ರೀಕರಣ
ಇವೆಲ್ಲವೂ ಅಪರೂಪ ಎನ್ನಬಹುದಾದ ಪ್ರಕರಣಗಳಲ್ಲ ಅಥವಾ ಹಾದಿ ತಪ್ಪಿದ ಅಪವಾದದ ಪ್ರಕರಣಗಳೂ ಅಲ್ಲ. ಇವೆಲ್ಲವೂ ಸಂವಿಧಾನದ ಒಕ್ಕೂಟ ತತ್ವದ ಮೇಲಿನ ವ್ಯವಸ್ಥಿತ ದಾಳಿಯಾಗಿವೆ ಹಾಗೂ ಸರ್ವಾಧಿಕಾರಶಾಹೀ ಕೇಂದ್ರೀಕರಣದ ಮೂಲಕ ರಾಜ್ಯಗಳ ಹಕ್ಕುಗಳನ್ನು ತುಳಿಯುವ ದುಷ್ಟ ಕ್ರಮವೂ ಆಗಿವೆ. ಕೋವಿಡ್ ಸಾಂಕ್ರಾಮಿಕದ ನಂತರ ವಿಪತ್ತು ನಿರ್ವಹಣಾ ಕಾನೂನು ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಜರೂರಿನ ಉಪಬಂಧಗಳನ್ನು ಬಳಸಲು ಅವಕಾಶ ಸಿಕ್ಕನಂತರ ಇದು ತ್ವರಿತಗೊಂಡಿದೆ.
ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳ ಮೇಲಿನ ಗಂಭೀರ ದಾಳಿ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿ ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕುವುದರೊಂದಿಗೆ ಈ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರವೃತ್ತಿ ಈಗ ಸರ್ವೇಸಾಮಾನ್ಯವಾಗಿದ್ದು ಕೇಂದ್ರ-ರಾಜ್ಯ ಸಂಬಂಧಗಳ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದೆ.
ಮುಖ್ಯವಾಗಿ ಮೂರು ಕ್ಷೇತ್ರಗಳಲ್ಲಿ
ಒಕ್ಕೂಟವಾದದ ಸಾಂವಿಧಾನಿಕ ತತ್ವ, ಅದರ ಹಣಕಾಸು ಅಂಶಗಳು ಮತ್ತು ಕೇಂದ್ರ-ರಾಜ್ಯ ಸಂಬಂಧಗಳ ರಾಜಕೀಯ ಆಧಾರ, ಹೀಗೆ ಈ ಮೂರು ಕ್ಷೇತ್ರಗಳಲ್ಲಿ ಮುಖ್ಯವಾಗಿ ದಾಳಿ ಕೇಂದ್ರಿತವಾಗಿದೆ.
ರಾಜ್ಯಪಟ್ಟಿಯಲ್ಲಿರುವ ವಿಷಯಗಳೆಂದು ಸಂವಿಧಾನ ನಿರ್ದಿಷ್ಟಪಡಿಸಿರುವ ವಿಷಯದ ಮೇಲೆ ಕೇಂದ್ರದ ಅತಿಕ್ರಮಣವು ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸಿದ ರೀತಿಯಲ್ಲಿ ಪ್ರತಿಫಲನಗೊಳ್ಳುತ್ತದೆ. ಕೇಂದ್ರದ ನಡೆ, ಕೃಷಿ ಮತ್ತು ಕೃಷಿ ಮಾರುಕಟ್ಟೆ ಕುರಿತ ರಾಜ್ಯಗಳ ವಿಷಯಗಳ ಮೇಲಿನ ದಾಳಿಯಾಗಿದೆ. ದಿಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾನೂನನ್ನು ಈ ವರ್ಷ ಮಾರ್ಚ್ನಲ್ಲಿ ಅಂಗೀಕರಿಸಿದ್ದು ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯಗಳ ಹಕ್ಕುಗಳ ವ್ಯವಸ್ಥೆಯ ಮೇಲಿನ ನಗ್ನ ದಬ್ಬಾಳಿಕೆಯಾಗಿದೆ. ಈ ಪ್ರಕರಣದಲ್ಲಿ ಉಪ ರಾಜ್ಯಪಾಲರೇ ‘ದೆಹಲಿಯ ಸರ್ಕಾರ’ ಎಂದು ಬಿಂಬಿಸಲಾಯಿತು. ರಾಜ್ಯ ಶಾಸಕಾಂಗದ ಅಧಿಕಾರ ಮತ್ತು ವ್ಯಾಪ್ತಿಗಳನ್ನು ಇನ್ನಷ್ಟು ಹೊಸಕಿ ಹಾಕಲಾಯಿತು. ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಯಂಥ ವಿಚಾರಗಳಲ್ಲಿ ರಾಜ್ಯಗಳ ನೀತಿ ನಿರೂಪಣೆ ಪ್ರಕ್ರಿಯೆಯ ಮೇಲೆ ದಾಳಿಗೆ ಮೋದಿ ಸರಕಾರ ಕೇಂದ್ರ-ಪ್ರಾಯೋಜಿತ ಯೋಜನೆಗಳನ್ನು ಬಳಸಿಕೊಳ್ಳುತ್ತಿದೆ. ಈ ಪ್ರಕ್ರಿಯೆಯಂತೂ ರಭಸವಾಗಿ ಸಾಗುತ್ತಿದೆ.
ಕುಂಠಿತಗೊಂಡ ರಾಜ್ಯಗಳ ಆರ್ಥಿಕ ಅವಕಾಶ
ರಾಜ್ಯಗಳ ಆರ್ಥಿಕ ಅವಕಾಶಗಳು ಇನ್ನಷ್ಟು ಕುಂಠಿತಗೊಂಡಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯು ತೆರಿಗೆ ವಿಚಾರದಲ್ಲಿ ರಾಜ್ಯಗಳು ಹೊಂದಿದ್ದ ಅಲ್ಪಸ್ವಲ್ಪ ಅಧಿಕಾರವನ್ನೂ ಕಸಿದು ಕೊಂಡಿದೆ. ಇವೆಲ್ಲದರ ಮೇಲೆ, ಕಳೆದೆರಡು ವರ್ಷಗಳಿಂದ ರಾಜ್ಯಗಳಿಗೆ ಅವುಗಳ ಪರಿಹಾರದ ಪಾಲನ್ನು ಕೊಡಲು ಕೇಂದ್ರ ಸಕಾರ ನಿರಾಕರಿಸುತ್ತಿದೆ. ಜಿಎಸ್ಟಿ ಆದಾಯ ಕುಸಿದಿದೆ ಎಂಬ ಕುಂಟು ನೆಪವೊಡ್ಡಿ ಕೇಂದ್ರ ಹೀಗೆ ಮಾಡುತ್ತಿದೆ. ಕಳೆದ ಎರಡು ಹಣಕಾಸು ಆಯೋಗಗಳು ಕೇಂದ್ರ ಸರ್ಕಾರ ಪರಿಚಯಿಸಿದ ಬಾಹ್ಯ ಷರತ್ತುಗಳ ಅಡಿ ಕೆಲಸ ಮಾಡಿವೆ. ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಪನ್ಮೂಲಗಳ ವಿಭಜನೆಗೆ ಸಂವಿಧಾನ ದತ್ತವಾದ ಕ್ರಮಕ್ಕೆ ವ್ಯತಿರಿಕ್ತವಾಗಿ ಇನ್ನಷ್ಟು ಷರತ್ತುಗಳನ್ನು ಕಾನೂನುಬಾಹಿರವಾಗಿ ಅದು ವಿಧಿಸಿದೆ.
ಸಾಂಕ್ರಾಮಿಕದಿಂದಾಗಿ ರಾಜ್ಯಗಳ ಆರ್ಥಿಕ ಬಿಕ್ಕಟ್ಟು ತುತ್ತತುದಿ ತಲುಪಿದೆ. ರಾಜ್ಯಗಳ ಸಾಲ ತರುವ ಮಿತಿಯನ್ನು ಗಣನೀಯವಾಗಿ ಸಡಿಲಿಸಲು ಕೇಂದ್ರ ಸರ್ಕಾರ ನಿರಾಕರಿಸಿದ್ದು ಹಾಗೂ ಆರೋಗ್ಯ, ಜಿಎಸ್ಟಿ ಪರಿಹಾರ ಬಾಕಿ ಮತ್ತಿತರ ರಾಜ್ಯಗಳಿಗೆ ಸಲ್ಲಬೇಕಾದ ಹಣವನ್ನು ಕೊಡಲು ಕೇಂದ್ರ ನಿರಾಕರಿಸಿದ್ದರಿಂದ ಈ ಸನ್ನಿವೇಶ ನಿರ್ಮಾಣಗೊಂಡಿದೆ. ಆರೋಗ್ಯ ಮತ್ತು ಸಾಂಕ್ರಾಮಿಕದಿಂದಾಗಿ ಹಳಿ ತಪ್ಪಿದ ಆರ್ಥಿಕತೆಯನ್ನು ಸರಿದಾರಿಗೆ ತಂದು ಸಾಮಾಜಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಧಿಕ ಹೊರೆ ರಾಜ್ಯಗಳ ಹೆಗಲಿಗೇರಿರುವ ಈ ಸಂದರ್ಭದಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಿದೆ.
ಪ್ರತಿಪಕ್ಷ ಸರ್ಕಾರಗಳತ್ತ ವಕ್ರ ದೃಷ್ಟಿ
ರಾಜಕೀಯವಾಗಿ ನೋಡಿದರೆ, ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಸರ್ಕಾರಗಳಿರುವ ರಾಜ್ಯಗಳತ್ತ ಸತತವಾಗಿ ವೈರತ್ವದ ಧೋರಣೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಪಶ್ಚಿಮ ಬಂಗಾಳದ ಜಗದೀಪ್ ಧನ್ಕರ್ರಂಥ ರಾಜ್ಯಪಾಲರು ಕೇಂದ್ರದ ಆಳುವ ಪಕ್ಷದ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಪಾಲರಾಗಿ ಕೆಲಸ ಮಾಡುತ್ತಿರುವ ಆರ್ಎಸ್ಎಸ್ ಮಂದಿ, ರಾಜ್ಯಪಾಲರ ಸಾಂವಿಧಾನಿಕ ಪಾತ್ರದ ಬಗ್ಗೆ ಅನಕ್ಷರಸ್ಥರಾಗಿದ್ದು ಹಿಂದುತ್ವ ಅಜೆಂಡಾ ಮುಂದೊತ್ತುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ.
ಕೇಂದ್ರಾಡಳಿತ ಪ್ರದೇಶಗಳ ಪಾಡಂತೂ ಇನ್ನೂ ಹೇಳತೀರದಂತಾಗಿದೆ. ಪುದುಚೇರಿಯ ಉಪ ರಾಜ್ಯಪಾಲರಾಗಿದ್ದ ಕಿರಣ್ ಬೇಡಿ, ವೈಸ್ರಾಯ್ ಥರ ವರ್ತಿಸುತ್ತಿದ್ದರು ಹಾಗೂ ಚುನಾಯಿತ ಸರ್ಕಾರದೊಂದಿಗೆ ಸತತವಾಗಿ ಸಂಘರ್ಷ ನಡೆಸಿದ್ದರು. ಹಿಂದಿನ ಎರಡೂ ಅಸೆಂಬ್ಲಿಗಳು ಮತ್ತು ಹೊಸ ವಿಧಾನ ಸಭೆಯಲ್ಲಿ ಉಪ ರಾಜ್ಯಪಾಲರು ನೇಮಿಸಿದ ಮೂವರೂ ಶಾಸಕರು ಬಿಜೆಪಿಯವರೇ ಆಗಿದ್ದು ಬಿಜೆಪಿ ಪಕ್ಷವನ್ನು ಮೇಲಿನಿಂದ ಕಟ್ಟುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ.
ಸರ್ವಾಧಿಕಾರಶಾಹೀ ಕೇಂದ್ರೀಕರಣದ ಹುಚ್ಚಾಟಕ್ಕೆ ಲಕ್ಷದ್ವೀಪದ ಪ್ರಸಕ್ತ ವಿದ್ಯಮಾನ ಉತ್ತಮ ಉದಾಹರಣೆಯಾಗಿದೆ. ಅಲ್ಲಿನ ಆಡಳಿತಾಧಿಕಾರಿ ಆಗಿರುವ ಬಿಜೆಪಿಗ ಅನೇಕ ಆಡಳಿತ ಕ್ರಮಗಳನ್ನು ಘೋಷಿಸಿದ್ದಾರೆ. ಅವುಗಳು ಅನುಷ್ಠಾನಗೊಂಡರೆ, ಲಕ್ಷದ್ವೀಪದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಧ ನಾಶವಾಗುತ್ತದೆ. ಅಲ್ಲಿನ ಮುಸ್ಲಿಮರನ್ನು ಬಹುಸಂಖ್ಯಾತರ ದಬ್ಬಾಳಿಕೆಗೆ ಒಳಪಡಿಸಲಾಗುತ್ತದೆ.
ಒಕ್ಕೂಟತತ್ವ ಮತ್ತು ಇಂತಹ ವ್ಯವಸ್ಥೆಯ ಜೀವಾಳವಾದ ವೈವಿಧ್ಯತೆಯ ಮೇಲಿನ ಈ ದಾಳಿಯು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಮೇಲಿನ ಒಟ್ಟಾರೆ ಆಕ್ರಮಣದ ಭಾಗವಾಗಿದೆ. ಹೀಗಾಗಿ ಇದನ್ನೆಲ್ಲ ವಿರೋಧಿಸಿ ಹೋರಾಡಬೇಕಿದೆ. ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳು ಈ ಹೋರಾಟದ ಮುಂಚೂಣಿಯಲ್ಲಿ ಇರಬೇಕು. ವಿನಾಶಕಾರಿ ಲಸಿಕೆ ನೀತಿಯ ವಿರುದ್ಧ ಬಹುತೇಕ ಪ್ರತಿಪಕ್ಷ ಆಡಳಿತದ ರಾಜ್ಯಗಳು ದನಿಯೆತ್ತಿವೆ. ಇದು ಮೋದಿ ಸರ್ಕಾರ ಲಸಿಕೆ ನೀತಿಯನ್ನು ಬದಲಾಯಿಸಿಕೊಳ್ಳುವಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ. ಜಿಎಸ್ಟಿ ಪರಿಹಾರದ ವಿಚಾರದಲ್ಲಿ ಕೂಡ ಪ್ರತಿಪಕ್ಷಗಳ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯವಾಗಿದೆ.
ಆದರೆ ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳ ರಕ್ಷಣೆಗೆ ಪ್ರತಿಪಕ್ಷಗಳ ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಸಮನ್ವಯ ಬೇಕಾಗುತ್ತದೆ. ಈಗಲೂ ಒಡಿಶಾ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಸರ್ಕಾರಗಳು ಅರೆ ಮನಸ್ಸಿನಿಂದಿದ್ದು ಒಂದು ದೃಢ ನಿಲುಮೆ ತಳೆಯಲು ಹಿಂಜರಿಯುತ್ತಿವೆ. ಒಕ್ಕೂಟತತ್ವದ ನಾಶ ಮತ್ತು ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸುವುದು ಈ ಪಕ್ಷಗಳ ಹಿತಕ್ಕೇ ಮಾರಕವಾಗುತ್ತದೆ ಎನ್ನುವುದನ್ನು ಈ ಮೂರು ಸರ್ಕಾರಗಳನ್ನು ಮುನ್ನಡೆಸುತ್ತಿರುವ ಪ್ರಾದೇಶಿಕ ಪಕ್ಷಗಳು ಮನವರಿಕೆ ಮಾಡಿಕೊಳ್ಳ ಬೇಕಿದೆ.
ಒಕ್ಕೂಟತತ್ವ ಎಂಬುದು ಅವಿಭಾಜ್ಯ ಕೂಡ. ದೆಹಲಿಯನ್ನು ಒಂದು ವೈಭವೀಕೃತ ಮುನಿಸಿಪಾಲಿಟಿಯ ಮಟ್ಟಕ್ಕೆ ಇಳಿಸಲು ಕಾನೂನನ್ನು ತಿದ್ದುಪಡಿ ಮಾಡಿದಾಗ, ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾದ ಕ್ರಮಕ್ಕೆ ನೀಡಿದ್ದ ಬೆಂಬಲ ತಪ್ಪು ಎನ್ನುವುದನ್ನು ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷ ಮನವರಿಕೆ ಮಾಡಿಕೊಳ್ಳಬೇಕಿತ್ತು. ಅದೇ ರೀತಿ, ಕಾಂಗ್ರೆಸ್ ರಾಜ್ಯ ಸರ್ಕಾರಗಳು ಕೂಡ ದಾಳಿಗೆ ತುತ್ತಾಗುತ್ತಿದ್ದು ಆ ಪಕ್ಷ ಕೂಡ ಹಿಂದೆಲ್ಲ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಸಂವಿಧಾನದ 356ನೇ ವಿಧಿಯನ್ನು ತಾನು ದುರುಪಯೋಗ ಪಡಿಸಿಕೊಂಡಿದ್ದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹಾಗೂ ಪಾಠ ಕಲಿಯಬೇಕಿದೆ.
ಇನ್ನೂ ವಿಶಾಲ ತಳಹದಿಯಲ್ಲಿ ನೋಡಿದರೆ, ಪ್ರತಿಪಕ್ಷಗಳ ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾಗಿ ಒಕ್ಕೂಟತತ್ವದ ರಕ್ಷಣೆ, ರಾಜ್ಯಗಳ ಹಕ್ಕುಗಳ ರಕ್ಷಣೆ ಮತ್ತು ಕೇಂದ್ರ-ರಾಜ್ಯ ಸಂಬAಧಗಳ ಪುರ್ರಚನೆಗೆ ಕೇಂದ್ರ-ರಾಜ್ಯಗಳ ಸಂಬಂಧ ಕುರಿತ ಶ್ರೀನಗರ ಸಮಾವೇಶದ ನಿರ್ಣಯದಂತಿರುವ ಒಂದು ವೇದಿಕೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಇದು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಮಕಾಲಿಕಗೊಳಿಸಿ ಕೊಂಡಿರಬೇಕು. ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳ ರಕ್ಷಣೆ ಸರ್ವಾಧಿಕಾರಶಾಹಿಗೆ ವಿರೋಧ ಮತ್ತು ಪ್ರಜಾಪ್ರಭುತ್ವಕ್ಕಾಗಿನ ಹೋರಾಟದ ಅವಿಭಾಜ್ಯ ಅಂಗವಾಗಿದೆ.
ಅನು: ವಿಶ್ವ