ಯುಎಪಿಎ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪು ಅತ್ಯಂತ ಸ್ವಾಗತಾರ್ಹ

ನ್ಯಾಯಾಲಯ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿದೆ-ಸಿಪಿಐ(ಎಂ) ಪೊಲಿಟ್ ಬ್ಯುರೊ

ಈಶಾನ್ಯ ದಿಲ್ಲಿಯ ಹಿಂಸಾಚಾರಕ್ಕೆ ಸಂಬಂಧಪಟ್ಟ ಯು.ಎ.ಪಿ.ಎ. ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಮೂವರು ಬಂಧಿತರಿಗೆ ಜಾಮೀನು ನೀಡಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಸ್ವಾಗತಿಸಿದೆ. ಸಂವಿಧಾನಬಾಹಿರ ಸಿ.ಎ.ಎ. ವಿರುದ್ಧ ಪ್ರತಿಭಟಿಸುತ್ತಿದ್ದ ಕಾರ್ಯಕರ್ತರ ವಿರುದ್ಧ ಕೇಸುಗಳನ್ನು ಉತ್ಪಾದಿಸುವ ಮೂಲಕ ಗೃಹ ಮಂತ್ರಾಲಯ ಎಸಗಿರುವ ದೊಡ್ಡ ಅನ್ಯಾಯವನ್ನು ಸರಿಪಡಿಸುವತ್ತ ಇದು ಒಂದು ಅತ್ಯಂತ ಸ್ವಾಗತಾರ್ಹ ಹೆಜ್ಜೆ ಎಂದು ಅದು ಹೇಳಿದೆ.

ಅದರಲ್ಲೂ “ಭಿನ್ನಮತವನ್ನು ಹತ್ತಿಕ್ಕುವ ಆತುರದಲ್ಲಿ, ಗೃಹ ಮಂತ್ರಾಲಯದ ಮನದಲ್ಲಿ ಸಂವಿಧಾನ ಭರವಸೆ ನೀಡಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ಗೆರೆ ಸ್ವಲ್ಪಮಟ್ಟಿಗೆ ಮಸುಕಾಗುತ್ತಿರುವಂತೆ ಕಾಣುತ್ತದೆ. ಈ ಮನೋಭಾವ ಜಾಡು ಹಿಡಿದರೆ ಅದು ಪ್ರಜಾಪ್ರಭುತ್ವಕ್ಕೆ ಒಂದು ವಿಷಾದಕರ ದಿನವಾಗುತ್ತದೆ” ಎಂದು ಹೈಕೋರ್ಟ್ ಹೇಳಿರುವುದು ಗಮನಾರ್ಹವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ನ್ಯಾಯಾಲಯ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿದೆ. ಇದು, ಯಾವುದೇ ರೂಪದ ಭಿನ್ನಮತವನ್ನು ರಾಷ್ಟ್ರ-ವಿರೋಧಿ ಎಂದು ಹೇಳುವ ಮತ್ತು ವ್ಯಕ್ತಿಗಳನ್ನು ಪೀಡಿಸುವ, ಭಯಪಡಿಸುವ, ಬೆದರಿಸುವ, ಯುಎಪಿಎ ಮತ್ತು ರಾಜದ್ರೋಹದ ಕಾಯ್ದೆಗಳ ಅಡಿಯಲ್ಲಿ ಜೈಲಿಗಟ್ಟುವ ಅಸಂಖ್ಯಾತ ಕೇಸುಗಳಿಗೆ ಅನ್ವಯವಾಗುತ್ತದೆ ಎಂದಿರುವ ಸಿಪಿಐ(ಎಂ) ಈ ತೀರ್ಪನ್ನು ಸ್ವಾಗತಿಸುತ್ತಲೇ ಸರಕಾರ ಈ ಮಾನಕವನ್ನು ಎಲ್ಲ ಸುಳ್ಳು ಕೇಸುಗಳಿಗೆ ಅನ್ವಯಿಸಬೇಕು ಮತ್ತು ಎಲ್ಲ ರಾಜಕೀಯ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *