ಜೂನ್ 24ರಂದು ಪ್ರಧಾನ ಮಂತ್ರಿಗಳು ವಿಶೇಷ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶದ ಸ್ಥಾನಕ್ಕೆ ಇಳಿಸಿದ ಕ್ರಮ ಕೈಗೊಂಡ 22 ತಿಂಗಳ ನಂತರ ಆ ರಾಜ್ಯದ 14 ರಾಜಕೀಯ ಮುಖಂಡರನ್ನು ಭೇಟಿ ಮಾಡಿದರು. ಇವರಲ್ಲಿ ಆ ರಾಜ್ಯದ ನಾಲ್ಕು ಮಾಜೀ ಮುಖ್ಯಮಂತ್ರಿಗಳೂ ಇದ್ದರು.
ಆ ಪ್ರದೇಶದಲ್ಲಿ ಭವಿಷ್ಯದ ದಾರಿಯನ್ನು ರೂಪಿಸುವುದಕ್ಕಾಗಿ ಈ ಸಭೆ ಎಂದು ಮಾಧ್ಯಮಗಳಲ್ಲಿ ಹೇಳಲಾಗಿತ್ತು. ಈ ಸಭೆಯಲ್ಲಿ ಈ ಕುರಿತು ಹಲವು ಪ್ರಶ್ನೆಗಳನ್ನು ಎತ್ತಲಾಯಿತು. ಆದರೆ ಯಾವುದೇ ಉತ್ತರ ಸಿಗಲಿಲ್ಲ, ಈ ಸಭೆಯಿಂದ ಜನಗಳ ಮುಂದೆ ಇಡಬಹುದಾದ ನಿರ್ದಿಷ್ಟವಾದುದೇನೂ ಹೊಮ್ಮಿಲ್ಲ ಎಂದು ಈ ಸಭೆಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ ಸಿಪಿಐ(ಎಂ)ನ ಹಿರಿಯ ಮುಖಂಡ ಮಹಮ್ಮದ್ ಯುಸುಫ್ ತರಿಗಾಮಿ ನ್ಯೂಸ್ ಕ್ಲಿಕ್” ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದಾರೆ.
“ಕೊನೆಗೂ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರನ್ನು ನೆನಪಿಸಿಕೊಂಡದ್ದಕ್ಕೆ ನಾನು ಧನ್ಯವಾದ ಹೇಳಿದೆ. ಆಗಸ್ಟ್5, 2019ರ ಮೊದಲು ಆಹ್ವಾನಿಸಿದ್ದರೆ ಒಳ್ಲೆಯದಿತ್ತು. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಇಂತಹ ಗಂಭೀರ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು, ಜಮ್ಮು ಮತ್ತು ಕಾಶ್ಮೀರದ ಜನತೆಯ ಸಂವಿದಾನಾತ್ಮಕ ಖಾತ್ರಿ ಪಡೆದಿದ್ದ ಹಕ್ಕುಗಳನ್ನು ಬದಲಿಸುವ ಮೊದಲು ನಮ್ಮನ್ನು ಆಹ್ವಾನಿಸಿದ್ದರೆ, ಆಗ ನಮ್ಮ ಅಭಿಪ್ರಾಯಗಳನ್ನು ಮುಂದಿಡಲು ಒಂದು ಅವಕಾಶ ಸಿಗುತ್ತಿತ್ತು, ಮತ್ತು ನಿಮಗೆ ಬೇಕಾಧ ಕೆಲವು ಮಾಹಿತಿಗಳು ಸಿಗುತ್ತಿದ್ದವು.ಮತ್ತು ನಂತರ ಸಂಭವಿಸಿದ್ದನ್ನು ತಪ್ಪಿಸಬಹುದಿತ್ತು” ಎಂದು ತಾನು ಹೇಳಿದುದಾಗಿ ತರಿಗಾಮಿ ‘ಹೇಳಿದರು.
“ಕ್ಷೇತ್ರ ಮರುವಿಂಗಡಣೆ ಅಧಿಸೂಚನೆಯಲ್ಲಿ ಅಸ್ಸಾಂ ಸೇರಿದಂತೆ ಕೆಲವಾರು ರಾಜ್ಯಗಳ ಹೆಸರುಗಳಿದ್ದವು ಎಂಬುದನ್ನು ನಾವು ಪ್ರಧಾನಮಂತ್ರಿಗಳು ಮತ್ತು ಗೃಹಮಂತ್ರಿಗಳಿಗೆ ನೆನಪಿಸಿದೆವು. ಆದರೂ, ಮರುವಿಂಗಡಣೆಯ ನಂತರ ಚುನಾವಣೆ ಎಂಬ ಶರತ್ತನ್ನು ಜಮ್ಮು ಮತ್ತು ಕಾಶ್ಮೀರದ ಮೇಲೆ ಮಾತ್ರವೇ ಏಕೆ ಹೇರಲಾಗಿದೆ? ಅಸ್ಸಾಂಗೆ ಅದನ್ನು ಏಕೆ ಅನ್ವಯಿಸಲಿಲ್ಲ? ಅಲ್ಲಿ ಇತ್ತೀಚೆಗಷ್ಟೇ ಚುನಾವಣೇ ಮುಗಿದಿದೆ. ಏಕೆ ಈ ಇಬ್ಬಗೆಯ ಮಾನದಂಡಗಳು?” ಎಂದು ಕೇಳಿದುದಾಗಿ ಮುಂದುವರೆದು ತರಿಗಾಮಿ ಹೇಳಿದ್ದಾರೆ.
‘ಸೂಕ್ತ ಸಮಯ”ದಲ್ಲಿ ಚುನಾವಣೆ ನಡೆಸಲಾಗವುದು ಎಂದು ಹೇಳಲಾಯಿತು. ಯಾವುದು ಆ ಸೂಕ್ತ ಸಮಯ? “ನಿಜವಾಗಿಯೂ ರಾಜ್ಯದ ಸ್ಥಾನಮಾನವನ್ನು ಮತ್ತೆ ಕೊಡಬೇಕೆಂದಿದ್ದರೆ ಹಾಗೆ ಮಾಡದಂತೆ ನಿಮ್ಮನ್ನು ತಡೆಯುತ್ತಿರುವರು ಯಾರು?” ಎಂದೂ ಅವರನ್ನು ಕೇಳಲಾಯಿತು. ಈ ಎಲ್ಲಾ ಪ್ರಶ್ನೆಗಳಿಗೆ ಯಾವುದೇ ಉತ್ತರ ಸಿಗಲಿಲ್ಲ. ಎನ್ನುತ್ತಾರೆ ತರಿಗಾಮಿ.
ಎರಡು ವರ್ಷಗಳ ಹಿಂದೆ ಆಗಸ್ಟ್ 5 ರಂದು ಸಂವಿಧಾನದ ಕಲಮು 370 ಮತ್ತು 35ಎ ನ್ನು ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶಗಳ ಮಟ್ಟಕ್ಕೆ ಇಳಿಸಿದ್ದಲ್ಲದೆ , ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಬಿಜೆಪಿ ಬಿಟ್ಟು ಬೇರೆಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಸ್ಥಾನಬದ್ಧತೆಯಲ್ಲಿ/ಬಂಧನದಲ್ಲಿ ಇರಿಸಿದ್ದ, ಅವರನ್ನೆಲ್ಲ ‘ಗುಪ್ಕಾರ್ ಗ್ಯಾಂಗ್’ ಎಂದೋ, ದೇಶ-ವಿರೋಧಿಗಳು, ಸಾರ್ವಜನಿಕ ಭದ್ರತೆಗೆ ಬೆದರಿಕೆಗಳು ಎಂದೋ ಹೀಗಳೆದಿದ್ದ ಕೇಂದ್ರ ಸರಕಾರ ಕೊನೆಗೂ ಅವರನ್ನು ಭೇಟಿ ಮಾಡಲು ಆಹ್ವಾನ ಕಳಿಸಿರುವುದು ಈ ಸರಕಾರದ ಜಮ್ಮು ಮತ್ತು ಕಾಶ್ಮೀರದ ಧೋರಣೆ ವಿಫಲವಾಗಿರುವುದನ್ನು ತೋರಿಸುತ್ತದೆ ಎಂದು ಕೆಲವು ವೀಕ್ಷಕರು ವಿಶ್ಲೇಷಿಸಿದರೆ, ಇನ್ನು ಕೆಲವರು, ಅಂತರ್ರಾಷ್ಟ್ರೀಯ ಟೀಕೆಗಳಿಂದಾಗಿಯೂ ಮತ್ತು ಅಫಘಾನಿಸ್ತಾನದಲ್ಲಿ ತಮ್ಮ ಪಡೆಗಳ ವಾಪಸಾತಿಯ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಹಿತರಕ್ಷಣೆಗೆ ಹಾಕುತ್ತಿರುವ ಒತ್ತಡಕ್ಕೆ ಮಣಿದು ಕಾಶ್ಮೀರ ನಮ್ಮ ಆಂತರಿಕ ಪ್ರಶ್ನೆ ಎನ್ನುತ್ತಿದ್ದ ಸರಕಾರ ಯು-ಟರ್ನ್ ಮಾಡಿದೆ, ಜಗತ್ತಿಗೆ ತೋರಿಸಲು ಈ ಸಭೆಯೆಂಬುದನ್ನು ನಡೆಸಿದೆ ಎನ್ನುತ್ತಿದ್ದಾರೆ.