ಚೀನಾ ಕಮ್ಯುನಿಸ್ಟ್ ಪಕ್ಷದ ಇತಿಹಾಸ ಹಂತ-1
ಮೂಲ: ಆರ್. ಅರುಣ ಕುಮಾರ್
ಇದೇ ಜುಲೈ 1ರಂದು ಚೀನಾದ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಗಿ ನೂರು ವರ್ಷಗಳು ಸಂದಿವೆ. ಚೀನಾದಾದ್ಯಂತ ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅತ್ಯಂತ ಅವಮಾನಕರ ದುರ್ಭರ ಸ್ಥಿತಿಯಲ್ಲಿ ಜೀವಿಸುತ್ತಿದ್ದ ಚೀನಾದ ಜನತೆಯ ನಾಯಕನಾಗಿ ಈ ನೂರು ವರ್ಷಗಳಲ್ಲಿ, ಕಡು ಬಡತನ ನಿರ್ಮೂಲನ ಮಾಡಿ ಎಲ್ಲರಿಗೂ ಸಾಕಷ್ಟು ನೆಮ್ಮದಿಯ ಜೀವನ ಮಟ್ಟ ಒದಗಿಸಿದ, ಸಮೃದ್ಧವಾದ ಮತ್ತು ಎರಡನೆಯ ಅತಿ ದೊಡ್ಡ ಆರ್ಥಿಕತೆ ಉಳ್ಳ ದೇಶವಾಗಿಸಿದ ಈ ಸಂದರ್ಭದಲ್ಲಿ ಈ ಪಕ್ಷದ ಇತಿಹಾಸ ಅರಿತುಕೊಳ್ಳುವುದು ಅಗತ್ಯ. ಚೀನಾ ಕಮ್ಯುನಿಸ್ಟ್ ಪಕ್ಷದ ಇತಿಹಾಸವನ್ನು ಸಾಮಾನ್ಯವಾಗಿ ನಾಲ್ಕು ಹಂತಗಳಾಗಿ ವಿಂಗಡಿಸಲಾಗುತ್ತದೆ. 1921-1934ರ ಮೊದಲ ಹಂತ ಪಕ್ಷ ಚೀನಾದ ಜನತೆಯ ನಾಯಕನಾಗಲು ಆಶಾದೀಪವಾಗಲು ನಡೆಸಿದ ಹಲವು ಪ್ರಯೋಗಗಳ ಏಳು-ಬೀಳುಗಳ ದೀರ್ಘ ಪಯಣದ ಹಂತ. ಎರಡನೆಯ ಹಂತ ಚೀನಾದ ಜನತೆಯ ಮನಗಳನ್ನು ಗೆದ್ದ ಪಕ್ಷ ಗಂಭೀರವಾಗಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಯತ್ತ ಸಾಗಿದ 1935-1949ರ ಅವಧಿ. ಕ್ರಾಂತಿಯ ನಂತರ ಸಮಾಜವಾದಿ ಸಮಾಜ ಕಟ್ಟುವತ್ತ ಹಲವು ಪ್ರಯೋಗಗಳಲ್ಲಿ ಕೆಲವು ಬಾರಿ ದಾರಿ ತಪ್ಪಿ ಅದನ್ನು ಸರಿಪಡಿಸಿಕೊಂಡು ಮುನ್ನಡೆದ 1950-1978ರ ಮೂರನೆಯ ಹಂತ. ಹಿಂದಿನ ಪ್ರಮಾದಗಳನ್ನು ಸರಿಪಡಿಸಿಕೊಂಡು ಆಧುನಿಕ ಸಮೃದ್ಧ ಸಮಾಜ ಕಟ್ಟುವುದರಲ್ಲಿ ಗಮನಾರ್ಹ ಯಶಸ್ಸು ಗಳಿಸಿದ 1979-2021ರ ನಾಲ್ಕನೆಯ ಹಂತ. ಈ ನಾಲ್ಕು ಹಂತಗಳಲ್ಲಿ ಪಕ್ಷದ ಇತಿಹಾಸವನ್ನು ಸ್ಥೂಲವಾಗಿ ಈ ಲೇಖನ ಸರಣಿಯಲ್ಲಿ ಕೊಡಲಾಗುವುದು. ಈ ಕಂತಿನಲ್ಲಿ ಮೊದಲ ಹಂತದ ಇತಿಹಾಸದ ಸ್ಥೂಲ ನಿರೂಪಣೆ.
ಕ್ರಾಂತಿ-ಪೂರ್ವ ರಶ್ಯಾ, ವಸಾಹತುಶಾಹಿಯ ಮತ್ತು ಸ್ಥಳೀಯ ಪಾಳೆಯಗಾರಿ ಧಣಿಗಳ ದಮನದಿಂದಾಗಿ ಬಡ ಜನತೆ ಭಾರಿ ಬೇಗುದಿ ಮತ್ತು ಸಂಕಷ್ಟಗಳಿಂದ ಬಳಲುತ್ತಿದ್ದ ಸಮಾಜವಾಗಿತ್ತು. ವಿವಿಧ ವಸಾಹತುಶಾಹಿಗಳು ಚೀನಾವನ್ನು ತಮ್ಮ ಪ್ರಭಾವದ ಹಲವು ವಲಯಗಳಾಗಿ ವಿಭಜಿಸಿದ್ದರು. ಪಾಳೆಯಗಾರಿ ಧಣಿಗಳ ದೊಡ್ಡ ವಿಭಾಗ ವಸಾಹತುಶಾಹಿಗಳೊಂದಿಗೆ ಜನತೆಯನ್ನು ಶೋಷಿಸುವುದರಲ್ಲಿ ಶಾಮೀಲಾಗಿದ್ದರು. ಹಾಗಾಗಿ, ಚೀನಾ ಅರೆ-ಪಾಳೆಯಗಾರಿ, ಅರೆ-ವಸಾಹತು ದೇಶವಾಗಿತ್ತು. ಪಾಳೆಯಗಾರಿ ಮತ್ತು ವಸಾಹತು ಶೋಷಣೆಯ ವಿರುದ್ಧ ಸ್ವಯಂ-ಸ್ಫೂರ್ತ ದಂಗೆಗಳು ಮತ್ತು ಹೋರಾಟಗಳು ನಡೆದಿದ್ದರೂ, ಅವು 1911ರ ವರೆಗೆ ಸಂಘಟಿತ ರೂಪ ಪಡೆದಿರಲಿಲ್ಲ.
1911ರ ಕ್ರಾಂತಿಯ ಸಾರಸತ್ವ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟವಾಗಿತ್ತು. ವಸಾಹತುಶಾಹಿಗಳ ಕೈಗೊಂಬೆಯಾಗಿದ್ದ ಕಿಂಗ್ ಸಾಮ್ರಾಜ್ಯವನ್ನು ಉರುಳಿಸುವುದರಲ್ಲಿ ಆ ಕ್ರಾಂತಿ ಯಶಸ್ವಿಯಾಯಿತು. ಅದು ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಜನತೆಯಲ್ಲಿ ಕ್ರಾಂತಿಕಾರಿ ಯೋಚನೆಗಳನ್ನು ಬಿತ್ತುವುದಕ್ಕೆ ಹಾದಿ ಮಾಡಿಕೊಟ್ಟಿತು. ಆದರೆ ಪಾಳೆಯಗಾರಿ ಶಕ್ತಿಗಳೊಂದಿಗೆ ತನ್ನ ರಾಜಿಯಿಂದಾಗಿ, ಜನತೆಯ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳನ್ನು ಈಡೇರಿಸುವುದರಲ್ಲಿ ಮತ್ತು ಶೋಷಣೆ ಕೊನೆಗೊಳಿಸುವುದರಲ್ಲಿ ವಿಫಲವಾಯಿತು. ಚೀನಿ ಸಮಾಜದ ಮೇಲೆ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ನಿಯಂತ್ರಣವನ್ನು ಮೊದಲಿನಂತೆ ಮುಂದುವರೆಸಿದ್ದರು. ಈ ವಿಫಲತೆ, ಚೀನಾದ ಪ್ರಗತಿಪರ ಶಕ್ತಿಗಳು ಶೋಷಣೆ ಮತ್ತು ದಮನದ ವಿರುದ್ಧ ತಮ್ಮ ಹೋರಾಟಕ್ಕೆ ಸರಿಯಾದ ಹಾದಿಯೊಂದನ್ನು ಹುಡುಕಲಾರಂಭಿಸಿದ್ದರು.
ಪಕ್ಷದ ಸ್ಥಾಪನೆ
ರಶ್ಯಾದಲ್ಲಿ 1917ರಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯು ಪ್ರಗತಿಪರ ಶಕ್ತಿಗಳನ್ನು ಹುರಿದುಂಬಿಸಿತು ಮತ್ತು ಭಾರೀ ಆಸಕ್ತಿಯನ್ನು ಉಂಟು ಮಾಡಿತು. ತಮ್ಮ ದೇಶದಂತೆ ಇರುವ ಪರಿಸ್ಥಿತಿ ಇರುವ ದೇಶದಲ್ಲೇ ಇಂತಹ ಕ್ರಾಂತಿಯಾಗಿದೆ ಎಂದು ಅವರು ಪರಿಗಣಿಸಿದರು. ಮೊದಲ ಬಾರಿಗೆ, ವೈಜ್ಞಾನಿಕ ಸಮಾಜವಾದ ಮತ್ತು ಮಾರ್ಕ್ಸ್ವಾದದ ಯೋಚನೆಗಳು ಹೊಸ ನಿರೀಕ್ಷೆಗಳನ್ನು ಮೂಡಿಸಿದವು ಮತ್ತು ಕ್ರಾಂತಿಕಾರಿ ಹಾದಿಯನ್ನು ತೋರಿಸಿದವು. ಮಾರ್ಕ್ಸ್ವಾದದ ಅಧ್ಯಯನದಲ್ಲಿ ಅಪಾರ ಆಸಕ್ತಿ ಮೂಡಿದವು. ಈ ಹಿನ್ನೆಲೆಯಲ್ಲಿ, ಮೊದಲ ಮಹಾಯುದ್ಧದ ನಂತರ ಚೀನಾ ಸಾಮ್ರಾಜ್ಯಶಾಹಿಗಳ ಒತ್ತಡಗಳಿಗೆ ಮಣಿದು ಸೋಲೊಪ್ಪಿಕೊಂಡದ್ದು ಜನತೆಯಲ್ಲಿ ತೀವ್ರ ಆಕ್ರೋಶವನ್ನು ಉಂಟು ಮಾಡಿತು. ಇದರ ವಿರುದ್ಧ ಮೇ 4, 1919ರಂದು ಭಾರೀ ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಯನ್ನು ಬೆಜಿಂಗ್ ನಲ್ಲಿ ವಿದ್ಯಾರ್ಥಿಗಳು ಆರಂಭಿಸಿದರು. ಉದಯಗೊಳ್ಳುತ್ತಿದ್ದ ಕಾರ್ಮಿಕ ವರ್ಗ ವಿದ್ಯಾರ್ಥಿಗಳನ್ನು ಬೆಂಬಲಿಸಿದ್ದರು. ಚೀನಾದ ಸಮಾಜದ ಆಧುನಿಕ ‘ವರ್ಗ’ಗಳಲ್ಲಿ ಮೂಡಿ ಬರುತ್ತಿದ್ದ ಜಾಗೃತಿ ಕಮ್ಯುನಿಸ್ಟ್ ಪಕ್ಷದ ಹುಟ್ಟಿಗೆ ಅಡಿಪಾಯ ಹಾಕಿತು ಎಂದು ಮೊದಲ ಬಾರಿಗೆ ಕಾಣಹತ್ತಿತು.
ಚೀನಾದ ಕೈಗಾರಿಕಾ ಮತ್ತು ಕಾರ್ಮಿಕರ ಚಳುವಳಿಯ ಕೇಂದ್ರವಾಗಿದ್ದ ಶಾಂಘಾಯ್ ನಲ್ಲಿ 1920ರಲ್ಲಿ ಸ್ಥಾಪಿತವಾಗಿದ್ದ ಮೊದಲ ಕಮ್ಯುನಿಸ್ಟ್ ಗುಂಪು ಪಕ್ಷದ ಪ್ರಣಾಳಿಕೆಯ ಕರಡನ್ನು ಸಿದ್ಧಪಡಿಸಿತ್ತು. ಶಾಂಘಾಯ್ ನಲ್ಲಿ 1921ರಲ್ಲಿ ನಡೆಸಲಾದ ಪಕ್ಷದ ಮೊದಲ ಮಹಾಧಿವೇಶನದಲ್ಲಿ ಮಾವೋ-ತ್ಸೆ-ತುಂಗ್ ಸೇರಿದಂತೆ 12 ಪ್ರತಿನಿಧಿಗಳು ಭಾಗವಹಿಸಿದ್ದರು. ಇವರು ಚೀನಾದ ವಿವಿಧ ಭಾಗಗಳ ಹಲವು ಗುಂಪುಗಳಲ್ಲಿ ಕೆಲಸ ಮಾಡುತಿದ್ದ 50 ಸದಸ್ಯರನ್ನು ಪ್ರತಿನಿಧಿಸಿದ್ದರು. ಗೂಢಚಾರರು ಬೆನ್ನುಹತ್ತಿದ್ದನ್ನು ಗಮನಿಸಿ, ಅವರು ಮಹಾಧಿವೇಶನವನ್ನು ಝೇಜಿಯಾಂಗ್ ಪ್ರಾಂತದ ಜಿಯಾಕ್ಸಿಂಗ್ ನಲ್ಲಿರುವ ನನ್ಹು ಸರೋವರದಲ್ಲಿ ಒಂದು ದೋಣಿಯಲ್ಲಿ ಸ್ಥಳಾಂತರಿಸಿ ಮುಂದುವರೆಸಿದರು. ಈ ಮಹಾಧಿವೇಶನದಲ್ಲಿ ಮಾರ್ಕ್ಸ್ವಾದ-ಲೆನಿನ್ ವಾದವನ್ನು ಎತ್ತಿ ಹಿಡಿದು ಪಕ್ಷದ ಮೊದಲ ಕಾರ್ಯಕ್ರಮವನ್ನು ಅಂಗೀಕರಿಸಿ, ಚೀನಾ ಕಮ್ಯುನಿಸ್ಟ್ ಪಕ್ಷದ ರಚನೆಯನ್ನು ಘೋಷಿಸಲಾಯಿತು.
ಚೀನಾದ ಸಮಾಜವಾದಿ ಯುವ ಲೀಗ್ ನ ಸ್ಥಾಪನೆ ಮತ್ತು ಮೊದಲ ಕಾರ್ಮಿಕ ಸಮ್ಮೇಳನವನ್ನು 1922ರಲ್ಲಿ ಸಂಘಟಿಸುವುದರಲ್ಲಿ ಪಕ್ಷ ಪ್ರಮುಖ ಪಾತ್ರ ವಹಿಸಿತು. ಪಕ್ಷದ ಸದಸ್ಯರು ಕಾರ್ಮಿಕರನ್ನು ಸಕ್ರಿಯವಾಗಿ ಸಂಘಟಿಸಿ ಅವರ ಹೋರಾಟಗಳ ನಾಯಕತ್ವವನ್ನು ವಹಿಸಿಕೊಂಡರು. ಎರಡನೆಯ ಮಹಾಧಿವೇಶನದಲ್ಲಿ ಪಕ್ಷವು ಸಾಮಾಜ್ಯಶಾಹಿ ಮತ್ತು ಪಾಳೆಯಗಾರಿ ವ್ಯವಸ್ಥೆಯನ್ನು ವಿರೋಧಿಸಿ, ಪ್ರಜಾಸತ್ತಾತ್ಮಕ ಕ್ರಾಂತಿಗೆ ಪ್ರಜಾಸತ್ತಾತ್ಮಕ ಐಕ್ಯರಂಗದ ರಚನೆಗೆ ಕರೆಕೊಟ್ಟಿತು. ಪಕ್ಷ ಒಂದು ಸಂವಿಧಾನವನ್ನು ಅಂಗೀಕರಿಸಿ, ತಾನು ಒಂದು ಶ್ರಮಜೀವಿಗಳ ಪಕ್ಷ ಎಂದು ಹೇಳಿತು.
ಕೊಮಿಂಟಾಂಗ್ ಜತೆ ಸಂಘರ್ಷ-ರಾಜಿಯ ಹೊಯ್ದಾಟ
ಕಾರ್ಮಿಕ ವರ್ಗದ ಹೋರಾಟಗಳಲ್ಲಿ ಭಾಗವಹಿಸಿ ನಾಯಕತ್ವ ವಹಿಸಿದ ಹಲವು ಪಕ್ಷದ ಸದಸ್ಯರ ಮೇಲೆ ವಸಾಹತುಶಾಹಿ ಆಡಳಿತಗಾರರು ಮತ್ತು ಅವರ ಏಜೆಂಟರಾದ ಪಾಳೆಯಗಾರಿ ಗೂಂಡಾಗಳು ಕ್ರೂರ ದಾಳಿಗಳನ್ನು ನಡೆಸಿದರು. ನೂರಾರು ಸದಸ್ಯರು ಇಂತಹ ದಾಳಿಗಳಿಗೆ ಬಲಿಯಾದರು ಮತ್ತು ಸಾವಿರಾರು ಸದಸ್ಯರು ತೀವ್ರವಾಗಿ ಗಾಯಗೊಂಡರು. ಈ ಅನುಭವಗಳು ಅವರಲ್ಲಿ ಉಕ್ಕಿನ ದೃಢನಿಶ್ಚಯ ಮತ್ತು ತಿಳಿವಳಿಕೆಯ ಪ್ರಬುದ್ಧತೆಯನ್ನು ಉಂಟು ಮಾಡಿದ್ದವು. 1923ರಲ್ಲಿ ನಡೆದ ರಾಷ್ಟ್ರೀಯ ಮಹಾಧಿವೇಶನದಲ್ಲಿ ಪಕ್ಷ (ಚೀನಾದ ಪ್ರಮುಖ ಬೂರ್ಜ್ವಾ-ಪಾಳೆಯಗಾರಿ ಪಕ್ಷವಾಗಿದ್ದ) ಕೊಮಿಂಟಾಂಗ್ ಜತೆ ಸಂಬಂಧದ ಕುರಿತು ಒಂದು ಪ್ರಸ್ತಾವವನ್ನು ಅಂಗೀಕರಿಸಿತು. ಇದರಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಕೊಮಿಂಟಾಂಗ್ ಸೇರಿ ಕೆಲಸ ಮಾಡಬೇಕು ಮತು ಅಲ್ಲಿಯೂ ಕಮ್ಯುನಿಸ್ಟರ ಸಂಖ್ಯೆ ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದು ಪ್ರಸ್ತಾವದ ಮೂಲಕ ನಿರ್ದೇಶಿಸಿತು. ಕಮ್ಯುನಿಸ್ಟ್ ಪಕ್ಷದ ಪ್ರಭಾವ ಮತ್ತು ಅದರ ಜತೆ ಜಂಟಿ ಕಾರ್ಯಾಚರಣೆಗಳು ಕೊಮಿಂಟಾಂಗ್ ನ್ನು ಪ್ರಭಾವಿಸಿದವು. ಸನ್ ಯಾಟ್ ಸೆನ್ ಅವರ ನಾಯಕತ್ವದಲ್ಲಿ 1923ರಲ್ಲಿ ರಾಷ್ಟ್ರೀಯ ಸರಕಾರ ರಚಿಸಿದ ಕೊಮಿಂಟಾಂಗ್ ನ ಸಾಮ್ರಾಜ್ಯಶಾಹಿ-ವಿರೋಧಿ ಪಾಳೆಯಗಾರಿ-ವಿರೋಧಿ ಘೋಷಣೆಯಲ್ಲಿ ಇದು ಬಿಂಬಿತವಾಗಿತ್ತು.
ನಾಲ್ಕನೆಯ ಮಹಾಧಿವೇಶನದಲ್ಲಿ (1925) ಕೊಮಿಂಟಾಂಗ್ ಜತೆ ಜಂಟಿ ಕಾರ್ಯಾಚರಣೆಯ ವಿಮರ್ಶೆ ಮಾಡಿ, ಪಕ್ಷ ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಕೊಮಿಂಟಾಂಗ್ ಜತೆ ರಾಜಿ ಮನೋಭಾವವನ್ನು ಬಿಡಬೇಕು ಎಂದು ಹೇಳಿತು. ಎಡ ಶಕ್ತಿಗಳನ್ನು ಬಲಗೊಳಿಸಲು ಕೊಮಿಂಟಾಂಗ್ ನಲ್ಲಿದ್ದ ಎಡ ಮತ್ತು ಬಲ ವಿಭಾಗಗಳ ಆಂತರಿಕ ಸಂಘರ್ಷದಲ್ಲಿ ಪ್ರಭಾವ ಬೀರಬೇಕೆಂದೂ ಹೇಳಿತು. ಆದರೆ ಆ ವರ್ಷ ಸನ್ ಯಾಟ್ ಸೆನ್ ಅವರ ಸಾವು ಕಮ್ಯುನಿಸ್ಟ್-ಕೊಮಿಂಟಾಂಗ್ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದವು.
‘ಉಳುವವನಿಗೆ ಭೂಮಿ’ ಘೋಷಣೆ
ಸಾಮ್ರಾಜ್ಯಶಾಹಿ ದಮನದ ವಿರುದ್ಧ ಹಲವು ನಗರಗಳಲ್ಲಿ 1925ರಲ್ಲಿ ಕಾರ್ಮಿಕ ವರ್ಗದ ಹೋರಾಟಗಳು ಮತ್ತು ಮುಷ್ಕರಗಳು 1925ರಲ್ಲಿ ನಡೆದವು. ಚೀನಾ ಸಮಾಜದ ವಿವಿಧ ವರ್ಗಗಳ ಗುಣಸ್ವಭಾವಗಳ ಮತ್ತು ವರ್ಗ ಸಂಬಂಧಗಳ ಅಧ್ಯಯನವನ್ನು ಮಾವೊ-ತ್ಸೆ-ತುಂಗ್ ನಡೆಸಿದರು. ಸಾಮ್ರಾಜ್ಯಶಾಹಿ, ಜಮೀನುದಾರರು, ಯುದ್ಧಕೋರ ಪಾಳೆಯಗಾರರು, ಅವರ ಅಡಿಯಾಳು ವರ್ಗಗಳ ಮತ್ತು ಮಧ್ಯಮ ವರ್ಗದ ಬಲಪಂಥೀಯರ ಆಳ್ವಿಕೆ ಮತ್ತು ಯಜಮಾನಿಕೆಯನ್ನು ಕಿತ್ತೊಗೆಯಬೇಕಾದರೆ, ಕಾರ್ಮಿಕ ವರ್ಗ ದೇಶದ ಬಹುಸಂಖ್ಯಾತರಾಗಿರುವ ಬಡ ರೈತರು, ಮಧ್ಯಮ ರೈತರ ಜತೆ ಐಕ್ಯತೆ ಸಾಧಿಸಬೇಕು ಮತ್ತು ಮಧ್ಯಮ ವರ್ಗದ (ಪ್ರಮುಖವಾಗಿ ರಾಷ್ಟ್ರೀಯ ಬೂರ್ಜ್ವಾ ವರ್ಗ) ಎಡಪಂಥೀಯರನ್ನು ತಮ್ಮ ಕಡೆಗೆ ಸ್ನೇಹಹಸ್ತ ಚಾಚಿ ಸೆಳೆದುಕೊಳ್ಳಬೇಕು, ಈ ಕ್ರಾಂತಿಕಾರಿ ವರ್ಗಗಳ ಜಂಟಿ ಆಳ್ವಿಕೆಯನ್ನು ಸ್ಥಾಪಿಸಬೇಕು ಎಂಬ ಕಾರ್ಯಯೋಜನೆಯನ್ನು ಈ ಅಧ್ಯಯನದ ಫಲವಾಗಿ ಮಂಡಿಸಿದರು. ಈ ತಿಳುವಳಿಕೆಯೊಂದಿಗೆ, ಕಮ್ಯುನಿಸ್ಟ್ ಪಕ್ಷ ಮೊದಲ ಬಾರಿಗೆ ‘ಉಳುವವನಿಗೆ ಭೂಮಿ’ ಎಂಬ ನಿರ್ಣಯ ಮಾಡಿ ಅದಕ್ಕಾಗಿ ಕರೆ ಕೊಟ್ಟಿತು. ಇದಕ್ಕೆ ತದ್ವಿರುದ್ಧವಾಗಿ, ಕೊಮಿಂಟಾಂಗ್ ರಾಷ್ಟ್ರೀಯ ಬೂರ್ಜ್ವಾ ವರ್ಗದ ಆಳ್ವಿಕೆಯ ಪರವಾಗಿದ್ದರು.
ಕೊಮಿಂಟಾಂಗ್ ಒಳಗೆ ಕಮ್ಯುನಿಸ್ಟರ ಕೆಲಸದಿಂದಾಗಿ ಅವರ ಪ್ರಭಾವವನ್ನು ಹೆಚ್ಚಿಸಿತು ಮತ್ತು ಯುದ್ಧಕೋರ ಪಾಳೆಯಗಾರರ ವಿರುದ್ಧ ಮಿಲಿಟರಿ ವಿಜಯಗಳಲ್ಲಿ ಪರಿಣಮಿಸಿತು. ಕೊಮಿಂಟಾಂಗ್ ನ ನಾಯಕತ್ವ ವಹಿಸಿಕೊಂಡಿದ್ದ ಚಿಯಾಂಗ್ ಕೈ ಶೇಕ್, ಕಮ್ಯುನಿಸ್ಟ್ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಗಾಬರಿಗೊಂಡು ಅವರ ವಿರುದ್ಧ ಹೋಗಲು ಆರಂಭಿಸಿದ. ಹೀಗಾಗಿ, ಕಮ್ಯುನಿಸ್ಟರು ಮತ್ತು ಕೊಮಿಂಟಾಂಗ್ ನಡುವೆ ಸಂಬಂಧ ಕೆಟ್ಟಿತು.
ಕಮ್ಯುನಿಸ್ಟ್ ನಾಯಕತ್ವದ ಹೊಂದಾಣಿಕೆ ಧೋರಣೆಯಿಂದಲೂ ಸಂಬಂಧ ಸುಧಾರಿಸಲಿಲ್ಲ. ಬದಲಿಗೆ, ಇದು ಕಮ್ಯುನಿಸ್ಟ್ ಪಕ್ಷದಲ್ಲಿ ಬಲ ಮಾರ್ಗಚ್ಯುತಿಗೆ ಕಾರಣವಾಯಿತು. ಕೊಮಿಂಟಾಂಗ್ ನಾಯಕರನ್ನು ಒಲಿಸಿಕೊಳ್ಳಲು ರೈತರಲ್ಲಿ ದೊಡ್ಡ ಪ್ರಮಾಣದಲ್ಲಿ ಜನಪ್ರಿಯವಾಗುತ್ತಿದ್ದ ‘ಉಳುವವನಿಗೆ ಭೂಮಿ’ ಘೋಷಣೆಯನ್ನು ಕೈ ಬಿಡಲಾಯಿತು. ಇದರಿಂದ ಉತ್ತೇಜಿತನಾದ ಚಿಯಾಂಗ್ ಕೈ ಶೇಕ್ ಕಮ್ಯುನಿಸ್ಟರನ್ನು ಕೊಮಿಂಟಾಂಗ್ ನ ಪ್ರಮುಖ ಸ್ಥಾನಗಳಿಂದ ಕಿತ್ತು ಹಾಕಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. ಐದನೇ ಮಹಾಧಿವೇಶನದಲ್ಲಿ ಕೇಂದ್ರ ಸಮಿತಿ ಈ ಬಲ ಮಾರ್ಗಚ್ಯುತಿಗೆ ಮತ್ತು ಬೂರ್ಜ್ವಾ ವಿರುದ್ಧ ಹೋರಾಟ ಕೈಬಿಟ್ಟದ್ದಕ್ಕೆ ತೀವ್ರ ಟೀಕೆಗೆ ಒಳಗಾಯಿತು. ಇದರ ಫಲವಾಗಿ ಕೊಮಿಂಟಾಂಗ್ ನ ಕಮ್ಯುನಿಸ್ಟ್-ವಿರೋಧಿ ಧೋರಣೆಯ ವಿರುದ್ಧ ಪ್ರತಿಭಟಿಸಿ, ಕಮ್ಯುನಿಸ್ಟ್ ಪಕ್ಷ ಜಂಟಿ ರಾಷ್ಟ್ರೀಯ ಸರಕಾರದಿಂದ ಹಿಂತೆಗೆಯಿತು.
ಗ್ರಾಮೀಣ ಕ್ರಾಂತಿಕಾರಿ ನೆಲೆಗಳ ಸ್ಥಾಪನೆ
ಕ್ರಾಂತಿಕಾರಿ ಸಶಸ್ತ್ರ ಹೋರಾಟಗಳ ಮೇಲೆ ತನ್ನ ನಾಯಕತ್ವವನ್ನು ಖಚಿತಪಡಿಸಿದ ಕಮ್ಯುನಿಸ್ಟ್ ಪಕ್ಷ, ಜನತಾ ಕ್ರಾಂತಿಕಾರಿ ಸೈನ್ಯ (ಪೀಪಲ್ಸ್ ಲಿಬರೇಶನ್ ಆರ್ಮಿ – ಪಿ.ಎಲ್.ಎ) ವನ್ನು ಸ್ಥಾಪಿಸಿತು. ಅದು 1927ರಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ಒಂದು ಪ್ರಮುಖ ಮಿಲಿಟರಿ ವಿಜಯ ಸಾಧಿಸಿತು. ಬ್ರಿಟಿಷ್ ಪಡೆಗಳನ್ನು ಅವುಗಳ ನಿಗದಿತ ಕ್ಷೇತ್ರವಾದ ಹಂಕೌ ಮತ್ತು ಜಿಯುಜಾಂಗ್ ಗೆ ವಾಪಸು ಹೋಗುವಂತೆ ಮಾಡಿತು. ಆದರೆ ಕಾರ್ಮಿಕರ ಹೋರಾಟಗಳು ಸಶಸ್ತ್ರ ದಂಗೆಗಳಾಗಿ ಬೆಳೆದಿದ್ದ ಕೆಲವು ಪ್ರದೇಶಗಳಲ್ಲಿ ಅವುಗಳನ್ನು ಕ್ರೂರವಾಗಿ ದಮನಗೊಳಿಸಿದ್ದರಿಂದ ಕೆಲವು ಹಿನ್ನಡೆಗಳನ್ನು ಸಹ ಎದುರಿಸಿತು.
ಕೊಮಿಂಟಾಂಗ್ ನ ಪ್ರತಿ-ಕ್ರಾಂತಿಕಾರಿ ಪಾತ್ರದಿಂದಾಗಿ ಕಮ್ಯುನಿಸ್ಟ್ ಮತ್ತ ಕಾರ್ಮಿಕ ನಾಯಕರ ನರಮೇಧ ನಡೆಯಿತು. ಕಮ್ಯುನಿಸ್ಟ್ ಪಕ್ಷ ಮತ್ತು ಸೋವಿಯೆಟ್ ಒಕ್ಕೂಟ ತನ್ನ ವೈರಿ ಎಂಬ ಧೋರಣೆಯನ್ನು ಅಂಗೀಕರಿಸಿತು. ಈ ದಾಳಿಗಳಿಗೆ ಪ್ರತಿರೋಧ ಒಡ್ಡಲು ಕಮ್ಯುನಿಸ್ಟ್ ಪಕ್ಷವು ನಿರ್ಧರಿಸಿತು. ಅದು ಕಾರ್ಷಿಕ ಕ್ರಾಂತಿಯ ಮೇಲೆ ಮತ್ತು ಶರತ್ಕಾಲದ ಕೊಯ್ಲು ದಂಗೆಗಳನ್ನು ಸಂಘಟಿಸುವತ್ತ ಗಮನ ಕೇಂದ್ರೀಕರಿಸಿತು. ಇದರಿಂದಾಗಿ ರೈತರ ಮಧ್ಯೆ ಪಕ್ಷದ ಪ್ರಭಾವ ಮತ್ತು ಪ್ರತಿಷ್ಟೆ ಗಮನಾರ್ಹವಾಗಿ ಹೆಚ್ಚಿತು. ಜೂ ದೆ ಮತ್ತು ಕೆಂಪು ಸೈನ್ಯ ವಿಲೀನವಾಗಿದ್ದರಿಂದ ಸಶಸ್ತ್ರ ಬಲ ಸಹ ಹೆಚ್ಚಾಯಿತು. ಆದರೆ 1927-28ರ ‘ಮಹಾನ್ ಕ್ರಾಂತಿ’ ಎಂದು ಕರೆಯಲಾದ ಈ ಅವಧಿಯ ದಂಗೆಗಳು, ಸಫಲವಾಗಲಿಲ್ಲ. ಕ್ರಾಂತಿಯ ಉಬ್ಬರ ಇಳಿಮುಖವಾಗಿತ್ತು. ಈ ಮಿಲಿಟರಿ ಹಿನ್ನಡೆಗಳು ಮತ್ತು ನಷ್ಟಗಳಿಗೆ, ಯಾವುದೇ (ತೀವ್ರ ಪ್ರತಿಕೂಲದ) ಸಂದರ್ಭಧಲ್ಲೂ ಹಿಮ್ಮೆಟ್ಟದೆ ಇರುವ ಮತ್ತು ನಿರಂತರ ದಾಳಿಯನ್ನೇ ಮಾಡುತ್ತಾ ಹೋಗುವ, ಕ್ರಾಂತಿಕಾರಿ ಮತ್ತು ವಾಸ್ತವ ಪರಿಸ್ಥಿತಿಯನ್ನು ಹೆಚ್ಚು ಅಂದಾಜು ಮಾಡುವ ಕೆಲವು ‘ಎಡ ಕ್ಷಿಪ್ರಕ್ರಾಂತಿ’ ತಪ್ಪುಗಳು ಇದಕ್ಕೆ ಕಾರಣ ಎಂದು ಪಕ್ಷವು ಸ್ವಯಂ-ವಿಮರ್ಶೆಯ ನಂತರ ಗುರುತಿಸಿತು. ಈ ನಷ್ಟಗಳಿದ್ದಾಗ್ಯೂ, ಕ್ರಾಂತಿಕಾರಿ ಪ್ರಭಾವದ ಹಬ್ಬುವಿಕೆ ಮತ್ತು ಗ್ರಾಮೀಣ ಕ್ರಾಂತಿಕಾರಿ ನೆಲೆಗಳ ಸ್ಥಾಪನೆಯಲ್ಲಿ ಮುನ್ನಡೆಯನ್ನೂ ಪಕ್ಷವು ಗುರುತಿಸಿತು.
ಮಾವೋ, ವಿವಿಧ ಕ್ರಾಂತಿಕಾರಿ ನೆಲೆಗಳ ಅನುಭವದ ಆಧಾರದ ಮೇಲೆ 1930ರಲ್ಲಿ – ‘ಕಾರ್ಮಿಕರು ಮತ್ತು ರೈತರ ಸಶಸ್ತ್ರ ಸ್ವತಂತ್ರ ಆಡಳಿತ’, ‘ನಗರಗಳನ್ನು ಗ್ರಾಮೀಣ ಪ್ರದೇಶಗಳಿಂದ ಸುತ್ತುವರಿಯುವುದು’, ಗ್ರಾಮೀಣ ಪ್ರದೇಶಗಳಲ್ಲಿ ಕೆಂಪು ರಾಜಕೀಯ ಅಧಿಕಾರ ಸ್ಥಾಪಿಸಿ ವಿಸ್ತರಿಸುತ್ತಾ ಹೋಗುವುದು’, ‘ಪರಿಸ್ಥಿತಿ ಪಕ್ವವಾದಾಗ ರಾಷ್ಟ್ರೀಯ ರಾಜಕೀಯ ಅಧಿಕಾರ ಕಿತ್ತುಕೊಳ್ಳುವುದು’ – ಮುಂತಾದ ಯೋಚನೆಗಳನ್ನು ಬೆಳೆಸಿದರು.
ಪಕ್ಷವನ್ನು ಬಲಗೊಳಿಸಲು, ಪ್ರಜಾಸತ್ತಾತ್ಮಕ ಮತ್ತು ಸಮಾಜವಾದಿ ಕ್ರಾಂತಿಗಳ ನಡುವಿನ ವ್ಯತ್ಯಾಸವನ್ನು ಮಸುಕುಗೊಳಿಸಿದ – ವ್ಯಕ್ತಿನಿಷ್ಠವಾದ, ವ್ಯಕ್ತಿವಾದ, ಕ್ಷಿಪ್ರಕ್ರಾಂತಿವಾದ, ಎಡ ಮಾರ್ಗಚ್ಯುತಿಗಳು ಮತ್ತು ಹೆಚ್ಚು ಅಂದಾಜು ಮಾಡುವುದು – ಮುಂತಾದವುಗಳ ಹೋರಾಟವನ್ನು ಮುಂದುವರೆಸಲಾಯಿತು. ಮಿಲಿಟರಿ ಪಡೆಗಳ ಮತ್ತು ನಾಯಕತ್ವದ ಮೇಲೆ ಪಕ್ಷದ ರಾಜಕೀಯ ನಾಯಕತ್ವವನ್ನು ಒತ್ತಿ ಹೇಳಲಾಯಿತು. ಕೆಂಪು ಸೈನ್ಯವು, ಪಕ್ಷದ ನಾಯಕತ್ವದಲ್ಲಿ ಕ್ರಾಂತಿಯ ರಾಜಕೀಯ ಕಾರ್ಯಭಾರವನ್ನು ಜಾರಿ ಮಾಡುವ ಸಶಸ್ತ್ರ ಅಂಗ ಎಂದು ಸ್ಪಷ್ಟಪಡಿಸಲಾಯಿತು.
ದೀರ್ಘ ಪಯಣ
ಪಕ್ಷದ ಒಳಗೆ ಸರಿಯಾದ ಮಾರ್ಕ್ಸ್ವಾದಿ-ಲೆನಿನ್ವಾದಿ ಧೋರಣೆಯಲ್ಲಿ ಪಕ್ಷವನ್ನು ಒಯ್ಯಲು ಆಂತರಿಕ ಹೋರಾಟದ ಜತೆಗೆ, ಕೊಮಿಂಟಾಂಗ್ ನ ‘ಸುತ್ತುವರೆದು ದಮನ ನಡೆಸುವ’ ಅಭಿಯಾನದ ವಿರುದ್ಧ ಹೋರಾಟ ನಡೆಸಿ ಹಿಮ್ಮೆಟ್ಟಿಸುವುದನ್ನೂ ಕಮ್ಯುನಿಸ್ಟ್ ಪಕ್ಷವು ಮಾಡಬೇಕಾಯಿತು. ವೈರಿ (ಕೊಮಿಂಟಾಂಗ್) ಪಡೆಗಳು ತನ್ನ (ಕೆಂಪು ಸೈನ್ಯದ) ಪಡೆಗಳನ್ನು ‘ಸುತ್ತುವರೆಯುವುದನ್ನು’ ತಡೆಯಲು ಮತ್ತು ಇನ್ನೊಂದು ಕಡೆ ತನ್ನ ಬಲವನ್ನು ಜಮಾವಣೆ ಮಾಡಿ ಕ್ರೋಡೀಕರಿಸಲು, 1934ರಲ್ಲಿ ಕಮ್ಯುನಿಸ್ಟ್ ಪಕ್ಷ ತನ್ನ ಚಾರಿತ್ರಿಕ ‘ದೀರ್ಘ ಪಯಣ’ವನ್ನು ಆರಂಭಿಸಿತು. ಮೊದಲಿಗೆ, ಪಕ್ಷದ ಎಡ ದುಸ್ಸಾಹಸ ಧೋರಣೆಗಳಿಂದ ಬಹಳ ನಷ್ಟಗಳಾದವು. ಜನವರಿ 1935ರಲ್ಲಿ ನಡೆದ ಪಕ್ಷದ ಪೊಲಿಟ್ ಬ್ಯುರೊದ ವಿಸ್ತೃತ ಸಭೆ, ಈ ತಪ್ಪುಗಳನ್ನು ಸರಿಪಡಿಸಿಕೊಂಡು – ವೈರಿಯ ದುರ್ಬಲ ಸ್ಥಾನಗಳಲ್ಲಿ ದಾಳಿ ಮಾಡುವ, ಬಹಳ ಕ್ಷಿಪ್ರ ಬದಲಾವಣೆಗೆ ಅವಕಾಶ ಇರುವ ಚಲನಶೀಲ ಯುದ್ಧವನ್ನು ಮಾಡುವ ಮತ್ತು ಉತ್ತರಕ್ಕೆ ಸೈನ್ಯವನ್ನು ಸಾಗಿಸುವ ನಿರ್ಧಾರವನ್ನು ಕೈಗೊಂಡಿತು. ಇದು ಪಕ್ಷದ ಚರಿತ್ರೆಯಲ್ಲಿ ಒಂದು ಸರಿಯಾದ ಸಮಯದಲ್ಲಿ ತಿರುಗುಬಿಂದುವಾಗಿ, ಅದರ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಕಾರಣವಾಯಿತು.
ಈ ‘ದೀರ್ಘ ಪಯಣ’ ಒಂದು ದೀರ್ಘ ತಾಳಿಕೆ, ಬದ್ಧತೆ ಮತ್ತು ದೃಢನಿಶ್ಚಯಗಳ ವೀರಗಾಥೆಯಾಗಿತ್ತು. ಅದು ದಾರಿಯುದ್ದಕ್ಕೂ ಕೊಮಿಂಟಾಂಗ್ ಪಡೆಗಳು ಬೆನ್ನಟ್ಟಿ ಬರುವುದರಿಂದ, ದಾರಿಯಲ್ಲಿ ತಡೆಗಟ್ಟುವುದರಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ಹಿಮಾಚ್ಛಾಧಿತ ಪರ್ವತಗಳು, ನದಿಗಳು, ಹುಲ್ಲುಗಾವಲುಗಳು ಮುಂತಾದ ಪ್ರಾಕೃತಿಕ ಅಡೆತಡೆಗಳನ್ನು ಎದುರಿಸಬೇಕಾಗಿತ್ತು. ತೀವ್ರ ಚಳಿ, ಹಸಿವು, ಗಾಯ, ರೋಗಗಳು ಮತ್ತು ಆಂತರಿಕ ಬಿಕ್ಕಟ್ಟಿನ ಸಂಕಟಗಳನ್ನು ಸಹಿಸಿಕೊಳ್ಳಬೇಕಾಗಿತ್ತು. ಇವೆಲ್ಲವನ್ನು ಒಳಗೊಂಡ ಅತ್ಯಂತ ಸಂಕಟಮಯ ಪರಿಸ್ಥಿತಿಯನ್ನು ಸಹಿಸಿಕೊಂಡು, ಕೆಂಪು ಸೈನ್ಯವು ಕ್ರಾಂತಿಯ ವಿಜಯದಲ್ಲಿ ಎಂದೂ ಕುಂದದ ದೃಢ ನಂಬಿಕೆ ಇರಿಸಿ ‘ದೀರ್ಘ ಪಯಣ’ವನ್ನು ಪೂರ್ಣಗೊಳಿಸಿತು. ಈ ‘ದೀರ್ಘ ಪಯಣ’ದಲ್ಲಿ 370 ದಿನಗಳಲ್ಲಿ 12,500 ಕಿ,ಮಿ ಗಳ ದೂರವನ್ನು ಕ್ರಮಿಸಿತು. ಈ ಕಷ್ಟಕರ ಮಹಾ ಕಾರ್ಯದಲ್ಲಿ ಸಾವಿರಾರು ಸಂಗಾತಿಗಳು ಮಡಿದರು. ಆದರೆ ಕೊಮಿಂಟಾಂಗ್ ಪಡೆಗಲ ಸುತ್ತುವರಿಯುವಿಕೆಯನ್ನು ಬೇಧಿಸಿ, 1935ರಲ್ಲಿ ಶಾಂಕ್ಸಿ ಪ್ರಾಂತವನ್ನು ತಲುಪಿತು.
‘ದೀರ್ಘ ಪಯಣ’ದ ಕೊನೆಯಲ್ಲಿ ಕೆಂಪು ಸೈನ್ಯದ 30 ಸಾವಿರ ಸೈನಿಕರು ಉಳಿದಿದ್ದರು. ಇವರು ಕಮ್ಯುನಿಸ್ಟ್ ಪಕ್ಷ ಮತ್ತು ಕೆಂಪು ಸೈನ್ಯದ ಅತ್ಯುತ್ಕೃಷ್ಟ ಸಂಗಾತಿಗಳಾಗಿದ್ದರು. ಅವರು ದಾರಿಯುದ್ದಕ್ಕೂ ಕ್ರಾಂತಿಯ ಬೀಜಗಳನ್ನು ಎಲ್ಲೆಡೆ ಬಿತ್ತಿದರು. ದೀರ್ಘ ಪಯಣ ಚೀನಾದ ಕ್ರಾಂತಿಯಲ್ಲಿ ಒಂದು ತಿರುಗುಬಿಂದು ಮತ್ತು ಚಾರಿತ್ರಿಕ ಪ್ರಾಮುಖ್ಯತೆ ಪಡೆದಿದೆ.
ಕೆಂಪು ಸೈನ್ಯ ಶಾಂಕ್ಸಿಯಲ್ಲಿ ಇದ್ದ ಪಡೆಗಳನ್ನು ಸೇರಿಕೊಂಡಿತು. ಇದು ಜಪಾನಿ ಯುದ್ಧರಂಗದಿಂದ ಬಹಳ ದೂರವಿರಲಿಲ್ಲ. ಜಪಾನಿನೊಂದಿಗೆ ಯುದ್ಧದಲ್ಲಿ ಸದ್ಯ್ಯದಲ್ಲೇ ದೇಶ ಹತ್ತಿ ಉರಿಯುವ ಹೊಸ್ತಿಲಲ್ಲಿ ಇತ್ತು.
(ಮುಂದಿನ ವಾರ: ಎರಡನೆಯ ಹಂತ – ಜನತಾ ಪ್ರಜಾಪ್ರಭುತ್ವದತ್ತ)
ಅನುವಾದ : ವಸಂತರಾಜ ಎನ್.ಕೆ