ಕಾವೇರಿ ಜಲಾಶಯ: ಗಣಿಗಾರಿಕೆಯನ್ನು ಕೂಡಲೇ ನಿಷೇಧಿಸಿ-ಅಕ್ರಮ ಗಣಿಗಾರಿಕೆಯ ತನಿಖೆಗೆ ಲೋಕಾಯುಕ್ತಕ್ಕೆ ವಹಿಸಿ

ಕಾವೇರಿ ಜಲಾಶಯಕ್ಕೆ ಧಕ್ಕೆ ತರುವ ಗಣಿಗಾರಿಕೆಯನ್ನು ಈ ಕೂಡಲೇ ನಿಷೇಧಿಸಲು ಮತ್ತು ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ದಕ್ಷಿಣ ಕರ್ನಾಟಕದ 6-7 ಜಿಲ್ಲೆಗಳ ಜಲಮೂಲವಾದ ಕಾವೇರಿ ಜಲಾಶಯವು, ಜಲಾಶಯದ ವ್ಯಾಪ್ತಿಯಲ್ಲಿನ ಅಕ್ರಮ ಗಣಿಗಾಣಿಕೆಯಿಂದ ಅಭದ್ರತೆಗೊಳಗಾಗುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ.

ಜಲಾಶಯದ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿರುವ ಎಲ್ಲಾ ರೀತಿಯ ಗಣಿಗಾರಿಕೆಯನ್ನು ಈ ಕೂಡಲೇ ನಿಲ್ಲಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿಯು, ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.

ಸದರಿ ಜಲಾಶಯಕ್ಕೆ ಅದರಿಂದ ಅಪಾಯವಿದೆಯೆಂದು ತಜ್ಞರ ಸಮಿತಿಗಳು ಹೇಳಿದಾಗಲೂ ಸರಕಾರದ ಶಾಮೀಲಾತಿಯೊಂದಿಗೆ ಅಕ್ರಮ ಚಟುವಟಿಕೆ ಮುಂದುವರೆದಿರುವುದು ಅಕ್ಷಮ್ಯವಾಗಿದೆ.

ಇದು ಸರಕಾರಗಳಿಗೆ ಜನತೆಯ ಹಾಗೂ ರಾಜ್ಯದ ಬಗೆಗೆ ಇರುವ ಖಾಳಜಿಯ ಕೊರತೆಯನ್ನು ಎತ್ತಿ ತೋರುತ್ತದೆ.

ಕಾವೇರಿ ಜಲಾಶಯವು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಜಲ ಮೂಲವಾಗಿದೆ. ದಶ ಲಕ್ಷಾಂತರ ರೈತ ಕುಟುಂಬಗಳ ಜೀವನಾಧಾರವಾಗಿದೆ‌. ಬೆಂಗಳೂರು, ಮೈಸೂರು ನಗರಗಳು ಸೇರಿದಂತೆ ಸುಮಾರು ಎರಡು ಕೋಟಿಗೂ ಅಧಿಕ ಜನರು ಇದರ ಹಲವು ವಿಧದ ಫಲಾನುಭವಿಗಳಾಗಿದ್ದಾರೆ.

ಜಲಾಶಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಯು ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿದ್ದರೂ, ಅಕ್ರಮವಾಗಿ, ಸರಕಾರದ ಕೃಪಾಕಟಾಕ್ಷದಿಂದ, ಅವ್ಯಾಹತವಾಗಿ ಮುಂದುವರೆದಿದೆ. ಒಂದು ನೂರು ಕಂಪನಿಗಳಿಗೆ ಪರವಾನಿಗಿ ನೀಡಲಾಗಿದ್ದರೂ ಸಾವಿರಾರು ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇವುಗಳಲ್ಲಿ ಬಹುತೇಕವುಗಳಿಗೆ ಪರವಾನಿಗಿ ಇಲ್ಲಾ! ದಂಡ ವಿಧಿಸಲಾಗಿದೆ. ಆದಾಗಲೂ ಅವು ನಡೆಯುತ್ತಲೇ ಇವೆ. ಇದು ಹೇಗೆ ಸಾಧ್ಯ? ಮುಖ್ಯಮಂತ್ರಿಗಳು, ಈ ಕುರಿತು ಬಹಿರಂಗವಾಗಿ ಸ್ಪಷ್ಠೀಕರಣ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.

ಸರಕಾರದ ಕೆಲ ಪ್ರಭಾವಿ ಅಧಿಕಾರವಲಯದವರು, ವಿರೋದ ಪಕ್ಷಗಳ ಕೆಲವರ ಕೈವಾಡಗಳಿವೆಯೆಂಬ ಆರೋಪಗಳಿವೆ. ಸಾವಿರಾರು ಕೋಟಿ ರೂಗಳ ಭಾರೀ ಹಗರಣಗಳಿವೆಯೆನ್ನಲಾಗಿದೆ.

ಆದ್ದರಿಂದ ಈ ಕೂಡಲೇ ಈ ಅಕ್ರಮ ಗಣಿಗಾರಿಕೆಯನ್ನು ಪೂರ್ಣವಾಗಿ ನಿಲ್ಲಿಸಬೇಕು. ಸದರಿ ಅಕ್ರಮ ಗಣಿಗಾರಿಕೆಯನ್ನು ಲೋಕಾಯುಕ್ತ ತನಿಖೆಗೆ ವಹಿಸ ಬೇಕೆಂದು ಸಿಪಿಐಎಂ ಆಗ್ರಹಿಸುತ್ತದೆ. ಪರವಾನಿಗಿ ಹೊಂದಿದ ಕಲ್ಲು ಗಣಿಗಳು ಕೂಡಾ, ಪರವಾನಿಗಿ ಮೀರಿ ಅಕ್ರಮವಾಗಿ, ಭಾರೀ ಬ್ಲಾಸ್ಟಿಂಗ್ ಗಳಿಗೆ ಮುಂದಾಗುತ್ತಿವೆ ಯೆನ್ನಲಾಗಿದೆ.

ಈ ಎಲ್ಲಾ ಭಾರೀ ಅಕ್ರಮ ಬ್ಲಾಸ್ಟಿಂಗ್ ಗಳಿಂದ ಸುತ್ತ-ಮುತ್ತಲ ಗ್ರಾಮಗಳ ಮನೆಗಳಲ್ಲಿ ಬಿರುಕುಗಳುಂಟಾಗಿ ನಾಗರೀರಕರ ವಸತಿಗೆ ಧಕ್ಕೆ ಉಂಟುಮಾಡಿವೆ. ಕೃಷಿ ಮತ್ತು ಕುಡಿಯುವ ನೀರಿಗಾಗಿ ಕೊರೆಸಲಾದ ಬೋರ್ ವೆಲ್ ಗಳು ಬತ್ತಿ ಹೋಗಿವೆ. 600-800 ಅಡಿ ಆಳಕ್ಕಿಳಿದರೂ ಜಲ ಮೂಲವಿಲ್ಲದಂತಾಗಿ ಪ್ರದೇಶ ಬರಡಾಗುವಂತಾಗಿದೆ.

ಇವುಗಳನ್ನು ನಿಲ್ಲಿಸುವ ಜೊತೆಗೆ ಅಲ್ಲಿಯ ಜನತೆಗುಂಟಾದ ನಷ್ಠವನ್ನು ಗಣತಿ ಮಾಡಿಸಿ, ಪರಿಹಾರವನ್ನು ಸರಕಾರವೇ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ. ಮಾತ್ರವಲ್ಲಾ, ರಾಜ್ಯದ ಎಲ್ಲಾ ರೀತಿಯ ಗಣಿಗಾರಿಕೆಯನ್ನು ರಾಷ್ಟ್ರೀಕರಿಸಿ ಸಾರ್ವಜನಿಕ ರಂಗದ ಸಂಸ್ಥೆಗಳ ಮೂಲಕ ಮುನ್ನಡೆಸಲು ವಿನಂತಿಸುತ್ತದೆ.

ವಂದನೆಗಳೊಂದಿಗೆ

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *