ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿಗೆ ಸೇರಿದ ಗಂಗಾವತಿ ಶಾಸಕ ಪರಣ್ಣ ಮನವಳ್ಳಿಯವರು ಸೇರಿ, ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ದಶಲಕ್ಷಾಂತರ ಫಲಾನುಭವಿಗಳಾದ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳು, ಬಾಣಂತಿಯರು, ಗರ್ಭಿಣಿ ಮಹಿಳೆಯರಿಗೆ ಪ್ರತಿದಿನ ಕೊಡಲಾಗುವ ಮೊಟ್ಟೆಗಳನ್ನು ವಿತರಿಸುವ ಟೆಂಡರ್‌ನಲ್ಲಿ ತಮಗೆ ಕೋಟ್ಯಾಂತರ ರೂಪಾಯಿಗಳ ಕಮಿಷನ್ ನೀಡುವವರಿಗೆ ಗುತ್ತಿಗೆ ನೀಡುವ ಭ್ರಷ್ಠತೆಯ ವಿಚಾರ ಮಾದ್ಯಮಗಳಲ್ಲಿ ಬಹಿರಂಗ ಗೊಂಡಿದೆ.
ಅದೇ ರೀತಿ, ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವ ಪೌಷ್ಠಿಕ ಆಹಾರ ಮತ್ತು ಮೊಟ್ಟೆಗಳ ವಿತರಣೆಯಲ್ಲೂ ಆಯಾ ಕೇಂದ್ರಗಳಿಗೆ ಅಲ್ಲಿನ ಫಲಾನುಭವಿಗಳನ್ನನುಸರಿಸಿ ನೀಡದೇ ಕಡಿಮೆ ನೀಡಲಾಗುತ್ತಿರುವ ವಿಚಾರವೂ ಇಂತಹ ಭ್ರಷ್ಠತೆಯ ಮೂಲವಾಗಿದೆ. ಪ್ರಶ್ನಿಸಿದ ಅಂಗನವಾಡಿ ನೌಕರರನ್ನು ಅಧಿಕಾರಿ ವಲಯ ಬೆದರಿಸುತ್ತಿರುವುದು ಗುಟ್ಟಾದ ವಿಚಾರವಾಗಿ ಉಳಿದಿಲ್ಲ. ಈ ಎಲ್ಲದರಿಂದ ರಾಜ್ಯದ ಜನತೆ ತೀವ್ರವಾಗಿ ಆತಂಕಿತರಾಗಿದ್ದಾರೆ.
ಬಡಜನತೆಯ ಅಪೌಷ್ಠಿಕತೆಯ ವಿಚಾರದಲ್ಲಿ ಸಚಿವರ ಹಾಗೂ ಶಾಸಕರ ಈ ಭ್ರಷ್ಠತೆಯ ನಡವಳಿಕೆ ತೀವ್ರ ಖಂಡನೀಯವಾಗಿದೆ. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ಈ ಕೂಡಲೆ ಆ ಇಬ್ಬರ ರಾಜಿನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಮತ್ತು ಈ ಭ್ರಷ್ಠಾಚಾರದ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ ಜನತೆಗೆ ನಿಜವೇನೆಂದು ಬಹಿರಂಗಪಡಿಸಬೇಕೆಂದು ಬಲವಾಗಿ ಒತ್ತಾಯಿಸುತ್ತದೆ.
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ