ಜನವಿರೋಧಿ ಆಡಳಿತ ಹಾಗೂ ಅಧಿಕಾರಕ್ಕಾಗಿ ಬಿಜೆಪಿಯೊಳಗೆ ಕಚ್ಚಾಟ

ಕಳೆದ ಒಂದೆರಡು ತಿಂಗಳಿನಿಂದ ಬಿಜೆಪಿ ಪಕ್ಷದೊಳಗೆ ಆಂತರಿಕವಾಗಿ ನಡೆಯುತ್ತಿದ್ದ ಅಧಿಕಾರದ ತೆರೆಮರೆಯ ಕಚ್ಚಾಟಕ್ಕೆ ನೆನ್ನೆದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ತಮ್ಮ ಸ್ಥಾನಕ್ಕೆ  ರಾಜಿನಾಮೆ ನೀಡುವುದರೊಂದಿಗೆ ತೆರೆ ಎಳೆದಿದ್ದಾರೆ.

ಕಳೆದ ಜೆಡಿ(ಎಸ್‌)-ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ – ಜೆಡಿ(ಎಸ್) ಪಕ್ಷಗಳ ಅಸಂತೃಪ್ತರನ್ನು ಸೆಳೆಯುವ ಮೂಲಕ ಉರುಳಿಸಿದ ಬಿಜೆಪಿ ಮತ್ತು ಯಡಿಯೂರಪ್ಪರವರು, ಅಕ್ರಮವಾಗಿ, ಪ್ರಜಾಪ್ರಭುತ್ವ ವಿರೋಧಿಯಾಗಿ ಮತ್ತು ಕೇಂದ್ರ ಸರಕಾರ ಹಾಗೂ ರಾಜ್ಯಪಾಲರ ಕಛೇರಿಯ ಅಧಿಕಾರಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ವಹಿಸಿಕೊಂಡರು.

ಅದಾಗಲೇ, ಬಿಜೆಪಿಯೊಳಗೆ ಭುಗಿಲೆದ್ದಿದ್ದ ಅಧಿಕಾರಕ್ಕಾಗಿನ ಕಚ್ಚಾಟವನ್ನು ಶಮನ ಮಾಡುವ ಮತ್ತು ಆರ್‌ಎಸ್‌ಎಸ್‌ ಹಿಡಿತವನ್ನು  ಬಲಪಡಿಸುವ ತಂತ್ರದ ಭಾಗವಾಗಿ ಹೈಕಮಾಂಡ್ ಶ್ರೀ ಯಡಿಯೂರಪ್ಪರವರಿಗೆ ಎರಡು ವರ್ಷಗಳ ಅಧಿಕಾರದ ಒಡಂಬಡಿಕೆ ಮಾಡಿಕೊಟ್ಟಿತ್ತು. ಆದ್ದರಿಂದಲೇ ಬಿಜೆಪಿಯೊಳಗೆ ಇನ್ನೇನು ಮತ್ತೆರಡು ತಿಂಗಳಲ್ಲಿ ಶ್ರೀ ಯಡಿಯೂರಪ್ಪರವರು ಒಡಂಬಡಿಕೆಯಂತೆ ರಾಜಿನಾಮೆ ನೀಡುವುದರಿಂದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆ ಮುನ್ನೆಲೆಗೆ ಬಂದು ರಾಜ್ಯದಲ್ಲಿ ಜನತೆಯ ಮಟ್ಟಿಗೆ ಅತ್ಯಂತ  ಸಂಕಷ್ಟದ ಸಮಯ (ಕೋವಿಡ್-19) ದಲ್ಲಿ ಅಸ್ಥಿರತೆ ಉಂಟಾಗುವಂತಾಯಿತು. ಯಾರ ಮೇಲೆ ಯಾರ ಹಿಡಿತವೂ ಇಲ್ಲವೆಂಬಂತೆ ಅರಾಜಕತೆ ಉಂಟಾಗಿ ಕೋವಿಡ್ ಸೋಂಕಿತರು ಸಾವಿರಾರು ಸಂಖ್ಯೆಯಲ್ಲಿ ಸಾವಿಗೀಡಾಗ ಬೇಕಾಯಿತು.

ಕರ್ನಾಟಕ ರಾಜ್ಯ ಕೋವಿಡ್ ಎರಡನೆ ಅಲೆಯಲ್ಲಿ ಸಿಲುಕಿ ತತ್ತರಿಸುತ್ತಿರುವಾಗ, ಬಿಜೆಪಿಯ ಕೆಲ ಶಾಸಕರು, ಸಂಘ ಪರಿವಾರದ  ಜನರ ಆರೋಗ್ಯ ಸಂಬಂಧಿ, ಔಷಧಿ, ಹಾಸಿಗೆ, ಆಮ್ಲಜನಕ, ಲಸಿಕೆಗಳನ್ನು ಕಾಳಸಂತೆಯಲ್ಲಿ ಮಾರಾಟಮಾಡಿ ಲೂಟಿಯಲ್ಲಿ ತೊಡಗಿದ್ದಾಗ,  ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಅಲುಗಾಡುವಿಕೆಯ ಕಂಪನದಲ್ಲಿದ್ದರು. ಬಹುತೇಕ ಮುಖಂಡರು ಮುಖ್ಯಮಂತ್ರಿ ಗದ್ದುಗೆ ಹಿಡಿಯುವ ಕನಸಿನಲ್ಲಿ ಲಾಭಿಯಲ್ಲಿ ನಿರತರಾಗಿದ್ದರು.

ಈ ಕುರಿತ ಜನತೆಯ ಒತ್ತಾಯಗಳು ಮತ್ತು ಆಕ್ರಂಧನಕ್ಕೆ ಅವರ ಕಿವಿಗಳು ಕಿವುಡಾಗಿದ್ದವು‌. ಜನತೆಯ ಸಂಕಷ್ಠಗಳು, ಸಾವುಗಳು ಅದಾವುಗಳು ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಬಹುತೇಕ ಶಾಸಕರುಗಳಿಗೆ ಈ ಅವಧಿಯಲ್ಲಿ ಬೇಕಿರಲಿಲ್ಲ. ಬದಲಿಗೆ, ಒಡಂಬಡಿಕೆಯಂತೆ ಶ್ರೀ ಯಡಿಯುರಪ್ಪರವರ ಅವಧಿ ಮುಗಿಯುತ್ತಿದೆ. ಮತ್ತಾರು ಮುಂದಿನ ಮುಖ್ಯಮಂತ್ರಿಯಾಗಬೇಕು? ಲಿಂಗಾಯತ ಸಮುದಾಯದಿಂದಲಾ? ಒಕ್ಕಲಿಗ ಸಮುದಾಯದಿಂದಲಾ ? ಹಿಂದುಳಿದ ಸಮುದಾಯ ಅಥವಾ ದಲಿತ ಸಮುದಾಯದಿಂದಲಾ ? ಸಂಘ ಪರಿವಾರ ಹಾಗೂ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು, ಲಾಭಿಯಲ್ಲಿ, ಹೈಕಮಾಂಡ್ ಓಲೈಕೆಯಲ್ಲಿ ಜನತೆಯನ್ನು ಸಂಕಷ್ಠಕ್ಕೆ ಸಿಲುಕಿಸಿ, ಅಧಿಕಾರದ ರಾಜಕಾರಣದಲ್ಲಿ ತೊಡಗಿದ್ದು ನಾಚಿಕೆಗೇಡಿನ ವಿಚಾರವಾಗಿತ್ತು. ಹೈಕಮಾಂಡ್ ಕೂಡಾ ಜನರ ಸಂಕಷ್ಟಕ್ಕೆ ಮುಂದಾಗಿ ಎಂದು ಹೇಳದೇ, ಅದಕ್ಕೆ ಕುಮ್ಮಕ್ಕು ಕೊಡುವ ರೀತಿಯಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದು ಮತ್ತಿನ್ನೊಂದು ನಾಚಿಕೆ ಗೇಡಿನ ವಿಚಾರವಾಗಿದೆ.

ಬಿಜೆಪಿ ಶಾಸಕರಿಗೆ ಶಾಸಕಾಂಗ ಪಕ್ಷದ ಮುಖಂಡನ ಆಯ್ಕೆಯ ಅಧಿಕಾರವಿಲ್ಲ

ಮುಖ್ಯಮಂತ್ರಿಯ ಅಥವಾ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೆಂಬುದು ಶಾಸಕರ ಅಧಿಕಾರವಾದರೂ, ಬಿಜೆಪಿಯ ಶಾಸಕರಿಗೆ ಅಂತಹ ಅಧಿಕಾರ ಮತ್ತು  ಶಾಸಕಾಂಗ ಪಕ್ಷದಲ್ಲಿ ಅಂತಹ ಯಾವ ಪ್ರಜಾಪ್ರಭುತ್ವವು ಇಲ್ಲವೆಂಬುದು ಈ ಒಟ್ಪು ಪ್ರಹಸನದಲ್ಲಿ ಮತ್ತೊಮ್ಮೆ ಬಯಲಾಗಿದೆ. ಎಲ್ಲವೂ ಬಿಜೆಪಿ ಹೈಕಮಾಂಡ್ ಮತ್ತು ಅದರ ನಿರ್ದೇಶಕ ಆರ್‌ಎಸ್‌ಎಸ್‌ ನಿರ್ಧರಿಸುತ್ತದೆ.

ಯಡಿಯೂರಪ್ಪರವರ ಸರಕಾರ ಮಾಡಿದ ಘನಂದಾರಿ ಕೆಲಸ

ಎರಡು ವರ್ಷಗಳನ್ನು ಪೂರೈಸಿದ ಯಡಿಯೂರಪ್ಪರವರ ಸರಕಾರ ಮಾಡಿದ ಭಾರಿ ಘನಂದಾರಿ ಕೆಲಸವೆಂದರೆ, ಜನತೆಯನ್ನು ತೀವ್ರ ಸಂಕಷ್ಢಕ್ಕೀಡು ಮಾಡಿ ಅವರ ಬದುಕುವ ಹಕ್ಕಿನ ಮೇಲೆ ಧಾಳಿ ಮಾಡುವುದು ಮತ್ತು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ವ್ಯಾಪಕವಾಗಿ ರಾಜ್ಯವನ್ನು ತೆರೆದಿರುವುದಾಗಿದೆ.

ಕೇಂದ್ರದಲ್ಲಿ ತಮ್ಮದೇ ಪಕ್ಷದ ಆಡಳಿತವಿದ್ದಾಗಲೂ ರಾಜ್ಯ ಅತೀವೃಷ್ಠಿ ಹಾಗೂ ಪ್ರವಾಹ, ನೆರೆ ಹಾವಳಿಗೆ ತುತ್ತಾಗಿದ್ದರೂ ಅಗತ್ಯ ನೆರವನ್ನು ಪಡೆಯಲಾಗದೇ ಕಳೆದ ವರ್ಷ ರಾಜ್ಯವನ್ನು ಸಂಕಷ್ಟದಲ್ಲಿಯೇ ಈ ಅಧಿಕಾರ ಉಳಿಕೆಗಾಗಿ ಶ್ರೀ ಯಡಿಯೂರಪ್ಪರವರು  ಬಿಟ್ಟು ಬಿಟ್ಟಿದ್ದರು.

ಇದರಿಂದ ರಾಜ್ಯವು ಲಕ್ಷಾಂತರ ಕೋಟಿ ರೂ.ಗಳ ಭಾರಿ ನಷ್ಟ ಹಾಗೂ ಅದರಿಂದಾಗಿ ಹಲವಾರು ಸಾಲಬಾಧಿತ ರೈತರ ಆತ್ಮಹತ್ಯೆಗಳು ಉಂಟಾದವು. ರೈತರ, ಕೃಷಿಕೂಲಿಕಾರರ ಕಸುಬುದಾರರ, ಕಾರ್ಮಿಕ ಬಡವರ ಇದ್ದ ಬದ್ದ ಆಸ್ತಿಗಳೆಲ್ಲಾ ಸಾಲಕ್ಕಾಗಿ ಶ್ರೀಮಂತರ ಪಾಲಾದವು.

ಈಗಲೂ ರಾಜ್ಯ ಮುಂಗಾರು ಅತೀವೃಷ್ಠಿ, ಪ್ರವಾಹ ಹಾಗೂ ನೆರೆಯ ಸಂಕಷ್ಠದಲ್ಲಿದೆ. ಅದೇ ರೀತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೊಬ್ಬರು ಮೊಟ್ಟೆ ಹಗರಣದಲ್ಲಿ ಸಿಲುಕಿರುವುದು ಬಯಲಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಅಸ್ಥಿರತೆ ಸಂಕಷ್ಠದಲ್ಲಿರುವ ಜನತೆಯನ್ನು ಮತ್ತಷ್ಠು ಸಂಕಷ್ಟಕ್ಕೆ ದೂಡಲಿದೆ.

ವ್ಯಾಪಕವಾದ ವಿರೋಧದ ನಡುವೆಯೂ ರಾಜ್ಯದ ವ್ಯವಸಾಯವನ್ನು ಮತ್ತು ಫಲವತ್ತಾದ ಜಮೀನುಗಳನ್ನು ಹಾಗೂ ಹೈನುಗಾರಿಕೆ, ಕುರಿ ಸಾಕಾಣೆ, ಕೋಳಿ ಸಾಕಾಣೆ ಮುಂತಾದ ಉಪಕಸುಬುಗಳನ್ನು, ಮೀನುಗಾರಿಕೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುವ ಮತ್ತು ದಲಿತರು, ಅಲ್ಪಸಂಖ್ಯಾತರು ಮುಂತಾದವರ ಅಸಹಾರದ ಹಕ್ಕಿನ ಮೇಲೆ ದಾಳಿ ಮಾಡುವ ಜನ ವಿರೋಧಿ ಕೃಷಿ ಕಾಯ್ದೆಗಳು, ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಕಾರ್ಮಿಕರನ್ನು ರೈತರನ್ನು ಬೀದಿಗೆ ದೂಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಗ್ರಾಹಕರನ್ನು ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳು ಮತ್ತು ರಾಜ್ಯದ ಕಾರ್ಮಿಕರನ್ನು ಯೆಥೇಚ್ಛವಾಗಿ ಲೂಟಿಗೊಳಪಡಿಸುವ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಜಾರಿ, ಕನ್ನಡ ಹಾಗೂ ಸಾಮಾನ್ಯ ಜನತೆಯ ಮೇಲೆ ದಾಳಿ ಮಾಡಲಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಲ್ಲಿ ಶ್ರೀ ಯಡಿಯೂರಪ್ಪರವರ ಸರಕಾರ ತೊಡಗಿ ತನ್ನ ಜನ ವಿರೋಧಿತನವನ್ನು ಬಯಲುಗೊಳಿಸಿಕೊಂಡಿತ್ತು.

ಚಳುವಳಿಯನ್ನು ಮುನ್ನಡೆಸಿ ಪ್ರಜಾಪ್ರಭುತ್ವ ರಕ್ಷಿಸಲು ಜನತೆಗೆ ಸಿಪಿಐ(ಎಂ) ಮನವಿ:

ಮುಂಬರುವ ಮುಖ್ಯಮಂತ್ರಿಗಳು ಇದಕ್ಕೆ ಭಿನ್ನವಾಗಿರುವುದಂತೂ ಖಂಡಿತಾ ಇರಲಿಕ್ಕಿಲ್ಲ. ರಾಜ್ಯದ ಜನತೆ ತನ್ನ ಸಂಕಷ್ಟ ಹಾಗೂ ಬದುಕುವ ಹಕ್ಕನ್ನು ಮತ್ತು ಪ್ರಜಾಸತ್ತೆಯನ್ನು ಉಳಿಸಿಕೊಳ್ಳಲು ಚಳುವಳಿಯನ್ನು ಮುನ್ನಡೆಸುವಂತೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮನವಿ ಮಾಡುತ್ತದೆ.

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *