ಪ್ರಕಾಶ್ ಕಾರಟ್
ಅಂದರೆ ವಸ್ತುನಿಷ್ಠ ಸಂಗತಿಗಳಿಗಿಂತ ಭಾವನಾತ್ಮಕ ಮತ್ತು ವೈಯಕ್ತಿಕ ನಂಬಿಕೆಗಳೇ ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ ಎಂದು ಬಲವಾಗಿ ನಂಬಿರುವ ಈ ಸರಕಾರ ವಾಸ್ತವತೆ ಮತ್ತು ಸತ್ಯಾಂಶಗಳನ್ನು ಉಪೇಕ್ಷಿಸಿ ತನ್ನದೇ ಆದ ಕಥನಗಳನ್ನು ಕಟ್ಟುತ್ತಿದೆ. ಲಸಿಕೆಗಳು, ಅಥವಾ ಆಮ್ಲಜನಕ ಕೊರತೆಯಿಂದ ಸಾವುಗಳು ಅಥವಾ ಕೋವಿಡ್ ಸಾವುಗಳ ನಿಜವಾದ ಸಂಖ್ಯೆ – ಈ ಯಾವುದೇ ವಿಚಾರದಲ್ಲಿ ಮೋದಿ ಸರ್ಕಾರ ಮಾನವ ಜೀವಕ್ಕೆ ಕನಿಷ್ಠ ಗೌರವವನ್ನೂ ಕೊಡದಿರುವ ಅಸಹ್ಯ ಧೋರಣೆಯನ್ನು ತೋರಿಸುತ್ತದೆ. ಸಮಸ್ಯೆಯಿದೆ ಎಂದು ನಾವು ಗುರುತಿಸದಿದ್ದರೆ ಸಮಸ್ಯೆಯೇ ಇಲ್ಲವೆನ್ನುವುದು ಯಾವುದೇ ಸರ್ವಾಧಿಕಾರಶಾಹೀ ಸರ್ಕಾರದ ವಿಕೃತ ವಾದವಾಗಿರುತ್ತದೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ವಾರದ ಕಲಾಪಗಳೇ ನರೇಂದ್ರ ಮೋದಿ ಸರ್ಕಾರದ ಗುಣವನ್ನು ಬಯಲು ಮಾಡಿದೆ. ಕೆಲವೇ ದಿನಗಳಲ್ಲಿ ಸರ್ಕಾರ ಸಂಸತ್ತಿನಲ್ಲಿ ಎರಡು ಹಸಿ ಸುಳ್ಳುಗಳನ್ನು ದಾಖಲಿಸಿತು. ಇಸ್ರೇಲ್‌ನ ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಭಾರತದಲ್ಲಿ ಬೇಹುಗಾರಿಕೆಗೆ ಬಳಸಿಲ್ಲ ಹಾಗೂ ‘ಯಾವುದೇ ಅಧಿಕೃತ ಗೂಢಚರ್ಯೆ ನಡೆದೇ ಇಲ್ಲ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಘಂಟಾಘೋಷವಾಗಿ ಹೇಳಿದ್ದು ಮೊದಲ ಪ್ರಕರಣ. ಆಮ್ಲಜನಕ ಕೊರತೆಯಿಂದ ರೋಗಿಗಳು ಮೃತಪಟ್ಟಿರುವ ಬಗ್ಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ವರದಿ ಬಂದಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದ್ದು ಎರಡನೆಯದು. ಈ ಎರಡು ಅಪ್ಪಟ ಸುಳ್ಳುಗಳು ಹಾಗೂ ಅವುಗಳ ಅಸಲಿ ಸ್ವರೂಪವು ಮೋದಿ ಸರ್ಕಾರದ ಸರ್ವಾಧಿಕಾರಶಾಹೀ ಧೋರಣೆ ಮತ್ತು ಸಂಸತ್ತು ಹಾಗೂ ಜನತೆಯ ಬಗ್ಗೆ ಹೊಂದಿರುವ ಅದರ ತಿರಸ್ಕಾರದ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ.
ವಾಸ್ತವತೆಯನ್ನು ನಿರಾಕರಿಸಿ ಅದರ ಬಗ್ಗೆ ಸುಳ್ಳು ಹೇಳುವುದು ಈ ಸರ್ಕಾರದ ಎಂದಿನ ನಡೆಯಾಗಿದೆ. ದೇಶ ಕೋವಿಡ್-ತಡೆ ಲಸಿಕೆಯ ಕೊರತೆಯನ್ನು ಎದುರಿಸುತ್ತಿರುವಾಗ, ಲಸಿಕೆ ಕೊರತೆ ಇಲ್ಲವೇ ಇಲ್ಲ ಎಂದು ಸರ್ಕಾರ ಹೇಳುತ್ತಿದೆ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಆರೋಪ ಮಾಡುತ್ತಿದೆ. ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಅಥವಾ ಜನರಿಗೆ ಲಸಿಕೆ ಹಾಕುವಲ್ಲಿ ಶುದ್ಧ ಅದಕ್ಷತೆ ತೋರುತ್ತಿದೆ ಎಂದು ರಾಜ್ಯ ಸರ್ಕಾರಗಳು ದೂರುತ್ತಿವೆ.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಕಂಪೆನಿಗಳು ಉತ್ಪಾದಿಸಿದ ಲಸಿಕೆಗಳ ಡೋಸ್ ಹಾಗೂ ಜನರಿಗೆ ಹಾಕಲು ಲಭ್ಯವಿರುವ ಲಸಿಕೆ ಬಗ್ಗೆ ಸರ್ಕಾರ ಸಂಸತ್ತಿನಲ್ಲಿ ಮೂರು ಭಿನ್ನವಾದ ಲೆಕ್ಕ ನೀಡಿದೆ. ವ್ಯಾಕ್ಸಿನ್ ತಯಾರಿಕೆ ವೇಗ ಹೆಚ್ಚಿಲ್ಲ ಹಾಗೂ ಜನರಿಗೆ ನೀಡಲು ಲಭ್ಯವಿರುವ ಲಸಿಕೆಯ ಪ್ರಮಾಣವನ್ನು ಕೇಂದ್ರ ಸರ್ಕಾರ ದೊಡ್ಡದು ಮಾಡಿ ತೋರಿಸುತ್ತಿದೆ ಎನ್ನುವುದು ವಾಸ್ತವ ಸಂಗತಿ.
ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ವಾಸ್ತವಕ್ಕಿಂತ ಕಡಿಮೆ ಪ್ರಮಾಣದಲ್ಲಿ ತೋರಿಸಲಾಗುತ್ತಿದೆ ಎನ್ನುವುದನ್ನೂ ಸರ್ಕಾರ ನಿರಾಕರಿಸುತ್ತಿದೆ. ಭಾರತದಲ್ಲಿ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಸರ್ಕಾರಿ ಮಾಹಿತಿಗಿಂತ ಕನಿಷ್ಠ ಹತ್ತು ಪಟ್ಟು ಹೆಚ್ಚಿದೆ ಎನ್ನುವುದನ್ನು ಅಧ್ಯಯನಗಳು ಸ್ಪಷ್ಟಪಡಿಸಿವೆ.
ನಂಬಲರ್ಹ ದತ್ತಾಂಶಗಳ ಕೊರತೆಯಿಂದ ಅಥವಾ ತಪ್ಪು ಮಾಹಿತಿಯಿಂದ ಸರ್ಕಾರ ಹೀಗೆ ಹೇಳುತ್ತಿಲ್ಲ ಎನ್ನುವುದಕ್ಕೆ ಕೋವಿಡ್ ಸಾಂಕ್ರಾಮಿಕತೆಯನ್ನು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ನಿರ್ವಹಿಸಿದ ಬಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದೇ ಸಾಕ್ಷಿಯಾಗಿದೆ. ಮುಂಗಾರು ಅಧಿವೇಶನ ಆರಂಭವಾಗುವುದಕ್ಕೂ ಕೆಲ ದಿನಗಳ ಮುಂಚೆ, ಜುಲೈ 15 ರಂದು ವಾರಾಣಸಿಯಲ್ಲಿ ಮಾತನಾಡಿದ್ದ ಮೋದಿ, ಉತ್ತರ ಪ್ರದೇಶ ಸರ್ಕಾರದ ಕ್ರಮ ‘ಸಾಟಿಯಿಲ್ಲದ್ದು’ ಎಂದಿದ್ದರು.
ಉತ್ತರ ಪ್ರದೇಶದಲ್ಲಿ ಸಾಂಕ್ರಾಮಿಕತೆಯ ಎರಡನೇ ಅಲೆಯನ್ನು ಎದುರಿಸುವಲ್ಲಿ ಅಲ್ಲಿನ ಸರ್ಕಾರ ತೀವ್ರವಾಗಿ ವಿಫಲವಾಗಿದೆ. ಗಂಗಾ ನದಿಯಲ್ಲಿ ಶವಗಳು ತೇಲಿದ್ದು, ನದಿ ದಂಡೆಗಳಲ್ಲಿ ನೂರಾರು ಶವಗಳನ್ನು ಹೂತಿದ್ದು, ಒಂದಾದ ಮೇಲೆ ಒಂದು ಹಳ್ಳಿಯಲ್ಲಿ ಮಾರಕ ವೈರಸ್ ಕಾಡುತ್ತಿದ್ದರೂ ಚಿಕಿತ್ಸೆಯೇ ದೊರಕದ ಭೀಕರ ವರದಿಗಳು ಪ್ರಕಟವಾಗಿದ್ದವು. ಇವೆಲ್ಲವನ್ನು ಸಾಂಕ್ರಾಮಿಕತೆಗೆ ಆದಿತ್ಯನಾಥ್ ಸರ್ಕಾರದ ‘ಅಭೂತಪೂರ್ವ’ ಸ್ಪಂದನೆ ಎಂದು ಮೋದಿಯವರು ಹೊಗಳಿದ್ದಾರೆ.
ಮೋದಿಯ ಈ ಧೋರಣೆಯು ಇದೊಂದು ಸತ್ಯೋತ್ತರ ಸರ್ಕಾರ ಎಂಬುದನ್ನು ತೋರಿಸಿ ಕೊಟ್ಟಿದೆ. ವಾಸ್ತವತೆ ಮತ್ತು ಸತ್ಯಾಂಶಗಳನ್ನು ಉಪೇಕ್ಷಿಸಿ ತನ್ನದೇ ಆದ ಕಥನಗಳನ್ನು ಕಟ್ಟುತ್ತಿರುವ ಸರಕಾರ ಇದು. ಸತ್ಯೋತ್ತರ ಎಂಬುದು ವಸ್ತುನಿಷ್ಠ ಸಂಗತಿಗಳಿಗಿಂತ ಭಾವನಾತ್ಮಕ ಮತ್ತು ವೈಯಕ್ತಿಕ ನಂಬಿಕೆಗಳೇ ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ ಎನ್ನುವುದನ್ನು ಸೂಚಿಸುವ ಪದ.
ಲಸಿಕೆಗಳು, ಅಥವ ಆಮ್ಲಜನಕ ಕೊರತೆಯಿಂದ ಸಾವುಗಳು ಅಥವಾ ಕೋವಿಡ್ ಸಾವುಗಳ ನಿಜವಾದ ಸಂಖ್ಯೆ – ಈ ಯಾವುದೇ ವಿಚಾರದಲ್ಲಿ ಮೋದಿ ಸರ್ಕಾರ ಮಾನವ ಜೀವಕ್ಕೆ ಕನಿಷ್ಠ ಗೌರವವನ್ನೂ ಕೊಡದಿರುವ ಅಸಹ್ಯ ಧೋರಣೆಯನ್ನು ತೋರಿಸುತ್ತದೆ. ಯಾವುದೇ ಒಂದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದಲ್ಲಿ ಹಿಂದೆಂದೂ ಕಂಡುಬಂದಿರದ ಮನೋಭಾವ ಇದಾಗಿದೆ.
ಸಂಸತ್ತಿನ ಅಧಿವೇಶನದ ಮೊದಲ ವಾರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಿಸಾನ್ ಸಂಸತ್’ ಆರಂಭವಾಯಿತು. ಸಂಸತ್ತು ಕಳೆದ ವರ್ಷ ಅಂಗೀಕರಿಸಿದ ಮೂರು ಹೊಸ ಕೃಷಿ ಕಾನೂನುಗಳಿಗೆ ರೈತರ ವಿರೋಧವನ್ನು ದಾಖಲಿಸಲು ಪ್ರತಿ ದಿನ ಈ ಕಿಸಾನ್ ಸಂಸತ್ ನಡೆಯುತ್ತಿದೆ. ರಾ,ಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ಎಂಟು ತಿಂಗಳ ಸತತ ಪ್ರತಿಭಟನೆಗಳ ನಂತರ, ರೈತರದ್ದೇ ಆದ ಸಂಸತ್ತನ್ನು ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಪೊಲೀಸರ ಬಹಳಷ್ಟು ನಿರ್ಬಂಧಗಳ ನಡುವೆಯೇ ಅದನ್ನು ನಡೆಸಲಾಗುತ್ತಿದೆ.
ಇಲ್ಲಿ ಕೂಡ ಬಿಜೆಪಿ ಸರಕಾರದ ಸ್ಪಂದನೆ ಉಪೇಕ್ಷೆಯಿಂದಲೇ ಕೂಡಿದೆ, ಸಮಸ್ಯೆಯೇ ಇಲ್ಲ, ಕೃಷಿ ಕ್ಷೇತ್ರ ಸುಗಮವಾಗಿ ಸಾಗುತ್ತಿದೆ ಹಾಗೂ ರೈತರು ಸುಖಿಗಳಾಗಿದ್ದಾರೆ ಎಂದೇ ಅದು ನಟಿಸುತ್ತಿದೆ. ಸಮಸ್ಯೆಯಿದೆ ಎಂದು ನಾವು ಗುರುತಿಸದಿದ್ದರೆ ಸಮಸ್ಯೆಯೇ ಇಲ್ಲವೆನ್ನುವುದು ಯಾವುದೇ ಸರ್ವಾಧಿಕಾರಶಾಹೀ ಸರ್ಕಾರದ ವಿಕೃತ ತರ್ಕವಾಗಿರುತ್ತದೆ.
ಸಾರ್ವಜನಿಕ ನೀತಿ ಹಾಗೂ ಕಾರ್ಯಾಂಗದ ನಿರ್ಧಾರಗಳಿಗೆ ಸಂಬಂಧಿಸಿ ಸಂಸತ್ತಿನಲ್ಲಿ ಯಾವುದೇ ರೀತಿಯಲ್ಲಿ ಉತ್ತರದಾಯಿಯಾಗಲು ಸರ್ಕಾರ ನಿರಾಕರಿಸುತ್ತಿರುವುದರಿಂದ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಫ್ರಾನ್ಸ್‌ನ ಒಂದು ನ್ಯಾಯಾಂಗ ಸಂಸ್ಥೆಯ ತನಿಖೆಯಿಂದಷ್ಟೇ ರಫೇಲ್ ವ್ಯವಹಾರದ ಸತ್ಯವನ್ನು ಭಾರತದ ಜನರು ತಿಳಿಯಬೇಕಾಗಿ ಬಂದಿದೆ. ಏಕೆಂದರೆ ರಫೇಲ್ ವ್ಯವಹಾರದಲ್ಲಿ ಯಾವುದೇ ತಪ್ಪು ನಡೆದಿಲ್ಲ. ಹಾಗಾಗಿ ತನಿಖೆಯ ಅಗತ್ಯವೇ ಇಲ್ಲ ಎಂದು ಮೋದಿ ಸರ್ಕಾರ ಮೊಂಡು ವಾದ ಮಾಡುತ್ತಲೇ ಇದೆ.
ಪೆಗಾಸಸ್ ಹಗರಣದ ಬಗ್ಗೆ ಫ್ರೆಂಚ್ ಸರ್ಕಾರ ತನಿಖೆ ನಡೆಸುತ್ತಿದೆ. ಇಸ್ರೇಲಿ ಕಂಪೆನಿ ಎನ್‌ಎಸ್‌ಒ ಉತ್ಪನ್ನವಾದ ಗೂಢಚರ್ಯೆ ತಂತ್ರಾಂಶದ ಮಾರಾಟ ಹಾಗೂ ಬಳಕೆಗೆ ಸಂಬಂಧಿಸಿದ ನಿಯಮಗಳ ಪರಾಮರ್ಶೆ ನಡೆಸುವುದಾಗಿ ಸ್ವತಃ ಇಸ್ರೇಲ್ ಸರ್ಕಾರವೇ ಪ್ರಕಟಿಸಿದೆ. ಆದರೆ ಭಾರತದಲ್ಲಿ ಮಾತ್ರ ಅಂಥ ಯಾವುದೇ ತನಿಖೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಸ್ರೇಲ್‌ನಿಂದ ಗೂಢಚರ್ಯೆ ತಂತ್ರಾಂಶದ ಖರೀದಿಗೆ ಯಾವುದೇ ಸರ್ಕಾರಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆಯೇ ಎನ್ನುವುದನ್ನು ಒಪ್ಪಿಕೊಳ್ಳಲು ಅದು ನಿರಾಕರಿಸುತ್ತಿದೆ.
ಮೋದಿ ಸರ್ಕಾರಕ್ಕೆ ಸತ್ಯವೆನ್ನುವುದು ಅಗತ್ಯಕ್ಕೆ ತಕ್ಕಂತೆ ತಿರುಚಿಸಿ ಕೊಳ್ಳಬಹುದಾದ ಒಂದು ಸರಕಾಗಿದೆ. ಹಿಂದುತ್ವ ಮತ್ತು ನವ-ಉದಾರವಾದಿ ಅಜೆಂಡಾಗಳಷ್ಟೇ ಅದರ ಅಚಲ ಅಂಶಗಳು. ಜನಸಂಖ್ಯೆ ನಿಯಂತ್ರಣ, ಎಲ್ಲ ಬಗೆಯ ಜಾನುವಾರು ಹತ್ಯಾ ನಿಷೇಧ, ಲವ್ ಜಿಹಾದ್ ಕಾಯ್ದೆಗಳು- ಇವೆಲ್ಲವನ್ನೂ ಬಿಜೆಪಿ ರಾಜ್ಯ ಸರ್ಕಾರಗಳು ಸತತವಾಗಿ ಒಂದಿಷ್ಟೂ ತಡೆಯಿಲ್ಲದಂತೆ ಅನುಸರಿಸುತ್ತಿವೆ.
ಕೇಂದ್ರ ಸರ್ಕಾರದ ಬಗ್ಗೆ ಹೇಳುವುದಾದರೆ, ದೊಡ್ಡ ಕಾರ್ಪೊರೇಟ್‌ಗಳು ಮತ್ತು ಸೂಪರ್-ಶ್ರೀಮಂತ ಬಿಲಿಯಾಧಿಪತಿಗಳನ್ನು ಕೊಬ್ಬಿಸುವುದೇ ಅದರ ಗುರಿಯಾಗಿದೆ. ಅದಕ್ಕಾಗಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿನಾಶಕಾರಿ ಖಾಸಗೀಕರಣ ನೀತಿ ಅನುಸರಿಸುತ್ತಿದೆ; ದೊಡ್ಡ ಕಾರ್ಪೊರೇಟ್‌ಗಳ ಸಾಲಗಳನ್ನು ಮನ್ನಾ ಮಾಡುತ್ತಿದೆ; ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಹಾಗೂ ಕೋವಿಡ್ ಸಾಂಕ್ರಾಮಿಕತೆ ಹಾಗೂ ಲಾಕ್‌ಡೌನ್-ಆರ್ಥಿಕ ಚಟುವಟಿಕೆಗಳ ಸ್ಥಗಿತತೆಯಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ಒದಗಿಸಲು ಅಪಾರ ಹಣ ಬೇಕಾದರೂ ಕಾರ್ಪೊರೇಟ್ ಮತ್ತು ಸೂಪರ್-ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಲು ನಿರಾಕರಿಸುತ್ತಿದೆ.
ಕೋವಿಡ್ ವೈರಸ್ ತನ್ನ ಹಾವಳಿ ಮುಂದುವರಿಸುತ್ತಿದ್ದಂತೆ ಹೆಚ್ಚೆಚ್ಚು ಜನರಿಗೆ, ಇದು ತಮ್ಮ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲದ ಸರಕಾರ ಎಂಬ ಕಟು ಸತ್ಯದ ಅರಿವಾಗುತ್ತದೆ.
ಅನು: ವಿಶ್ವ