ಪರಮಾಣು ವ್ಯವಹಾರ, ಎಡಪಕ್ಷಗಳು ಮತ್ತು ಚೀನಾ ಕುರಿತ ಮಾಜಿ ವಿದೇಶಾಂಗ ಕಾರ್ಯದರ್ಶಿಗಳ ಟಿಪ್ಪಣಿ ಆಧಾರಹೀನ-ಯೆಚುರಿ

ಭಾರತಅಮೆರಿಕ ಪರಮಾಣು ವ್ಯವಹಾರಕ್ಕೆ ಎಡಪಕ್ಷಗಳ ವಿರೋಧದಲ್ಲಿ ಚೀನಾ ಪ್ರಭಾವ ಬೀರಿತ್ತು ಎಂಬ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆಯವರ ಟಿಪ್ಪಣಿಗಳು ಆಧಾರಹೀನ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚುರಿ ಹೇಳಿದ್ದಾರೆ.

ವ್ಯವಹಾರ ಕುರಿತ ಒಪ್ಪಂದ ಭಾರತದ ಸಾಮರಿಕ ಸ್ವಾಯತ್ತತೆಗೆ ಮತ್ತು ಸ್ವತಂತ್ರ ವಿದೇಶಾಂಗ ಧೋರಣೆಗೆ ಬಾಧಕವಾಗುತ್ತದೆ ಎಂಬ ಕಾರಣಕ್ಕೆ ಎಡಪಕ್ಷಗಳು ಅದನ್ನು ವಿರೋಧಿಸಿದವು. ಅದು ಭಾರತವನ್ನು ಒಂದು ಮಿಲಿಟರಿ ಮತ್ತು ಸಾಮರಿಕ ಮೈತ್ರಿಯಲ್ಲಿ ಒಳಗೊಳ್ಳಲಿಕ್ಕಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ನಡೆಸಿದ ವ್ಯವಹಾರ, ಭಾರತದ ಇಂಧನ ಭದ್ರತೆಗೆ ಅದರಲ್ಲಿ ಯಾವುದೇ ನಿಜವಾದ ಮೌಲ್ಯ ಇರಲಿಲ್ಲ.

ಇದಾಗಿ ಒಂದು ದಶಕಕ್ಕಿಂತಲೂ ಹೆಚ್ಚು ಕಾಲವಾಗಿದ್ದು, ನಂತರದ ಘಟನೆಗಳು ಇದನ್ನು ದೃಢಪಡಿಸಿವೆ ಎಂದು ಯೆಚುರಿ ಹೇಳಿದ್ದಾರೆ. ವ್ಯವಹಾರದ ನಂತರ ದೇಶದ ನಾಗರಿಕ ಪರಮಾಣು ಇಂಧನ ಸಾಮರ್ಥ್ಯದಲ್ಲಿ ಒಂದು ಮೆಗಾವಾಟಿನಷ್ಟೂ ವಿಸ್ತರಣೆಯಾಗಿಲ್ಲ. ನಡೆದಿರುವುದೆಲ್ಲ ಒಂದೇ ಸಂಗತಿಮಿಲಿಟರಿ ಸಂಬಂಧಗಳು ಘನಿಷ್ಟವಾಗಿ ಬಿಟ್ಟು ಭಾರತವು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಂದು ಅಡಿಯಾಳು ಮಿತ್ತನಾಯಿತಷ್ಟೇ.

ಎಡಪಕ್ಷಗಳು ನಿಲುವು ತಳೆದದ್ದು ಭಾರತದ ಸಾರ್ವಭೌಮತೆ ಮತ್ತು ಸಾಮರಿಕ ಸ್ವಾತಂತ್ರ್ಯದ ಬಗ್ಗೆ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು. ಚೀನಾಕ್ಕೂ ಇದಕ್ಕೂ ಏನೂ ಸಂಬಂಧವಿರಲಿಲ್ಲ. ಚೀನಾ ಅಂತಿಮವಾಗಿ ಪರಮಾಣು ಪೂರೈಕೆದಾರರ ಗುಂಪು(ಎನ್.ಎಸ್.ಜಿ.) ಭಾರತಕ್ಕೆ ವಿನಾಯ್ತಿ ನೀಡಿದ್ದನ್ನು ಬೆಂಬಲಿಸಿದರೂ ಕೂಡ ಎಡಪಕ್ಷಗಳು ಇಂತಹ ನಿಲುವನ್ನು ತಳೆದವು ಎಂದು ಯೆಚುರಿ ನೆನಪಿಸಿದ್ದಾರೆ.

ವಿಜಯ ಗೋಖಲೆಯವರ ಚೀನಾ ಕುರಿತ ಪುಸ್ತಕದಲ್ಲಿ ವಿಷಯವನ್ನು ಕುರಿತ ಟಿಪ್ಪಣಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು, ಆಗ ಪ್ರಧಾನ ಪ್ರತಿಪಕ್ಷವಾಗಿದ್ದ ಬಿಜೆಪಿ ಕೂಡ ಸಂಸತ್ತಿನಲ್ಲಿ ಪರಮಾಣು ವ್ಯವಹಾರವನ್ನು ವಿರೋಧಿಸಿತ್ತು ಎಂಬುದು ಬಹುಶಃ ಗೋಖಲೆಯವರಿಗೆ ತಿಳಿದಿಲ್ಲವೇನೋ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *