ಯಾರಿವರು ದಲಿತರು? ಎಲ್ಲರಂತೆ ಅವರು ಈ ದೇಶದ ಪ್ರಜೆಗಳಲ್ಲವೆ? 47 ರ ಸ್ವಾತಂತ್ರ್ಯ ಅವರಿಗೆ ಇನ್ನೂ ದಕ್ಕಲಿಲ್ಲವೆ? ಸ್ವತಂತ್ರ ಭಾರತ ಅಂಗೀಕರಿಸಿದ ಸಂವಿಧಾನ ಅವರಿಗೆ ಅನ್ವಯವಾಗಿಲ್ಲವೆ? ಆಗಿಲ್ಲದಿದ್ದರೆ ಏಕೆ? ಅವರೇಕೆ ಸ್ವಾಭಿಮಾನದ ಬದುಕಿನಿಂದ ವಂಚಿತರು? ಶತಮಾನಗಳಿಂದ ಅನುಭವಿಸುತ್ತಾ ಬಂದಿರುವ ತಾರತಮ್ಯಗಳಿಂದ ಅವರ ವಿಮೋಚನೆ ಇದುವರೆಗೂ ಆಗಿಲ್ಲವೆ? ದೇಶ ಇಂದು 75ನೇ ಸ್ವಾತಂತ್ರೋತ್ಸವದತ್ತ ಸಂಭ್ರಮದೊಂದಿಗೆ ಹೆಜ್ಜೆ ಹಾಕುತ್ತಿರುವಾಗ ನಮ್ಮ ದಲಿತ ಸಹೋದರ ಸಹೋದರಿಯರು ಅಸ್ಪೃಶ್ಯತೆ, ಅಸಮಾನತೆಯ ಕಗ್ಗತ್ತಲಿನಲ್ಲಿ ಕಾಲಕಳೆಯುತ್ತಿರುವುದು ನಮ್ಮ ಗಮನವನ್ನು ಏಕೆ ಸೆಳೆಯುವುದಿಲ್ಲ?
ನಮ್ಮ ಸಮಾಜದಲ್ಲಿ ಜಾತಿ ಪದ್ಧತಿ ಎಂಬ ಗುಲಾಮಗಿರಿಯನ್ನು ಶತಮಾನಗಳಿಂದ ಪೋಷಿಸುತ್ತಾ ಬರಲಾಗಿದೆ. ಖಾಸಗಿ ಆಸ್ತಿಯ ಉಗಮದೊಂದಿಗೆ, ಬುಡಕಟ್ಟು ಸಮಾಜದ ನಿರ್ಮೂಲನೆಯೊಂದಿಗೆ ವಂಶಪರಂಪರಾಗತ ಜಾತಿ ಪದ್ಧತಿ ಬೆಳೆದು ಬಂತು. ಇವರಿಗೆ ಎಲ್ಲ ಬಗೆಯ ಆಸ್ತಿಯ ಹಕ್ಕನ್ನು ನಿರಾಕರಿಸಲಾಯಿತು. ಅವರು ಯಾವುದೇ ಪ್ರತಿಫಲವನ್ನು ಬಯಸದೆ ತಮ್ಮ ಒಡೆಯರಿಗಾಗಿ ದುಡಿಯುವಂತಾಯಿತು. ಇವರ ದುಡಿಮೆಯಿಂದ ಉತ್ಪತ್ತಿಯಾದ ಅಧಿಕ ಮೌಲ್ಯ ಒಡೆಯನ ಖಾಸಗಿ ಆಸ್ತಿಯಾಯಿತು. ವಿಶ್ವದ ಇತರ ಕಡೆ ಬಹುತೇಕವಾಗಿ ವರ್ಗ ಸಮಾಜದ ಉದಯವಾಯಿತು. ಭಾರತ ಎಂಬ ಈ ಉಪಖಂಡದಲ್ಲಿ ಮಾತ್ರ ಜನನ ಆಧಾರಿತ ಜಾತಿ ಪದ್ಧತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಧರ್ಮಗ್ರಂಥಗಳ ಮೂಲಕ ಈ ಶ್ರೇಣೀಕೃತ ಜಾತಿಪದ್ಧತಿಯನ್ನು ಸಮರ್ಥಿಸಲಾಯಿತು. ನಮ್ಮ ಸಂಸ್ಕೃತಿಯನ್ನು ಕಾಪಾಡುವ ಹೆಸರಿನಲ್ಲಿ ಜಾತಿ ಆಧಾರಿತ ಅಸಮಾನತೆಯನ್ನು ಅಸ್ಪೃಶ್ಯತೆಯನ್ನು ಕಾಪಾಡಲು ಬದ್ಧರಾದವರು ದೇಶವನ್ನು ಆಳುವಂತಾಗಿದೆ. ಎಲ್ಲಿಯ ವರೆಗೆ ಆಸ್ತಿವಂತರು ನಮ್ಮನ್ನು ಆಳುತ್ತಿರುತ್ತಾರೋ, ಅಲ್ಲಿಯವರೆಗೆ ಈ ಅನಿಷ್ಟ ಜಾತಿ ಪದ್ಧತಿ ಮುಂದುವರೆಯುತ್ತಿರುವುದು.
ಇದನ್ನು ಓದಿ: ಸಂದಿಗ್ಧ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ದಿನ
ಹಿಂದುತ್ವದ ಉಳಿವಿಗಾಗಿ ಹೋರಾಡುವ ದುರುದ್ದೇಶದಿಂದ ಸಂಘಪರಿವಾರವನ್ನು ಕಟ್ಟಿ ಬೆಳೆಸಲಾಗುತ್ತದೆ. ಈ ಗುರಿಸಾಧನೆಗಾಗಿ ಅಲ್ಪಸಂಖ್ಯಾತರನ್ನು ಬೆದರಿಸಲಾಗುತ್ತದೆ. ಅವರ ಪ್ರಾರ್ಥನಾ ಮಂದಿರಗಳನ್ನು ನಾಶಮಾಡಲಾಗುತ್ತದೆ. ಅವರ ಆಹಾರ ಪದ್ಧತಿಗಳ ಮೇಲೆ ದಾಳಿ ಮಾಡಲಾಗುತ್ತದೆ. ಇಂತಹ ದುಷ್ಟ ಕಾರ್ಯಾಚರಣೆಗಾಗಿ, ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಮುಗ್ಧ ದಲಿತರನ್ನು ಬಳಸಲಾಗುತ್ತದೆ. ಆದರೆ ಅದೇ ದಲಿತರಿಗೆ ದೇವಸ್ಥಾನ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಸಹಪಂಕ್ತಿ ಬೋಜನಕ್ಕೆ ಅವಕಾಶ ನೀಡಲಾಗುವುದಿಲ್ಲ-ಜಾತ್ರೆಗಳಲ್ಲಿ, ಮದುವೆಗಳಲ್ಲಿ ಸಾಮೂಹಿಕವಾಗಿ ಒಟ್ಟಿಗೆ ಕುಳಿತುಕೊಂಡು ಊಟ ಮಾಡಲು ಅವಕಾಶ ನೀಡುವುದಿಲ್ಲ. ದಲಿತರೂ ಹಿಂದುಗಳು ಎಂದು ಹೇಳುತ್ತಾರೆ. ಆದರೆ ಮೇಲ್ಜಾತಿಯವರು ಎಂದು ಕರೆದುಕೊಳ್ಳುವ ಹಿಂದುಗಳು ದಲಿತರೊಂದಿಗೆ ವಿವಾಹ ಸಂಬಂಧಗಳನ್ನು ಬೆಳೆಸಿಕೊಳ್ಳುವುದಿಲ್ಲ. ಅಪ್ಪಿ ತಪ್ಪಿ ಮೇಲ್ಜಾತಿ ಯುವಕ ಅಥವ ಯುವತಿ ದಲಿತ ಹುಡುಗ ಅಥವ ಹುಡುಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡರೆ ತಮ್ಮ ಕರುಳಿನ ಕುಡಿಗಳನ್ನೇ ಕೊಚ್ಚಿ ಕೊಲೆ ಮಾಡಲು ಹಿಂಜರಿಯುವುದಿಲ್ಲ. ಇಂತಹ ದುಷ್ಟ ಪದ್ಧತಿಗಳನ್ನು ಪುರಸ್ಕರಿಸುವ ಸಮಾಜದಲ್ಲಿ ದಲಿತರಿಗೆ ಎಲ್ಲಿದೆ ನ್ಯಾಯ? ಅವರಿಗೆಲ್ಲಿದೆ ಸ್ವಾತಂತ್ರ್ಯ?
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ ಎಂದು ನಾವು ಸಂಭ್ರಮಿಸುತ್ತಿದ್ದೇವೆ. ಸರ್ಕಾರಿ ಆಚರಣೆಗಳಲ್ಲಿ ಮೈಮರೆಯುತ್ತೇವೆ. ಆದರೆ ಪಶುಗಳಿಗಿಂತ ಕೀಳಾಗಿ ಕಾಣಲಾಗುತ್ತಿರುವ ನಮ್ಮ ಬಂಧುಗಳ ಬಗ್ಗೆ ನಮಗಿಲ್ಲ ಯಾಕೆ ಕನಿಷ್ಠ ಕಾಳಜಿ? ಅವರ ಮೇಲೆ ನಾವು ಸವರ್ಣೀಯರು ನಡೆಸುವ ದಾಳಿ ದಮನಗಳಿಗೆ ನಾವು ಏಕೆ ಸ್ಪಂಧಿಸುವುದಿಲ್ಲ. ನಮ್ಮ ಮೇಲ್ಜಾತಿ ಮಠಾಧೀಶರು ತಮ್ಮ ಜಾತಿಯವರಿಗೆ ಸರ್ಕಾರದಿಂದ ಸೌಕರ್ಯಗಳನ್ನು ಸೌಲಭ್ಯಗಳನ್ನು ಒದಗಿಸಲು ತುಂಬಾ ಶ್ರಮಿಸುತ್ತಿರುವುದು ಇತ್ತೀಚಿನ ಹೊಸ ವಿದ್ಯಮಾನ. ಅವರಿಗೆ ಮೀಸಲಾತಿ ಒದಗಿಸಲು ಬಾರೀ ಪೈಪೋಟಿ ನಡೆಯುತ್ತಿದೆ. ಶಿಕ್ಷಣ ಮತ್ತು ಉದ್ಯೋಗಗಳಿಂದ ವಂಚಿತರಾದ ದಲಿತ ಜಾತಿಗಳವರಿಗೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕಾಗಿ ಮೀಸಲಾತಿ ಒಂದು ಸಂವಿಧಾನಾತ್ಮಕ ಹಕ್ಕಾಗಿ ನೀಡಲಾಗಿದೆ. ಮೀಸಲಾತಿ ಬಡವರಿಗೆಲ್ಲ ನೀಡುವ ನಿವಾರಣಾ ಕ್ರಮವಲ್ಲ. ಬಡತನ ನಿವಾರಣೆಗೆ ಬೇರೆ ಕ್ರಮಗಳಿಗೆ. ದಲಿತರಿಗೆ ದೊರೆಯಬೇಕಾದ ಈ ಏಕೈಕ ಸೌಲಭ್ಯವನ್ನು ಕಬಳಿಸುವ ಪಿತೂರಿ ಸವರ್ಣಿಯರಿಂದ ನಡೆಯುತ್ತಿದ್ದರೆ ಬಲಾಢ್ಯ ಮಠಾಧೀಶರು ಯಾವುದೇ ಮುಲಾಜಿಲ್ಲದೆ ಬಲಢ್ಯ ಜಾತಿಗಳ ತಮ್ಮ ಶಿಷ್ಯ ವರ್ಗದ ಬೆಂಬಲಕ್ಕೆ ನಿಂತಿದ್ದಾರೆ. ಮೇಲ್ಜಾತಿಯವರಿಗೇ ಇಂತಹ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ತಾವು ಹೇಳುವವರೇ ಮುಖ್ಯಮಂತ್ರಿ ಆಗಬೇಕು, ತಮ್ಮ ಜಾತಿಗೆ ಸೇರಿದವರೆ ಮಂತ್ರಿಗಳಾಗಬೇಕು ಎಂದು ಒತ್ತಡ ಹೇರುತ್ತಾರೆ. ಇದನ್ನು ಗಮನಿಸುತ್ತಿರುವ ಮುಗ್ಧ ದಲಿತರು ದಲಿತರೇ ಮುಖ್ಯಮಂತ್ರಿ ಆಗಬೇಕು ಎಂದು ಆಗ್ರಹಿಸಲು ಒಂದಾಗುತ್ತಿದ್ದಾರೆ.
ನಮ್ಮ ದಲಿತ ಬಂಧುಗಳು ಸಹ ದಾರಿ ತಪ್ಪುತ್ತಿದ್ದಾರೆ. ಮೇಲ್ಜಾತಿಯರ ಆಮಿಷಗಳಿಗೆ ಒಳಗಾಗುತ್ತಿದ್ದಾರೆ. ತಮ್ಮ ಜಾತಿಗೆ ಸೇರಿದವರು ಮುಖ್ಯಮಂತ್ರಿ ಆದರೆ ತಮಗೆ ಅನುಕೂಲವಾಗಬಹುದೆಂಬ ಭ್ರಮೆಗೆ ಒಳಗಾಗುತ್ತಿದ್ದಾರೆ. ಜಾತಿಗಳೊಂದಿಗೆ ವರ್ಗಗಳು ತಳಕು ಹಾಕಿಕೊಂಡಿರುವುದನ್ನು ದಲಿತರು ಗಮನಿಸಲಾಗದೆ ಸೋಲುತ್ತಾರೆ. ದಲಿತರ ಹೆಸರು ಹೇಳಿ ಶಾಸಕರು, ಮಂತ್ರಿಗಳು ಆಗುವವರು ಆಸ್ತಿವಂತರಾಗಿದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡುವವರು ಆಗಿರುತ್ತಾರೆ. ಅವರು ದುಡಿಯುವ ಜನರನ್ನು, ರೈತರನ್ನು, ಕಾರ್ಮಿಕರನ್ನು ಸುಲಿಗೆ ಮಾಡುವವರೇ ಆಗಿರುತ್ತಾರೆ. ನಮ್ಮ ಜಾತಿಗೆ ಸೇರಿದವರು ಯಾರೂ ಎನ್ನುವುದಕ್ಕಿಂತ ನಮ್ಮ ಸುಲಿಗೆ ಮಾಡುವವರು ಯಾರೂ ಎಂಬುದನ್ನು ಗುರುತಿಸಲು ದಲಿತರು ವಿಫಲರಾಗಬಾರದು. ಅವರು ಜಾತಿ ಪದ್ಧತಿ ವಿರುದ್ಧ ಹೋರಾಡುವ ಮನಸ್ಸಿನವರಾಗಿರಬೇಕು ಮಾತ್ರವಲ್ಲ ಒಂದು ವರ್ಗರಹಿತ ಸಮಾಜ ನಿರ್ಮಾಣದ ಪರವಾಗಿರಬೇಕು. ದಲಿತರಿಗೆ ಸ್ವಾತಂತ್ರ್ಯ ಸಿಗಬೇಕಾದರೆ ಅವರು ವರ್ಗ ಶೋಷಣೆಯಿಂದ ಹಾಗೂ ಜಾತಿ ದಮನದಿಂದ ವಿಮೋಚಿತರಾಗಬೇಕು. ಅದಕ್ಕಾಗಿ ಎಲ್ಲಾ ಶೋಷಿತರು ಮತ್ತು ದಮನಿತರು ಮನಪೂರ್ವಕವಾಗಿ ಒಂದಾಗಿ ಪರಸ್ಪರ ವಿಶ್ವಾಸದಿಂದ ಹೋರಾಡಬೇಕು.