ಸಂದಿಗ್ಧ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ದಿನ

ಪ್ರಕಾಶ ಕಾರಟ್

prakash karat
ಪ್ರಕಾಶ ಕಾರಟ್

ನರೇಂದ್ರ ಮೋದಿ ತಮ್ಮ 2018ರ ಆಗಸ್ಟ್ 15ರ ಭಾಷಣದಲ್ಲಿ, 2022ರೊಳಗೆ, ಅಂದರೆ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಹೊತ್ತಿಗೆ ‘ನಯಾ ಭಾರತ್’ ನಿರ್ಮಿಸುವ ಬಗ್ಗೆ ಮಾತನಾಡಿದ್ದರು. ಈ ‘ನಯಾ ಭಾರತ್’ ಎಂದರೆ ಏನೆಂಬುದು ಕಳೆದ ಎರಡು ವರ್ಷಗಳಲ್ಲಿ ಅನಾವರಣಗೊಂಡಿವೆ: ಅಯೋಧ್ಯೆಯ ರಾಮ ಮಂದಿರ, ಹೊಸ ಸಂಸತ್ ಭವನ ಕಟ್ಟಡದೊಂದಿಗೆ ಸೆಂಟ್ರಲ್ ವಿಸ್ಟಾ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಸರ್ಜನೆ ಇದರ ಸಂಕೇತಗಳು. ಇದು ಹಿಂದುತ್ವ ಸರ್ವಾಧಿಕಾರಶಾಹಿ ಹಾಗೂ ಕಾರ್ಪೊರೇಟ್ ನವ-ಉದಾರವಾದದ ಒಂದು ವಿಷಕಾರಿ ಮಿಶ್ರಣ. ಈಗ ಇವೆಲ್ಲವುಗಳ ವಿರುದ್ಧ ವರ್ಗ ಹಾಗೂ ಸಾಮೂಹಿಕ ಹೋರಾಟಗಳಲ್ಲಿ ಇದಕ್ಕೆ ಹೊಸದೊಂದು ಪರ್ಯಾಯ ರೂಪುಗೊಳ್ಳುತ್ತಿದೆ.

ಭಾರತ ಸ್ವಾತಂತ್ರ್ಯದ 74 ವರ್ಷಗಳನ್ನು ಪೂರ್ಣಗೊಳಿಸಿ 2022ರಲ್ಲಿ 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದತ್ತ ಸಾಗುವ ಅವಧಿಯನ್ನು ಪ್ರವೇಶಿಸುತ್ತಿರುವಾಗ ದೇಶ ನಿಜವಾಗಿಯೂ ಒಂದು ಸಂದಿಗ್ದ ಕಾಲಘಟ್ಟದಲ್ಲಿದೆ.

ಒಂದು ಗಣತಂತ್ರ ಸಂವಿಧಾನವನ್ನು ತುಂಬಿಕೊಟ್ಟ ಹಾಗೂ ನಮ್ಮ ಸಂಸದೀಯ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸ್ವಾತಂತ್ರ್ಯ ಹೋರಾಟದ ಆದರ್ಶಗಳು ಈ ಹಲವು ದಶಕಗಳಲ್ಲಿ ನಶಿಸುತ್ತಾ ಬಂದಿವೆ. ಆದರೆ, ಬಿಜೆಪಿ-ಆರ್‌ಎಸ್‌ಎಸ್ ಕೂಟ ಪ್ರಭುತ್ವ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಇದರಲ್ಲಿ ಒಂದು ಗುಣಾತ್ಮಕ ಬದಲಾವಣೆ ಆಗಿದೆ. 2014 ರಿಂದೀಚೆಗೆ ಹಿಂದುತ್ವ ಮತ್ತು ನವ-ಉದಾರವಾದಿ ಬಂಡವಾಳಶಾಹಿಯ ಒಂದು ವಿಷಭರಿತ ಬೆಸುಗೆ ನಡೆದಿದ್ದು, ಅದು ಸ್ವಾತಂತ್ರ್ಯ ಸಮರದ ಎಲ್ಲ ಆದರ್ಶಗಳಿಗೆ, ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ರಾಷ್ಟ್ರೀಯ ಸಾರ್ವಭೌಮತೆಗೆ ಭಾರೀ ಅಪಾಯವನ್ನು ಒಡ್ಡಿದೆ.

ಬಿಜೆಪಿ-ಆರ್‌ಎಸ್‌ಎಸ್ ‘ಹಿಂದೂ ರಾಷ್ಟ್ರ’ ಗುರಿ ಸಾಧನೆಗೆ ಎಲ್ಲ ಪ್ರಭುತ್ವ ಸಂಸ್ಥೆಗಳನ್ನು ವಶಕ್ಕೆ ಪಡೆಯುವ ಹಾಗೂ ಅವುಗಳನ್ನು ಒಳಗಿನಿಂದಲೇ ಬುಡಮೇಲು ಮಾಡುವ ದೀರ್ಘ ಪಯಣವನ್ನು ಆರಂಭಿಸಿದೆ. ನರೇಂದ್ರ ಮೋದಿಯವರ ಕಳೆದ ಮೂರು ವರ್ಷಗಳ ಸ್ವಾತಂತ್ರ್ಯ ದಿನಾಚರಣೆ ಭಾಷಣಗಳನ್ನು ಕೇಳಿದವರಿಗೆ ಅವು ಕಂಡರಿಸುವ `ನಯಾ ಭಾರತ್’ ಪರಿಕಲ್ಪನೆಯ ರೂಪುರೇಷೆಯ ಇಣುಕುನೋಟ ಸಿಕ್ಕೇ ಸಿಗುತ್ತದೆ.

ಮೋದಿಯವರ ‘ನಯಾಭಾರತ್’

ನರೇಂದ್ರ ಮೋದಿ ತಮ್ಮ 2018ರ ಆಗಸ್ಟ್ 15ರ ಭಾಷಣದಲ್ಲಿ, 2022ರೊಳಗೆ, ಅಂದರೆ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಹೊತ್ತಿಗೆ ‘ನಯಾ ಭಾರತ್’ ನಿರ್ಮಿಸುವ ಬಗ್ಗೆ ಮಾತನಾಡಿದ್ದರು. ಈ ‘ನಯಾ ಭಾರತ್’ ಎಂದರೆ ಏನೆಂಬುದು ಕ್ರಮೇಣ ಅನಾವರಣಗೊಳ್ಳಲು ಆರಂಭವಾಯಿತು. 2019ರಲ್ಲಿ, ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಳಚಿ ಹಾಕಿ, ಆ ರಾಜ್ಯವನ್ನು ರದ್ದುಪಡಿಸಿದ 10 ದಿನಗಳ ನಂತರ ತನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ, ‘ಒಂದು ದೇಶ, ಒಂದು ಸಂವಿಧಾನ’ದ ಚಿಂತನೆ ಹಾಗೂ ಸರ್ದಾರ್ ಪಟೇಲ್‌ರ ‘ಒಂದು ಭಾರತ, ಶ್ರೇಷ್ಠ ಭಾರತ’ದ ಕನಸನ್ನು ತಾನು ಸಾಕಾರಗೊಳಿಸಿರುವುದಾಗಿ ಹೆಮ್ಮೆಯಿಂದ ಪ್ರಕಟಿಸಿದರು. ಇದು ಹೆಚ್ಚೂ ಕಮ್ಮಿ ಆರ್‌ಎಸ್‌ಎಸ್‌ನ ‘ಅಖಂಡ ಭಾರತ’ ಘೋಷಣೆಯಂತೇ ಧ್ವನಿಸಿತ್ತು.

ಅದೇ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾನೂನು ತರಲಾಯಿತು. ಆ ಮೂಲಕ ಅದೇ ಮೊದಲ ಬಾರಿಗೆ ಪೌರತ್ವಕ್ಕೆ  ಧಾರ್ಮಿಕ ಮಾನದಂಡವನ್ನು ಅನ್ವಯಿಸಲಾಯಿತು. ಇದು ಒಂದು  ಜಾತ್ಯತೀತ ದೇಶದಲ್ಲಿ ಪೌರತ್ವದ ಮೂಲ ಕಲ್ಪನೆಗೇ  ವಿರುದ್ಧವಾದುದಾಗಿದೆ.

ಮರುವರ್ಷ, ಅಂದರೆ 2020ರಲ್ಲಿ, ಕೋವಿಡ್ ಸಾಂಕ್ರಾಮಿಕತೆಯ ನಡುವೆಯೇ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿಗಳು  ಆರ್‌ಎಸ್‌ಎಸ್ ಮುಖ್ಯಸ್ಥರ ಸಮ್ಮುಖದಲ್ಲಿ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದರು. ಅದು ಒಂದು ಸ್ವಾತಂತ್ರ್ಯದ ದಿನವೆಂದು ಮೋದಿ ಘೋಷಿಸಿದರು. ಹತ್ತು ದಿನಗಳ ನಂತರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ‘ದೀರ್ಘ ಕಾಲದ ರಾಮ ಜನ್ಮಭೂಮಿ ವಿವಾದ ಒಂದು ಶಾಂತಿಯುತ ಅಂತ್ಯ ಕಂಡಿದೆ’ ಎಂದರು. ಈ ‘ಶಾಂತಿಯುತ’ ಅಂತ್ಯದ ಹಿಂದೆ ಹಿಂಸೆ ಹಾಗೂ ರಕ್ತದೋಕುಳಿಯ ಒಂದು ದೊಡ್ಡ ಜಾಡು ಇದೆ. 1992 ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಸ್ಫೋಟಗೊಂಡ ಹಿಂಸಾಚಾರದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಮೋದಿಯವರಿಗೆ ಮಂದಿರ ಇನ್ಯಾವುದರದ್ದೋ ಮಹತ್ವದ ಸಂಕೇತವಾಗಿಯೂ ಕಾಣುತ್ತದೆ. “ಅಭಿವೃದ್ಧಿಯ ಮಹಾ ಯಜ್ಞದಲ್ಲಿ ಪ್ರತಿಯೊಬ್ಬ ಭಾರತೀಯ ಏನನ್ನಾದರೂ ತ್ಯಾಗ ಮಾಡಬೇಕಾಗುತ್ತದೆ” ಎಂದವರು ಹೇಳಿದರು. ಹೀಗಾಗಿ, ಅವರ ಲೆಕ್ಕದಲ್ಲಿ ಮಂದಿರವು ರಾಷ್ಟ್ರೀಯ ಅಭಿವೃದ್ಧಿಯ ಒಂದು ಸಂಕೇತವಾಗುತ್ತದೆ,  ಅದಕ್ಕಾಗಿ ಪ್ರತಿ ಭಾರತೀಯನೂ ತ್ಯಾಗ ಮಾಡಬೇಕು.

ಹೀಗೆ ಕಳೆದ ಎರಡು ವರ್ಷಗಳಲ್ಲಿ ‘ನಯಾ ಭಾರತ್’ನ ಸಂಕೇತಗಳು ಅನಾವರಣಗೊಂಡಿವೆ: ಅಯೋಧ್ಯೆಯ ರಾಮ ಮಂದಿರ, ಹೊಸ ಸಂಸತ್ ಭವನ ಕಟ್ಟಡದೊಂದಿಗೆ ಸೆಂಟ್ರಲ್ ವಿಸ್ಟಾ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಸರ್ಜನೆ. ಇವು ಅನುಕ್ರಮವಾಗಿ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ವಿಕೃತ ಆಕ್ರಮಣವನ್ನು ಸಂಕೇತಿಸುತ್ತವೆ.

Ghazipur border 300121
ಚಿತ್ರಕೃಪೆ: ಅಮಿತ್ ಮೆಹ್ರ, ಇಂಡಿಯನ್ ಎಕ್ಸ್‌ಪ್ರೆಸ್

ವಿಷಮಯ ಮಿಶ್ರಣ

‘ನಯಾ ಭಾರತ್’ ಹಿಂದುತ್ವ ಸರ್ವಾಧಿಕಾರಶಾಹಿ ಹಾಗೂ ಕಾರ್ಪೊರೇಟ್ ನವ-ಉದಾರವಾದದ ಒಂದು ವಿಷಕಾರಿ ಮಿಶ್ರಣವಾಗಿದೆ. ಮೋದಿ ‘ನಯಾ ಭಾರತ್’ದ ಗುರಿಯನ್ನು ಘೋಷಿಸಿದ ಮೂರು ವರ್ಷಗಳಲ್ಲಿ ಕಾರ್ಪೊರೇಟ್ ತೆರಿಗೆಗಳಲ್ಲಿ ಭಾರೀ ಕಡಿತಗಳಾಗಿವೆ, ದೊಡ್ಡ ಕಾರ್ಪೊರೇಟ್‌ಗಳ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲಗಳನ್ನು ಮನ್ನಾ ಮಾಡಲಾಗಿದೆ. ದೊಡ್ಡ ಪ್ರಮಾಣದ ಖಾಸಗೀಕರಣದ ಮೂಲಕ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಳಚಿ ಹಾಕುವ ಯೋಜನೆಗಳನ್ನು ಹಾಕಲಾಗಿದೆ. ಕೃಷಿ ವ್ಯಾಪಾರ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಕಾರ್ಪೊರೇಟ್  ಪ್ರವೇಶಕ್ಕೆ ಅನುಕೂಲ ಮಾಡಲು ಸಂಸತ್ತಿನ ಮೂಲಕ ಮೂರು ಕೃಷಿ ಕಾನೂನುಗಳನ್ನು ಬಲವಂತದಿಂದ ತರಲಾಗಿದೆ. ಅಸಹ್ಯ ಮಟ್ಟಗಳ ಅಸಮಾನತೆಗಳ ಭಾರತವನ್ನು ನಿರ್ಮಿಸಲಾಗುತ್ತಿದೆ. ‘ಕ್ರೆಡಿಟ್ ಸುಯ್ಸ್’ನ 2021ರ ಸಂಪತ್ತು ಕುರಿತ ವರದಿಯ ಪ್ರಕಾರ, 2020ರ ಅಂತ್ಯದಲ್ಲಿ ತುದಿಯಲ್ಲಿನ ಒಂದು ಶೇಕಡ ಜನರ ಸಂಪತ್ತಿನ ಪಾಲು 40.5% ವರೆಗೆ ಏರಿದೆ. ಫೋರ್ಬ್ಸ್ ವರದಿ ಪ್ರಕಾರ, ಭಾರತದಲ್ಲಿ 2020ರಲ್ಲಿದ್ದ 102 ಇದ್ದ ಬಿಲಿಯಾಧಿಪತಿಗಳ ಸಂಖ್ಯೆ  2021ರಲ್ಲಿ 140ಕ್ಕೆ ಏರಿದೆ. ಕೋವಿಡ್ ಸಾಂಕ್ರಾಮಿಕತೆಯ ಕಾಲದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಬಡತನ ಕಾಡುತ್ತಿದ್ದಾಗ ಈ ಅಭೂತಪೂರ್ವ ಏರಿಕೆ ಆಗಿರುವುದನ್ನು ಗಮನಿಸಬೇಕು.

ಕಳೆದ ವರ್ಷ, ಅಂದರೆ 2020ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ‘ಆತ್ಮನಿರ್ಭರ ಭಾರತ’ದ ಘೊಷಣೆ ಕೊಟ್ಟರು. ‘ನಯಾ ಭಾರತ್’ ಸ್ವಾವಲಂಬಿ ಭಾರತವಾಗಿರುತ್ತದೆ ಎಂದು ಸೂಚಿಸಿದರು. “ಸ್ವಾತಂತ್ರ್ಯದ 75ನೇ ವರ್ಷಾಚರಣೆಗೆ ನಾವು ಕೇವಲ ಒಂದು ಹೆಜ್ಜೆ ದೂರವಿರುವುದರಿಂದ ಭಾರತದಂಥ ದೇಶ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದು ಹಾಗೂ ಸ್ವಾವಲಂಬಿಯಾಗುವುದು ಅಗತ್ಯ’ ಎಂದವರು ಹೇಳಿದ್ದರು.

ಬೂಟಾಟಿಕೆಯ ಪರಮಾವಧಿ

ಬೂಟಾಟಿಕೆಯ ಈ ಪ್ರಮಾಣ ಏದುಸಿರು ಬಿಡುಂತೆ ಮಾಡುವಂತದ್ದು. ಸ್ವಾವಲಂಬನೆಯ ಘೋಷಣೆ ಮಾಡಿದ ನಂತರ, ಸರಕಾರ ತನ್ನ ‘ಆತ್ಮನಿರ್ಭರ್ ಭಾರತ್ ಅಭಿಯಾನ’ ಪ್ಯಾಕೇಜಿನ ಭಾಗವಾಗಿ ಆಯಕಟ್ಟಿನ ವಲಯಗಳನ್ನು ಹೊರತುಪಡಿಸಿ ಇತರೆಲ್ಲ ಕ್ಷೇತ್ರಗಳ ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಿಸುವುದಾಗಿ ಘೋಷಿಸಿತು. ಆಯಕಟ್ಟಿನ ಕ್ಷೇತ್ರಗಳಲ್ಲೂ ಕೂಡ ಪ್ರತಿ ಕ್ಷೇತ್ರದಲ್ಲಿ ಗರಿಷ್ಠ ನಾಲ್ಕು ಸಾರ್ವಜನಿಕ ಉದ್ದಿಮೆಗಳಷ್ಟೇ ಉಳಿಯುತ್ತವೆ. ಅದಕ್ಕೂ ಮುನ್ನ ರಕ್ಷಣಾ ಉತ್ಪಾದನೆಯಲ್ಲಿ ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಅವಕಾಶವನ್ನು ಸರ್ಕಾರ ಘೋಷಿಸಿತ್ತು. ಇವೆಲ್ಲವೂ ಜನರ ಸಂಪನ್ಮೂಲಗಳಿಂದ ಕಟ್ಟಲಾಗಿರುವ ಸಾರ್ವಜನಿಕ ವಲಯವನ್ನು ದೊಡ್ಡ ಭಾರತೀಯ ಕಾರ್ಪೊರೇಟ್‌ಗಳು ಹಾಗೂ ವಿದೇಶಿ ಕಂಪೆನಿಗಳು ಸಲೀಸಾಗಿ ಕಬಳಿಸಲು ಅವಕಾಶ ಕಲ್ಪಿಸಲು ಹೊಸೆದ ಕ್ರಮಗಳು. ಈ ಹೆಜ್ಜೆಗಳು ದೇಶದ ಆರ್ಥಿಕ ಸಾರ್ವಭೌಮತ್ವವನ್ನು ದುರ್ಬಲಗೊಳಿಸಲಿವೆ.

ಸರ್ಕಾರಿ ಉದ್ದಿಮೆಗಳ ಖಾಸಗೀಕರಣವೂ ಒಂದು ಭಾಗವಾಗಿರುವ ನವ-ಉದಾರವಾದಿ ನೀತಿಗಳ ಆಕ್ರಮಣಕಾರೀ ಅನುಸರಣೆ ರಾಜಕೀಯ ವ್ಯವಸ್ಥೆಯ ಮೇಲೆ ದುಷ್ಟ ಪ್ರಭಾವಗಳನ್ನು ಬೀರಿವೆ ಹಾಗೂ ಪ್ರಜಾಪ್ರಭುತ್ವವನ್ನು ಕ್ಷೀಣಗೊಳಿಸಿವೆ. ರಾಜಕಾರಣ ಮತ್ತು  ದೊಡ್ಡ ಬಂಡವಾಳದ ನಡುವಿನ ಶಾಮೀಲು ಹೆಚ್ಚು ಸ್ಫುಟವಾಗಿ ಕಾಣುತ್ತಿದೆ. ಚುನಾವಣಾ ಬಾಂಡ್ ವ್ಯವಸ್ಥೆಯು ಈ ಕೂಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂಸತ್ತು ಅಪಮೌಲ್ಯಗೊಂಡಿದೆ. ಚುನಾವಣೆಯಲ್ಲಿ ಜನಾದೇಶಗಳನ್ನು ಬುಡಮೇಲು ಮಾಡಿ ರಾಜ್ಯ ಸರ್ಕಾರಗಳನ್ನು ರಚಿಸಲು ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರವನ್ನು ಪ್ರಚೋದಿಸಲಾಗುತ್ತಿದೆ. ‘ನಯಾ ಭಾರತ್’ ಮತ್ತು ‘ಅರೆ-ಪ್ರಜಾಪ್ರಭುತ್ವ’  ಎಂಬುದು  ಸಮಾನಾರ್ಥಕ ಪದಗಳಾಗಿ ಬಿಟ್ಟಿವೆ.

ಮೋದಿ ಸರಕಾರ ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿಯಿಂದಾಗಿ, ಅದರ ಈ ಯೋಜನೆ ಜಾಳಾಗಿ ಬಿಟ್ಟರೂ, ಈ ರೀತಿಯಾಗಿ ಭಾರತದ ಪುನಾರಚನೆ ಪ್ರಕ್ರಿಯೆ ಭರದಿಂದ ಸಾಗಿದೆ. ‘ನಯಾ ಭಾರತ್’ಗೂ ಒಂದು ವೈಜ್ಞಾನಿಕ ಮನೋಭಾವದೊಂದಿಗಿನ ಆಧುನಿಕ, ಜಾತ್ಯತೀತ ಭಾರತದ ನಿರ್ಮಾಣಕ್ಕೂ ಯಾವ ಸಂಬಂಧವೂ ಇಲ್ಲ. ಅದು ‘ಹಿಂದೂ ರಾಷ್ಟ್ರ’ದ ನೀಲನಕ್ಷೆಯನ್ನು ಆಧರಿಸಿದ್ದಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ದೂರ ನಿಂತಿದ್ದ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಜಾತ್ಯತೀತ ಸಾಮ್ರಾಜ್ಯಶಾಹಿ-ವಿರೋಧಿ ಮೌಲದ ಬಗ್ಗೆ ಯಾವುದೇ ರೀತಿಯ ಒಲವೇ ಇಲ್ಲದ ಶಕ್ತಿಗಳು ಈ ಯೋಜನೆಯನ್ನು ರೂಪಿಸುತ್ತಿವೆ.

ಹೊಸ ಪರ್ಯಾಯ ಮೂಡಿಬರುತ್ತಿದೆ

ಈಗಿನ್ನು ಬೂರ್ಜ್ವಾ ಉದಾರವಾದಿ “ಭಾರತದ ಕಲ್ಪನೆ”ಗೆ ಮರಳಲು ಸಾಧ್ಯವಿಲ್ಲ. ‘ಹಿಂದುತ್ವ’ದ ‘ನಯಾಭಾರತ್’ಗೆ ಪರ್ಯಾಯವು ಜನತೆಯ ಪ್ರತಿರೋಧ ಮತ್ತು ಹೋರಾಟಗಳ ಮೂಲಕ ಬೆಸೆಯುವ ಒಂದು ಹೊಸ ಸಾಮಾಜಿಕ ಒಡಂಬಡಿಕೆಯಿಂದ ಮೂಡಿ ಬರುತ್ತದೆ.

ವರ್ಗ ಹಾಗೂ ಸಾಮೂಹಿಕ ಹೋರಾಟಗಳಲ್ಲಿ ‘ನಯಾ ಭಾರತ್’ಗೆ ಸವಾಲು ರೂಪುಗೊಳ್ಳುತ್ತಿದೆ. ಒಂಬತ್ತು ತಿಂಗಳಿಂದ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟವು ಕಾರ್ಪೊರೇಟ್ ಹಿಂದುತ್ವ ಆಳ್ವಿಕೆಯ ಬುಡಕ್ಕೇ ಸವಾಲು ಒಡ್ಡಿದೆ. ಇದಕ್ಕೆ ಮೊದಲು ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಡೆದ ಸಾಮೂಹಿಕ ಪ್ರತಿಭಟನೆಗಳು ಒಂದು ಪ್ರಜ್ಞಾವಂತ ನಾಗರಿಕತ್ವದ ಅಸ್ತಿತ್ವವನ್ನು, ಅದು ಬಹುಸಂಖ್ಯಾತವಾದಿ ಕೋಮುವಾದದ ಕೈಮೇಲಾಗಲು ಬಿಡುವುದಿಲ್ಲ ಎಂದು ತೋರಿಸಿತ್ತು. ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯ ಖಾಸಗೀಕರಣದ ವಿರುದ್ಧ ಜನಪ್ರಿಯ ಹೋರಾಟದಂತಹ ಒಟ್ಟು ಖಾಸಗೀಕರಣದ ವಿರುದ್ದ ಕಾರ್ಮಿಕ ವರ್ಗದ ಹೋರಾಟಗಳು ಒಂದು ಹೊಸ ಮಟ್ಟವನ್ನೇ ಸೃಷ್ಟಿಸುತ್ತಿವೆ. ರಕ್ಷಣಾ ಉತ್ಪಾದನೆ ಕ್ಷೇತ್ರದ ಕಾರ್ಮಿಕರು, ವಿಮಾ ನೌಕರರು ಮತ್ತು ಇತರೇ ಕ್ಷೇತ್ರಗಳ ಹೋರಾಟಗಳೆಲ್ಲವೂ ನವ-ಉದಾರವಾದಿ ನೀತಿಗಳ ವಿರುದ್ಧ ಪ್ರತಿರೋಧವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತಿವೆ.

ಈ ಪ್ರತಿರೋಧಗಳು ಹಾಗೂ ಜನ ಚಳವಳಿಗಳ ನಡುವಿನಿಂದ ಪರ್ಯಾಯವೊಂದು ಹೊರಹೊಮ್ಮಲಿದೆ. ಅದೊಂದು ಎಡ ಹಾಗೂ ಪ್ರಜಾಸತ್ತಾತ್ಮಕ ಕಾರ್ಯಕ್ರಮವನ್ನು ಆಧರಿಸಿದ ಪರ್ಯಾಯ ವಾಗಿರಬೇಕು. ಅಂಥ ಕಾರ್ಯಕ್ರಮವು ಸ್ವಾತಂತ್ರ್ಯ ಹೋರಾಟದ ಗುರಿಗಳನ್ನು, ಅಂದರೆ ಜನತೆಯ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿಮೋಚನೆಯ ಗುರಿಗಳನ್ನು ಮುಂದಕ್ಕೆ ಒಯ್ಯುತ್ತದೆ. ಇಂತಹ ಒಂದು ಪರ್ಯಾಯದ ಸುತ್ತ ವ್ಯಾಪಕ ದುಡಿಯುವ ಜನವಿಭಾಗಗಳನ್ನು ಹಾಗೂ ಎಲ್ಲ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳನ್ನು ಸಂಘಟಿಸಬೇಕಾಗಿದೆ, ಅಣಿನೆರೆಯಿಸಬೇಕಾಗಿದೆ.

ಅನು: ವಿಶ್ವ

Leave a Reply

Your email address will not be published. Required fields are marked *