ನೇರ ನಗದು ವರ್ಗಾವಣೆ ತಡೆಯಿರಿ, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ

ಅಪೌಷ್ಟಿಕತೆಯ ನಿವಾರಣೆ ಮತ್ತು ಆರು ವರ್ಷದ ಒಳಗಿನ ಮಕ್ಕಳಿಗೆ ಪ್ರಾಥಮಿಕ  ಪೂರ್ವ ಶಾಲೆಗಳಾಗಿ ಕೆಲ ಮಟ್ಟಿಗಾದರೂ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದಾದ್ಯಂತ ಇರುವ ಸುಮಾರು 70,000 ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 47 ಲಕ್ಷ ಫಲಾನುಭವಿಗಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಹಾಗೂ ಕೇಸರೀಕರಣದ ನೀತಿಗಳಿಂದಾಗಿ ದುಡಿಯುವ ಬಹು ಸಂಖ್ಯಾತ ಜನತೆ ವ್ಯಾಪಕವಾಗಿ ದಿವಾಳಿಯಾಗುತ್ತಿರುವುದರಿಂದ, ಅಪೌಷ್ಟಿಕತೆಯ ದುಸ್ಥಿತಿ ದಿನೇ ದಿನೇ ಮತ್ತಷ್ಠು ಹೆಚ್ಚುತ್ತಲೇ ಸಾಗಲಿದೆ.

ಇಂತಹ ಸಂದರ್ಭದಲ್ಲಿ ಈ ದುಸ್ಥಿತಿಯಿಂದ ಅವರನ್ನು ಮೇಲೆತ್ತಲು ಈಗಿರುವ ಐಸಿಡಿಎಸ್ ಯೋಜನೆಯನ್ನು ಮತ್ತಷ್ಠು ಅನುದಾನದೊಂದಿಗೆ ಬಲಪಡಿಸಬೇಕಾಗಿದೆ. ಆದರೇ, ಒಕ್ಕೂಟದ ಹಾಗೂ ರಾಜ್ಯ ಸರಕಾರಗಳು ಐಸಿಡಿಎಸ್ ಯೋಜನೆಯನ್ನು ಕಿತ್ತು ಹಾಕುವ ಮತ್ತು ಬಡಮಕ್ಕಳು, ಬಾಲಿಕೆಯರನ್ನು ಶಿಕ್ಷಣ ದಿಂದ ಹಾಗೂ ಮೀಸಲಾತಿಯಿಂದ ಹೊರಗಿಡುವ ಸಂಚನ್ನು ನಡೆಸಿರುವುದು ತೀವ್ರ ಖಂಡನೀಯವಾಗಿದೆ.

ಈ ಸಂಚಿನ ಭಾಗವಾಗಿ ಅಪೌಷ್ಠಿಕತೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಅದೇ ರೀತಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.

ನಗದು ವರ್ಗಾವಣೆಯೆಂಬುದು ಅಪೌಷ್ಠಿಕತೆಯಿಂದ ಬಳಲುವವರನ್ನು ಮೂರು ರೀತಿಯಲ್ಲಿ ವಂಚಿಸಲಿದೆ.

ಉದಾಹರಣೆಗೆ, ಅಡುಗೆ ಅನಿಲದ ವಿಚಾರದಲ್ಲಿ ಜಾರಿಯಲ್ಲಿರುವ ನಗದು ವರ್ಗಾವಣೆಯು ಫಲಾನುಭವಿಗಳಿಗೆ  ಬಹುತೇಕ ತಲುಪುತ್ತಿಲ್ಲ ಅಥವಾ ನಿಲ್ಲಿಸಲಾಗುತ್ತಿದೆ. ಅದೇ ರೀತಿ ಅಡುಗೆ ಅನಿಲದ ಬೆಲೆಯನ್ನು ಗಗನ ಮುಖಿಯಾಗಿಸಲಾಗಿದೆ.

ಇದೇ ಪರಿಸ್ಥಿತಿಯನ್ನು ಈ ಅಪೌಷ್ಟಿಕತೆಯ ಫಲಾನುಭವಿಗಳು ಅನುಭವಿಸಲಿದ್ದಾರೆ. ಇವರು ಮುಂದೆ ನಗದನ್ನು ಪಡೆಯಲಾರರು ಮತ್ತು ಪೌಷ್ಠಿಕ ಆಹಾರದ ಬೆಲೆ ಏರಿಕೆಯಿಂದ ಅದರ ಕನಸನ್ನು ಕಾಣಲಾರರು.  ಮೇಲಾಗಿ, ತೀವ್ರ ಸಾಲದ ಬಾಧೆಯಿಂದ ನಲುಗುವ ಈ ಫಲಾನುಭವಿಗಳ ಕುಟುಂಬಗಳು ಕೆಲ ದಿನಗಳ ಮಟ್ಟಿಗಾದರೂ ಸಿಗುವ ಅಲ್ಪ ಸ್ವಲ್ಪ ನಗದನ್ನು ಆಹಾರಕ್ಕಾಗಿಯೇ ಬಳಸುವರೆಂಬ ಯಾವುದೇ ಖಾತರಿ ಇಲ್ಲ.

ಇದು ಮಾತ್ರವೇ ಅಲ್ಲಾ ಈ ನಗದು ವರ್ಗಾವಣೆಯು ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಹಾಕುವುದರಿಂದ ರಾಜ್ಯದ ಸುಮಾರು 1.40 ಲಕ್ಷ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಹಾಗೂ ದುಬಾರಿ ಡೊನೇಷನ್ ನೀಡಿ ನರ್ಸರಿಗೆ ಸೇರಲಾಗದ ಈ ಬಡ ಮಕ್ಕಳು, ಪೌಷ್ಟಿಕ ಆಹಾರ ಮತ್ತು ಸಿಗುತ್ತಿದ್ದ ಪ್ರಾಥಮಿಕ ಪೂರ್ವ ಕನಿಷ್ಠ ಶಿಕ್ಷಣದಿಂದಲೂ ವಂಚಿತಗೊಳ್ಳಲಿವೆ. ಶಿಕ್ಷಣದ ಖಾಸಗೀಕರಣವೂ ಈ ಬಡವರ ಮಕ್ಕಳು ಮತ್ತು ಎಲ್ಲ ಬಾಲಕೀಯರು ಮತ್ತು ತರುಣಿಯರನ್ನು ಶಿಕ್ಷಣ ಕ್ಷೇತ್ರದಿಂದ ಹೊರ ದೂಡಲಿದೆ. ಅದೇ ರೀತಿ, ಈ ದುರ್ಬಲ ಜನ ಸಮುದಾಯಗಳು ಮೀಸಲು ಸೌಲಭ್ಯದಿಂದ ವಂಚನೆಗೊಳಗಾಗಲಿವೆ.

ಆದ್ದರಿಂದ ನೇರ ನಗದು ವರ್ಗಾವಣೆ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳು ತೀವ್ರ ಪ್ರಮಾದಕರ ನೀತಿಗಳಾಗಿದ್ದು, ಅವುಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದೆಂದು ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ. ಮಾತ್ರವಲ್ಲಾ, ಒಕ್ಕೂಟ ಸರಕಾರಕ್ಕೆ ಪತ್ರ ಬರೆದು ಅವುಗಳನ್ನು ಹಿಂಪಡೆಯುವಂತೆ ರಾಜ್ಯ ಸರಕಾರ ಜನತೆಯ ಪರವಾಗಿ ಒತ್ತಾಯಿಸಬೇಕೆಂದು ಮನವಿ ಮಾಡುತ್ತದೆ.

ಅದೇ ರೀತಿ, ಐಸಿಡಿಎಸ್ ಯೋಜನೆಯನ್ನು ಬಲಗೊಳಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕ್ರಮವಹಿಸಬೇಕು.

ನೌಕರರ ಉದ್ಯೋಗಗಳನ್ನು ಖಾಯಂಗೊಳಿಸಿ, ಅಗತ್ಯ ತರಬೇತಿ ನೀಡಿ ಅಂಗನವಾಡಿ ಕೇಂದ್ರಗಳನ್ನು ಇದ್ದಲ್ಲಿಯೇ ಪ್ರಾಥಮಿಕ ಪೂರ್ವಶಿಕ್ಷಣ ಒದಗಿಸುವ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಬೇಕು. ಅಗತ್ಯ ನೆರವನ್ನು ಒದಗಿಸಬೇಕು. ಈ ಕುರಿತು ಅಗತ್ಯ ಕ್ರಮವಹಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *