ಪ್ರಕಾಶ್ ಕಾರಟ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿ ಕೊಂಡಿರುವುದನ್ನು ಬಿಜೆಪಿ ಮತ್ತು ಅದರ ಹಿಂದುತ್ವ ಪಡೆಗಳು ಮುಸ್ಲಿಮರ ವಿರುದ್ಧ ಭಾವನೆಗಳನ್ನು ಬಡಿದೆಬ್ಬಿಸಲು ಮತ್ತು ಇಸ್ಲಾಮ್-ಭೀತಿಯ ಕಾಯಿಲೆಯನ್ನು ಹರಡಿಸಲು ಒಂದು ಸುವರ್ಣಾವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದಿತ್ಯನಾಥರಂತವರು ಇದೇ ನೆಪದಲ್ಲಿ ಭಾರತದಲ್ಲಿ ತಾಲಿಬಾನ್‌ವಾದ ಹರಡುತ್ತಿದೆ ಎಂಬ ಕೂಗು ಎಬ್ಬಿಸುತ್ತಿದ್ದಾರೆ. ಈ ಮಂದಿ ಕನ್ನಡಿಯಲ್ಲಿ ತಮ್ಮ ಮುಖಗಳನ್ನು ನೋಡಿಕೊಂಡರೆ ಅವರಿಗೆ ತಾಲಿಬಾನಿನ ಪ್ರತಿಬಿಂಬವೇ ಕಾಣಬಹುದು.
ಮುಸ್ಲಿಮರ ವಿರುದ್ಧ ದಿನನಿತ್ಯದ ಹಿಂಸಾಚಾರ ಒಂದು ಕಳವಳಕಾರೀ ನಮೂನೆಯನ್ನು ತೋರಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನದ ಕೆಲವು ನಗರಗಳಲ್ಲಿ, ಸಣ್ಣ ಪಟ್ಟಣಗಳ ಬೀದಿಗಳಲ್ಲಿ ಮುಸ್ಲಿಮರ ವಿರುದ್ದ ಅಕಾರಣ ಹಿಂಸಾಚಾರದ ಕನಿಷ್ಟ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇಂತಹ ದಾಳಿಗಳಿಗೆ ಗುರಿಯಾಗಿರುವವರು ಬಡ ಮುಸ್ಲಿಮರೇ, ಬೀದಿ ಮಾರಾಟಗಾರರು, ರಿಕ್ಷಾ ಚಾಲಕರು ಮುಂತಾದವರು, ಭಿಕ್ಷುಕರು ಕೂಡ.
ಇಂತಹ ಒಂದು ಘಟನೆಯಲ್ಲಿ, ರಾಜಸ್ತಾನದ ಸಿಕಾರ್ ಜಿಲ್ಲೆಯಲ್ಲಿ ಒಬ್ಬ 52 ವರ್ಷದ ಆಟೋರಿಕ್ಷಾ ಚಾಲಕನನ್ನು ಇಬ್ಬರು ಯುವಕರು ಕಾರಣವಿಲ್ಲದೆ ಕೆಟ್ಟದಾಗಿ ಥಳಿಸಿದರು. ‘ಮೋದಿ ಜಿಂದಾಬಾದ್’, ‘ಜೈಶ್ರೀರಾಮ್’ ಹೇಳಲು ಅವನು ನಿರಾಕರಿಸಿದಾಗ ಥಳಿಸಲಾರಂಭಿಸಿದರು. ಆತ ಪಾಕಿಸ್ತಾನಕ್ಕೆ ಹೋಗುವವರೆಗೆ ಥಳಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಅವರು ಬೆದರಿಸಿದರು. ಮುರಿದ ಹಲ್ಲು, ವಿಪರೀತ ಗಾಯಗಳಿಂದಾಗಿ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು.
ಕಾನ್ಪುರದಲ್ಲಿ ಆಗಸ್ಟ್ 2ನೇ ವಾರದಲ್ಲಿ, ಒಂದು ಗುಂಪು ಒಬ್ಬ ಮುಸ್ಲಿಂ ಇ-ರಿಕ್ಷಾ ಚಾಲಕನ್ನು ಥಳಿಸಲಾರಂಭಿಸಿದರು, ಆತ ‘ಜೈಶ್ರೀರಾಮ್’ ಎನ್ನುವಂತೆ ಬಲವಂತ ಮಾಡಿದರು. ತನ್ನ ತಂದೆಯನ್ನು ಬಿಟ್ಟು ಬಿಡಿ ಎಂದು ಆತನ ಮಗಳು ಅಳುತ್ತಾ ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ಲೆಕ್ಕಿಸದೆ ಆತನನ್ನು ಬೀದಿಯಲ್ಲಿ ಎಳಕೊಂಡು ಹೋದರು.
ಇಂದೋರಿನಲ್ಲಿ, ಆಗಸ್ಟ್ 3ನೇ ವಾರದಲ್ಲಿ, ಒಬ್ಬ ಮುಸ್ಲಿಂ ಬಳೆ ಮಾರಾಟಗಾರ ತಸ್ಲಿಮ್ ಅಲಿ ಎಂಬಾತನ ಮೇಲೆ ಎರಗಿ ಹಲ್ಲೆ ಮಾಡಲಾಯಿತು. ರಕ್ಷಾಬಂಧನ್ ದಿನ ಹಿಂದು ಪ್ರದೇಶದಲ್ಲಿ ಬಳೆ ಮಾರುತ್ತಿದ್ದುದೇ ಆತನ ಅಪರಾಧವಾಗಿತ್ತು. ಸ್ಥಳೀಯ ಪೊಲೀಸ್ ಠಾಣೆಯ ಎದುರು ಮುಸ್ಲಿಂ ಸಮುದಾಯಕ್ಕೆ ಸೇರಿದವರ ಪ್ರತಿಭಟನೆಯ ನಂತರ ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಆದರೆ ಅದಾದ ಕೂಡಲೇ, ಒಂದು ನಂತರದ ಯೋಚನೆಯಾಗಿ, ಒಂದು ಹದಿಹರೆಯದ ಹುಡುಗಿ ತನಗೆ ಆತ ಕಿರುಕುಳ ಕೊಟ್ಟಿದ್ದಾನೆ ಎಂದು ಕೊಟ್ಟ ದೂರಿನ ಮೇಲೆ, ಆ ಬಳೆಗಾರನನ್ನು ಪೋಸ್ಕೋದ ಅಡಿಯಲ್ಲಿ ಬಂಧಿಸಲಾಯಿತು. ಅಲಿ ತಾನು ಹಿಂದು ಎಂದು ಸುಳ್ಳು ಹೇಳಿದ್ದಾನೆ, ಹುಡುಗಿಗೆ ಕಿರುಕುಳ ಕೊಟ್ಟಿದ್ದಾನೆ ಎಂದು ರಾಜ್ಯದ ಗೃಹಮಂತ್ರಿಗಳು ಹೇಳಿದ್ದಾರೆ.
ಕೊನೆಯ ಘಟನೆ ನಡೆದಿರುವುದು ಅಜ್ಮೇರಿನಲ್ಲಿ. ತನ್ನ ಇಬ್ಬರು ಮಕ್ಕಳೊಂದಿಗೆ ಭಿಕ್ಷೆಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳಲಾಯಿತು. ಕರುಣೆ ತೋರಿ ಎಂದು ಬೇಡಿಕೊಂಡರೂ ಕೇಳದೆ ಅವನ ಮಗನ ತಲೆಗೆ ಒದ್ದರು.
ಪ್ರತಿಯೊಂದು ಘಟನೆಯ ನಂತರವೂ ಪೋಲೀಸರು ಕೆಲವು ಅಪರಾಧಿಗಳನ್ನು ಬಂಧಿಸಿದರೂ, ಕಾನ್ಪುರದಲ್ಲಿ ಆದಂತೆ, ಅವರನ್ನು ಬಿಡುಗಡೆ ಮಾಡುವಂತೆ ಹಿಂದುತ್ವ ಪಡೆಗಳು ಅವರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಕಾರ್ ನಲ್ಲಿ ಬಂಧನದ ನಂತರ ಪ್ರತಿಭಟನೆಗಳಿಂದಾಗಿ ಅವರ ಮೇಲೆ ಹಗುರವಾದ ಆರೋಪಗಳನ್ನು ಹಾಕಿ ಜಾಮೀನಿನಲ್ಲಿ ತಕ್ಷಣವೇ ಬಿಡುಗಡೆ ಮಾಡಲಾಯಿತು. ತಾವು ಏನೇ ಮಾಡಿದರೂ ಕಾನೂನುಪಾಲಕರಿಂದ ತಪ್ಪಿಸಿಕೊಳ್ಳಬಹುದು, ಇಲ್ಲವೇ ಅವರು ಅವನ್ನು ಹಗುರವಾಗಿ ಕಾಣುವಂತೆ ಮಾಡಬಹುದು ಎಂದು ಇಂತಹ ಜನಜಂಗುಳಿಗಳಿಗೆ ಹೆಚ್ಚೆಚ್ಚು ಧೈರ್ಯ ಬರುವಂತಾಗುತ್ತಿದೆ.
ಈ ಎಲ್ಲ ಹಲ್ಲೆಗಳಲ್ಲಿ ವೀಡಿಯೋ ಮಾಡಿ ಅವನ್ನು ಪಸರಿಸಲಾಗಿದೆ. ಈ ಹಿಂಸಾಚಾರದ ಕೃತ್ಯಗಳ ಪ್ರಚಾರ ಮತ್ತು ಹಲ್ಲೆಕೋರರ ‘ಪರಾಕ್ರಮ’ಗಳನ್ನು ಭವ್ಯೀಕರಿಸುವುದು ಇದರ ಉದ್ದೇಶವಾಗಿರುವಂತೆ ಕಾಣುತ್ತದೆ.
ತಮ್ಮ ಹೊಟ್ಟೆ ಹೊರೆಯುವ ಕೆಲಸದಲ್ಲಿ ತೊಡಗಿರುವ ಬಡ ಮುಸ್ಲಿಮರ ಮೇಲೆ ಗುರಿಯಿಟ್ಟಿರುವ ಇಂತಹ ನಿಷ್ಕಾರಣ ಹಿಂಸಾಚಾರಗಳು, ಅತ್ತ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಸರಕಾರ ನಡೆಸುತ್ತಿರುವ ಮುಖಂಡರು ಹಿಂದುತ್ವ ಅಜೆಂಡಾವನ್ನು ಜಾರಿಗೊಳಿಸುವಲ್ಲಿ ಹೆಚ್ಚೆಚ್ಚು ಆಕ್ರಮಣಶೀಲರಾಗುತ್ತಿದ್ದಂತೆ, ನೆಲ ಮಟ್ಟದಲ್ಲಿ ಹಿಂದುತ್ವ ಸಂಘಟನೆಗಳ ಚಟುವಟಿಕೆಗಳ ಫ್ಯಾಸಿಸ್ಟ್ ತೆರನ ಕಾಯಿಲೆಯ ಲಕ್ಷಣಗಳು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಿರುವುದನ್ನು ಬಿಜೆಪಿ ಮತ್ತು ಅದರ ಹಿಂದುತ್ವ ಪಡೆಗಳು ಮುಸ್ಲಿಮರ ವಿರುದ್ಧ ಭಾವನೆಗಳನ್ನು ಬಡಿದೆಬ್ಬಿಸಲು ಮತ್ತು ಇಸ್ಲಾಮ್-ಭೀತಿಯ ಕಾಯಿಲೆಯನ್ನು ಹರಡಿಸಲು ಒಂದು ಸುವರ್ಣಾವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲಿ-ಇಲ್ಲಿ ಕೇಳಬರುತ್ತಿರುವ ಕೆಲವೇ ಮೂಲಭೂತವಾದಿ ಮೌಲ್ವಿಗಳ ದನಿಗಳು ಆದಿತ್ಯನಾಥರಂತವರಿಗೆ ಭಾರತದಲ್ಲಿ ತಾಲಿಬಾನ್‌ವಾದ ಹರಡುತ್ತಿದೆ ಎಂಬ ಕೂಗು ಎಬ್ಬಿಸಲು ನೆಪಗಳಾಗುತ್ತಿವೆ.
ಈ ಹಿಂದುತ್ವ ಕಟ್ಟಾಭಿಮಾನಿಗಳು ಕನ್ನಡಿಯಲ್ಲಿ ತಮ್ಮ ಮುಖಗಳನ್ನು ನೋಡಿಕೊಂಡರೆ ಅವರಿಗೆ ತಾಲಿಬಾನಿನ ಪ್ರತಿಬಿಂಬವೇ ಕಾಣಬಹುದು.
(ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ)