ಸಂಕಷ್ಟದಲ್ಲಿರುವ ಜನರ ಮೇಲೆ ತೆರಿಗೆ ಹೇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಲ್ಲದ ನಡೆ

ಜನ ಇನ್ನೂ ಕೋವಿಡ್ ಪರಿಸ್ಥಿತಿಯಿಂದ ಹೊರಬಂದಿಲ್ಲ, ಅವರ ಆದಾಯವು ಕೋವಿಡ್ ಪೂರ್ವದ ಸ್ಥಿತಿಗೆ ಇನ್ನೂ ಬಂದಿಲ್ಲ. ಉದ್ಯೋಗ ಕಳೆದುಕೊಂಡ ಅಸಂಖ್ಯಾತ ಜನಗಳಿಗೆ ಮರಳಿ ಕೆಲಸ ಸಿಕ್ಕಿಲ್ಲ. ಸರ್ಕಾರ ಘೋಷಿತ ಪರಿಹಾರದ ಕ್ರಮಗಳು ಜನರಿಗೆ ತಲುಪಿಲ್ಲ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ನೆರವು ಒದಗಿಸುವ ಬದಲಾಗಿ ಈ ಸರ್ಕಾರಗಳು ತಮ್ಮ ಬೊಕ್ಕಸಗಳನ್ನು ತುಂಬಿಸಿಕೊಳ್ಳಲು ಬಡ ಮತ್ತು ಮಧ್ಯಮ ವರ್ಗದ ಜನಗಳ ಮೇಲೆ ತೆರಿಗೆ ಏರಿಕೆಯ ಬರೆ ಹಾಕಲು ಕ್ರಮವಹಿಸಿರುವುದು ಸಲ್ಲದ ನಡೆ.

ನಾಗರಿಕರು ಪಾವತಿಸುವ ತೆರಿಗೆಯ ಹಣವೇ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲ. ಸರ್ಕಾರಗಳ ಆದಾಯ ಹೆಚ್ಚಾಗಬೇಕಾದರೆ ಜನರು ತೆರಿಗೆ ಹಣವನ್ನು ಪಾವತಿಸಬೇಕು. ಜನರು ತೆರಿಗೆ ಹಣವನ್ನು ಸರಿಯಾಗಿ, ನಿರೀಕ್ಷೆಯಂತೆ ಪಾವತಿಸಬೇಕಾದರೆ ಅವರ ಕೈಯಲ್ಲಿ ಹಣ ಇರಬೇಕು ಮತ್ತು ಅದನ್ನು ಅವರು ಖರ್ಚು ಮಾಡುತ್ತಿರಬೇಕು. ಜನರು ಖರ್ಚು ಮಾಡುವ ಹಣದಲ್ಲಿ ಒಂದು ಭಾಗವು ತೆರಿಗೆಯ ರೂಪದಲ್ಲಿ ಸರ್ಕಾರಗಳ ಬೊಕ್ಕಸಕ್ಕೆ ಸಂದಾಯವಾಗುತ್ತದೆ. ಈ ಹಣವನ್ನು ಸರ್ಕಾರಗಳು ಅಭಿವೃದ್ಧಿ ಯೋಜನೆಗಳಿಗಾಗಿ ಹೂಡಿಕೆ ಮಾಡಿ ಜನರಿಗೆ ಇನ್ನಷ್ಟು ಸವಲತ್ತುಗಳನ್ನು ಒದಗಿಸಬೇಕು. ಇದು ನಾವು ಒಪ್ಪಿಕೊಂಡಿರುವ ಆರ್ಥಿಕ ವ್ಯವಸ್ಥೆ. ಆದರೆ ಸರ್ಕಾರಗಳು ಬಹುತೇಕವಾಗಿ ಮಾಡುತ್ತಿರುವುದೇ ಬೇರೆ.

ಕೋವಿಡ್-19 ಹಠಾತ್ತನೆ ದಾಳಿ ಮಾಡಿದಾಗ ಅದು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಜಾರಿಗೆ ತರಲಾಯಿತು. ಜನ ಮಾರುಕಟ್ಟೆಗೆ ಬಂದು ವಸ್ತುಗಳನ್ನು ಕೊಂಡುಕೊಳ್ಳವುದು ಗಣನೀಯವಾಗಿ ಕಡಿಮೆಯಾಯಿತು. ಮನೆಯಿಂದ ಹೊರಬರಲಾಗದೆ, ಆದಾಯ ಬರುವಂತಹ ಉದ್ಯೋಗವೂ ಸಿಗದಂತಾಗಿ ಉಪವಾಸ ವನವಾಸ ಅನುಭವಿಸುವಂತಾಯಿತು. ಈ ಸಂದರ್ಭದಲ್ಲಿ ಸತ್ತವರಲ್ಲಿ ಆಹಾರದ ಕೊರತೆಯಿಂದ ಸತ್ತವರ ಸಂಖ್ಯೆಯೇ ಬಹು ದೊಡ್ಡದಾಗಿದೆ. ಲಾಕ್‌ಡೌನ್ ಪರಿಣಾಮಗಳಿಂದ ಜನಸಾಮಾನ್ಯರು ಇನ್ನೂ ಪೂರ್ತಿಯಾಗಿ ಹೊರಬಂದಿಲ್ಲ. ಇಂತಹ ಅನಿರೀಕ್ಷಿತ ಸಂಕಷ್ಟದ ಸಮಯದಲ್ಲಿ ಸರ್ಕಾರಗಳು ಜನಪರವಾಗಿದ್ದರೆ ಜನರಿಗೆ ಅಗತ್ಯ ನೆರವನ್ನು ಒದಗಿಸಲು ಮುನ್ನುಗ್ಗುತ್ತವೆ. ಒಂದು ಬಡ ಕುಟುಂಬಕ್ಕೆ ಉಚಿತವಾಗಿ ಅಗತ್ಯ ಆಹಾರ ದಾನ್ಯಗಳನ್ನು, ಔಷಧಿಗಳನ್ನು ಒದಗಿಸುವುದಲ್ಲದೆ ಈ ಮಾರಣಾಂತಿಕ ಸಾಂಕ್ರಾಮಿಕದ ಅಪಾಯದಿಂದ ಹೊರ ಬರುವವರೆಗೆ ದೇಶವ್ಯಾಪಿಯಾಗಿ ಕೇಳಿಕೊಳ್ಳಲಾಗುವಂತೆ ತಿಂಗಳಿಗೆ ಕನಿಷ್ಟ 10,000 ರೂ. ಗಳನ್ನು ಒದಗಿಸಲು ಕ್ರಮಕೈಕೊಳ್ಳಬೇಕಾಗಿತ್ತು. ಈ ಪ್ರಕ್ರಿಯೆಗೆ ಬೇಕಾಗುವ ಹಣವನ್ನು ದಾನಿಗಳಿಂದ ದಾನವಾಗಿ, ಶ್ರೀಮಂತರಿಂದ ವಿಶೇಷ ತೆರಿಗೆ ರೂಪದಲ್ಲಿ ಅಗತ್ಯ ಬಿದ್ದರೆ ಸಾಲ ಪಡೆದು ಸಂಗ್ರಹಿಸಿ ಒದಗಿಸಬೇಕು.

ಆದರೆ, ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಪರಿಸ್ಥಿತಿ ಸುಧಾರಿಸುವರೆಗೆ ಕಾಯದೆ ಅವರ ಮೇಲೆ ವಿಪರೀತವಾದ ತೆರಿಗೆ ಹೊರೆಯನ್ನು ಹೇರಿದೆ. ಪರೋಕ್ಷ ತೆರಿಗೆಗಳ ಹೆಚ್ಚಳದ ಜೊತೆಯಲ್ಲಿ ಶಾಲಾ ಶುಲ್ಕ, ಆಸ್ಪತ್ರೆ ಮತ್ತು ಔಷಧದ ಖರ್ಚುಗಳು, ಪ್ರಯಾಣದ ವೆಚ್ಚಗಳನ್ನು ದುಬಾರಿಗೊಳಿಸಲಾಗಿದೆ. ಜನರ ಆದಾಯದ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದನ್ನು ಪರಿಗಣಿಸದೆಯೇ ತಮ್ಮ ವರಮಾನ ಕೊರತೆಯನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಹೊರಟಿರುವ ಬಿಜೆಪಿಯ ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಲು ಹೃದಯದ ಸರ್ಕಾರಗಳು!

ಮೋದಿ ಸರ್ಕಾರ ಕೇವಲ ತೆರಿಗೆ ಏರಿಕೆ ಕ್ರಮದಿಂದ ಜನರ ಮೇಲೆ ಹೊರೆ ಹೇರುತ್ತಿದೆ. ಮಾತ್ರವಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ವಿಪರೀತವಾಗಿ ಹೆಚ್ಚಿಸುವ ಮೂಲಕ ಜನಜೀವನವನ್ನು ದುಸ್ತರಗೊಳಿಸುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ 23 ಲಕ್ಷ ಕೋಟಿ ಆದಾಯ ಸಂಗ್ರಹಿಸಿದೆ. ಅಂತರ‍್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆ ಇದ್ದರೂ, ಗ್ರಾಹಕರಿಗೆ ದರ ಏರಿಕೆಯ ಬರೆ ಹಾಕಲಾಗುತ್ತಿದೆ. ಸಬ್ಸಿಡಿ ಇರುವ ಮತ್ತು ಸಬ್ಸಿಡಿ ಇಲ್ಲದ ಅಡುಗೆ ಅನಿಲ ದರವನ್ನು ಸಿಲಿಂಡರ್ ಒಂದಕ್ಕೆ ರೂ.25 ರಂತೆ ಹೆಚ್ಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಎಲ್.ಪಿ.ಜಿ ಸಿಲಿಂಡರ್ ಬೆಲೆ ರೂ. 887 ಕ್ಕೆ ತಲುಪಿದೆ. ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಎಲ್.ಪಿ.ಜಿ ಬೆಲೆ ಹೆಚ್ಚಳ ಮಾಡಿದಂತಾಗಿದೆ.

ಅಗತ್ಯ ವಸ್ತುಗಳಲ್ಲಿ ಬಹುಮುಖ್ಯವಾಗಿರುವ ವಿದ್ಯುತ್ ದರಗಳನ್ನೂ ಮತ್ತೆ ಹೆಚ್ಚಿಸಲಾಗಿದೆ. 2020 ಮತ್ತು 2021 ರಲ್ಲಿ ವಿದ್ಯುತ್ ದರಗಳನ್ನು ಪ್ರತಿ ಯೂನಿಟ್ಟಿಗೆ 70 ಪೈಸೆಯಂತೆ ಹೆಚ್ಚಿಸಲಾಗಿತ್ತು. ರಾಜ್ಯದ ಬಹುತೇಕ ಕಡೆ ಚೆನ್ನಾಗಿ ಮಳೆಯಾಗುತ್ತಿದೆ. ಎಲ್ಲಾ ಅಣೆಕಟ್ಟುಗಳು ಭರ್ತಿಯಾಗುವ ಹಂತವನ್ನು ತಲುಪಿವೆ. ಜಲ ವಿದ್ಯುತ್ ಘಟಕಗಳಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜೊತೆಗೆ ಸೌರ ಶಕ್ತಿ ಹಾಗೂ ಪವನ ವಿದ್ಯುತ್ ಉತ್ಪಾದನೆಲ್ಲೂ ಸಾಕಷ್ಟು ಹೆಚ್ಚಳವಾಗಿದೆ. ಆದರೆ ಸಾಮಾನ್ಯ ಗ್ರಾಹಕರಿಗೆ, ರೈತರ ಪಂಪ್‌ಸೆಟ್‌ಗಳಿಗೆ ಇದರ ಪ್ರಯೋಜನ ದೊರಕುವುದಿಲ್ಲ.

ತಮ್ಮ ವರಮಾನ ಸಂಗ್ರಹ ಹೆಚ್ಚಿಸಲು ಹೆಣಗುತ್ತಿರುವ ನಮ್ಮ ಈ ಸರ್ಕಾರಗಳು ಜನರ ಆದಾಯ ಹೆಚ್ಚಿಸಲು ಏನು ಕ್ರಮ ಕೈಗೊಂಡಿವೆ? ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಈ ಸರ್ಕಾರಗಳಿಗೆ ಎಳ್ಳಷ್ಟು ಆಸಕ್ತಿ ಇದೆಯಾ? ಜನರ ಆದಾಯ ಹೆಚ್ಚಾಗದಿರುವಾಗ ಅವರ ಮೇಲೆ ತೆರಿಗೆ ಏರಿಕೆಯ ಹೊರೆ ಹೇರುವುದು ಸರಿಯೇ? ಜನರ ಆದಾಯ ಹೆಚ್ಚಾಗದೆ ತೆರಿಗೆ ಸಂಗ್ರಹ ಹೆಚ್ಚಾಗಲು ಹೇಗೆ ಸಾಧ್ಯ? ಕೋವಿಡ್ ಸೃಷ್ಟಿಸಿರುವ ಕರಾಳ ಪರಿಸ್ಥಿತಿ ನಿವಾರಣೆಯಾಗಿ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯಲು ಆರಂಭವಾದ ನಂತರವೇ ಸರ್ಕಾರಗಳ ಆದಾಯ ಹೆಚ್ಚಾಗಲು ಸಾಧ್ಯ. ತೆರಿಗೆ ಸಂಗ್ರಹ ಸಾಧ್ಯ. ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವವರ ಮೇಲೆ ತೆರಿಗೆ ಏರಿಕೆಯನ್ನು ಹೇರುವುದು ಬಲವಂತದ ಲೂಟಿಯಾಗಿದೆ.

Leave a Reply

Your email address will not be published. Required fields are marked *