ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ 23ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ನವೆಂಬರ್ 22 ಮತ್ತು 23ರಂದು ಗುರುಪುರ ಕೈಕಂಬದಲ್ಲಿ ನಡೆಯಲಿದೆ. ಇದರ ಅಂಗವಾಗಿ ಸೇರಲಾಗಿದ್ದ ಸ್ವಾಗತ ಸಮಿತಿ ರಚನಾಸಭೆಯಲ್ಲಿ ಸಮ್ಮೇಳನದ ತಯಾರಿಯ ಬಗ್ಗೆ ಚರ್ಚಿಸಲಾಯಿತು. ಸ್ವಾಗತ ಸಮಿತಿ ರಚನಾಸಭೆಯ ಅಧ್ಯಕ್ಷತೆಯನ್ನು ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡರಾದ ಕೆ. ಗಂಗಯ್ಯ ಅಮೀನ್ ವಹಿಸಿದ್ದರು.
ಸಮಿತಿ ರಚನಾಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ತುಳುನಾಡು ತಳಸಮುದಾಯಗಳು ನಡೆಸಿದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವ ನಾಡು. ಇಲ್ಲಿನ ಇತಿಹಾಸವನ್ನು ಗಮನಿಸಿದರೆ ರೈತ ಚಳುವಳಿಗಳು ನೆಯ್ಗೆ ಕಾರ್ಮಿಕರ ಚಳುವಳಿ, ಹಂಚು, ಬೀಡಿ ಕಾರ್ಮಿಕ ಚಳುವಳಿ, ಹೀಗೆ ಅನೇಕ ಚಳುವಳಿಗಳನ್ನು ಹುಟ್ಟುಹಾಕಿದ ಮತ್ತು ಪರಸ್ಪರ ಸೌಹಾರ್ದತೆಯನ್ನು ಬೆಸೆದುಕೊಂಡಿರುವ ನಾಡು. ಆದರೆ ಇಂದು ಹಲವು ರಾಜಕೀಯ ಹಿತಾಸಕ್ತಿಗಳಿಗಾಗಿ ಇಲ್ಲಿನ ಪಾರಂಪರಿಕ ಸೌಹಾರ್ದತೆಯನ್ನು, ಚಳವಳಿಯ ಪರಂಪರೆಯನ್ನು ಇಲ್ಲವಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದುಡಿಯುವ ಜನವರ್ಗದ ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮ್ಮೇಳನದ ಸಂದರ್ಭದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಈ ಸಮ್ಮೇಳನದೊಂದಿಗೆ ಇಲ್ಲಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುತ್ತ ಮತ್ತೆ ಜನತೆಗೆ ತುಳುನಾಡಿನ ಇತಿಹಾಸವನ್ನು ನೆನಪಿಸುವ ಕೆಲಸವಾಗಬೇಕಿದೆ ಎಂದರು.
ಸಭೆಯಲ್ಲಿ ಸಮ್ಮೇಳನದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯುಬಿ.ಲೋಕಯ್ಯ, ಜೆ ಬಾಲಕೃಷ್ಣ ಶೆಟ್ಟಿ,ಯಾದವ ಶೆಟ್ಟಿ, ಪಕ್ಷದ ಗುರುಪುರ ವಲಯ ಮುಖಂಡರಾದ ವಸಂತಿ ಕುಪ್ಪೆಪದವು ಆನಂದ ಇರುವೈಲು,ಅಶೋಕ್ ತಾರಿಗುಡ್ಡೆ, ಹೊನ್ನಯ್ಯ ಅಮೀನ್, ಮನೋಜ್ ವಾಮಂಜೂರ್, ಎನ್.ಎ. ಹಸನಬ್ಬ ಸಿಪಿಐ(ಎಂ) ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮೊದಲಾದವರು ಉಪಸ್ಥಿತರಿದ್ದರು.