ʻಭಾರತ ಬಂದ್‍’ಗೆ ಬೆಂಬಲ ನೀಡಿ-ಜನತೆಗೆ ಎಡಪಕ್ಷಗಳ ಕರೆ

ಸಂಯುಕ್ತ ಕಿಸಾನ್‍ ಮೋರ್ಚಾ ನೀಡಿರುವ ‘ಭಾರತ ಬಂದ್’ ಕರೆಗೆ ಐದು ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ, ರಿವೊಲ್ಯುಷನರಿ ಸೋಶಲಿಸ್ಟ್ ಪಾರ್ಟಿ-ಆರ್‌ಎಸ್‌ಪಿ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‍ ವಾದಿ)-ಸಿಪಿಐ(ಎಂಎಲ್‌) ಜಂಟಿಯಾಗಿ ಒಂದು ಹೇಳಿಕೆ ನೀಡಿ ರೈತರ ಈ ಭಾರತ ಬಂದ್‍ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿವೆ.

ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ಒದಗಿಸಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟ 10ನೇ ತಿಂಗಳಲ್ಲೂ ಮುಂದುವರೆಯುತ್ತಿದೆ.

ಮೋದಿ ಸರಕಾರ ಇನ್ನೂ ಹಟಮಾರಿ ನಿಲುವು ತಳೆದಿದೆ, ಹೋರಾಟ ನಿರತ ರೈತರೊಂದಿಗೆ ಮಾತುಕತೆಗಳಲ್ಲಿ ತೊಡಗಲು ನಿರಾಕರಿಸುತ್ತಿದೆ.

ಎಡಪಕ್ಷಗಳು, ಮೋದಿ ಸರಕಾರದ ಈ ಹಟಮಾರಿತನವನ್ನು ಖಂಡಿಸುತ್ತಲೇ, ಈ ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದು ಮಾಡಬೇಕು, ಕನಿಷ್ಟ ಬೆಂಬಲ ಬೆಲೆಯ ಖಾತ್ರಿಯನ್ನು ಜಾರಿಗೊಳಿಸಬೇಕು, ರಾಷ್ಟ್ರೀಯ ನಗದೀಕರಣ ಕ್ರಮಸರಣಿಯನ್ನು ರದ್ದು ಮಾಡಬೇಕು ಮತ್ತು ಕಾರ್ಮಿಕ ಸಂಹಿತೆಗಳನ್ನು ರದ್ದುಮಾಡಬೇಕು ಎಂದು ಮತ್ತೊಮ್ಮೆ ಆಗ್ರಹಿಸಿವೆ.

ಭಾರತ ಬಂದ್‍ನ ಯಶಸ್ಸಿಗೆ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಈ ಐದು ಎಡಪಕ್ಷಗಳು ತಮ್ಮ ಎಲ್ಲ ಘಟಕಗಳಿಗೆ ಕರೆ ನೀಡಿವೆ.

ಈ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಂ ಯೆಚುರಿ, ಡಿ.ರಾಜ, ದೇಬಬ್ರತ ಬಿಸ್ವಾಸ್, ಮನೋಜ್‍ ಭಟ್ಟಾಚಾರ್ಯ ಮತ್ತು ದೀಪಂಕರ್ ಭಟ್ಟಾಚಾರ್ಯ ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

Leave a Reply

Your email address will not be published. Required fields are marked *