ಬಿಜೆಪಿ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಬುಡಮೇಲು ಹಿಂದುತ್ವ ಸರ್ವಾಧಿಕಾರಶಾಹಿಗೆ ಹಕ್ಕುಗಳ ಆಯೋಗವೂ ಬಲಿ

ಪ್ರಕಾಶ ಕಾರಟ್

KaratA copy
ಪ್ರಕಾಶ ಕಾರಟ್

ರಾಜಕೀಯ ಕನ್ನಡಕ ಹಾಗೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ”ದಲ್ಲಿ ಮಾನವ ಹಕ್ಕುಗಳನ್ನು ನೋಡುವಾಗಲೇ “ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆ” ಆಗುತ್ತಿದೆ ಎಂಬ ಪ್ರಧಾನಿಗಳ ಆರೋಪ ವಾಸ್ತವವಾಗಿ ಕೇಂದ್ರ ಹಾಗೂ ರಾಜ್ಯಗಳ ಬಿಜೆಪಿ ಸರ್ಕಾರಗಳಿಗೇ ಸಂಪೂರ್ಣವಾಗಿ ಅನ್ವಯವಾಗುತ್ತದೆ. ವಾಸ್ತವ ಸಂಗತಿಯೆಂದರೆ, ಹಿಂದುತ್ವ ಸರ್ವಾಧಿಕಾರಶಾಹೀ ಆಳ್ವಿಕೆಯ ಅಡಿಯಲ್ಲಿ, ನಾಗರಿಕರ ಎಲ್ಲ ಮೂಲಭೂತ ಹಕ್ಕುಗಳ ವ್ಯವಸ್ಥಿತ ಹಾಗೂ ವ್ಯಾಪಕ ಪ್ರಮಾಣದ ಉಲ್ಲಂಘನೆ ಆಗುತ್ತಿದೆ. ಎನ್‌ಎಚ್‌ಆರ್‌ಸಿ ಕೂಡ ಈ ಆಳ್ವಿಕೆಯ ಬಲಿಪಶು ಆಗುತ್ತಿದೆ.

ನರೇಂದ್ರ ಮೋದಿ ಸರ್ಕಾರ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಟೊಳ್ಳುಗೊಳಿಸುತ್ತಿದೆ ಮತ್ತು ಸಾರಹೀನಗೊಳಿಸುತ್ತಿದೆ. ರಾ಼‍ಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) 28ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಇದು ಎದ್ದು ಕಾಣುವಂತಿತ್ತು.

ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಕೂಡ ಭಾಗವಹಿಸಿದ್ದರು. ಮಾನವ ಹಕ್ಕುಗಳನ್ನು ಹೇಗೆ ನೋಡಬೇಕೆಂದು ಪ್ರಧಾನಿ ಮೋದಿ ತನ್ನದೇ ಸಂಕುಚಿತ ವಕ್ರ-ದೃಷ್ಟಿಕೋನದಿಂದ ಕಾರ್ಯಕ್ರಮದಲ್ಲಿ ಮಾತನಾಡಿದರು. `ಕೆಲವರು ಮಾನವ ಹಕ್ಕುಗಳನ್ನು ಸ್ವಾರ್ಥ ಹಿತಸಾಧನೆಯ ತಮ್ಮದೇ ದೃಷ್ಟಿಕೋನದಿಂದ ನೋಡಲು ಆರಂಭಿಸಿದ್ದಾರೆ’ ಎಂದು ಮೋದಿ ಭಾಷಣದಲ್ಲಿ ಹೇಳಿದರು. “ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆಯಾಗುವುದು ರಾಜಕೀಯದ ಬಣ್ಣದ ಕನ್ನಡಕ ಹಾಗೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಿಂದ ನೋಡಿದಾಗಲೇ” ಎಂದೂ ಮೋದಿ ಹೇಳಿದರು.

ವಾಸ್ತವವಾಗಿ ಈ ಹೆಕ್ಕುವ ಧೋರಣೆಯೇ ಮೋದಿ ಆಡಳಿತದಲ್ಲಿ ಎದ್ದು ಕಾಣುವ ಗುಣವಾಗಿದೆ. ಮಾನವ ಹಕ್ಕುಗಳನ್ನು ಬಹುಸಂಖ್ಯಾಕವಾದೀ ರಾಜಕೀಯದ ಕನ್ನಡಕದಿಂದ ನೋಡಲಾಗುತ್ತಿದೆ. ಪ್ರಸ್ತುತ ಸರ್ಕಾರದ ಈ ಕುರುಡು ಧೋರಣೆಯೇ ಆಳುವ ವ್ಯವಸ್ಥೆ ಒಂದೋ ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರು, ಮತ್ತು ದಲಿತರು ಹಾಗೂ ಆದಿವಾಸಿಗಳ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಕೈ ಜೋಡಿಸುತ್ತದೆ ಅಥವಾ ಅದಕ್ಕೆ ಕುರುಡಾಗಿರುತ್ತದೆ.

ಧಾರ್ಮಿಕ, ಭಾಷಾ ಅಥವಾ ಬುಡಕಟ್ಟು – ಹೀಗೆ ನಾನಾ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಹೇಗೆ ರಕ್ಷಿಸಲಾಗುತ್ತದೆ ಎನ್ನುವುದೇ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ. ಆದರೆ ಹಿಂದುತ್ವ ಆಡಳಿತದಡಿಯಲ್ಲಿ, ಬಹುಸಂಖ್ಯಾತರ ಮಾನವ ಹಕ್ಕುಗಳಿಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ.

ದೇಶದಾದ್ಯಂತ ದೊಂಬಿ ಬಡಿತಗಳು, ದೈಹಿಕ ಹಲ್ಲೆಗಳು, ಜೀವನೋಪಾಯದ ನಿರಾಕರಣೆ ಮತ್ತು ಪ್ರಾಥಮಿಕ ಹಕ್ಕುಗಳ ನಿರಾಕರಣೆ ಅವ್ಯಾಹತವಾಗಿ ಹಾಗೂ ಪ್ರಶ್ನಾತೀತವಾಗಿ ನಡೆಯುತ್ತಿರುವುದು ಯಾಕೆಂಬುದಕ್ಕೆ ಬೇರೆ ವಿವರಣೆ ಬೇಕಾಗಿಯೇ ಇಲ್ಲ. ಮಧ್ಯ ಪ್ರದೇಶದಂಥ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಸ್ವತಃ ಅಲ್ಲಿನ ಗೃಹ ಸಚಿವರೇ ಸಮರ್ಥಿಸುತ್ತಾರೆ. ಇಂದೋರ್‌ನ ಒಂದು ಕಾಲೇಜ್ ಆಯೋಜಿಸಿದ್ದ ಗರ್ಬಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಾಲ್ಕು ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಯುವಕರ ಬಂಧನ ಇತ್ತೀಚಿನ ಉದಾಹರಣೆಯಾಗಿದೆ.

“ರಾಜಕೀಯ ಕನ್ನಡಕ ಹಾಗೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ” ದಲ್ಲಿ ಮಾನವ ಹಕ್ಕುಗಳನ್ನು ನೋಡುವಾಗಲೇ “ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆ” ಆಗುತ್ತಿದೆ ಎಂದು ಮೋದಿ ಮಾತನಾಡುವಾಗ ಈ ಆರೋಪ ವಾಸ್ತವವಾಗಿ ಕೇಂದ್ರ ಹಾಗೂ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳಿಗೇ ಸಂಪೂರ್ಣವಾಗಿ ಅನ್ವಯವಾಗುತ್ತದೆ. ನಿಜ ಹೇಳಬೇಕೆಂದರೆ, ಸಾಮಾನ್ಯ ಮುಸ್ಲಿಮರ ಹಕ್ಕುಗಳನ್ನು ತುಳಿದು ಹಾಕಿ ಕೋಮು ಧೃವೀಕರಣದಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಸಂಕುಚಿತ ಹಿಂದುತ್ವ ರಾಜಕಾರಣವೇ.

sychophancy is right of every human
ಭಟ್ಟಂಗಿತನ ಪ್ರತಿ ಮಾನವನ ಹಕ್ಕು…….! (ವ್ಯಂಗ್ಯಚಿತ್ರ: ಮಂಜುಲ್,ನ್ಯೂಸ್‍9)

ಎನ್‌ಎಚ್‌ಆರ್‌ಸಿಯ ಹಾಲಿ ಮುಖ್ಯಸ್ಥರೂ ಕೂಡ ಸಂಪೂರ್ಣವಾಗಿ ಆಳುವ ವ್ಯವಸ್ಥೆಯ ಪಂಕ್ತಿಯಲ್ಲೇ ನಿಂತಿರುವುದು ಆಯೋಗದ ಅಧ್ಯಕ್ಷ ಜಸ್ಟಿಸ್ ಅನಿಲ್ ಕುಮಾರ್ ಮಿಶ್ರಾರವರ ಭಾಷಣದಿಂದ ಸ್ಪಷ್ಟವಾಗಿದೆ. ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗದಲ್ಲಿ ಒಂದು ಶಾಂತಿಯುತ ಸನ್ನಿವೇಶವನ್ನು ಪೋಷಿಸಿ `ಒಂದು ಹೊಸ ಯುಗ’ ಮೂಡಿ ಬರುವಂತೆ ಮಾಡಿದ ಪೂರ್ಣ ಶ್ರೇಯವನ್ನು ಗೃಹ ಸಚಿವ ಅಮಿತ್ ಷಾರ “ದಣಿವರಿಯದ ಪ್ರಯತ್ನ”ಗಳಿಗೆ ಸಲ್ಲಿಸಿದ್ದಾರೆ.

ಇತ್ತೀಚಿನ ಅವಧಿಯಲ್ಲಿ ಪ್ರಮಾಣ ಮತ್ತು ತೀವ್ರತೆಯಲ್ಲಿ ಗರಿಷ್ಠ ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದರೆ, ಅದು ಜಮ್ಮು ಮತ್ತು ಕಾಶ್ಮೀರದಲ್ಲಿ. ಅದರಲ್ಲೂ ಸಂವಿಧಾನದ 370ನೇ ವಿಧಿ ತೆಗೆದು ಹಾಕಿ ಆ ರಾಜ್ಯವನ್ನು ಒಡೆದು ಹಾಕಿ ದಿಗ್ಬಂಧನಗಳನ್ನು ವಿಧಿಸಲು ಅಮಿತ್ ಷಾ ಕ್ರಮಗಳನ್ನು ಆರಂಭಿಸಿದ ನಂತರವೇ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕುರಿತ ಹೈಕಮಿಷನರ್ ಮಿಷೆಲೆ ಬಾಷೆಲೆ ಅವರ ಗಮನವನ್ನೂ ಸೆಳೆದಿದ್ದು, ಅವರು ಸೆಪ್ಟೆಂಬರ್ 13ರಂದು ನಡೆದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 48ನೇ ಅಧಿವೇಶನದಲ್ಲಿ ಇದನ್ನು ಹೇಳಿದರು. ತಮ್ಮ ಭಾಷಣದಲ್ಲಿ ಅವರು “ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕರು ಸಭೆ ಸೇರುವ ಮೇಲಿನ ನಿರ್ಬಂಧಗಳು ಹಾಗೂ ಪದೇ ಪದೇ ಸಂವಹನ ಕಡಿತಗಳು ಮುಂದುವರಿದಿವೆÉ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿದ್ದಕ್ಕೆ ನೂರಾರು ಜನರು ಬಂಧನದಲ್ಲೇ ಇದ್ದಾರೆ. ಹಾಗೂ ಪತ್ರಕರ್ತರು ಹೆಚ್ಚೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ’ ಎಂದರು. ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾನೂನಿನ (ಯುಎಪಿಎ) `ಕಳವಳಕಾರಿ’ ಬಳಕೆ ಆಗುತ್ತಿದೆ ಎಂಬುದನ್ನು ಗಮನಿಸುತ್ತ ಆ ಪೈಕಿ ಜಮ್ಮು ಮತ್ತು ಕಾಶ್ಮೀರದಲ್ಲೇ ಹೆಚ್ಚಿನ ಪ್ರಕರಣಗಳಿವೆ ಎಂದೂ ಬಾಷೆಲೆ ಹೇಳಿದರು.

MICHELE BACHELET1
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಷೆಲೆ ಬಾಷೆಲೆ

ದ ವಕ್ತಾರರು ಸಹಜವಾಗಿಯೇ ಈ ಅಭಿಪ್ರಾಯಗಳನ್ನು ನಿರಾಕರಿಸಿದ್ದಾರೆ. ಆದರೆ, ಸರ್ಕಾರದ ನಿಲುವನ್ನು ಎನ್‌ಎಚ್‌ಆರ್‌ಸಿ ಅಧ್ಯಕ್ಷರು ಕೂಡ ತಮ್ಮ ಅನುಮೋದಿಸಿರುವುದು ಸ್ವಯಂವೇದ್ಯ. ಏಕೆಂದರೆ ಅವರು ತಮ್ಮ ಭಾಷಣದಲ್ಲಿ `ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರದಲ್ಲಿ ಬಾಹ್ಯ ಶಕ್ತಿಗಳು ಭಾರತದ ವಿರುದ್ಧ ಹುಸಿ ಆರೋಪಗಳನ್ನು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದನ್ನು ವಿರೋಧಿಸಬೇಕು’ ಎಂದು ಹೇಳಿದರು. ಜಸ್ಟಿಸ್ ಮಿಶ್ರಾ ಲೆಕ್ಕದಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಕೂಡ ಒಂದು ಬಾಹ್ಯ ಶಕ್ತಿಯೇ ಆಗಿದೆ!

ಇಂಥ ಒಬ್ಬ ವ್ಯಕ್ತಿಯು ಮುಖ್ಯಸ್ಥರಾಗಿರುವಾಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭಾರತೀಯ ಪ್ರಜೆಗಳ ಮೂಲಭೂತ ಮಾನವ ಹಕ್ಕುಗಳನ್ನು ಎತ್ತಿ ಹಿಡಿದೀತೆಂದು ಹೇಗೆ ನಿರೀಕ್ಷಿಸಬಹುದು? ವಾಸ್ತವ ಸಂಗತಿಯೆಂದರೆ, ಹಿಂದುತ್ವ ಸರ್ವಾಧಿಕಾರಶಾಹೀ ಆಳ್ವಿಕೆಯ ಅಡಿಯಲ್ಲಿ, ನಾಗರಿಕರ ಎಲ್ಲ ಮೂಲಭೂತ ಹಕ್ಕುಗಳ ವ್ಯವಸ್ಥಿತ ಹಾಗೂ ವ್ಯಾಪಕ ಪ್ರಮಾಣದ ಉಲ್ಲಂಘನೆ ಆಗುತ್ತಿದೆ. ಎನ್‌ಎಚ್‌ಆರ್‌ಸಿ ಕೂಡ ಈ ಆಳ್ವಿಕೆಯ ಬಲಿಪಶು ಆಗುತ್ತಿದೆ.

ಅನು: ವಿಶ್ವ

 NHRC1

 

Leave a Reply

Your email address will not be published. Required fields are marked *