ಕೇಂದ್ರ ಅಬಕಾರಿ ಸುಂಕದಲ್ಲಿ ಪೆಟ್ರೋಲ್ ಮೇಲೆ 5 ರೂ. ಪ್ರತಿ ಲೀಟರ್ ಮತ್ತು ಡೀಸೆಲ್ಗೆ 10 ರೂ.ಗಳ ಕಡಿತವನ್ನು ಕೇಂದ್ರ ಸರ್ಕಾರ ಪ್ರಕಟಿಸಿರುವುದು ಕೇವಲ ಸಾಂಕೇತಿಕ ಕಡಿತವಾಗಿದೆ, ಇದು ಜನರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಕೇಂದ್ರ ಅಬಕಾರಿ ಸುಂಕವೇ ಪ್ರತಿ ಲೀಟರ್ ಪೆಟ್ರೋಲ್ ಗೆ 33 ರೂ. ಮತ್ತು ಡೀಸೆಲ್ಗೆ 32 ರೂ., ಇದರಲ್ಲಿ ಕೇವಲ 5ರೂ. ಮತ್ತು 10ರೂ. ಕಡಿತ ಅತ್ಯಲ್ಪ. ಇದು ಆರ್ಥಿಕತೆ ಮತ್ತು ಜನರ ಮೇಲಿನ ಇಂಧನ ಬೆಲೆಯ ವಿಪರೀತ ಹೊರೆಯನ್ನು ಕಡಿಮೆ ಮಾಡುವುದಿಲ್ಲ. ಇದು ಬಿಜೆಪಿಗೆ ಕೆಲವು ರಾಜ್ಯಗಳ ಉಪಚುನಾವಣೆಗಳಲ್ಲಿ ದೊರೆತ ಪ್ರತಿಕೂಲ ಫಲಿತಾಂಶಗಳಿಗೆ ತಕ್ಷಣದ ನಿರೀಕ್ಷಿತ ಪ್ರತಿಕ್ರಿಯೆಯಷ್ಟೇ.
ಇಂಧನ ಬೆಲೆಗಳನ್ನು ತರ್ಕಬದ್ಧ ಮಟ್ಟದಲ್ಲಿ ನಿರ್ವಹಿಸುವ ಏಕೈಕ ಮಾರ್ಗವೆಂದರೆ ಅಬಕಾರಿ ಸುಂಕಗಳಲ್ಲಿ ಗಣನೀಯ ಕಡಿತ ಮತ್ತು ಇಂಧನದ ಮೇಲೆ ವಿಧಿಸಲಾದ ವಿಶೇಷ ಉಪಕರ(ಸೆಸ್)ವನ್ನು ತೆಗೆದುಹಾಕುವುದು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಅಕ್ಟೋಬರ್ ಕೇಂದ್ರ ಸಮಿತಿ ಸಭೆಯ ಕರೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯನ್ನು ಮುಂದುವರೆಸುವಂತೆ ತನ್ನ ಎಲ್ಲಾ ಘಟಕಗಳಿಗೆ ಮನವಿ ಮಾಡಿದೆ.