ಐತಿಹಾಸಿಕ ರೈತ ಹೋರಾಟದ ಮೊದಲ ವಾರ್ಷಿಕೋತ್ಸವವನ್ನು ನವೆಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ ಅಣಿನೆರೆಸುವಿಕೆಯನ್ನು ಬಲಪಡಿಸುವ ಮೂಲಕ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಆಚರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ ಸೌಹಾರ್ದ ಮತ್ತು ಬೆಂಬಲವನ್ನು ಪೊಲಿಟ್ ಬ್ಯೂರೋ ವ್ಯಕ್ತಪಡಿಸಿದೆ.
ದೊಡ್ಡ ಪ್ರಮಾಣದ ಖಾಸಗೀಕರಣದ ಮೂಲಕ ದೇಶದ ಸೊತ್ತುಗಳ ಲೂಟಿಯ ವಿರುದ್ಧ ಮತ್ತು ಕಾರ್ಮಿಕ ಸಂಹಿತೆಗಳ ರದ್ದು ಮತ್ತಿತರ ಬೇಡಿಕೆಗಳನ್ನು ಆಗ್ರಹಿಸಿ ನಡೆದ ಕಾರ್ಮಿಕ ವರ್ಗದ ಐತಿಹಾಸಿಕ ಮುಷ್ಕರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸುವ ಕೇಂದ್ರ ಕಾರ್ಮಿಕ ಸಂಘಗಳ ಕರೆಗೆ ಪೊಲಿಟ್ ಬ್ಯೂರೋ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ನವೆಂಬರ್ 13 ಮತ್ತು 14ರಂದು ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಪೊಲಿಟ್ ಬ್ಯುರೊ, ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಬೆಂಬಲವನ್ನು ವ್ಯಕ್ತಪಡಿಸಿದೆ ಹಾಗೂ ನಮ್ಮ ಜಾತ್ಯತೀತ ಹಂದರಕ್ಕೆ ಅಪಾಯವನ್ನುಂಟುಮಾಡುವ ಮತ್ತು ಸಂವಿಧಾನವು ಖಾತರಿಪಡಿಸುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ಪ್ರತಿಭಟನಾ ದಿನಾಚರಣೆ ನಡೆಸಬೇಕು ಎಂದು ಪೊಲಿಟ್ ಬ್ಯೂರೋ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.
ಇದಲ್ಲದೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಸೆಸ್ ಮತ್ತು ಸರ್ಚಾರ್ಜ್ಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಜನರಿಗೆ ಸ್ವಲ್ಪ ಅರ್ಥಪೂರ್ಣ ಪರಿಹಾರವನ್ನು ಒದಗಿಸಬೇಕು, ಕೇಂದ್ರ ಸರಕಾರ ಎಲ್ಲಾ ಬೆಳೆಗಳನ್ನು ಎಂಎಸ್ಪಿ ದರದಲ್ಲಿ ಖರೀದಿಸಬೇಕು ಮತ್ತು ರಫೆಲ್ ವ್ಯವಹಾರ ಕುರಿತ ತಾಜಾಪುರಾವೆಗಳ ಹಿನ್ನೆಲೆಯಲ್ಲಿ ಒಂದು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು ಎಂದೂ ಪೊಲಿಟ್ ಬ್ಯೂರೋ ಆಗ್ರಹಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಅಪಹಾಸ್ಯ
ಕೇಂದ್ರ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 5 ರೂ. ಮತ್ತು ಡೀಸೆಲ್ಗೆ ಲೀಟರ್ಗೆ 10 ರೂ.ಕಡಿತ ಮಾಡಿರುವುದು ಪೆಟ್ರೋಲಿಯಂ ಉತ್ಪಾದನೆಯ ಹೆಚ್ಚುತ್ತಿರುವ ಬೆಲೆಗಳ ಹೊರೆಯಿಂದ ಬಳಲುತ್ತಿರುವ ಜನರಿಗೆ ಯಾವುದೇ ಪರಿಹಾರವನ್ನು ಕೊಡುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟೀಕಿಸಿದೆ.
ಈ ಲೆಕ್ಕಮಾತ್ರದ ಕಡಿತವನ್ನು ಕೇಂದ್ರೀಯ ಅಬಕಾರಿಯು ರೂ. ಪ್ರತಿ ಲೀಟರ್ ಪೆಟ್ರೋಲ್ ಗೆ 33 ರೂ. ಪ್ರತಿ ಲೀಟರ್ ಡೀಸೆಲ್ಗೆ 32 ರೂ. ಎಂಬ ಸಂಗತಿಯ ಬೆಳಕಿನಲ್ಲಿ ನೋಡಬೇಕಾಗಿದೆ.
ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಹಂಚಿಕೊಳ್ಳಬಹುದಾದ ಅಬಕಾರಿ ಸುಂಕಗಳಿಂದ ಈ ಅಲ್ಪ ಕಡಿತವನ್ನು ಮಾಡಿದೆ. ಆದರೆ, ಅದು ಮೊತ್ತದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಸರ್ಚಾರ್ಜ್)ವನ್ನು ಮೊತ್ರದ ಹೆಚ್ಚುವರಿ ಅಬಕಾರಿ ಸುಂಕ (ಸೆಸ್)ವನ್ನು ಮತ್ತು ಮೊತ್ತದೆ ಇತರ ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳನ್ನು ಸಂಗ್ರಹಿಸುವುದನ್ನು ಮುಂದುವರೆಸುತ್ತದೆ. ಈ ವರ್ಷ ಈ ಬಾಬ್ತುಗಳಲ್ಲಿ ಅದು ಸಂಗ್ರಹಿಸಿರುವ ಮೊತ್ತಗಳು ಅನುಕ್ರಮವಾಗಿ ರೂ. 74,350 ಕೋಟಿ, ರೂ. 1,98,000 ಕೋಟಿ ಮತ್ತು ರೂ. 15,150 ಕೋಟಿ, ಅಂದರೆ ರಾಜ್ಯಗಳೊಂದಿಗೆ ಹಂಚಿಕೊಳ್ಳದ ಮೊತ್ತ ಒಟ್ಟು ರೂ. 2.87 ಲಕ್ಷ ಕೋಟಿ ರೂ. ಇದು ಹಾಗೆಯೇ ಮುಂದುವರೆಯುತ್ತದೆ.
ಈ ಹೆಚ್ಚುವರಿ ಸೆಸ್ ಮತ್ತು ಸರ್ಚಾರ್ಜ್ಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಜನರಿಗೆ ಸ್ವಲ್ಪ ಅರ್ಥಪೂರ್ಣ ಪರಿಹಾರವನ್ನು ಒದಗಿಸಬೇಕು ಎಂದು ಪೊಲಿಟ್ ಬ್ಯೂರೋ ಒತ್ತಾಯಿಸಿದೆ.
ಭತ್ತ ಸಂಗ್ರಹಣೆ
ಕೇಂದ್ರೀಯ ಗೋದಾಮುಗಳು ಭರ್ತಿಯಾಗಿವೆ ಎಂಬ ನೆವವನ್ನು ಮುಂದೊಡ್ಡಿ ಕೆಲವು ರಾಜ್ಯಗಳಿಂದ ಎಂಎಸ್ಪಿ ದರದಲ್ಲಿ ಭತ್ತವನ್ನು ಖರೀದಿಸದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪೊಲಿಟ್ ಬ್ಯೂರೋ ಖಂಡಿಸಿದೆ. ಗೋದಾಮುಗಳಲ್ಲಿ ಕೊಳೆಯುತ್ತಿರುವ ಆಹಾರಧಾನ್ಯಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ವಿತರಿಸಬೇಕು.
ಕೃಷಿ ಕಾನೂನುಗಳನ್ನು ರದ್ದುಪಡಿಸಲು ಮತ್ತು ಎಲ್ಲಾ ಬೆಳೆಗಳಿಗೆ ಎಂಎಸ್ಪಿಗೆ ಮಾರಾಟ ಮಾಡುವ ಕಾನೂನುಬದ್ಧ ಹಕ್ಕನ್ನು ಒತ್ತಾಯಿಸಿ ರೈತರು ಒಂದು ವರ್ಷದಿಂದ ಐತಿಹಾಸಿಕ ಹೋರಾಟ ನಡೆಸುತ್ತಿರುವ ಸಮಯದಲ್ಲಿ ಈ ಕ್ರೂರ ನಿರ್ಧಾರವು ಬಂದಿದೆ.
ಕೇಂದ್ರವು ಎಲ್ಲಾ ಬೆಳೆಗಳನ್ನು ಎಂಎಸ್ಪಿ ದರದಲ್ಲಿ ಖರೀದಿಸಬೇಕು ಎಂದು ಪೊಲಿಟ್ ಬ್ಯೂರೋ ಒತ್ತಾಯಿಸಿದೆ.
ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು
ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದಾಳಿಗಳ ವರದಿಗಳು ಪ್ರವಾಹದಂತೆ ಬರುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ. ಸ್ಪಷ್ಟವಾಗಿ, ಸರ್ಕಾರಗಳ ಕೃಪಾಪೋಷಣೆ ಪಡೆದಿರುವ ಬಲಪಂಥೀಯ ಗುಂಪುಗಳಿಗೆ ಇಂತಹ ಅಪರಾಧಗಳನ್ನು ಎಸಗುವ ಧೈರ್ಯ ಮಾಡುತ್ತಿವೆ ಎಂದು ಪೊಲಿಟ್ ಬ್ಯುರೊ ಹೇಳಿದೆ. ಇವುಗಳಿಗೆ ತುತ್ತಾದವರನ್ನು ರಕ್ಷಿಸುವ ಬದಲು ಆಡಳಿತ, ವಾಸ್ತವವಾಗಿ ಅವರನ್ನು ಮತ್ತು ಅವರ ಬೆಂಬಲಿಗರನ್ನು ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸುವ ಮೂಲಕ ಶಿಕ್ಷಿಸುತ್ತಿದೆ. ಅಸ್ಸಾಂನಲ್ಲಿ ಮತ್ತು ಇತ್ತೀಚೆಗೆ ತ್ರಿಪುರಾದಲ್ಲಿ ದೊಂಬಿ ಹಿಂಸಾಚಾರವು ರಾಜ್ಯ ಆಡಳಿತದ ಆಶ್ರಯದಲ್ಲಿ ಸಂಭವಿಸಿದೆ, ಅಂತಹ ದಾಳಿಗಳ ಬಗ್ಗೆ ಯಾರಾದರೂ ವರದಿ ಮಾಡಿದರೆ ಅವರ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ, ಮುಸ್ಲಿಮರ ವಿರುದ್ಧ ಅಸಂಖ್ಯ “ಎನ್ಕೌಂಟರ್” ಗಳ ಜೊತೆಗೆ ಎನ್ಎಸ್ಎ ಬಳಕೆಯು ಸಾಮಾನ್ಯ ಸಂಗತಿಯಾಗುತ್ತಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ, ಗುರ್ಗಾಂವ್ನಲ್ಲಿ ಇತ್ತೀಚಿನ ಘಟನೆಗಳು ತೋರಿಸಿರುವಂತೆ ಪ್ರಾರ್ಥನೆ ಸಲ್ಲಿಸುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ.
ಮಾನವ ಹಕ್ಕುಗಳ ಗುಂಪುಗಳು ಇತ್ತೀಚೆಗೆ 2021 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಕ್ರಿಶ್ಚಿಯನ್ನರ ಮೇಲಿನ 300 ದಾಳಿಯ ಘಟನೆಗಳ ವರದಿಯನ್ನು ಪ್ರಕಟಿಸಿವೆ. ಅಂತಹ ದಾಳಿಗಳು ಮುಂದುವರಿಯುತ್ತಿವೆ. ಎಫ್ಐಆರ್ ದಾಖಲಾದರೂ ಕ್ರಮ ಕೈಗೊಳ್ಳುತ್ತಿಲ್ಲ. ಇವರಲ್ಲಿ ಹಲವರು ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರು. ಚರ್ಚ್ಗಳನ್ನು ಧ್ವಂಸಗೊಳಿಸಲಾಗಿದೆ.
ನಮ್ಮ ಜಾತ್ಯತೀತ ಹಂದರಕ್ಕೆ ಅಪಾಯವನ್ನುಂಟುಮಾಡುವ ಮತ್ತು ಸಂವಿಧಾನವು ಖಾತರಿಪಡಿಸುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ಪ್ರತಿಭಟನಾ ದಿನಾಚರಣೆ ನಡೆಸಬೇಕು ಎಂದು ಪೊಲಿಟ್ ಬ್ಯೂರೋ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.
ಬಿ.ಎಸ್.ಎಫ್. ಕಾರ್ಯಾಚರಣೆಯ ವ್ಯಾಪ್ತಿಯ ವಿಸ್ತರಣೆಯನ್ನು ಹಿಂಪಡೆಯಬೇಕು
ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಗಡಿ ಭದ್ರತಾ ಪಡೆಗಳ ಕಾರ್ಯಾಚರಣೆಯ ವ್ಯಾಪ್ತಿಯನ್ನು ಅಂತರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ಗಳಿಂದ 50 ಕಿಲೋಮೀಟರ್ಗಳ ವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರದ ನಿರ್ಧಾರವು ರಾಜ್ಯಗಳ ಹಕ್ಕುಗಳು ಮತ್ತು ನಮ್ಮ ಸಂವಿಧಾನದ ಒಂದು ಮೂಲ ಅಂಶವಾದ ಒಕ್ಕೂಟ ತತ್ವದ ಮೇಲೆ ತೀವ್ರವಾದ ಪ್ರಹಾರವಾಗಿದೆ ಎಂದು ಪೊಲಿಟ್ ಬ್ಯುರೊ ಖಂಡಿಸಿದೆ.
ಇನ್ನೂ ಕೆಟ್ಟ ಸಂಗತಿಯೆಂದರೆ, ರಾಜ್ಯಗಳೊಂದಿಗೆ ಸಮಾಲೋಚನೆಯಿಲ್ಲದೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್ ಮತ್ತು ಕಾನೂನು- ವ್ಯವಸ್ಥೆ ಭಾರತೀಯ ಸಂವಿಧಾನದ ರಾಜ್ಯಪಟ್ಟಿಯಲ್ಲಿರುವ ವಿಷಯವಾಗಿದೆ.
ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸಿದೆ.
ರಫೇಲ್ ಹಗರಣ
ಫ್ರೆಂಚ್ ತನಿಖಾ ಪತ್ರಿಕೆ ‘ಮೀಡಿಯಾಪಾರ್ಟ್’ ಭಾರತದಲ್ಲಿ ಮಧ್ಯವರ್ತಿಗಳಿಗೆ ಕಮಿಷನ್ಗಳು ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳ ತಾಜಾ ಪುರಾವೆಗಳನ್ನು, ಇದರಿಂದ ಡಸಾಲ್ಟ್ ಏವಿಯೇಷನ್ಗೆ ಗಣನೀಯವಾಗಿ ಲಾಭವಾಗಿದೆ ಎಂದು ತೋರಿಸುವ ಅಧಿಕೃತ ಮಾತುಕತೆಗಳ ವಿವರಗಳೊಂದಿಗೆ ಪ್ರಕಟಪಡಿಸಿದ ನಂತರವೂ, ಕೇಂದ್ರ ಸರ್ಕಾರವು ಹಗರಣದ ತನಿಖೆಯನ್ನು ನಡೆಸಲು ನಿರಾಕರಿಸುತ್ತಿದೆ.
ರಫೇಲ್ ವ್ಯವಹಾರದಲ್ಲಿರುವ ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಸಮಾಧಿ ಮಾಡುವ ಮತ್ತು ಅದನ್ನು ಮುಚ್ಚಿಹಾಕುವ ಕಾರ್ಯಾಚರಣೆಯ ಪ್ರಯತ್ನಗಳು ನಿಂದನೀಯ ಎಂದು ಪೊಲಿಟ್ ಬ್ಯುರೊ ಹೇಳಿದೆ. ಇತರ ದೇಶಗಳ ಹಲವು ಸರ್ಕಾರಗಳು ಕೆಲವು ರೀತಿಯಲ್ಲಿ ತನಿಖೆಗೆ ಆದೇಶ ನೀಡಿದ್ದರೂ, ಮೋದಿ ಸರ್ಕಾರವು ಅಂತಹ ತನಿಖೆಯನ್ನು ನಡೆಸಲು ನಿರಾಕರಿಸುತ್ತ ತನ್ನ ಮೊಂಡುತನವನ್ನು ಮುಂದುವರೆಸಿದೆ. ಇದರಲ್ಲಿ ಸಂಪೂರ್ಣ ಶಾಮೀಲಿನ ವಾಸನೆ ಬರುತ್ತಿದೆ.
ಒಂದು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಕರೆಗಳಿಗೆ ಬೆಂಬಲ
ಐತಿಹಾಸಿಕ ರೈತ ಹೋರಾಟದ ಮೊದಲ ವಾರ್ಷಿಕೋತ್ಸವವನ್ನು ನವೆಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ ಅಣಿನೆರೆಸುವಿಕೆಯನ್ನು ಬಲಪಡಿಸುವ ಮೂಲಕ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಆಚರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರಕ್ಕೆ ಸಿಪಿಐ(ಎಂ)ನ ಸೌಹಾರ್ದ ಮತ್ತು ಬೆಂಬಲವನ್ನು ಪೊಲಿಟ್ ಬ್ಯೂರೋ ವ್ಯಕ್ತಪಡಿಸಿದೆ.
ದೊಡ್ಡ ಪ್ರಮಾಣದ ಖಾಸಗೀಕರಣದ ಮೂಲಕ ದೇಶದ ಸೊತ್ತುಗಳ ಲೂಟಿಯ ವಿರುದ್ಧ ಮತ್ತು ಕಾರ್ಮಿಕ ಸಂಹಿತೆಗಳ ರದ್ದು ಮತ್ತಿತರ ಬೇಡಿಕೆಗಳನ್ನು ಆಗ್ರಹಿಸಿ ನಡೆದ ಕಾರ್ಮಿಕ ವರ್ಗದ ಐತಿಹಾಸಿಕ ಮುಷ್ಕರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸುವ ಕೇಂದ್ರ ಕಾರ್ಮಿಕ ಸಂಘಗಳ ಕರೆಗೆ ಪೊಲಿಟ್ ಬ್ಯೂರೋ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.