ಸಿಬಿಐ ಮತ್ತು ಇಡಿ ನಿರ್ದೇಶಕರ ಕಾರ್ಯಾವಧಿ ಕುರಿತ ಸುಗ್ರೀವಾಜ್ಞೆಗಳು ಆಳುವ ಪಕ್ಷದ ಅಜೆಂಡಾದ ಜಾರಿಗಾಗಿ: ಸಿಪಿಐ(ಎಂ)

ಸಿ.ಬಿ.ಐ. ಮತ್ತು ಇ.ಡಿ. ನಿರ್ದೇಶಕರ ಅಧಿಕಾರಾವಧಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

ಸಿ.ಬಿ.ಐ. ಮತ್ತು ಇ.ಡಿ ಎರಡೂ ಆಡಳಿತ ಪಕ್ಷದ ಕಾರ್ಯಸೂಚಿಯನ್ನು ಮುನ್ನಡೆಸಲು ಅದರ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿಪಕ್ಷಗಳ ನಾಯಕರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಈ ಏಜೆನ್ಸಿಗಳ ಸ್ವಾಯತ್ತತೆಯನ್ನು ಮತ್ತಷ್ಟು ಬುಡಮೇಲು ಮಾಡಲು ಮತ್ತು ಪ್ರಮುಖ ಅಧಿಕಾರಿಗಳನ್ನು ಆಳುವವರಿಗೆ ಹೆಚ್ಚು ವಿಧೇಯರನ್ನಾಗಿ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದಿರುವ ಸಿಪಿಐ(ಎಂ), ನವೆಂಬರ್ 29 ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಕೆಲವೇ ದಿನಗಳ ಮೊದಲು  ಈ ಸುಗ್ರೀವಾಜ್ಞೆಗಳನ್ನು ಪ್ರಕಟಿಸಿರುವುದು ದೂಷಣೀಯ,  ಬಿಜೆಪಿ ಮತ್ತೆ-ಮತ್ತೆ “ಸುಗ್ರೀವಾಜ್ಞೆ ರಾಜ್ಯಭಾರ’ಕೆ ಇಳಿಯುತ್ತಿರುವುದು  ಪ್ರಜಾಪ್ರಭುತ್ವ-ವಿರೋಧಿಯಾಗಿದೆ ಎಂದು ಟೀಕಿಸಿದೆ.

ಈ ಸುಗ್ರೀವಾಜ್ಞೆಗಳು, ಯಾವುದೇ ಅಧಿಕಾರಾವಧಿಯ ವಿಸ್ತರಣೆಯು ಚಾಲ್ತಿಯಲ್ಲಿರುವ  ತನಿಖೆಗೆ ಅನುಕೂಲವಾಗುವಂತೆ ಅಲ್ಪಾವಧಿಗೆ ಮತ್ತು “ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ” ಇರಬೇಕು ಎಂದು ವಿಧಿಸಿರುವ  ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಬದಿಗೊತ್ತುವ  ಗುರಿಯನ್ನು ಸಹ ಹೊಂದಿವೆ.. ಈ ಸುಗ್ರೀವಾಜ್ಞೆಗಳೊಂದಿಗೆ ಕೇಂದ್ರ ಸರ್ಕಾರವು ಈಗ ಮೂರು ಒಂದು-ವರ್ಷದ ವಿಸ್ತರಣೆಯನ್ನು ನೀಡಬಹುದು.

ಈ ಸುಗ್ರೀವಾಜ್ಞೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. ಸಂಸತ್ತಿನಲ್ಲಿ ಈ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಪರಿವರ್ತಿಸುವ ಕ್ರಮವನ್ನು ಸಿಪಿಐ(ಎಂ) ಸಂಸದರು ವಿರೋಧಿಸುತ್ತಾರೆ ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *