ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ 23ನೇ ಸಮ್ಮೇಳನ
ಕೇಂದ್ರದಲ್ಲಿ ಹೆಸರಿಗೆ ಮಾತ್ರ ಬಿಜೆಪಿ ನೇತೃತ್ವದ ಸರಕಾರವಿದೆ. ಆದರೆ ಆಡಳಿತ ನಡೆಸುವುದು ಸಂಘ ಪರಿವಾರವಾಗಿದೆ. ಈ ಸಂಘ ಪರಿವಾರ ಮತ್ತು ಬಿಜೆಪಿ ಭಕ್ತಿಯ ಹೆಸರಲ್ಲಿ ಜನರಿಗೆ ಮೋಸಮಾಡುತ್ತಿದೆ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವುದು ಮೋದಿ ಮತ್ತು ಸಂಘಪರಿವಾರದ ಉದ್ದೇಶವಾಗಿದೆ ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ, ಶಾಸಕಿ ಕೆ.ಕೆ ಶೈಲಜಾ ಟೀಚರ್ ಆರೋಪಿಸಿದ್ದಾರೆ.
ಗುರುಪುರ ಕೈಕಂಬದ ಖಾಸಗಿ ಸಭಾಗೃಹದ ಮೈದಾನದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ 23ನೇ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ಪಕ್ಷದ ನೀತಿಗಳು ಕಾರ್ಪೊರೇಟ್ ಪರವಾದ ನೀತಿಗಳಾಗಿವೆ. ದೇಶದಲ್ಲಿ ಧರ್ಮಗಳ ಮಧ್ಯೆ ವೈಷಮ್ಯ ತಂದು ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಕೇವಲ ಹಿಂದೂಗಳು ಮಾತ್ರ ಇದ್ದರೆ ಸಾಕು ಎಂದು ಮೋದಿ, ಅಮಿತ್ ಶಾ, ಸಂಘಪರಿವಾರದ ಮುಖಂಡರು ಹೇಳುತ್ತಾರೆ. ಹಿಂದೂ ಹೆಸರಲ್ಲಿ ಮೇಲ್ಜಾತಿಯವರು ಅಭಿವೃದ್ಧಿ ಹೊಂದಿದರೆ, ಇತರರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಿಂದೆ ಗುಜರಾತ್ನಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಭಾವ ಇರಲಿಲ್ಲ, ಕರಸೇವೆಯ ಹೆಸರಲ್ಲಿ ಜನಾಂಗೀಯ ಹತ್ಯೆ ಮಾಡಲಾಗಿದೆ. ಬಿಜೆಪಿಯ ಒಡೆದಾಳುವ ಈ ನೀತಿಯ ವಿರುದ್ಧ ಹೋರಾಟ ತೀವ್ರಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗುವ ಅಪಾಯವಿದೆ ಎಂದು ಶೈಲಜಾ ಟೀಚರ್ ಎಚ್ಚರಿಸಿದರು.
ಬಿಜೆಪಿಯು ಕೇರಳದಲ್ಲೂ ತಳವೂರಲು ಯತ್ನಿಸುತ್ತಿದೆ. ಆದರೆ ಸಿಪಿಐ(ಎಂ) ಹಾಗೂ ಕೇರಳದ ಜನ ಅದಕ್ಕೆ ಎಂದೂ ಅವಕಾಶ ಕೊಡುವುದಿಲ್ಲ ಎಂದರು. ಕಳೆದ 5 ವರ್ಷದಲ್ಲಿ ಕೇರಳ ಸರಕಾರ ಜನಪಯೋಗಿ ಕೆಲಸ ಮಾಡಿದೆ. ಹೃದಯಂ, ಕಾರುಣ್ಯ ಸ್ಕೀಮ್ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಸಾಧನೆ ಸಾಕಷ್ಟಿದೆ. ಜನರ ಆಶೋತ್ತರಗಳಿಗೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದರು.
ಬಹಿರಂಗ ಸಭೆಯಲ್ಲಿ ಪಕ್ಷದ ಜಿಲ್ಲಾ ಮುಖಂಡ ವಸಂತ ಆಚಾರಿ, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಕೆ.ಆರ್. ಶ್ರೀಯಾನ್, ಯು ಬಿ ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಸಂತೋಷ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನಚಳುವಳಿ ಕಟ್ಟಲು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ನಿರ್ಧಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಭರದಿಂದ ಅನುಸರಿಸಿದ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ನೀತಿಯಿಂದ ಆತಂಕಕಾರಿ ಪ್ರಮಾಣದಲ್ಲಿ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ತೀವ್ರ ಆತಂಕವ್ಯಕ್ತಪಡಿಸಿದೆ. ಖಾಸಗಿ ರಂಗ, ಸಾರ್ವಜನಿಕ ರಂಗದ ಉದ್ಯೋಗಾವಕಾಶಗಳು ತೀವ್ರ ಕಡಿತಗೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ವಿವಿಧ ಪದವಿಗಳನ್ನು ಪಡೆದು ಹೊರ ಬರುವ ವಿದ್ಯಾರ್ಥಿ ಸಮುದಾಯದ ಎದುರು ನಿರುದ್ಯೋಗದ ಕರಿಛಾಯೆ ವ್ಯಾಪಿಸಿದ್ದು ನಿರಾಶೆ, ಸಿನಿಕತನ ಮತ್ತು ಸಮಾಜಬಾಹಿರ ಕೃತ್ಯಗಳಿಗೆ ದೂಡುತ್ತಿದೆ. ಆದುದರಿಂದ ಜಿಲ್ಲಾಡಳಿತ ಜಿಲ್ಲೆಯ ನಿರುದ್ಯೋಗ ಸಮಸ್ಯೆಯ ಬಗ್ಗೆ ಬಹುಪಕ್ಷೀಯ ಸಭೆಯೊಂದನ್ನು ಜನಪ್ರತಿನಿಧಿಗಳು, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ರಂಗದ ಪ್ರತಿನಿಧಿಗಳು ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳ ಜಂಟಿ ಸಭೆ ನಡೆಸಿ, ಉದ್ಯೋಗಾವಕಾಶಗಳ ಸೃಷ್ಟಿಯ ಬಗ್ಗೆ ವೈಜ್ಞಾನಿಕ ಕಾರ್ಯಯೋಜನೆಯೊಂದನ್ನು ರೂಪಿಸಬೇಕೆಂದು ಸಿಪಿಐ(ಎಂ)ನ 23ನೇ ದಕ್ಷಿಣ ಕನ್ನಡ ಸಮ್ಮೇಳನದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದ್ದು ಮುಂಬರುವ ದಿನಗಳಲ್ಲಿ ಈ ಬಗ್ಗೆ ವ್ಯಾಪಕ ಜನಾಭಿಪ್ರಾಯ ಚಳುವಳಿ ರೂಪಿಸಬೇಕೆಂದು ಪಕ್ಷವು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.
ಜಿಲ್ಲೆಯಲ್ಲಿ ಮಹಿಳೆಯರ ಮೇಲೆ, ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿರುವ ಬಗ್ಗೆ ತೀವ್ರ ಆತಂಕಪಡಿಸಿರುವ ಪಕ್ಷದ ಸಮ್ಮೇಳನವು ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಜಿಲ್ಲೆಯಲ್ಲಿರುವ, ಪಾಳೆಯಗಾರಿ, ಊಳಿಗಮಾನ್ಯ ಪ್ರತಿಗಾಮಿ ಮೌಲ್ಯಗಳು ಮತ್ತು ಬಲಪಂಥೀಯ ರಾಜಕೀಯ ಚಿಂತನೆಗಳ, ಪ್ರತಿಫಲ ಎಂದು ಸೈದ್ಧಾಂತಿಕವಾಗಿ ವಿಶ್ಲೇಷಿಸಿರುವ ನಿರ್ಣಯವು ಎಲ್ಲಾ ರೀತಿಯ ಅನಿಷ್ಠ ಪದ್ಧತಿಗಳು, ಜಾತಿ-ಭೇದ, ಲಿಂಗಭೇದ ಮತ್ತು ಅಸ್ಪೃಶ್ಯತಾ ಆಚರಣೆಗಳ ವಿರುದ್ಧ ರಾಜಿರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದೆ. ಪ್ರಜಾಸತ್ತಾತ್ಮಕ, ಪ್ರಗತಿಪರ ವೈಜ್ಞಾನಿಕ ಮನೋಭಾವ ಪ್ರಬಲವಾಗಿ ನೆಲೆಯೂರಲು ಶ್ರಮಿಸಬೇಕೆಂದು ಕರೆ ನೀಡಿದೆ.
ಈ ಸಮ್ಮೇಳನವು ಜಿಲ್ಲೆಯ ದಲಿತ ಮತ್ತು ಆದಿವಾಸಿಗಳ ಹಕ್ಕುಗಳ ಸಂರಕ್ಷಣೆಗಾಗಿ, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ, ಕುದುರೆಮುಖ ರಕ್ಷಿತಾರಣ್ಯ ಅಧಿಕಾರಿಗಳಿಂದ ನಡೆಯುತ್ತಿರುವ ಮೂಲಭೂತ ಹಕ್ಕುಗಳ ದಮನಕಾರಿ ನಿಲುವನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಿದೆ.
ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅಂಗೀಕರಿಸಿರುವ ನಿರ್ಣಯದಲ್ಲಿ ಖಾಸಗೀ ವೈದ್ಯಕೀಯ ಲಾಭಿಗೆ ಸರಕಾರ ಮಣಿದಿದ್ದು ಬಡವರಿಗೆ ಕನಿಷ್ಠ ಆರೋಗ್ಯಕ್ಕೆ ಅನುಕೂಲವಾದ ಸನ್ನಿವೇಶ ಇಲ್ಲದಾಗಿದೆ. ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಪರಿವರ್ತಿಸಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಬಡವರಿಗೆ ದೊರಕಬೇಕೆಂದು ಒತ್ತಾಯಿಸಿದೆ. ಜಿಲ್ಲೆಯಲ್ಲಿ ಸರಕಾರದ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂದು ಒತ್ತಾಯಿಸಿದೆ.
ಶಿಕ್ಷಣ ರಂಗದ ಬಗ್ಗೆ ಅಂಗೀಕರಿಸಿರುವ ನಿರ್ಣಯದಲ್ಲಿ ಮೂಲಭೂತ ಅವಶ್ಯಕತೆಗಳ ಕೊರತೆಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳು ಸೊರಗಿದ್ದು ಶಿಕ್ಷಕರ ಕೊರತೆ, ಗ್ರಂಥಾಲಯದ ಕೊರತೆ, ಕಟ್ಟಡ ಕೊರತೆಯು ಸಾಮಾನ್ಯ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಜಿಲ್ಲೆಯಲ್ಲಿ ನಿವೇಶನ ರಹಿತರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಮನೆ ನಿವೇಶನ ವಿತರಣೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ಅಕ್ರಮ ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಒತ್ತಾಯಿಸಿದೆ.
ಡಿಸೆಂಬರ್ 2 ಮತ್ತು 3 ರಂದು ದೇಶದಾದ್ಯಂತ ನಡೆಯುವ ಕಟ್ಟಡ ಕಾರ್ಮಿಕರ ಮುಷ್ಕರವನ್ನು ಯಶಸ್ವಿಗೊಳಿಸಲು ನಿರ್ಣಯಿಸಿದೆ.
ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಕೆ. ಯಾದವ ಶೆಟ್ಟಿ ಆಯ್ಕೆ
ದಕ್ಷಿಣ ಕನ್ನಡ ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಕೆ. ಯಾದವ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಒಟ್ಟು 19 ಮಂದಿಯನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಜೆ. ಬಾಲಕೃಷ್ಣ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನೀಲ್ಕುಮಾರ್ ಬಜಾಲ್, ಡಾ|| ಕೃಷ್ಣಪ್ಪ ಕೊಂಚಾಡಿ, ಸುಕುಮಾರ್, ಸದಾಶಿವದಾಸ್, ಪದ್ಮಾವತಿ ಶೆಟ್ಟಿಯವರು ಆಯ್ಕೆಗೊಂಡಿದ್ದಾರೆ.