ಕೇರಳದ ಪಥಣಂಥಿಟ್ಟ ಜಿಲ್ಲೆಯ ಪೆರಿಂಗರ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಂ. ಪಿ.ಬಿ. ಸಂದೀಪ ಕುಮಾರ್ ಅವರನ್ನು ತಿರುವಳ್ಳದಲ್ಲಿ ಅಡ್ಡಗಟ್ಟಿ ಚಾಕುಗಳಿಂದ ಹಲವು ಬಾರಿ ತಿವಿದು ಕೊಲ್ಲಲಾಗಿದೆ. ಈ ಅಮಾನುಷ ಹತ್ಯೆಯನ್ನು ಸಿಪಿಐ(ಎಂ) ಪೊಲಿಟ್ ಬುರೊ ಬಲವಾಗಿ ಖಂಡಿಸಿದೆ. 36 ವರ್ಷದ ಸಂದೀಪ್ ಒಬ್ಬ ಜನಪ್ರಿಯ ಮುಖಂಡರು ಮತ್ತು ಒಬ್ಬ ಮಾಜೀ ಪಂಚಾಯತ್ ಸದಸ್ಯರು.
ಈ ಹತ್ಯೆ ಕೇರಳದಲ್ಲಿ ಸಿಪಿಐ(ಎಂ) ಮೇಲೆ ಗುರಿಯಿಟ್ಟು ಆರೆಸ್ಸೆಸ್-ಬಿಜೆಪಿ ನಡೆಸಿರುವ ಕೊಲೆ ರಾಜಕೀಯದ ಮುಂದುವರಿಕೆಯಾಗಿದೆ. ಬಂಧಿಸಲಾಗಿರುವ ಆರೋಪಿಗಳಲ್ಲಿ ಒಬ್ಬರು ಪೆರಿಂಗರದಲ್ಲಿ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷ ಮತ್ತು ಒಬ್ಬ ಆರೆಸ್ಸೆಸ್ ಕಾರ್ಯಕರ್ತ.
ಆರೆಸ್ಸೆಸ್-ಬಿಜೆಪಿಯ ಗುರಿ ರಾಜ್ಯದಲ್ಲಿ ನೆಲೆಸಿರುವ ಶಾಂತಿಯುತ ವಾತಾವರಣವನ್ನು ಕದಡುವುದು ಮತ್ತು ಹಿಂಸಾಚಾರಕ್ಕೆ ಇಳಿದು ಸಿಪಿಐ(ಎಂ)ನ ಬೆಳವಣಿಗೆಯನ್ನು ತಡೆಯುವುದು. ಈ ಕುತಂತ್ರಗಳು ಯಶಸ್ವಿಯಾಗಲು ಬಿಡುವುದಿಲ್ಲ ಎಂದಿರುವ ಪೊಲಿಟ್ ಬ್ಯುರೊ ಇಂತಹ ಹಿಂಸಾತ್ಮಕ ಹಲ್ಲೆಗಳಿಗೆ ತಕ್ಷಣವೇ ಒಂದು ನಿಲುಗಡೆ ಹಾಕಬೇಕು ಎಂದು ಆಗ್ರಹಿಸಿದೆ.
ಬಡ ಹಿನ್ನೆಲೆಯಿಂದ ಬಂದಿರುವ ಸಂದೀಪ್ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಡಿಎಫ್ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು, ಅವರು ಪತ್ನಿ ಸುನೀತಾ ಮತ್ತು ಇಬ್ಬರು ಮಕ್ಕಳನ್ನು, ಮೂರೂವರೆ ವರ್ಷದ ನಿಹಾಲ್ ಮತ್ತು ಕೇವಲ 3 ತಿಂಗಳ ಹೆಣ್ಣುಮಗುವನ್ನು ಅಗಲಿದ್ದಾರೆ.