ಜಮ್ಮು-ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ವಜಾಗೊಳಿಸಬೇಕು-ರಾಷ್ಟ್ರಪತಿಗಳಿಗೆ ಯೆಚುರಿ ಪತ್ರ

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‍ ಹೈಕೋರ್ಟಿನ  ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಪಂಕಜ್‍ ಮಿತ್ತಲ್‍ ಅವರು ತನ್ನ ಉನ್ನತ ಸಂವಿಧಾನಿಕ ಹುದ್ದೆಗೆ ಭಂಗ ತಂದಿದ್ದಾರೆ, ತಾನು ಕೈಗೊಂಡ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ , ಆದ್ದರಿಂದ  ಅವರನ್ನು ಅವರ ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ರಾಷ್ಟ್ರಪತಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಅವರು ಡಿಸೆಂಬರ್ 16ರಂದು ಅವರ ವಿರುದ್ಧದ  ಗಂಭೀರ ದೂರನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲು ಅವರಿಗೆ ಪತ್ರ ಬರೆದಿದ್ದಾರೆ.

ನ್ಯಾಯಮೂರ್ತಿ ಮಿತ್ತಲ್  ಡಿಸೆಂಬರ್ 5 ರಂದು ಜಮ್ಮುವಿನಲ್ಲಿ ಆರ್‌ಎಸ್‌ಎಸ್‌ಗೆ ಸಂಯೋಜಿತವಾದ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಅಲ್ಲಿ ಅವರು  ಭಾರತದ ಸಂವಿಧಾನದ ವಿರುದ್ಧ ಮಾತನಾಡಿದರು.

ಶ್ರೀ ಮಿತ್ತಲ್ ಅವರು ಅಖಿಲ ಭಾರತೀಯ ಅಧಿವಕ್ತ ಪರಿಷದ್ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡುತ್ತ  “ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿರುವುದು ಭಾರತದ ಆಧ್ಯಾತ್ಮಿಕ ಚಿತ್ರಣವನ್ನು ಕಿರಿದಾಗಿಸಿದೆ” ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಅಲ್ಲದೆ “ಕೆಲವೊಮ್ಮೆ, ನಮ್ಮ ಹಟಮಾರಿತನದಿಂದಾಗಿ ನಾವು ತಿದ್ದುಪಡಿಗಳನ್ನು ತರುತ್ತೇವೆ” ಎಂದೂ ಅವರು ಹೇಳಿರುವುದಾಗಿ ವರದಿಯಾಗಿದೆ.

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಬ್ಬರು ದೇಶದ ಸಂವಿಧಾನದ ವಿರುದ್ಧ ಹೇಳಿಕೆಗಳನ್ನು ನೀಡುವುದು, ಅದೂ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಬೋಧಿಸುವ ವೇದಿಕೆಯಿಂದ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ, ಇದು ಅವರು ಸಾಂವಿಧಾನಿಕ ಕಾರ್ಯಗಳನ್ನು ನಿರ್ವಹಿಸುವುದಾಗಿ ಮಾಡಿದ ಪ್ರಮಾಣ ವಚನವನ್ನು  ಉಲ್ಲಂಘಿಸುತ್ತದೆ.

ಶ್ರೀ ಮಿತ್ತಲ್  ಅವರ ನಡವಳಿಕೆಯು ಮುಖ್ಯ ನ್ಯಾಯಾಧೀಶರ ಸಾಂವಿಧಾನಿಕ ಹುದ್ದೆಗೆ ತಕ್ಕುದಾದುದಲ್ಲವಾದ್ದರಿಂದ ಅವರನ್ನು ತಕ್ಷಣವೇ ಆ ಹುದ್ದೆಯಿಂದ ತೆಗೆದು ಹಾಕಬೇಕಾಗುತ್ತದೆ. ಸಂವಿಧಾನದ ಪಾಲಕರಾಗಿ, ಪ್ರಭುತ್ವದ ಮುಖ್ಯಸ್ಥರಾಗಿ ಮತ್ತು ಮಿತ್ತಲ್‍ ಅವರನ್ನು ನೇಮಕ ಮಾಡಿದವರಾಗಿ, ಸಂವಿಧಾನದ ಪಾವಿತ್ರ್ಯತೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು, ಅವರನ್ನು  ಅಧಿಕಾರದಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಯೆಚುರಿ ರಾಷ್ಟ್ರಪತಿಗಳನ್ನು ಕೋರಿದ್ದಾರೆ. .

Leave a Reply

Your email address will not be published. Required fields are marked *