ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ 23ನೇ ಸಮ್ಮೇಳನ 2022ರ ಜನವರಿ 2, 3, 4ರಂದು ಗಂಗಾವತಿಯಲ್ಲಿ ನಡೆಯಲಿದೆ. ರಾಜ್ಯದ ಜನತೆಯನ್ನು ಸಂರಕ್ಷಣೆ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆಗೂಡಿ ರಾಜ್ಯದಲ್ಲಿ ಚಳುವಳಿಯನ್ನು ಬಲಗೊಳಿಸಲು ಮತ್ತು ಭ್ರಷ್ಠ ಹಾಗೂ ಲೂಟಿಕೋರ ಕಾರ್ಪೋರೇಟ್ ಮುಕ್ತ, ಸೌಹಾರ್ಧ ಹಾಗೂ ಸಮೃದ್ದ ಕರ್ನಾಟಕದ ಕಾರ್ಯಕ್ರಮವನ್ನು ರೂಪಿಸಲು ಸಮ್ಮೇಳನವು ಕ್ರಮವಹಿಸಲಿದೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದರು.
ಕರ್ನಾಟಕದಲ್ಲಿ ಜನತೆಯ ಆದೇಶದ ಮೂಲಕ ಅಧಿಕಾರ ಪಡೆಯದ ಬಿಜೆಪಿಯು, ತನ್ನ ಹಣ ಬಲ, ಕೇಂದ್ರ ಅಥವಾ ಒಕ್ಕೂಟ ಸರಕಾರ ಹಾಗೂ ರಾಜ್ಯಪಾಲರ ಕಛೇರಿಯನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಸಂತೃಪ್ತ ಶಾಸಕರನ್ನು ನೀಚ ಅಪರೇಷನ್ ಕಮಲದ ಮೂಲಕ ಖರೀದಿಸಿ, ದೌರ್ಜನ್ಯದ ಮೂಲಕ ಆಡಳಿತ ನಡೆಸುತ್ತಿದ್ದು, ಈ ಅವಧಿಯಲ್ಲಿ ತನ್ನ ಒಕ್ಕೂಟ ಹಾಗೂ ಕೇಂದ್ರ ಸರಕಾರದ ನೆರವು ಪಡೆದು ರಾಜ್ಯದ ಜನತೆಯನ್ನು ರಕ್ಷಿಸುವ ಬದಲು ಜನತೆಗೆ ಯಾವುದೇ ಪರಿಣಾಮಕಾರಿ ನೆರವು ನೀಡದೇ ಅವರನ್ನು ದುಸ್ಥಿತಿಗೆ ತಳ್ಳಿದೆ ಎಂದು ಹೇಳಿದರು.
ಬೆಂಕಿಬಿದ್ದ ಮನೆಯಲ್ಲಿ ಗಳ ಕದ್ದರು ಎಂಬಂತೆ ಕೋವಿಡ್ ಸಂಕಷ್ಠದಲ್ಲಿರುವ ಜನತೆಗೆ ನೆರವು ನೀಡುವ ಬದಲು, ಆಸ್ಪತ್ರೆ ಬೆಡ್ಗಳು, ಆಮ್ಲಜನಕ, ಲಸಿಕೆ, ಔಷದಿ, ಲಭ್ಯವಿಲ್ಲವೆಂದು ಸುಳ್ಳು ಹೇಳಿ ಕೃತಕ ಅಭಾವ ಸೃಷ್ಠಿಸಿ ಕಾಳ ಸಂತೆ ವ್ಯಾಪಾರ ನಡೆಸಿ ಲೂಟಿಗೈಯ್ಯಲು ಆಡಳಿತ ಪಕ್ಷ ಬಿಜೆಪಿ, ಆರ್ಎಸ್ಎಸ್ ಲೂಟಿಕೋರರು ಮತ್ತು ಶಾಸಕರು ಮುಂದಾದುದನ್ನು ರಾಜ್ಯದ ಜನತೆ ನೋಡಿದೆ. ಅದೇ ರೀತಿ, ಜನತೆಯ ಸಂಕಷ್ಠದ ಸಂದರ್ಭವನ್ನು ದುರುಪಯೋಗ ಮಾಡಿ, ರಾಜ್ಯವನ್ನು ಕಾರ್ಪೊರೇಟ್ ಕಂಪನಿಗಳ ಲೂಟಿಗೆ ತೆರೆಯುವ ಕಾಯ್ದೆಗಳನ್ನು ಜಾರಿಗೊಳಿಸಿದೆ ಎಂದು ಯು. ಬಸವರಾಜ ತಿಳಿಸಿದರು.
ರಾಜ್ಯ ಮುಖಂಡ ನಿತ್ಯಾನಂದಸ್ವಾಮಿ ಮಾತನಾಡಿ, ಈ ನಾಲ್ಕು ವರ್ಷಗಳಲ್ಲಿ ರಾಜ್ಯವು ಎರಡು ವರ್ಷ ಕಾಲ ಅತಿವೃಷ್ಟಿ, ಪ್ರವಾಹಗಳಿಗೆ ತುತ್ತಾದರೆ, ಮತ್ತೆರಡು ವರ್ಷ ಕೋವಿಡ್ ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಸಮಸ್ಯೆಗಳಿಂದ ನಲುಗಿ ಹೋಗಿದೆ.
ಇಂತಹ ಆತಂಕದ ಸಂದರ್ಭದಲ್ಲೂ ತಮ್ಮ ಜೀವನವನ್ನು ಬದುಕನ್ನು ಉಳಿಸಿಕೊಳ್ಳಲು ಜನತೆ ಹೋರಾಟದಲ್ಲಿ ತೊಡಗದಂತೆ, ಅದನ್ನು ಮುರಿಯಲು ಮತಾಂಧ ಶಕ್ತಿಗಳು ಸೌಹಾರ್ಧತೆಗೆ ಭಂಗ ಉಂಟು ಮಾಡುತ್ತಿದ್ದರೆ, ಅಂತಹ ಶಕ್ತಿಗಳನ್ನು ನಿಗ್ರಹಿಸುವ ಬದಲು ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಸರಕಾರವೇ ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಕಾಯ್ದೆ ಮೂಲಕ ಮತ್ತು ಲವ್ ಜೆಹಾದ್, ಮತಾಂತರ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸುವ ಬೆದರಿಕೆಯ ಹೆಸರಿನಲ್ಲಿ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರ ಮೇಲಿನ ಧಾಳಿಗಳಿಗೆ, ಲೂಟಿಗೆ ಕುಮ್ಮಕ್ಕು ನೀಡುತ್ತಿದೆ. ರಾಜ್ಯದಲ್ಲಿನ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯಾಚರಣೆ ತೊಲಗಿಸುವ ಕ್ರಮ ವಹಿಸುವ ಬದಲು ಮತ್ತಷ್ಠು ಜಾತಿ ವಿಭಜನೆ ತರಲು ಪ್ರೋತ್ಸಾಹ, ನೆರವು ನೀಡುತ್ತಿದೆ ಎಂದು ಹೇಳಿದರು.
ರಾಜ್ಯವು ಭ್ರಷ್ಠಾಚಾರದಿಂದಲೂ ತೀವ್ರವಾಗಿ ನಲುಗಿ ಹೋಗಿದೆ. ಗುತ್ತಿಗೆದಾರರಿಂದ ಶೇಕಡ 40 ಕಮಿಷನ್ ವಸೂಲಾತಿ, ಬಿಟ್ ಕಾಯಿನ್ ಹಗರಣದಲ್ಲಿ ಸಾರ್ವಜನಿಕ ಸಂಪನ್ಮೂಲದ ಲೂಟಿ, ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಠಾಚಾರ, ಜನತೆಯ ಸೌಲಭ್ಯ ನೀಡುವಾಗಲೂ ಭ್ರಷ್ಠಾಚಾರ ತಾಂಡವವಾಡುತ್ತದೆ.
ಈ ಎಲ್ಲ ಕಾರಣದಿಂದ ರಾಜ್ಯದ ದುಡಿಯುವ ಜನತೆ ಅತ್ಯಂತ ಕೆಟ್ಡ ಬಡತನಕ್ಕೆ ಸಂಕಷ್ಟಕ್ಕೆ ತಳ್ಳಲ್ಪಟ್ಟರೇ ಶ್ರೀಮಂತರು ಇದನ್ನು ದುರುಪಯೋಗ ಪಡಿಸಿಕೊಂಡು ಭಾರೀ ಶ್ರೀಮಂತರಾಗುತ್ತಿದ್ದಾರೆ. ಬಡವರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚುತ್ತಿವೆ.
ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ತಮ್ಮ ಶಕ್ತಿಯನ್ನು ಬಳಸಿ ಇಂತಹ ದುರಾಡಳಿತದಿಂದ ಜನತೆಯನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮುಂದಾಗದೇ ಇರುವಾಗ ಸಿಪಿಐ(ಎಂ) ಇತರೇ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆ ಜನತೆಯ ರಕ್ಷಣೆಗೆ ನಿಂತಿದೆ.
ಕೊಪ್ಪಳ ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಜಿ. ನಾಗರಾಜ ಮಾತನಾಡಿ, ಸಿಪಿಐ(ಎಂ) ಪಕ್ಷದ ಸಂಘಟನಾ ನಿಯಮದಂತೆ ಪಕ್ಷದ ರಾಜ್ಯ ಮಟ್ಟದ ಅತ್ಯುನ್ನತ ಅಂಗವಾದ ರಾಜ್ಯ ಸಮ್ಮೇಳನವು ಮೂರು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಆದರೇ, ಈ ಬಾರಿ ಕೋವಿಡ್ ಬಾಧಿಸಿದ್ದರಿಂದ ಒಂದು ವರ್ಷ ತಡವಾಗಿ ಸೇರುತ್ತಿದೆ. ಕಳೆದ 22ನೇ ಸಮ್ಮೇಳನ ಜನವರಿ 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಸೇರಿತ್ತು. ಈ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಜನ ಜೀವನ ಪರಿಸ್ಥಿತಿ ಸಮೃದ್ಧಗೊಳ್ಳುವ ಬದಲು ಅತ್ಯಂತ ಯಾತನಮಯವಾಗಿ ಬದಲಾಗಿದೆ.
ಪಕ್ಷದ ರಾಜ್ಯ ಸಮ್ಮೇಳನವು ನಾಲ್ಕು ಕಾರ್ಯಸೂಚಿಯನ್ನು ಹೊಂದಿದೆ. ಪ್ರಮುಖವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವು ಸಾಗಿ ಬಂದ ಹಾದಿಯನ್ನು ಗಮನಿಸಿ, ಜನತೆಯ ರಕ್ಷಣೆಗಾಗಿ ಮುಂದಿನ ಮೂರು ವರ್ಷಗಳ ಸಿಪಿಐ(ಎಂ) ಹಾದಿಯನ್ನು ರೂಪಿಸುವುದು. ಜನತೆಯ ಮುಂದಿನ ತಕ್ಷಣದ ಕರ್ತವ್ಯಗಳನ್ನು ಗುರುತಿಸುವುದು, ಅದೇ ರೀತಿ, ಅಂತಹ ಒಂದು ಕಾರ್ಯಕ್ರಮದ ಜಾರಿಗಾಗಿ ಹೊಸ ರಾಜ್ಯ ನಾಯಕತ್ವವನ್ನು ಹಾಗೂ ಏಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯುವ ಪಕ್ಷದ ಅಖಿಲ ಭಾರತ ಮಹಾಧಿವೇಶನದ ಪ್ರತಿನಿಧಿಗಳನ್ನು ಚುನಾಯಿಸಲಿದೆ ಎಂದರು.
ಸಮ್ಮೇಳನಕ್ಕೆ ರಾಜ್ಯದ ಎಲ್ಲಾ 31 ಜಿಲ್ಲೆಗಳಿಂದ ಸುಮಾರು 500 ಜನ ಪ್ರತಿನಿಧಿಗಳು ಹಾಗೂ ವೀಕ್ಷಕರು ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದ ಮೊದಲ ದಿನ ಸಿಪಿಐ(ಎಂ) ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಉದ್ಘಾಟನೆ ಮಾಡಲಿದ್ದಾರೆ.
ಮೂರು ದಿನದ ಸಮ್ಮೇಳನದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ಪಾಲಿಟ್ ಬ್ಯುರೋ ಸದಸ್ಯ ಪ್ರಕಾಶ್ ಕಾರಟ್, ಪಾಲಿಟ್ ಬ್ಯುರೋ ಸದಸ್ಯರಾದ ಎಸ್. ರಾಮಚಂದ್ರನ್ ಪಿಳ್ಳೈ, ಎಂ.ಎ.ಬೇಬಿ, ಬಿ.ವಿ. ರಾಘವುಲು ಪಾಲ್ಗೊಂಡು ಮಾರ್ಗದರ್ಶನ ಮಾಡಲಿದ್ದಾರೆ ಎಂದರು.