ಚುನಾವಣಾ ಕಾನೂನುಗಳ ಮಸೂದೆಯನ್ನು ಆಯ್ಕೆ ಸಮಿತಿಯು ಪರಿಶೋಧಿಸಲೇಬೇಕು

ದೂರಗಾಮಿ ಪರಿಣಾಮಗಳನ್ನು ಉಂಟುಮಾಡುವ ಚುನಾವಣಾ ಕಾನೂನುಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ಲೋಕಸಭೆಯ ಮೂಲಕ ಗದ್ದಲದ ನಡುವೆ ತರಾತುರಿಯಲ್ಲಿ ಅಂಗೀಕರಿಸಿದ ವಿಧಾನವನ್ನು ಬಲವಾಗಿ ಖಂಡಿಸುವುದಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ಹೇಳಿದೆ.

ಸಂಸದ್ ಸದಸ್ಯರಿಗೆ ಚರ್ಚೆಗೆ ಸಮಯ ನೀಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಸಂಸದರು ಯಾವುದೇ ತಿದ್ದುಪಡಿಗಳನ್ನು ಮಂಡಿಸಲು ಅವಕಾಶ ಕೊಡಲಿಲ್ಲ, ಇದು ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಬೆಳಗ್ಗೆ ಅದನ್ನು ಕೂಲಂಕುಷ ಪರೀಕ್ಷೆಗಾಗಿ ಸಂಸದೀಯ ಆಯ್ಕೆ ಸಮಿತಿಗೆ ಕಳುಹಿಸುವ ಚರ್ಚೆ ನಡೆಯಿತು. ಈ ನಿರ್ಧಾರವನ್ನು ಕೈಬಿಟ್ಟು, ಸರ್ಕಾರವು ಊಟದ ಬಿಡುವಿನ ನಂತರ ಪೂರಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿತು ಮತ್ತು ಮಸೂದೆಯ ಅಂಗೀಕಾರಕ್ಕೆ ತರಾತುರಿ ಮಾಡಿತು.

ಈ ಮಸೂದೆಯು ಮತದ ಗೌಪ್ಯತೆಯನ್ನು ಉಲ್ಲಂಘಿಸುವ ಅಪಾಯವನ್ನು ಹೊಂದಿದೆ, ಇದು ರಹಸ್ಯ ಮತದಾನದ ತತ್ವವನ್ನು ಮತ್ತು ಮತದಾರರ ಖಾಸಗಿತನದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ವಿಪಕ್ಷಗಳು ಈ ಮಸೂದೆಯನ್ನು ಈಗ ರಾಜ್ಯಸಭೆಯಲ್ಲಿ ಬಲವಂತವಾಗಿ ಅಂಗೀಕಾರ ಮಾಡಿಸುವುದನ್ನು ದೃಢವಾಗಿ ಪ್ರತಿರೋಧಿಸಬೇಕು ಮತ್ತು ಒಂದು ಆಯ್ಕೆ ಸಮಿತಿಯಿಂದ ಅದರ ಕೂಲಂಕುಷ ಪರೀಕ್ಷಣೆಗೆ ಆಗ್ರಹಿಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *