ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳು: 2018-21 ಭಾಗ-2

cpim rajya sammelanaಸಾಂಪ್ರದಾಯಿಕ ಮಾಧ್ಯಮಗಳಿಗೆ ಡಿಜಿಟಲ್ ಸವಾಲು

ವಸಂತರಾಜ ಎನ್.ಕೆ.

ಸಿಪಿಐ(ಎಂ) ಕರ್ನಾಟಕ ೨೩ನೆಯ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ 22ನೆಯ ಸಮ್ಮೇಳನದ ನಂತರದ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಕುರಿತ ಲೇಖನಗಳ ಸರಣಿಯ ಭಾಗವಾಗಿ, ಈ ಅವಧಿಯ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಇಲ್ಲಿ ಕೊಡಲಾಗಿದೆ. ಹಿಂದಿನ ಸಂಚಿಕೆಯಲ್ಲಿ ಪ್ರಕಟವಾದ ಭಾಗ-1 ರಲ್ಲಿ ಬಹುಪಾಲು ಮಾಧ್ಯಮಗಳು ಆಳುವವರ ಬೇಟೆನಾಯಿಗಳಾದ ಪ್ರಮುಖ ಬೆಳವಣಿಗೆ ಮತ್ತಿತರ ಬೆಳವಣಿಗೆಗಳ ನಿರೂಪಣೆಯಿತ್ತು. ಭಾಗ-೧ ರಲ್ಲಿ ವಿವರಿಸಲಾದ ವೆಬ್ ಸಂಪರ್ಕ ವಿಸ್ತಾರದ ಪರಿಣಾಮವಾಗಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಬದಲಾವಣೆಗಳ ನಿರೂಪಣೆ ಈ ಭಾಗ-2ರಲ್ಲಿ ಇದೆ.

ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬಳಸಬಹುದಾದ, ಬಹು ಮಾಧ್ಯಮಗಳನ್ನು (ಪಠ್ಯ, ಚಿತ್ರ, ಅಡಿಯೊ, ವಿಡಿಯೊ) ತಲುಪಿಸಬಲ್ಲ, ಪರಸ್ಪರ ಸ್ಪಂದನೆ ಇರುವ, ವೇಗದ, ವೈಯಕ್ತಿಕ/ಸಾಮೂಹಿಕ ಮಾಧ್ಯಮವಾಗಿ ವೆಬ್ (ಅಥವಾ ಡಿಜಿಟಲ್) ಬೆಳೆದಿದೆ.

ವೆಬ್-ಆಧಾರಿತ ಸೇವೆಗಳ ವಿಸ್ತರಣೆ

ವೆಬ್ (ಅಥವಾ ಡಿಜಿಟಲ್) – ಪತ್ರಿಕೆ ಟಿವಿ, ರೇಡಿಯೋ ಮತ್ತು ಫಿಲಂ ಥಿಯೇಟರ್ ಸ್ಥಾನ ಆಕ್ರಮಿಸಬಲ್ಲ, ಅವುಗಳ ಪಾತ್ರಕ್ಕೆ ಸವಾಲು ಹಾಕಬಲ್ಲ, ಅವುಗಳಿಗೆ ಇನ್ನೂ ಉತ್ತಮವಾದ ಬದಲಿಯಾಗಬಲ್ಲ – ಮಾಧ್ಯಮವಾಗಿ ಬೆಳೆದಿದೆ. ಪ್ರಿಂಟ್ ಪತ್ರಿಕೆಗೆ ಬದಲಿಯಾಗಿ ವೆಬ್ ಪತ್ರಿಕೆಗಳು ಬೆಳೆದಿವೆ. ರೇಡಿಯೊ ಗೆ ಬದಲಿಯಾಗಿ ಪಾಡ್ ಕಾಸ್ಟ್, ಅಡಿಯೋ/ಸಂಗೀತದ ಸ್ಟ್ರೀಮಿಂಗ್ ಸೇವೆಗಳು ಬೆಳೆದಿವೆ. ಟಿವಿ ಗೆ ಬದಲಿಯಾಗಿ ವೆಬ್ ಆಧಾರಿತ ಯೂ ಟ್ಯೂಬ್, ವಿಮಿಯೊ ನಂತಹ ಒಟಿಟಿ ಎಂದು ಕರೆಯಲಾಗುವ (ಒವರ್ ದ ಟಾಪ್ – ಇಂಟರ್-ನೆಟ್ ಅಥವಾ ವೆಬ್ ವೇದಿಕೆಯ ಮೇಲೆ ಕೊಡುವ ಎಂಬರ್ಥದಲ್ಲಿ) ವಿಡಿಯೊ ಸೇವೆಗಳು ಬೆಳೆದಿವೆ. ಫಿಲಂ ಥೀಯೆಟರ್ ಗೆ ಬದಲಿಯಾಗಿ ಅಮೆಜಾನ್ ಪ್ರೈಂ ವಿಡಿಯೊ, ನೆಟ್‌ಫ್ಲಿಕ್ಸ್ ನಂತಹ ಚಂದಾ ಆಧಾರಿತ ಒಟಿಟಿ ಸೇವೆಗಳು ಆರಂಭವಾಗಿವೆ. ಕೊವಿದ್ ಅವಧಿಯಲ್ಲಿ ಹಲವು (ಕನ್ನಡ ಸೇರಿದಂತೆ ) ಫಿಲಂಗಳು ಒಟಿಟಿ ಯಲ್ಲೇ ಬಿಡುಗಡೆಯಾದವು. ಹಿಂದಿನ ಅವಧಿಯಲ್ಲಿ ವೆಬ್-ಆಧಾರಿತ ಸೇವೆಗಳು ಬಹುಪಾಲು ಜಾಹೀರಾತು ಆಧಾರಿತವಾಗಿದ್ದು ನೋಡುಗ/ಕೇಳುಗ/ಓದುಗರಿಗೆ ಉಚಿತವಾಗಿದ್ದವು. ಆದರೆ ಈಗ ಚಂದಾ ಆಧಾರಿತ ಸೇವೆಗಳು (ವಿಶೇಷವಾಗಿ ವಿಡಿಯೋಗಳಲ್ಲಿ) ಆರಂಭವಾಗಿ ವಿಸ್ತರಣೆಯಾಗುತ್ತಿದೆ. ಮಾತ್ರವಲ್ಲ, ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆ, ಟಿವಿ, ರೇಡಿಯೊ, ಫಿಲಂ ಗಳು ತಮ್ಮ ವೆಬ್ ಆವೃತ್ತಿಯನ್ನು ಆರಂಭಿಸಿ ಅದನ್ನು ಮೊದಲು ಉಚಿತವಾಗಿ, ಕ್ರಮೇಣ ಚಂದಾ-ಆಧಾರಿತವಾಗಿ ನಡೆಸುವುದು ಅಗತ್ಯವಾಗಿ ಬಿಟ್ಟಿದೆ. ಹೀಗೆ ಮಾಧ್ಯಮಗಳಲ್ಲಿ ಪತ್ರಿಕೆ, ಟಿವಿ, ರೇಡಿಯೋ, ಡಿಜಿಟಲ್/ವೆಬ್ (ಮತ್ತು ಫಿಲಂ ಸಹ) ಎಂದು ಮಾಧ್ಯಮ ವೇದಿಕೆ, ಆ ಸೇವೆ ಕೊಡುವ ಕಂಪನಿ, ಅದಕ್ಕೆ ಕೊಡಬೇಕಾದ ಚಂದಾ – ಇವುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕಿಸುವುದು ಗೋಜಲಾಗುತ್ತಿದೆ. ಉದಾಹರಣೆಗೆ ಮೊಬೈಲ್ ಸೇವೆ ಕೊಡುವ ಕಂಪನಿಗಳು ವೆಬ್, ಕೆಲವು ಒಟಿಟಿ ಅಡಿಯೊ/ವಿಡಿಯೊ ಸೇವೆಗಳನ್ನು ಬಂಡಲ್ ಮಾಡಿ ಒಂದು ಚಂದಾ ವಿಧಿಸುತ್ತವೆ. ಅದೇ ರೀತಿ ಕೇಬಲ್ ಅಥವಾ ಸ್ಯಾಟಲೈಟ್ ಟಿವಿ ಸೇವೆಯ ಕಂಪನಿಗಳು ಸಹ ಟಿವಿ ಚಾನೆಲುಗಳಲ್ಲದೆ ವೆಬ್, ಒಟಿಟಿ ಅಡಿಯೊ/ವಿಡಿಯೊ ಸೇವೆಗಳನ್ನು ಬಂಡಲ್ ಮಾಡಿ ಕೊಡುತ್ತಿವೆ. ಅವುಗಳಲ್ಲಿ ಅಡಿಯೊ/ವಿಡಿಯೊ ಕರೆ ಸಹ ಮಾಡಬಹುದು. ಟಿವಿ, ಕಂಪ್ಯೂಟರ್, ಲ್ಯಾಪ್ ಟಾಪ್, ಪ್ಯಾಡ್, ಮೊಬೈಲ್  ಉಪಕರಣಗಳು ಸಹ ಎಲ್ಲ ಸೇವೆ, ಮಾಧ್ಯಮಗಳನ್ನು ಕೊಡಬಲ್ಲದ್ದಾಗಿ ವಿಕಾಸ ಹೊಂದಿವೆ. ಪ್ರಜಾವಾಣಿ ಇ-ಪತ್ರಿಕೆಯನ್ನು ಇವ್ಯಾವುದರಲ್ಲಿ ಓದಬಹುದು, ವಿವಿಧ ಭಾರತಿ ಬೆಂಗಳೂರು ಕೇಂದ್ರದ ಕಾರ್ಯಕ್ರಮವನ್ನು ಯಾವುದರಲ್ಲೂ ಕೇಳಬಹುದು. ಟಿವಿ ಚಾನೆಲ್ ಮತ್ತು ಅಮೆಜಾನ್ ಪ್ರೈಂ ವಿಡಿಯೊ ಫಿಲಂ/ಸೀರಿಯಲ ನ್ನು ಸಹ ಯಾವುದರಲ್ಲೂ ನೋಡಬಹುದು.

ವೆಬ್-ಆಧಾರಿತ ಸೇವೆಗಳ ವಿಸ್ತರಣೆ, ಚಂದಾ ಆಧಾರಿತ ಸೇವೆಗಳ ಆರಂಭ/ವಿಸ್ತರಣೆ, ವಿವಿಧ ಸೇವೆಗಳ ಸಂಗಮ – ಈ ಅವಧಿಯ ಹೊಸ ಬೆಳವಣಿಗೆಯೆನ್ನಬಹುದು.

ವೆಬ್ ಬಳಕೆ ಹೆಚ್ಚಿದೆ

ಇ.ವೈ-ಫಿಕ್ಕಿ (EY-FICCI) ಸಮೀಕ್ಷೆ ವರದಿಯ ಪ್ರಕಾರ ೨೦೨೦ರಲ್ಲಿ, ವೆಬ್ ವಿಡಿಯೋ ನೋಡುವವರ ಸಂಖ್ಯೆ ಶೇ.೧೫ರಷ್ಟು ಹೆಚ್ಚಿ ೪೬.೮ ಕೋಟಿ ಆಗಿದೆ. ಇದು ಸ್ಮಾರ್ಟ ಫೋನ್ ಗಳ ಶೇ. ೯೬ ಎಂದು ಗಮನಿಸಬೇಕು. ವೆಬ್ ಸುದ್ದಿಯನ್ನು ೪೫.೪ ಕೋಟಿ ಜನ ಪಡೆದರು, ಇದು ವೆಬ್ ಬಳಕೆದಾರರ ಶೇ. ೫೭ ಎಂದು ಗಮನಿಸಬೇಕು. ಆದರೆ ಕೇವಲ ೧೦ ಲಕ್ಷ ಮಾತ್ರ ಚಂದಾ-ಆಧಾರಿತ ಸುದ್ದಿ ಸೇವೆಗಳನ್ನು ಪಡೆದರು. ವೆಬ್ ಸಂಗೀತ ಕೇಳಿದವರು ೨೦.೫ ಕೋಟಿ. ವೆಬ್ ಆಟದಲ್ಲಿ ತೊಡಗಿದವರು ೨೪.೫ ಕೋಟಿ. ೨೪೩೦ ಕೋಟಿ ಆಪ್ ಗಳನ್ನು (ಜಗತ್ತಿನಲ್ಲೇ ಅತಿ ಹೆಚ್ಚು) ಡೌನ್‌ಲೋಡ್ ಮಾಡಿದರು. ಇದರಲ್ಲಿ ನ್ಯೂಸ್ ಆಪ್ ಗಳ ಪ್ರಮಾಣ ೩% ಆಗಿತ್ತು. ಈಗ ೧೬ ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಶೇ. ೩೨ ಜನ ಸಾಮಾಜಿಕ ಮಾಧ್ಯಮ ಬಳಸುತ್ತಾರೆ. ಅವರಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಪ್ರಮಾಣ : ಯೂ ಟ್ಯೂಬ್ (೮೬%), ಫೇಸ್ ಬುಕ್ (೭೫%), ವಾಟ್ಸಪ್ (೭೫%), ಫೇಸ್ ಬುಕ್ ಮೆಸೆಂಜರ್ (೭೧%), ಇನ್ಸ್ಟಾ ಗ್ರಾಂ(೫೫%), ಟ್ವಿಟರ್ (೫೧%), ಟಿಕ್ ಟಾಕ್ (೩೨%). ಕರ್ನಾಟಕ ೫ ಕೋಟಿ ವೆಬ್ ಬಳಕೆದಾರರನ್ನು ಹೊಂದಿದ್ದು ದೇಶದ ಅರ್ಧದಷ್ಟು ಡಿಜಿಟಲ್ ಬಳಕೆದಾರರನ್ನು ಹೊಂದಿರುವ ಒಟ್ಟು ೫ ರಾಜ್ಯಗಳಲ್ಲಿ ಒಂದು. ದೇಶದ ಶೇ.೭.೪ ವೆಬ್ ಬಳಕೆದಾರರನ್ನು ಕರ್ನಾಟಕವು ಹೊಂದಿದೆ.

ವೆಬ್ ಪತ್ರಿಕೆಗಳು

ಇಂಗ್ಲೀಷ್ ವೆಬ್ ಪತ್ರಿಕೆಗಳು ಈ ಅವಧಿಯಲ್ಲಿ ಗಮನಾರ್ಹವಾಗಿ ಬೆಳೆದಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ರಿಣಾಮ ಬೀರಲು ಆರಂಭಿಸಿದೆ. ಪ್ರಮುಖ ಪತ್ರಿಕೆಗಳ ವೆಬ್ ಆವೃತ್ತಿಗಳು, ವಿವಿಧ ಮೂಲಗಳಿಂದ ಸುದ್ದಿಯನ್ನು ಸಂಗ್ರಹಿಸಿ ಪ್ರಕಟಿಸುವ ವೆಬ್ ತಾಣಗಳು (Inshorts, Firstpost, sify/samachar, Yahoo, Google ಇತ್ಯಾದಿ) ಮತ್ತು ಹೊಸ ವೆಬ್ ನಲ್ಲಿ ಮಾತ್ರ ಇರುವ ಸುದ್ದಿತಾಣಗಳು (Scroll, Wire, Quint, Citizen, Newsclick, Newslaundry ಇತ್ಯಾದಿ) ತಮ್ಮ ಓದುಗರನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿವೆ. ಹೆಚ್ಚಿನ ಈ ಪತ್ರಿಕೆಗಳು ದಾನ, ಫಂಡಿಂಗ್ ಗಳಿಂದ ನಡೆಯುತ್ತಿದ್ದು ಚಂದಾ-ಆಧಾರಿತವಾಗಿ ಬದಲಾಗಲು ತಯಾರಿ ನಡೆಸುತ್ತಿವೆ. ಪ್ರಮುಖ ಪತ್ರಿಕೆಗಳ ವೆಬ್ ಆವೃತ್ತಿಗಳು ಹೆಚ್ಚಿನವು ಈ ಅವಧಿಯಲ್ಲಿ ಚಂದಾ-ಆಧಾರಿತವಾಗಿ ಬದಲಾಗಿವೆ ಎಂದು ಗಮನಿಸಬಹುದು. ಈ ವೆಬ್ ಪತ್ರಿಕೆಗಳ ಪ್ರಸಾರ ಸಣ್ಣದಿದ್ದರೂ ಅವುಗಳ ಪ್ರಭಾವ ಮುಖ್ಯವಾಹಿನಿ ಮಾಧ್ಯಮಗಳ ಮೇಲೂ ಜನತೆಯ ಮೇಲೂ ದೊಡ್ಡ ಪ್ರಮಾಣದಲ್ಲಿದೆ. ಅವು ರಾಷ್ಟ್ರೀಯ ಸಂವಾದ, ಸಂಕಥನಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ. ಸರಕಾರಗಳಿಗೆ ಮುಜುಗರ ತರುತ್ತಿವೆ. ಇದು ಸರಕಾರ ಇವುಗಳಲ್ಲಿ ಮೂರು ಪತ್ರಿಕೆಗಳ ಕಚೇರಿ ಮತ್ತು ಒಡೆಯರ ಮನೆ ಮೇಲೆ ದಾಳಿ ಮಾಡಿದ್ದರಿಂದಲೇ ಜಾಹೀರಾಗುತ್ತದೆ. ಕನ್ನಡದಲ್ಲಿ ಸಹ ಪ್ರಮುಖ ೫ ಪತ್ರಿಕೆಗಳ ವೆಬ್ ಆವೃತ್ತಿಗಳಲ್ಲಿ ೩ ಚಂದಾ-ಆಧಾರಿತವಾಗಿ ಬದಲಾಗಿವೆ. ಸುದ್ದಿಯನ್ನು ಸಂಗ್ರಹಿಸಿ ಪ್ರಕಟಿಸುವ ವೆಬ್ ತಾಣಗಳು ಮತ್ತು ಹೊಸ ವೆಬ್ ನಲ್ಲಿ ಮಾತ್ರ ಇರುವ ಹಲವು ಪತ್ರಿಕೆಗಳು ಕಾಣಿಸಿಕೊಂಡಿವೆ. ಕನ್ನಡನೆಟ್.ಕಾಂ, ಪ್ರತಿಧ್ವನಿ, ನಾನುಗೌರಿ, ಜನಶಕ್ತಿ ಮೀಡಿಯಾ, ಪ್ರಸ್ತುತ, ಒನ್ ಇಂಡಿಯಾ, ಪೊಲಿಟಿಕ್, ಇತ್ಯಾದಿ ಪ್ರಮುಖವಾದವು. ಕಳೆದ ಅವಧಿಯಲ್ಲಿ ಉತ್ತಮವಾಗಿ ಸಾಕಷ್ಟು ಸಂಪನ್ಮೂಲಗಳೊಂದಿಗೆ ಆರಂಭವಾಗಿದ್ದ ’ದಿ ಸ್ಟೇಟ್’ ಒಂದು ವರ್ಷದಲ್ಲೇ ಮುಚ್ಚಿದ್ದು ಈ ಅವಧಿಯ ಗಮನಾರ್ಹ ವಿದ್ಯಮಾನಗಳಲ್ಲೊಂದು. ಆಳುವ ಪಕ್ಷ ಅದಕ್ಕೆ ಸಂಪನ್ಮೂಲ ಒದಗಿಸಿದ್ದ ಉದ್ಯಮಿ ಮೇಲೆ ಬೆದರಿಕೆ/ಒತ್ತಡ ಹಾಕಿ ಅದನ್ನು ಮುಚ್ಚಿಸಲಾಯಿತು ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಕೆಂಡಸಂಪಿಗೆ, ಋತುಮಾನ ದಂತಹ ಸಾಂಸ್ಕೃತಿಕ ಪತ್ರಿಕೆಗಳು ಪ್ರಕಟವಾಗುತ್ತಿವೆ.

ಜಾಹೀರಾತುದಾರರ ಮರ್ಜಿ ಬದಲಾಗುತ್ತಿದೆ

ಪತ್ರಿಕೆ, ಟಿವಿ, ರೇಡಿಯೋ ಮಾಧ್ಯಮಗಳು ಅದರ ಬಳಕೆದಾರ ಕೊಡುವ ಹಣಕ್ಕಿಂತ ಹೆಚ್ಚಾಗಿ ಜಾಹೀರಾತುಗಳ ಮೇಲೆ ಅವಲಂಬಿಸಿರುತ್ತವೆ. ಉದಾಹರಣೆಗೆ ದೈನಿಕ ಪತ್ರಿಕೆಗಳ ಉತ್ಪಾದನೆ ವೆಚ್ಚವೇ ಬಳಕೆದಾರ ಕೊಡುವ ಹಣಕ್ಕಿಂತ ಹೆಚ್ಚಾಗಿರುತ್ತದೆ. ದೈನಿಕ ಒಟ್ಟು ವಹಿವಾಟಿನ ಶೇ. ೮೦ ಜಾಹೀರಾತಿನಿಂದ ಬಂದರೆ, ಶೇ. ೨೦ ಮಾತ್ರ ಬಳಕೆದಾರರಿಂದ ಬರುತ್ತದೆ. ಆದ್ದರಿಂದ ನಿರ್ದಿಷ್ಟ ಪತ್ರಿಕೆಗಳ ಮತ್ತು ಇಡೀ ಮಾಧ್ಯಮದ (ಉದಾ: ಎಲ್ಲಾ ಪತ್ರಿಕೆಗಳ) ಭವಿಷ್ಯ ಜಾಹೀರಾತುದಾರರ ಮರ್ಜಿ ಮೇಲೆ ಅವಲಂಬಿಸಿರುತ್ತದೆ. ಜಾಹೀರಾತುದಾರರು ಅವರು ಮಾರಾಟ ಮಾಡಬೇಕಾದ ಸರಕು-ಸೇವೆಗಳ ಗ್ರಾಹಕರು ಎಲ್ಲಿದ್ದಾರೆ, ಅವರನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಖಾತರಿಯಾಗಿ ತಲುಪುವುದು ಹೇಗೆ ಎಂಬುದರ ಮೇಲೆ ಎಲ್ಲಿ ಜಾಹೀರಾತು ಕೊಡಬೇಕು ಎಂದು ನಿರ್ಧರಿಸುತ್ತಾರೆ. ಡಿಜಿಟಲ್ ಅಥವಾ ವೆಬ್ ಮಾಧ್ಯಮ ಜಾಹೀರಾತುದಾರರಿಗೆ (ಪತ್ರಿಕೆ, ಟಿವಿ, ರೇಡಿಯೋಗಳಿಗೆ ಹೋಲಿಸಿದರೆ) ಒಂದೇ ಕಡೆ ಬಹು-ಮಾಧ್ಯಮಗಳ ಜತೆಗೆ ಕೆಲವು ಅನುಕೂಲಗಳನ್ನು (ನಿರ್ದಿಷ್ಟ ಜನವಿಭಾಗಕ್ಕೆ ಟಾರ್ಗೆಟ್ ಮಾಡುವ, ತಕ್ಷಣದ ಸ್ಪಂದನೆ ಮಾಡುವ, ಜನರ ಪತ್ರಿಕ್ರಿಯೆ ಅಳೆಯುವ ಇತ್ಯಾದಿ) ಕೊಡುತ್ತದೆ. ಆದ್ದರಿಂದ ಅವರು ವೆಬ್ ಮಾಧ್ಯಮದತ್ತ ಹೊರಳುತ್ತಿದ್ದಾರೆ. ಕೊವಿದ್ ಮಾಧ್ಯಮಗಳ ಬಳಕೆಯಲ್ಲಿ ತಂದ ಬದಲಾವಣೆಗಳು ಈ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸಿವೆ.

ಪ್ರಿಂಟನ್ನು ಹಿಂದಕ್ಕೆ ಹಾಕಿದ ಡಿಜಿಟಲ್

ಇ.ವೈ-ಫಿಕ್ಕಿ (EY-FICCI)೨೦೨೦ ರ ಮಾಧ್ಯಮ-ಮನೋರಂಜನಾ ಉದ್ಯಮ ವರದಿಯ ಅಂಕಿಅಂಶಗಳ ಪ್ರಕಾರ ಟಿವಿ, ಪತ್ರಿಕೆಗಳು ರೇಡಿಯೋ, ಡಿಜಿಟಲ್, ಫಿಲಂ ಸಂಗೀತ ಮತ್ತಿತರ ಸಂಬಂಧಿತ ಮಾಧ್ಯಮ-ಮನೋರಂಜನಾ ಉದ್ಯಮಗಳ ಒಟ್ಟು ವಹಿವಾಟು ೨೦೨೦ರಲ್ಲಿ ೧.೩೮ ಲಕ್ಷ ಕೋಟಿ ರೂ.ಗಳಾಗಿತ್ತು. ೨೦೨೦ರಲ್ಲಿ ಡಿಜಿಟಲ್ ಬಿಟ್ಟರೆ ಇತರ ಎಲ್ಲಾ ಮಾಧ್ಯಮಗಳ ವಹಿವಾಟು ಕುಗ್ಗಿತು. ಮೊದಲ ಬಾರಿಗೆ ಡಿಜಿಟಲ್ ನ ವಹಿವಾಟು ಪ್ರಿಂಟ್ ನ್ನು ಹಿಂದಕ್ಕೆ ಹಾಕಿ ಟಿವಿ ನಂತರ ಎರಡನೆ ಸ್ಥಾನ ಪಡೆಯಿತು. (ಒಟ್ಟು ವಹಿವಾಟಿನಲ್ಲಿ ಮಾಧ್ಯಮದ ಭಾಗ ಪ್ರತ್ಯೇಕಿಸುವುದು ಕಷ್ಟವಾದರೂ ಅದು ೧.೧೨ ಲಕ್ಷ ಕೋಟಿ ರೂ. ಎಂದು ಅಂದಾಜು) ಇದರಲ್ಲಿ ಜಾಹೀರಾತಿನಿಂದ ಬಂದ ಆದಾಯ ೬೨,೩೦೦ ಕೋಟಿ ರೂ.ಗಳಾಗಿತ್ತು.  ಒಟ್ಟು ವಹಿವಾಟು ೨೦೧೯ರಲ್ಲಿ ೧.೮೨ ಲಕ್ಷ ಕೋಟಿ ರೂ. (ಇದರಲ್ಲಿ ಮಾಧ್ಯಮದ ಭಾಗ ಪ್ರತ್ಯೇಕಿಸುವುದು ಕಷ್ಟವಾದರೂ ಅದು ೧.೩೩ ಲಕ್ಷ ಕೋಟಿ ರೂ. ಎಂದು ಅಂದಾಜು) ಇದ್ದು ಕೊವಿದ್ ಪರಿಣಾಮವಾಗಿ ೨೦೨೦ರಲ್ಲಿ ಗಮನಾರ್ಹವಾಗಿ ಕುಸಿದಿದೆ. ಅದು ೨೦೧೬ರಲ್ಲಿ ೯೧,೪೩೦ ಕೋಟಿ ರೂ. ಆಗಿತ್ತು. ೨೦೧೬ರಲ್ಲಿ ಜಾಹೀರಾತಿನಿಂದ ಬಂದ ಆದಾಯ ೪೨,೫೨೦ ಕೋಟಿ ರೂ.ಆಗಿತ್ತು. ೨೦೨೨ರಲ್ಲಷ್ಟೇ ಉದ್ಯಮ ೨೦೧೯ರ ಸ್ಥಿತಿಗೆ ಮರಳಿ ಆ ಮೇಲೆ ಮತ್ತೆ ಉತ್ತಮ ಬೆಳವಣಿಗೆ ಸಾಗುತ್ತದೆ ಎಂದು ವರದಿ ಹೇಳುತ್ತದೆ. ೨೦೨೩ ರ ವರೆಗೆ ಒಟ್ಟು ಉದ್ಯಮ ೧೭% ಸರಾಸರಿ ವಾರ್ಷಿಕ ದರದಲ್ಲಿ ಏರಲಿದೆ. ಡಿಜಿಟಲ್ ಅತ್ಯಂತ ವೇಗವಾಗಿ (೨೨%), ಟಿವಿ (೭%), ಪ್ರಿಂಟ್ (೧೧%), ರೇಡಿಯೊ (೨೪%) ಸರಾಸರಿ ವಾರ್ಷಿಕ ದರದಲ್ಲಿ ಏರಲಿವೆ ಎಂದು ವರದಿ ಹೇಳುತ್ತದೆ. ರಾಜ್ಯವಾರು ಭಾಷಾವಾರು ಮಾಧ್ಯಮ ಉದ್ಯಮಗಳ ವಹಿವಾಟು, ಜಾಹೀರಾತಿನ ಅಂಕಿ ಅಂಶಗಳು ಲಭ್ಯವಿಲ್ಲ.

ಜಾಹೀರಾತು ಡಿಜಿಟಲ್ ನತ್ತ

ಇ.ವೈ-ಫಿಕ್ಕಿ (EY-FICCI)ರ ವರದಿ ಪ್ರಕಾರವೇ ಕಳೆದ ೫ ವರ್ಷಗಳಲ್ಲಿ ಜಾಹೀರಾತುದಾರರು ವಿವಿಧ ಮಾಧ್ಯಮಗಳಲ್ಲಿ ಯಾವುದನ್ನು ಎಷ್ಟರ ಮಟ್ಟಿಗೆ ಆರಿಸಿಕೊಂಡರು ಎಂಬುದನ್ನು ನೋಡಿದರೆ ತಿಳಿಯುತ್ತದೆ. ಕೆಳಗಿನ ಕೋಷ್ಟಕದಲ್ಲಿ ಜಾಹೀರಾತುಗಳಲ್ಲಿ ಪಾಲು ಹಾಗೂ ಹೆಚ್ಚಳದ ದರ ಎರಡೂ ಗಮನಿಸಿದರೆ ಡಿಜಿಟಲ್ ನತ್ತ ದೊಡ್ಡ ರೀತಿಯಲ್ಲಿ ಜಾಹೀರಾತುದಾರರು ಹೊರಳುತ್ತಿದ್ದಾರೆ ಎಂಬುದು ಸ್ಪಷ್ಟ. ಟಿವಿ ಜಾಹೀರಾತು ಸ್ಥಗಿತಗೊಂಡಿದ್ದರೆ, ಪತ್ರಿಕೆಗಳು ದೊಡ್ಡ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿವೆ.

Madyama kshetra

ಇವೆಲ್ಲವುಗಳ ಹಿನ್ನೆಲೆಯಲ್ಲಿ, ಪಕ್ಷ ಮತ್ತು ಎಡ ಪ್ರಜಾಸತ್ತಾತ್ಮಕ ಪ್ರಗತಿಪರ ಶಕ್ತಿಗಳು ಮುಂದಿನ ವರ್ಷಗಳ ಯೋಜನೆಯನ್ನು ಮಾಡಬೇಕಾಗಿದೆ.

 

Leave a Reply

Your email address will not be published. Required fields are marked *