ರಾಜ್ಯದ ಅಭಿವೃದ್ದಿಗೆ ಮಾರಕವಾದ, ಜನತೆಯ ತೆರಿಗೆ ಹಣವನ್ನು ಲೂಟಿ ಮಾಡುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ರಾಜ್ಯದ ಎಲ್ಲ ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನದ ನಿರ್ಣಯ
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿರುವ ಬೆಳದಿರುವ ಭ್ರಷ್ಟಚಾರದಿಂದ ಕರ್ನಾಟಕ ದೇಶದಲ್ಲೇ 4ನೇ ಸ್ಥಾನ ಪಡೆದುಕೊಂಡಿದೆ. ಟ್ರಾನ್ಸಪರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ (ಟಿಐಐ) ಎನ್ನುವ ಸ್ವಯಂ ಸೇವಾ ಸಂಸ್ಥೆ ಮಾಡಿರುವ ಇತ್ತೀಚಿನ ಸಮೀಕ್ಷೆಯಲ್ಲಿ ಭ್ರಷ್ಷಚಾರದ ವಿಚಾರದಲ್ಲಿ ಉತ್ತರಪ್ರದೇಶ, ಜಾರ್ಖಂಡ್ ಹಾಗೂ ತೆಲಂಗಾಣ ರಾಜ್ಯಗಳು ಕ್ರಮೇಣ ಒಂದು ಎರಡು ಹಾಗೂ ಮೂರನೇ ಸ್ಥಾನಗಳಲ್ಲಿದ್ದರೆ ನಂತರದ ಸ್ಥಾನ ಕರ್ನಾಟಕದ್ದಾಗಿದೆ. ವಿಶೇಷವೆಂದರೆ ಹಿಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತ್ವರಿತ ನ್ಯಾಯವ್ಯವಸ್ಥೆಯನ್ನು ಬಲಪಡಿಸುವ ಘೋಷಣೆ ಮಾಡಿದ ಬೆನ್ನಲ್ಲೇ ಈ ಸಮೀಕ್ಷೆ ಪ್ರಕಟಗೊಂಡಿದೆ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ. ಕರ್ನಾಟಕದ ಶೇ 40 ರಷ್ಟು ಜನರು ತಮ್ಮ ಭೂ ಸಂಬಂಧಿ, ನೊಂದಣಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ, ಶೇ21 ರಷ್ಟು ಜನರು ನಗರ ಹಾಗೂ ಮುನಿಸಿಪಾಲಿಟಿಗಳಲ್ಲಿನ ಕೆಲಸಗಳಿಗಾಗಿ ಹಾಗೂ ಇನ್ನೂ ಶೇ 23 ರಷ್ಟು ಜನರು ಪೊಲೀಸ್ ಠಾಣೆಗಳಲ್ಲಿ ಲಂಚ ನೀಡಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಸಮೀಕ್ಷೆ ಬಯಲುಗೊಳಿಸಿದೆ.
ಕಳೆದ ಬಾರಿ ಕಾಂಗ್ರಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರವನ್ನು ‘ಹತ್ತು ಪರ್ಸಟೆಂಜ್ ಸರ್ಕಾರ್’ ಎಂದು ಲೇವಡಿ ಮಾಡಿದ್ದರು. ಆದರೆ ಈಗ ಕರ್ನಾಟಕದ ಗುತ್ತಿಗೆದಾರರ ಸಂಘವೇ ರಾಜ್ಯದ ಬಿಜೆಪಿ ಸರ್ಕಾರ ‘40 ಪರ್ಸೆಂಟೇಜ್’ ಸರ್ಕಾರವಾಗಿದೆ ಇದರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸ್ವತ: ಪ್ರಧಾನಿಗೆ ಕಳೆದ ಡಿಸೆಂಬರ್ ನಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇತ್ತೀಚಿಗೆ ಪತ್ರಿಕಾಗೋಷ್ಟಿ ನಡೆಸಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮುಖವನ್ನು ಅನಾವರಣಗೊಳಿಸಿದ್ದಾರೆ.
ಇತ್ತೀಚಿಗೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ‘ಬಿಟ್ ಕಾಯಿನ್’ ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀ ಕೃಷ್ಣ ಆಲಿಯಾಸ್ ಶ್ರೀಕಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಸಂಗ್ರಹಣಾ ವ್ಯವಸ್ಥೆಯನ್ನೇ (ವಿವಿ ಇಲಾಖೆಗಳ ಟೆಂಡರ್ ನಿರ್ವಹಿಸುವ) ಹ್ಯಾಕ್ ಮಾಡಿ ಅಲ್ಲಿ ನೂರಾರು ಜನ ಗುತ್ತಿಗೆದಾರರು ಇಟ್ಟಿದ್ದ ನೂರಾರು ಕೋಟಿ ಭದ್ರತಾ ಠೇವಣಿಯನ್ನೇ(ಇಎಂಡಿ) ಲಪಟಾಯಿಸಿದ್ದ ಇದರ ಬಗ್ಗೆ ಸಿಐಡಿ ತನಿಖೆ ಆರಂಭಿಸಿದ್ದರೂ ಅದು ತಾರ್ಕಿಕ ಅಂತ್ಯ ಕಾಣದಂತೆ ಮಾಡಲಾಯಿತು. ಹೀಗಾಗಿ ಈ ‘ಬಿಟ್ ಕಾಯಿನ್ ಲಾಭ’ ಪಡೆದವರಲ್ಲಿ ಬಿಜೆಪಿ ಕಾಂಗ್ರಸ್ ಪಕ್ಷದ ಪ್ರಮುಖ ನಾಯಕರುಗಳು ಮತ್ತು ಅವರ ಕುಟುಂಬಗಳು ಹಾಗೂ ರಾಜ್ಯ ಸರ್ಕಾರದ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ. ನಗರಪ್ರದೇಶಗಳಲ್ಲಿ ಮಧ್ಯಮ ವರ್ಗದ ಜನರಿಗೆ ಅವರ ಕನಸಿನ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಸ್ಥಾಪಿಸಲಾದ ನಗರಾಭಿವೃದ್ದಿ 31 ಪ್ರಾಧಿಕಾರಗಳು ಜನಪತ್ರಿನಿಧಿಗಳ ದುರಾಸೆ,ದಲ್ಲಾಳಿ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದಾಗಿ ವ್ಯಾಪಕ ಭ್ರಷ್ಟಚಾರದ ಕೂಪಗಳಾಗಿವೆ ಇದಕ್ಕೆಲ್ಲ ಕಿರೀಟವಿಟ್ಟಂತಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ) ಕಚೇರಿಗಳಲ್ಲಿ ಇತ್ತಿಚಿಗೆ ಭ್ರಷ್ಟಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಅಲ್ಲಿ ವ್ಯಾಪಕ ಭ್ರಷ್ಟಚಾರ,ವಂಚನೆ,ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಲಪಟಾಯಿಸುವಿಕೆ ಆಗಿರುವುದನ್ನು ಪತ್ತೆ ಮಾಡಿದೆ. ಮತ್ತು ಇಲ್ಲಿ ದಾಳಿ ನಡೆದಿರುವುದು ಇದು ಮೊದಲೇನೂ ಅಲ್ಲ.
ಇನ್ನೂ ಸರ್ಕಾರದ ಕಾಮಗಾರಿಗಳಿಗೆ ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರೂಪಿಸಲಾದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ(ಕೆಟಿಪಿಪಿ) ಕಾಯ್ದೆ ಸೆಕ್ಷನ್ 4(ಜಿ) ಯಂತೂ ಈ ಕರೋನಾ ಅವಧಿಯಲ್ಲಿ ರಾಜ್ಯ ಸರ್ಕಾರದ ಇಲಾಖೆಗಳು ದುರ್ಬಳಕೆ ಮಾಡಿಕೊಂಡಿವೆ. ಆ ಮೂಲಕ ಬಿಜೆಪಿ ಸರ್ಕಾರದ ಸಚಿವರು,ಶಾಸಕರು, ಅಧಿಕಾರಿಗಳು ತಮ್ಮ ಹಿಂಬಾಲಕರು ಹಾಗೂ ಸಂಬಂಧಿಗಳಿಗೆ ಟೆಂಡರ್ ಸಿಗುವಂತೆ ಮಾಡಿ ಸಾವಿರಾರು ಕೋಟಿ ಹಣವನ್ನು ಲೂಟಿ ಹೊಡೆದಿವೆ. ಸಚಿವರು ಮತ್ತು ಶಾಸಕರು ಮತ್ತು ಇಲಾಖಾ ಅಧಿಕಾರಿಗಳೇ ಇದರ ನೇರ ಫಲಾನುಭವಿಗಳಾಗಿರುವುದು ಈಗ ಜಗಜಾಹೀರಾಗಿದೆ. ಕರೋನಾ ಅವಧಿಯಲ್ಲಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಕಳೆಪೆ ರೇಷನ್, ಟೂಲ್ ಕಿಟ್ಗಳನ್ನು ಖರೀದಿಸಿದ್ದು ಅದರಲ್ಲಿ ನೂರಾರು ಕೋಟಿ ಹಣವನ್ನು ಕಾರ್ಮಿಕ ಸಚಿವರು, ಮತ್ತು ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖಾ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಮತ್ತು ಖಾಸಗೀ ಆಸ್ಪತ್ರೆಗಳಿಂದ ಲಸಿಕೆ ಖರೀದಿಗೆ ರೂ 700 ಕೋಟಿ ನೀಡಲು ಮುಂದಾಗಿರುವುದರ ವಿರುದ್ದ ಕಟ್ಟಡ ಕಾರ್ಮಿಕ ಸಂಘಗಳು ತೀವ್ರ ಹಾಗೂ ಯಶಸ್ವಿ ಹೋರಾಟ ನಡೆಸಿದ್ದು ಗಮನಾರ್ಹ ಸಂಗತಿಯಾಗಿದೆ. ಹಾಗೆ ಹೈದ್ರಾಬಾದ್ ಕರ್ನಾಟಕದಲ್ಲಿ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸಲು ಕರೆಯಲಾದ ಮೊಟ್ಟೆ ಖರೀದಿ ಟೆಂಡರ್ ನಲ್ಲಿ ಸ್ವತಃ ಹಿಂದಿನ ಮಹಿಳಾ ಸಚಿವರೇ ಕಮಿಷನ್ ಪಡೆದ ಆರೋಪ ಬಂದಿತ್ತು ಎನ್ನುವುದು ಬಿಜೆಪಿ ಭ್ರಷ್ಟ ಮುಖವನ್ನು ರಾಜ್ಯಕ್ಕೆ ಪರಿಚಯಿಸಿದೆ.
ಭ್ರಷ್ಟಚಾರವಿಲ್ಲದೆ ಇಲಾಖೆಗಳೇ ಇಲ್ಲ:
ರಾಜ್ಯ ಸರ್ಕಾರದ ಅಡಿಯಲ್ಲಿ ಪ್ರಮುಖ ಕಾಮಗಾರಿಗಳನ್ನು ಮೊದಲಿನಿಂದಲೂ ನಿರ್ವಹಿಸುವ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಪಂಚಾಯತ್ ರಾಜ್ಯ ಹಾಗೂ ಗ್ರಾಮೀಣಾಭೀವೃದ್ದಿ, ನಗರಾಭಿವೃದ್ದಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇತ್ಯಾಧಿ ಇಲಾಖೆಗಳಲ್ಲಿ ಮಂಜೂರಾದ ಅನುದಾನಗಳಲ್ಲಿ ಅರ್ಧದಷ್ಟು ಮೊತ್ತ ಲಂಚದ ರೂಪದಲ್ಲೇ ಲೂಟಿಯಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಆರಂಭದಿAದ ಹಿಡಿದು ಕೆಲಸ ಮುಗಿದ ಬಳಿಕ ಬಿಲ್ ಮಂಜೂರಾತಿವರೆಗೂ ಕರುಡು ಕಾಂಚಾಣದ್ದೇ ಆಟ ಎಂದು ನೇರ ಆರೋಪವನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಇದೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಆರೋಪ ಮಾಡುವಷ್ಟರ ಮಟ್ಟಿಗೆ ರಾಜ್ಯದ ಭ್ರಷ್ಟಚಾರ ಬೆಳೆದು ನಿಂತಿದೆ. ಈ ಭ್ರಷ್ಟಚಾರದ ಜಾಲ ಹೇಗೆ ಹಂಚಿಕೆಯಾಗುತ್ತಿದೆ ಎನ್ನುವ ಶೇಖಡವಾರು ವಿವರವನ್ನು ಅದು ರಾಜ್ಯದ ಜನರ ಮುಂದೆ ಬಯಲುಗೊಳಿಸಿದೆ. ಅದರ ಪ್ರಕಾರ…
- ಟೆಂಡರ್ ಅನುಮೋದನೆ ಮೊದಲು ಸಚಿವರಿಗೆ – ಶೇ 5 ರಷ್ಟು
- ಕಾಮಗಾರಿ ಆರಂಭ ಮುನ್ನ ಕೆಲವು ಸಂಸದರಿಗೆ – ಶೇ 5 ರಷ್ಟು
- ರಸ್ತೆ ಕಾಮಗಾರಿಗಳಲ್ಲಿ ಸ್ಥಳಿಯ ಜನಪ್ರತಿನಿಧಿಗಳಿಗೆ – ಶೇ 10 ರಷ್ಟು
- ಕಟ್ಟಡ ಕಾಮಗಾರಿಗಳಲ್ಲಿ ಸ್ಥಳಿಯ ಜನಪ್ರತಿನಿಧಿಗಳಿಗೆ – ಶೇ 5 ರಷ್ಟು
- ಕೆಆರ್ಡಿಎಲ್ ಕಾಮಗಾರಿಗಳಲ್ಲಿ ಸ್ಥಳಿಯ ಜನಪ್ರತಿನಿಧಿಗಳಿಗೆ – ಶೇ 10 ರಷ್ಟು
- ಕಾಮಗಾರಿಗಳು ಪ್ರಗತಿ ಹಂತದಲ್ಲಿ – ಶೇ 15-20 ರಷ್ಟು
- ಬಿಲ್ ಪಾವತಿಗಾಗಿ ಅಧಿಕಾರಿಗಳಿಗೆ – ಶೇ 6 ರಷ್ಟು
ಇದಲ್ಲದೆ ಕಾಮಗಾರಿಗಳ ಅಥವಾ ಗುತ್ತಿಗೆ ಕೆಲಸಗಳ ಟೆಂಡರ್ ಪಡೆಯುವ ಮುನ್ನ ಶೇ.10 ರಷ್ಟು ನಂತರ ಕಾರ್ಯದೇಶ ಪಡೆಯುವುದಾಗ ಶೇ 10 ರಷ್ಟು ಅಧಿಕಾರಿಗಳು ಮತ್ತು ಸಚಿವರಿಗೆ, ಲೆಕ್ಕ ಪರಿಶೋಧಕರಿಗೆ ಶೇ 2 ರಷ್ಟು ಸಮಾಲೋಚನಾ ಸಂಸ್ಥೆಗೆ ಶೇ 1 ರಷ್ಟು ಕೆಳಹಂತದ ನೌಕರರು/ ಗುಮಾಸ್ಥರಿಗೆ ಶೇ 1 ರಷ್ಟು ಲಂಚಾವತಾರ ವಿಸ್ತರಣೆಗೊಂಡಿದೆ ಎನ್ನುವ ಅಂಶವನ್ನು ನಾಡಿನ ಹೆಸರಾಂತ ಪ್ರಜಾವಾಣಿ ಪ್ರಕಟಿಸಿದ ಭ್ರಷ್ಟಚಾರ ಕುರಿತಾದ ಸರಣಿ ಲೇಖನ ಮಾಲೆಗಳು ಜನತೆಯ ಮುಂದಿಟ್ಟಿದೆ. ಹಿಂದೆಲ್ಲ ಕಮಿಷನ್ ಪಡೆದು ಟೆಂಡರ್ ಕೊಡಿಸಲು ಮಧ್ಯವರ್ತಿಗಳು ಇರುತ್ತಿದ್ದರು ಮತ್ತು ಸಚಿವರೋ ಶಾಸಕರೋ ಅಥವಾ ಅಧಿಕಾರಿಗಳ ಸಂಬAಧಿಕರೋ ಈ ವ್ಯವಹಾರ ನಡೆಸುತ್ತಿದ್ದರು ಆದರೆ ಇತ್ತೀಚಿಗೆ ಈ ಕೆಲಸಕ್ಕೆ ನೇರವಾಗಿ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳೇ ಧುಮುಕಿ ವ್ಯವಹಾರ ಮುಗಿಸುತ್ತಿದ್ದಾರೆ ಹೀಗಾಗಿ ಹಿಂದೆ ಶೇ15-20 ರಷ್ಟಿದ್ದ ಲಂಚದ ಪ್ರಮಾಣ ಈಗ ಶೇ 40 ರಷ್ಟಕ್ಕೆ ಏರಿಕೆಯಾಗಿದೆ. ಕಳಪೆ ಕಾಮಗಾರಿಗಳು ನಡೆದರೆ ಎಲ್ಲರೂ ಗುತ್ತಿಗೆದಾರರತ್ತ ಬೆರಳು ಮಾಡಿ ತೋರಿಸುತ್ತಾರೆ ಆದರೆ ಮಂಜೂರಾದ ಕಾಮಗಾರಿಗಳಲ್ಲಿ ಶೇ 40-50 ರಷ್ಟು ಹಣ ಲಂಚಕ್ಕೆ ಹೋದರೆ ಗುಣಮಟ್ಟದ ಕೆಲಸಗಳು ಹೇಗೆ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರು ಸಂಘವೇ ಪ್ರಶ್ನೆ ಮಾಡುತ್ತಿದೆ ಎಂದರೆ ಈ ಭ್ರಷ್ಟಚಾರ ನಾಗಲೋಟದಿಂದ ಆಗಸದೆತ್ತರ ಜಿಗಿದಿದೆ ಸ್ಪಷ್ಟವಾಗುತ್ತಿದೆ.
ಹೀಗಾಗಿ ರಾಜ್ಯದ ಅಭಿವೃದ್ದಿಗೆ ಅಡ್ಡಗಾಲಾಗಿರುವ ಈ ಭ್ರಷ್ಟಚಾರವನ್ನು ನಿಯಂತ್ರಿಸುವ ಕೆಲಸ ಶಾಸಕಾಂಗ ಮತ್ತು ಕಾರ್ಯಂಗಗಳಿಂದ ಮೇಲ್ಮಟ್ಟದಿಂದಲೇ ಆರಂಭಗೊಳ್ಳಬೇಕು ಇದರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಚಿವರು, ಶಾಸಕರು ಭ್ರಷ್ಟಚಾರ ಹೆಚ್ಚಾಗಲು ಕಾರಣವಾದರೆ ಮತ್ತೊಂದು ಕಡೆ ಅಧಿಕಾರ ನಡೆಸಿದ ಕಾಂಗ್ರಸ್ ಹಾಗೂ ಜನತಾದಳ ಪಕ್ಷಗಳು ತಮ್ಮದೆ ಕಾಣಿಕೆ ನೀಡಿವೆ. ಈ ಮೂರು ಪಕ್ಷಗಳು ಭ್ರಷ್ಟಚಾರದ ಫಲಾನುಭವಿಗಳೇ ಹೀಗಾಗಿ ಇವುಗಳಿಗೆ ಭ್ರಷ್ಟಚಾರವನ್ನು ನಿಯಂತ್ರಿಸುವ ಇಚ್ಚಾಶಕ್ತಿ ಮತ್ತು ನೈತಿಕತೆ ಎರಡೂ ಇಲ್ಲವಾಗಿದೆ.
ಆದರೆ ಕೇರಳದಲ್ಲಿ ಈಗ ಅಧಿಕಾರ ನಡೆಸುತ್ತಿರುವ ಎಡಪ್ರಜಾಸತ್ತಾತ್ಮಕ ರಂಗ(ಎಲ್ಡಿಎಫ್) ಸರ್ಕಾರ ಮತ್ತು ಪಶ್ಚಿಮ ಬಂಗಾಳ ಹಾಗೂ ತ್ರಿಪುರಾಗಳಲ್ಲಿ ಎರಡು ಮೂರು ದಶಕಗಳಿಂದ ಆಡಳಿತ ನಡೆಸಿದ ಸಿಪಿಐ(ಎಂ) ನೇತೃತ್ವದ ಎಡರಂಗ ಸರ್ಕಾರಗಳು ಭ್ರಷ್ಟಚಾರರಹಿತ ಆಡಳಿತವನ್ನು ಹೇಗೆ ನೀಡಬಹುದು ಎನ್ನುವುದ್ಕಕೆ ಪರ್ಯಾಯ ರಾಜಕೀಯ ಮಾದರಿಗಳಾಗಿವೆ ಇದುವರೆಗಿನ ಎಡರಂಗದ ಆಳ್ವಿಕೆಯಲ್ಲಿ ಒಬ್ಬರೇ ಒಬ್ಬ ಸಚಿವರು, ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳು ಭ್ರಷ್ಟಚಾರ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡ ನಿದರ್ಶನಗಳೇ ಇಲ್ಲ ಎನ್ನುವುದು ಕಮ್ಯೂನಿಸ್ಟ ಪಕ್ಷಗಳಿಗೆ ಸಮಾಜದ ಮತ್ತು ಜನತೆಯ ಹಿತ ಮಾತ್ರವೇ ಮುಖ್ಯ ಎನ್ನುವುದನ್ನು ಇದು ಸಾಬೀತುಪಡಿಸಿದೆ.
ಆದ್ದರಿಂದ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಈ ಭ್ರಷ್ಟ ವ್ಯವಸ್ಥೆಯನ್ನು ನಾಶ ಮಾಡದೇ ಹೊರತು ಸಮಾಜದ ಅಭಿವೃದ್ದಿ ಮತ್ತು ಜನತೆಯ ಅಭಿವೃದ್ದಿ ಅದರಲ್ಲೂ ದುಡಿಯುವ ಜನತೆಯು ಪರಿಹಾರಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಸಿಪಿಎಂ ಪಕ್ಷದ ಸ್ಪಷ್ಟ ಅಭಿಪ್ರಾಯವಾಗಿದೆ. ಇಂತಹ ಭ್ರಷ್ಟ ವ್ಯವಸ್ಥೆ ಸರಿಯಾಗಬೇಕಾದರೆ ಅದಕ್ಕೆ ಕಾರಣವಾದ ಈ ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದನ್ನೆ ಅನುಸರಿಸುವ ರಾಜಕೀಯ ವ್ಯವಸ್ಥೆ ಬದಲಾಗಬೆಕು. ಆದರೆ ಅದು ಅಷ್ಟು ಸರಳವಾಗಿಲ್ಲ ಇದಕ್ಕಾಗಿ ರಾಜ್ಯದ ಜನಸಮುದಾಯ ಮತ್ತು ವೀಶೇಷವಾಗಿ ದುಡಿಯುವ ಜನತೆ ಸಿಪಿಎಂ ಮತ್ತು ಇತರೆ ಎಡಪಕ್ಷಗಳೊಂದಿಗೆ ಸೇರಿ ಈ ಭ್ರಷ್ಟಚರದ ವಿರುದ್ದ ದೃಢವಾದ ಹೋರಾಟ ನಡೆಸಬೇಕಿದೆ. ಮತ್ತು ಈ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಸಕಾಲಿಕ ಮಧ್ಯ ಪ್ರವೇಶವು ಅಗತ್ಯವಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ಅಭಿವೃದ್ದಿಗೆ ಮಾರಕವಾದ, ಜನತೆಯ ತೆರಿಗೆ ಹಣವನ್ನು ಲೂಟಿ ಮಾಡುವ ಭ್ರಷ್ಟಚಾರವನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಬೇಕು ಹಾಗೂ ಸಾರ್ವಜನಿಕ ಹಣವನ್ನು ಭ್ರಷ್ಟತೆ ಮೂಲಕ ಕೊಳ್ಳೆ ಹೊಡೆಯುತ್ತಿರುವ ಲೂಟಿಕೋರ ರಾಜಕಾರಣಿಗಳು ಅವರ ಆಪ್ತರು ಹಾಗೂ ಭಾಗಿಯಾದ ಅಧಿಕಾರಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆಯಾಗುವಂತೆ ಮತ್ತು ರಾಜ್ಯದ ಎಲ್ಲ ಭ್ರಷ್ಟಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ಒಳಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕೆAದು 2022 ಜನವರಿ 2 ರಿಂದ 4 ರವರೆಗೆ ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಐ(ಎಂ) ಪಕ್ಷದ 23 ನೇ ರಾಜ್ಯ ಸಮ್ಮೇಳನ ಆಗ್ರಹಿಸಿದೆ.
ಮಂಡನೆ: ಕೆ. ನೀಲಾ
ಅನುಮೋದನೆ: ಮುನೀರ್ ಕಾಟಿಪಳ್ಳ