ಇಡೀ ಆಳ್ವಿಕೆ ಡಿಜಿಟಲೀಕರಣದತ್ತ ಸಾಗುತ್ತಿದೆ. ವಿವಿಧ ಸರ್ಕಾರಿ ಸೇವೆಗಳು ಮತ್ತು ಯೋಜನೆಗಳು ಲಭ್ಯವಾಗಬೇಕಾದರೆ ನಾಗರಿಕರು ಮೊಬೈಲ್ಗಳು, ಟ್ಯಾಬ್ಗಳು, ಕಂಪ್ಯೂಟರ್ಗಳನ್ನು ಬಳಸುವುದು ಕಡ್ಡಾಯವಾಗಿದೆ. ಬ್ಯಾಂಕಿಂಗ್, ಆರೋಗ್ಯ, ಸಾರಿಗೆ, ಇ-ಕ್ರಾಪ್, ಇ-ಶ್ರಮ್, ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳು, ಎಲ್ಲಾ ರೀತಿಯ ನೇರ ಹಣ ವರ್ಗಾವಣೆ ಯೋಜನೆಗಳು ಮುಂತಾದ ನಾಗರಿಕರ 44 ಅಗತ್ಯ ಸೇವೆಗಳ ತ್ವರಿತ ಡಿಜಿಟಲೀಕರಣದತ್ತ ಸರ್ಕಾರಗಳು ಸಾಗುತ್ತಿವೆ.
ಈ ಸೇವೆಗಳ ಬಳಕೆಯು ಸಂಪೂರ್ಣವಾಗಿ ಡಿಜಿಟಲ್ ಲಭ್ಯತೆಯ ಮೇಲೆ ಅವಲಂಬಿತವಾಗಿರುವುದರಿಂದ, ಇವೆಲ್ಲ ಸೇವೆಗಳನ್ನು ಪಡೆಯುವುದು ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ದೀನದಲಿತರಿಗೆ ತುಂಬಾ ಕಷ್ಟಕರವಾಗಿದೆ. ಡಿಜಿಟಲೀಕರಣವು ಭರದಿಂದ ಸಾಗಿರುವಾಗ, ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಯಾವುದೇ ಖಾತ್ರಿ ಇಲ್ಲ. ಜನ ಸಮೂಹಗಳಲ್ಲಿ ದತ್ತಾಂಶ ರಕ್ಷಣೆ ಮತ್ತು ಗೌಪ್ಯತೆಯ ಪ್ರಾಮುಖ್ಯತೆಯ ಬಗ್ಗೆ ಯಾವುದೇ ಕನಿಷ್ಟ ಮಾಹಿತಿ ಇಲ್ಲ. ಈಗಾಗಲೇ, ರಾಜ್ಯದಲ್ಲಿ ಸಾಕ್ಷರತೆ ದರವು ದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಒಂದು. ಪುರುಷ/ಮಹಿಳೆ, ನಗರ/ಗ್ರಾಮೀಣ ಸಾಕ್ಷರತೆ ದರಗಳ ನಡುವೆ ಅಗಾಧ ಅಂತರವಿದೆ. ಇವುಗಳೆಲ್ಲವೂ ವಾಸ್ತವವಾಗಿ ಅನುವು ಮಾಡಿ ಕೊಡುವವರು ಎಂದು ಹೇಳಿಕೊಳ್ಳುವ ಮಧ್ಯವರ್ತಿಗಳ ಹೊಸದೊಂದು ಗುಂಪನ್ನು ಹುಟ್ಟುಹಾಕುತ್ತವೆ. ಈ ಸಂದರ್ಭದಲ್ಲಿ, ಸಾರ್ವಜನಿಕರಿಗೆ, ವಿಶೇಷವಾಗಿ ಶ್ರಮಜೀವಿಗಳು, ಗ್ರಾಮೀಣ ಜನಸಾಮಾನ್ಯರು ಮತ್ತು ಅಸಂಘಟಿತ ವಲಯಗಳಿಗೆ ಇ-ಸಾಕ್ಷರತೆಯನ್ನು ಒದಗಿಸುವ ಆಧಾರ ಭೂತ ಮೂಲಸೌಕರ್ಯ, ಶಿಕ್ಷಣ ಮತ್ತು ಪರಿಣತಿಯನ್ನು ಒದಗಿಸಲು ಮಾಡುವ ಎಲ್ಲಾ ಪ್ರಯತ್ನಗಳು ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿರಬೇಕು. ಇಲ್ಲದಿದ್ದರೆ ಜನ ಸಂಖ್ಯೆಯ ಬಹುಪಾಲು ಆಳ್ವಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಲಭ್ಯತೆಯಿಂದ ವಂಚಿತವಾಗುತ್ತದೆ.
ತಂತ್ರಜ್ಞಾನ ಲಭ್ಯವಾಗುವಲ್ಲಿ ಅಸಮಾನತೆ ಈ ಕೆಳಗಿನ ದೀರ್ಘಾವಧಿ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ:
ಅ) ಅಭಿವೃದ್ಧಿ ಕಾರ್ಯಕ್ರಮಗಳ ಲಭ್ಯತೆಯಲ್ಲಿ ದೊಡ್ಡ ಕಂದರ ಸೃಷ್ಟಿಯಾಗುತ್ತದೆ, ಹೀಗಾಗಿ ದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಭಜನೆಯಲ್ಲಿ ಇದೂ ಸೇರಿಕೊಳ್ಳುತ್ತದೆ.
ಆ) ಡಿಜಿಟಲ್ ಸೌಲಭ್ಯಗಳು ಮತ್ತು ಉಪಕರಣಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಜನರು ಸುಲಭವಾಗಿ ಮೋಸ ಹೋಗುತ್ತಾರೆ.
ಇ) ಜನರು ಈಗಾಗಲೇ ಆಳ್ವಿಕೆ ಲಭ್ಯವಾಗಿರುವುದೇ ಬಹಳ ಕಡಿಮೆ, ಇದರೊಂದಿಗೆ ಅವರು ಅಭಿವೃದ್ಧಿ ಕಾರ್ಯಕ್ರಮಗಳೂ ಲಭ್ಯವಾಗದಂತಾಗುತ್ತದೆ.
ಈ) ಡಿಜಿಟಲ್ ತಂತ್ರಜ್ಞಾನ ಮತ್ತು ಸಾಧನಗಳು ಮತ್ತು ಆಪ್ಗಳು ಸೇರಿದಂತೆ ಪರಿಕರಗಳ ಕುರಿತು ಸರಿಯಾದ ಜ್ಞಾನವಿಲ್ಲದೆ ಜನರು ತಮ್ಮ ವೈಯಕ್ತಿಕ ದತ್ತಾಂಶದ ಖಾಸಗಿತ್ವದ ಮೂಲಭೂತ ಹಕ್ಕಿನ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ.
ಸರ್ಕಾರಗಳು ತೆಗೆದು ಕೊಳ್ಳಬೇಕಾದ ಕ್ರಮಗಳು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
ಅ) ಸರ್ಕಾರವು ಇ-ಸಾಕ್ಷರತಾ ಮಿಷನನ್ನು ಕೈಗೆತ್ತಿಕೊಳ್ಳಲು ಒಂದು ನೀತಿಯನ್ನು ಪ್ರಕಟಿಸಬೇಕು, ಈ ಮೂಲಕ ಎಲ್ಲರಿಗೂ ಲಭ್ಯತೆಯ ಸಮಾನ ಹಕ್ಕುಗಳನ್ನು ಒದಗಿಸಬೇಕು, ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಮಿಷನರಿಗಳನ್ನು ಸ್ಥಾಪಿಸಬೇಕು.
ಆ) ಡಿಜಿಟಲ್ ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಮೂಲಸೌಕರ್ಯಗಳನ್ನು ಒದಗಿಸಬೇಕು.
ಇ) ಎಲ್ಲಾ ಡಿಜಿಟಲ್ ಸೇವೆಗಳು ಸ್ಥಳೀಯ ಭಾಷೆಗಳಲ್ಲಿ ಮತ್ತು ಬಳಸಲು ಅನುಕೂಲವಾಗುವ ರೀತಿಯಲ್ಲಿರಬೇಕು.
ಈ) ಎಲ್ಲಾ ಡಿಜಿಟಲ್ ಸೇವೆಗಳನ್ನು ಮುಕ್ತ ತಂತ್ರಾಂಶ ಬಳಸಿಯೇ ಅಭಿವೃದ್ಧಿಪಡಿಸಬೇಕು ಮತ್ತು ಸೋರ್ಸ್ ಕೋಡನ್ನು ಸಾರ್ವಜನಿಕಗೊಳಿಸಬೇಕು.
ಉ) ಎಲ್ಲಾ ಡಿಜಿಟಲ್ ಸೇವೆಗಳನ್ನು ಸಾರ್ವಜನಿಕ ವಲಯದ ಘಟಕಗಳು ಮಾತ್ರವೇ ಅಭಿವೃದ್ಧಿಪಡಿಸಬೇಕು.
ಊ) ಇ-ಸೇವೆಗಳ ಸ್ವರೂಪವನ್ನು ಪ್ರಮಾಣೀಕರಿಸಲು ಒಂದು ನೀತಿಯನ್ನು ತರಬೇಕು, ಪ್ರಾಥಮಿಕವಾಗಿ ಸ್ಥಳೀಯಕರಣಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲದೆ ದೈಹಿಕ ಅಸಮರ್ಥತೆಗಳನ್ನು ಸಹ ಪರಿಗಣಿಸುವುದು ಸೇರಿದಂತೆ ಲಭ್ಯತೆಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಒಂದು ನೀತಿಯನ್ನು ತರಬೇಕು.
ಎ) ವೈಯಕ್ತಿಕ ದತ್ತಾಂಶ ಮತ್ತು ಖಾಸಗಿತ್ವವನ್ನು ಒದಗಿಸುವುದು ಮತ್ತು ಪ್ರತಿಯೊಬ್ಬ ನಾಗರಿಕರು ಅದರ ಬಗ್ಗೆ ಅರಿವು ಹೊಂದಿರುವಂತೆ ಮಾಡುವುದು ಎಲ್ಲಕ್ಕಿಂತ ಮುಖ್ಯ.
ಮುಕ್ತ ದತ್ತಾಂಶ ನೀತಿ
ಅಕ್ಟೋಬರ್ 19, 2019 ರಂದು ಕರ್ನಾಟಕ ಸರ್ಕಾರವು ‘ಮುಕ್ತ ದತ್ತಾಂಶ ನೀತಿ’ (ಓಪನ್ ಡೇಟಾ ಪಾಲಿಸಿ) ಕುರಿತು ಅಧಿಸೂಚನೆ ನೀಡಿದೆ. ಅದು ಮೂರು ಸರ್ವವ್ಯಾಪಿ ಗುರಿಗಳನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ – ಸರ್ಕಾರಿ ಇಲಾಖೆಗಳಾದ್ಯಂತ ದತ್ತಾಂಶದ ನಿರ್ವಹಣೆ ಮತ್ತು ಪರಸ್ಪರ ಕಾರ್ಯ ಸಾಧ್ಯತೆ; ಸಂಶೋಧನೆ, ನಾವೀನ್ಯತೆ ಮತ್ತು ಪುರಾವೆ ಆಧಾರಿತ ಆಳ್ವಿಕೆಗಾಗಿ ಸರ್ಕಾರಿ ದತ್ತಾಂಶಗಳ ಮುಂಬಳಕೆಗೆ ಮುಕ್ತ ಅವಕಾಶವನ್ನು ಸಾಧ್ಯಗೊಳಿಸಲು ಪ್ರಕ್ರಿಯೆಗಳು ಮತ್ತು ಮಾನದಂಡಗಳನ್ನು ನಿರ್ವಚಿಸುವುದು; ಮತ್ತು ಅನಾಮಧೇಯಗೊಳಿಸಿದ ನಾಗರಿಕ ದತ್ತಾಂಶಗಳ ನಗದೀಕರಣವನ್ನು ಉತ್ತೇಜಿಸುವುದು. ಈ ನೀತಿಯು ಅನಾಮಧೇಯಗೊಳಿಸಿದ ನಾಗರಿಕ ದತ್ತಾಂಶಗಳನ್ನು ಹಂಚಿಕೊಳ್ಳಬೇಕು ಎನ್ನುತ್ತದೆ. ಇದರಲ್ಲಿ ಅನಾಮಧೇಯಗೊಳಿಸುವಿಕೆಯನ್ನು ತೆಗೆಯುವ ಅಪಾಯವಿರುವುದರಿಂದ ಈ ಮೂಲಕ ಅದು ಗಂಭೀರವಾದ ಖಾಸಗಿತ್ವದ ಬೆದರಿಕೆಗಳನ್ನು ಒಡ್ಡಬಹುದು. ‘ಇ-ಆಳ್ವಿಕೆ ಕೇಂದ್ರ’ ದಲ್ಲಿ ಕರ್ನಾಟಕ ಮುಕ್ತ ದತ್ತಾಂಶ ಅಂತರ್-ಸಂಪರ್ಕ ವಿಭಾಗ(ಇಂಟರ್ಫೇಸ್)ದ ಯೋಜನಾ ನಿರ್ದೇಶಕರೇ ವಿವರಿಸಿದ ಪರಿಭಾಷೆಯಲ್ಲಿ “ಕರ್ನಾಟಕದಲ್ಲಿ, ಶಾಲೆಗಳು ಮತ್ತು ಆಸ್ಪತ್ರೆಗಳು ಎಲ್ಲಿವೆ ಎಂದು ನಮಗೆ ತಿಳಿದಿದೆ” “ನಮಗೆ ಸಾಕ್ಷರತೆಯ ದರಗಳು, ರೋಗಗಳು ಮತ್ತು ರೋಗಿಗಳ ವಿವರಗಳು ಸಹ ತಿಳಿದಿದೆ. ಆದ್ದರಿಂದ, ಹೆಚ್ಚಿನ ಜನಸಂಖ್ಯೆಯುಳ್ಳ ಆದರೆ ಕಡಿಮೆ ಸಾಕ್ಷರತೆ ಹೊಂದಿರುವ ಪ್ರದೇಶದಲ್ಲಿ ಉತ್ತಮ ಶಾಲೆಗಳ ಕೊರತೆ ಕುರಿತಾದ ದತ್ತಾಂಶವನ್ನು ಶಾಲೆ ಅಥವಾ ಆಸ್ಪತ್ರೆಯನ್ನು ಎಲ್ಲಿ ತೆರೆಯಬಹುದು ಎಂಬುದನ್ನು ಗುರುತಿಸಲು ಖರೀದಿಸಬಹುದು” ಈ ರೀತಿಯಲ್ಲಿ ಈ ನೀತಿಯು ಬಂಡವಾಳಕ್ಕೆ ಎಲ್ಲಿ, ಯಾವುದರ ಮೇಲೆ ಹೂಡಿಕೆ ಮಾಡಬೇಕು ಎನ್ನುವುದಕ್ಕೆ ಸಾಕಷ್ಟು ದತ್ತಾಂಶವನ್ನು ಒದಗಿಸುವ ಮೂಲಕ ನಗದೀಕರಣಕ್ಕೆ(ಹಣಗಳಿಕೆಗೆ) ಸಹಾಯ ಮಾಡುತ್ತದೆ.
ಈ ನೀತಿಯ ಅತ್ಯಂತ ತ್ರಾಸದಾಯಕವಾದ ಭಾಗವೆಂದರೆ, ಅದನ್ನು ಜಾರಿಗೆ ತರುವುದು. ಇದರಲ್ಲಿ ಅಳವಡಿಸಿಕೊಂಡಿರುವ “ದತ್ತಾಂಶ ಮಾಲೀಕತ್ವ” ಪರಿಕಲ್ಪನೆಯು ದತ್ತಾಂಶವನ್ನು ಸಂಸ್ಕರಿಸುವ ರಾಜ್ಯ ಸರ್ಕಾರದ ಇಲಾಖೆಗಳನ್ನು ಅವುಗಳ ಮಾಲೀಕರನ್ನಾಗಿ ಮಾಡುತ್ತದೆ. ಮುಕ್ತ ದತ್ತಾಂಶ ನೀತಿಯು ಕರ್ನಾಟಕ ಸರ್ಕಾರದ ಆಯಾ ಇಲಾಖೆಗಳ “ಮುಖ್ಯ ದತ್ತಾಂಶ ಅಧಿಕಾರಿ”ಗಳಿಗೆ ಈ ದತ್ತಾಂಶ ಭಾಗಗಳ ಮಾಲೀಕತ್ವವನ್ನು ನೀಡುತ್ತದೆ.
ಪ್ರಭುತ್ವ ಅಥವಾ ಸರ್ಕಾರವು ಅದರ ನಾಗರಿಕರ ದತ್ತಾಂಶಗಳ ಪಾಲಕರಾಗಿದ್ದಾರೆ, ಅವರು ಎಂದಿಗೂ ಅದರ ಮಾಲೀಕರಾಗಲು ಸಾಧ್ಯವಿಲ್ಲ. ತನ್ನ ನಾಗರಿಕರ ಖಾಸಗಿತ್ವ ಮತ್ತು ದತ್ತಾಂಶವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ ಮತ್ತು ಅದರ ಪಾಲಕರಾಗಿರಲು ಬದ್ಧವಾಗಿರಬೇಕು. ಇದು ಈಗಾಗಲೇ ಬಿಡುಗಡೆ ಮಾಡಲಾದ ವೈಯಕ್ತಿಕ ದತ್ತಾಂಶ ಮಸೂದೆ ಮತ್ತು ವೈಯಕ್ತಿಕವಲ್ಲದ ದತ್ತಾಂಶ ಆಡಳಿತದ ಚೌಕಟ್ಟಿನಲ್ಲಿ ಅಳವಡಿಸಲಾದ ತತ್ವಗಳಿಗೆ ವಿರುದ್ಧವಾಗಿದೆ. ಸಾರಿಗೆ ಇಲಾಖೆಯ ಆಯ್ದ ದತ್ತಾಂಶವನ್ನು ಈಗಾಗಲೇ ಓಲಾ ಮತ್ತು ಉಬರ್ ನಂತಹ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
ಕರ್ನಾಟಕ ಸರ್ಕಾರವು ಮುಕ್ತ ದತ್ತಾಂಶ ನೀತಿಯನ್ನು ಹಿಂಪಡೆದುಕೊಳ್ಳಬೇಕು ಮತ್ತು ತನ್ನ ನಾಗರಿಕರ ದತ್ತಾಂಶವನ್ನು ಮಾರಾಟ ಮಾಡಿ ವಿವಿಧ ವ್ಯಾಪಾರ ಸಂಸ್ಥೆಗಳು ನಾಗರಿಕರನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಡುವುದನ್ನು ತಡೆಯಬೇಕು. ಅದಕ್ಕೆ ಬದಲಾಗಿ, ಜಿಡಿಪಿಆರ್ ಮಾದರಿಯಲ್ಲಿ ದತ್ತಾಂಶ ಖಾಸಗಿತ್ವ ಕಾಯ್ದೆಯನ್ನು ಅನುಷ್ಟಾನಗೊಳಿಸುವುದು ಮುಖ್ಯವಾಗಿದೆ ಮತ್ತು ಪ್ರಭುತ್ವವು ಸಂರಕ್ಷಕ ವ್ಯವಸ್ಥೆಯಂತೆ ಕಾರ್ಯನಿರ್ವಹಿಸಬೇಕು ಹಾಗೂ ಇನ್ನೂ ಚರ್ಚೆಯಲ್ಲಿರುವ ಮತ್ತು ವಿಚಾರ-ವಿಮರ್ಶೆ ನಡೆಯುತ್ತಿರುವ ಖಾಸಗಿತ್ವ ಮತ್ತು ದತ್ತಾಂಶ ಆಳ್ವಿಕೆಯ ಕಾಯ್ದೆಗಳಿಗೆ ಎಲ್ಲಾ ರಾಜ್ಯ ಸರ್ಕಾರದ ಇಲಾಖೆಗಳು ಬದ್ಧರಾಗಿರಬೇಕೆಂದು ಗ್ರಹಿಸುವ ನೀತಿಯನ್ನು ತರಬೇಕು.
ಮತದಾರ ಗುರುತು ಚೀಟಿಯೊಂದಿಗೆ ಆಧಾರ್ ಜೋಡಣೆ
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ತರಾತುರಿಯಲ್ಲಿ ಅಂಗೀಕರಿಸಲ್ಪಟ್ಟ ಮತ್ತು ಜನಪ್ರತಿನಿಧಿ ಕಾಯಿದೆಗೆ ತಿದ್ದುಪಡಿಯನ್ನು ಸುಗಮಗೊಳಿಸುವ ‘ಚುನಾವಣಾ ಕಾನೂನುಗಳು(ತಿದ್ದುಪಡಿ) ಮಸೂದೆ, 2021’, ಅನ್ಲೈನ್ ಆಧಾರಿತ ದೂರದ ಇ-ಮತದಾನವನ್ನು ಅನುಷ್ಠಾನಗೊಳಿಸುವತ್ತ ಒಂದು ಹೆಜ್ಜೆಯಾಗಿದೆ, ಇದಕ್ಕೆ ಆಧಾರ್ ಪ್ರಾಥಮಿಕ ಗುರುತಾಗಿರುತ್ತದೆ. ಅದೇ ಸಮಯದಲ್ಲಿ, ಪ್ರಾಯೋಗಿಕವಾಗಿ, ಅದನ್ನು ಬಳಸಿದ ಸ್ಥಳಗಳಲ್ಲಿ ಆಯ್ದ ಮತದಾರರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲು ಅದು ಅನುವು ಮಾಡಿಕೊಟ್ಟಿತು. ಇದನ್ನು ಮತದಾರರ ಫೋಟೋ ಗುರುತಿನ ಚೀಟಿ (ಎಪಿಕ್) ದತ್ತಾಂಶಗಳನ್ನು ಗೂಢಚಾರಿಕೆ ದತ್ತಾಂಶ ಭಂಡಾರ(ಡಾಟಾ ಬೇಸ್) ದೊಂದಿಗೆ ಬೆರೆಸುವ ಮೂಲಕ ಮಾಡಲಾಗುತ್ತದೆ.
ಉದಾಹರಣೆಗೆ, 2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ, ಅಂತಹ ಒಂದು ಕ್ರಮದ ಪರಿಣಾಮವಾಗಿ ಅಂದಾಜು ಇಪ್ಪತ್ತು ಲಕ್ಷ ಮತದಾರರ ಹೆಸರುಗಳು ಕೈಬಿಟ್ಟು ಹೋಗುವಂತಾಯಿತು. 2021ರ ಅಕ್ಟೋಬರ್ ನಲ್ಲಿ ತೆಲಂಗಾಣ ರಾಜ್ಯದಲ್ಲಿ ಮತದಾನದ ಸಮಯದಲ್ಲಿ ಮುಖ ಗುರುತಿಸುವಿಕೆ, ಮತದಾರ ಗುರುತು ಚೀಟಿ, ಆಧಾರ್ ಸಂಖ್ಯೆ ಮತ್ತು ಫೋನ್ ನಂಬರ್ ಬಳಸಿ ಸ್ಮಾರ್ಟ್ ಫೋನ್ಗಳೊಂದಿಗೆ ಇದೇ ರೀತಿಯ ಅಣಕು ಕಸರತ್ತನ್ನು ನಡೆಸಲಾಯಿತು. ಈ ವಿಧಾನವು “ರಹಸ್ಯ ಮತದಾನ” ದ ಅಭ್ಯಾಸವನ್ನು ಕೊಲ್ಲುತ್ತದೆ.
ಹಣದ ಪಾತ್ರವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಅಪಹಾಸ್ಯ ಮಾಡುವ ಒಂದು ಸನ್ನಿವೇಶದಲ್ಲಿ, ಆಧಾರ್ ಅನ್ನು ಜೋಡಿಸುವುದು ನಿರರ್ಥಕವಾಗುತ್ತದೆ. ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ಬಳಕೆ ಮತಪತ್ರಗಳನ್ನು ಬಳಸುತ್ತಿದ್ದ ಕಾಲದ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಯುಗವನ್ನು ಬಹುಮಟ್ಟಿಗೆ ಕೊನೆಗೊಳಿಸಿದೆ. ಆಧಾರ್ ಜೋಡಣೆಯಿಂದ ಆ ದಿನಗಳನ್ನು ಮರಳಿ ತರಬಹುದು. ಇ-ಮತದಾನವನ್ನು ದುತಾಂತ್ರಾಂಶ(ಮಾಲ್ವೇರ್)ವನ್ನು ಚಿನ್ನಾಟವಾಡಬಹುದು. ಮಸೂದೆಯು ಈ ಸಮಸ್ಯೆಗಳನ್ನು ಪರಿಗಣಿಸುವುದಿಲ್ಲ.
ಈ ಮಸೂದೆಯು ಇತರ ರಾಜಕೀಯ ದುರುದ್ದೇಶಗಳಿಂದ ಹೊರತಾಗಿಲ್ಲ. ಎಸ್ಟೋನಿಯಾ ದೇಶ ವಿಶ್ವಬ್ಯಾಂಕಿನ ಒತ್ತಡ ಮತ್ತು ನಿರ್ದೇಶನದಲ್ಲಿ ಡಿಜಿಟಲೀಕರಣದತ್ತ ಸಾಗಿತು. ಭಾರತದಲ್ಲಿಯೂ ವಿಶ್ವ ಬ್ಯಾಂಕ್ ಆಧಾರ್ ಆಧಾರಿತ ಮತದಾನದ ಅನುಷ್ಠಾನವನ್ನು ತೀವ್ರಗೊಳಿಸುವಂತೆ ಒತ್ತಾಯಿಸುತ್ತಿದೆ. ಅದು 2014ರಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಜೋಡಿಸುವ ಪ್ರಾಯೋಗಿಕ ಅನುಷ್ಠಾನದ ಹಿಂದೆ ಇತ್ತು. ಆಧಾರ್ ಆಧಾರಿತ ಮತದಾನದ ಅನುಷ್ಠಾನದಿಂದ ಆಡಳಿತಾರೂಢ ಬಿಜೆಪಿಗೆ ತನ್ನ ಒಂದು ರಾಷ್ಟ್ರ-ಒಂದು ಮತದಾನ ಮತ್ತು ಅನೇಕ ಇತರ ಕಣ್ಗಾವಲು ಆಧಾರಿತ ಚುನಾವಣಾ ಕೈಚಳಕಗಳ ಅಜೆಂಡಾವನ್ನು ಮುಂಚೂಣಿಗೆ ತರಲು ಮತ್ತು ಮುಂದೊತ್ತಲು ಸುಲಭವಾಗುತ್ತದೆ ಎಂಬುದನ್ನು ಕೂಡ ತಿಳಿಯಬೇಕು.
ಡಿಜಿಟಲೀಕರಣಕ್ಕೆ ಆಧಾರ್ ಅನ್ನು ಆಧಾರವಾಗಿ ಬಳಸುವ ಪ್ರತಿಯೊಂದು ನಡೆಯನ್ನೂ ನಾವು ಖಂಡಿಸಬೇಕು. ನಾವು ದೇಶದ ಎಲ್ಲಾ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಲು ಬಲವಂತದಿಂದ ತಂದಿರುವ ಈ ಮಸೂದೆಯ ವಿರುದ್ಧ ಸಂಸತ್ತಿನ ಒಳಗೂ ಮತ್ತು ಹೊರಗೂ ಹೋರಾಟಗಳನ್ನು ಮುಂದುವರೆಸಬೇಕು. ಇದರ ದುಷ್ಟ ಅಜೆಂಡಾವನ್ನು ಜನರ ಮುಂದೆ ಬಯಲಿಗೆಳೆಯುವುದು ಮತ್ತು ಭಾರತೀಯ ಸಂವಿಧಾನವು ನಮಗೆ ನೀಡಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಹೋರಾಟವನ್ನು ಮುಂದುವರೆಸುವುದು ಮುಖ್ಯವಾಗಿದೆ.
ಪ್ರಭುತ್ವ ಗೂಢಚಾರಿಕೆ
ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ, ನಾಗರಿಕರ ಮೇಲೆ ಗೂಢಚಾರಿಕೆಯ ಪ್ರಭುತ್ವ ಒಂದು ಸಾಧನವಾಗಿ ಬಿಟ್ಟಿದೆ ಮತ್ತು ಅದರ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ. ಆರ್ಥಿಕ ಸುಧಾರಣೆಗಳ ತನ್ನ ಕಾರ್ಯಸೂಚಿಯನ್ನು ಮತ್ತು ಹಿಂದುತ್ವ ಪ್ರಭುತ್ವದ ಫ್ಯಾಸಿಸ್ಟ್ ರಾಜಕೀಯ ಅಜೆಂಡಾವನ್ನು ಮುಂದೊತ್ತಲು ವಿಭಿನ್ನ ಕಣ್ಗಾವಲು ಸಾಧನಗಳನ್ನು ಪ್ರಯೋಗಿಸಲು ಅದು ಎಲ್ಲಾ ಅವಕಾಶಗಳನ್ನು ಬಳಸಿಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಗೂಢಚಾರಿಕೆ ಪ್ರಯೋಗದ ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರಿಕೊಂಡಿದೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಬಂಡವಾಳಶಾಹಿ ಯಜಮಾನರುಗಳು ಮತ್ತು ಆರ್ ಎಸ್ ಎಸ್ ಗುರುಗಳು ತನ್ನ ನಾಗರಿಕರ ಮೇಲೆ ಪ್ರಭುತ್ವದ ಗೂಢಚಾರಿಕೆಯನ್ನು ತೀವ್ರಗೊಳಿಸಲು ಅಗತ್ಯವಿರುವ ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸಲು ಒತ್ತಡ ಹಾಕುತ್ತಿದ್ದಾರೆ. ಇದನ್ನು ನಿರ್ಮಿಸುವಲ್ಲಿ ಕರ್ನಾಟಕವು ತೆಲಂಗಾಣಕ್ಕಿಂತ ತುಸುವೇ ಹಿಂದೆ ಇದೆ.
ಈ ಅವಧಿಯಲ್ಲಿ ಪ್ರಭುತ್ವದ ಗೂಢಚಾರಿಕೆ ಮೂಲಸೌಕರ್ಯವನ್ನು ಬಲಪಡಿಸಲು ಮಾತ್ರವಲ್ಲದೆ ಹೇಗೆ ಅದನ್ನು ದೇಶ ಮತ್ತು ರಾಜ್ಯದಲ್ಲೂ ಪ್ರಜಾಸತ್ತಾತ್ಮಕ ವಾತಾವರಣವನ್ನು ತನಗೆ ಅನುಕೂಲವಾಗುವಂತೆ ಬದಲಿಸಲು ಬಳಸುವುದನ್ನು ಪ್ರಾರಂಭಿಸಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಕೇಂದ್ರ ಸರ್ಕಾರ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ವಿಧಾನಗಳಲ್ಲಿ ಸಂಸತ್ತಿನಲ್ಲಿ ಮಸೂದೆಗಳನ್ನು ಸರಣಿ-ಸರಣಿಯಾಗಿ ಅಂಗೀಕರಿಸುತ್ತಿದೆ. ಆಧಾರ್ ಮಸೂದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ-2021, ಡಿಎನ್ಎ ಮಸೂದೆ, ಚುನಾವಣಾ ಕಾನೂನುಗಳು(ತಿದ್ದುಪಡಿ) ಮಸೂದೆ, 2021 ಇತ್ಯಾದಿಗಳನ್ನು ಪರಿಚಯಿಸಲಾಗಿದೆ. ಒಂದು ದತ್ತಾಂಶ ರಕ್ಷಣೆಯ ಮಸೂದೆಯನ್ನು, ಸಾರ್ವಜನಿಕ ಅಭಿಪ್ರಾಯದ ಅಂಶಗಳನ್ನು ಪರಿಗಣಿಸದೆ ಮತ್ತು ಸಂಸತ್ತಿನಲ್ಲಿ ವಿಧಿ-ಸಮ್ಮತ ಪ್ರಕ್ರಿಯೆಯನ್ನು ಅನುಸರಿಸದೆ ನಾಗರಿಕರ ಸನ್ನದನ್ನು ಉಲ್ಲಂಘಿಸಿ ಅಂಗೀಕರಿಸುವ ಪ್ರಯತ್ನ ನಡೆದಿದೆ.
ಅದರ ಮೇಲೆ, ಜನರ ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವಲ್ಲಿ ಅದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ವಿಧಾನಗಳನ್ನು ಅನುಸರಿಸುತ್ತಿದೆ. ರೈತರ ಆಂದೋಲನದ ಹಿನ್ನೆಲೆಯಲ್ಲಿ ದಿಶಾ ರವಿ ಬಂಧನವು ನಾಗರಿಕರ ಧ್ವನಿಯನ್ನು ತಡೆಯಲು ಕೇಂದ್ರದ ತೋಳು ತಿರುಚುವ ಪ್ರಯತ್ನಗಳಿಗೆ ಸ್ಪಷ್ಟ ಸಾಕ್ಷಿಯಾಗಿದೆ.
ನಾವು ಭಾರತದಲ್ಲಿ ಗರಿಷ್ಟ ಸಂಖ್ಯೆಯ ಇಂಟರ್ನೆಟ್ ಸ್ಥಗಿತಗೊಳಿಸುವ ಪ್ರಕರಣಗಳನ್ನು ಅನುಭವಿಸಿದ್ದೇವೆ, ಇದು ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಸರಕಾರ ತನ್ನ ನಿರ್ಧಾರವನ್ನು ಕಾರ್ಯಗತಗೊಳಿಸಲು ಸರ್ಕಾರವು ಯಾವುದೇ ಕ್ರಮವನ್ನು ಹೇರಲು ಯಾವ ಮಟ್ಟಕ್ಕೆ ಹೋಗಬಹುದು ಎಂಬ ಆತಂಕಕಾರಿ ಪರಿಸ್ಥಿತಿ ಇದೆ. ಭಾರತದ ಪ್ರಭುತ್ವವು ಕಳೆದ ಮೂರು ವರ್ಷಗಳಲ್ಲಿ 276 ಕ್ಕೂ ಹೆಚ್ಚು ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರವು ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ. ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಒಂದು ಮಾರ್ಗ ಮಾತ್ರವೇ ಅಲ್ಲ, ಇದು ಇಂಟರ್ನೆಟ್ ಆಧಾರಿತ ಸೇವೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಇತರ ಪರಿಣಾಮಗಳನ್ನು ಉಂಟುಮಾಡುವ ಸಂಭವವಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ-2021)ರ ನಿಬಂಧನೆಗಳನ್ನು ಬಳಸಿಕೊಂಡು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ಸರಣಿ ದಾಳಿಗಳನ್ನು ಪ್ರಾರಂಭಿಸಿವೆ.
ಕೇಂದ್ರದಲ್ಲಿ ಬಿಜೆಪಿಯು ಹೇಗೆ ಇಸ್ರೇಲೂ ಗೂಢಚಾರಿಕೆ ತಂತ್ರಾಂಶ ಪೆಗಾಸಸ್ ಅನ್ನು ವಿಪಕ್ಷಗಳ ನಾಯಕರು ಮತ್ತು ಅವರದೇ ಪಕ್ಷದವರು ಸೇರಿದಂತೆ ಕೇಂದ್ರೀಯ ಸಂಸ್ಥೆಗಳ ಉನ್ನತ ಅಧಿಕಾರಿಗಳ ಮೇಲೆ ಗೂಢಚಾರಿಕೆಗೆ ಬಳಸಿಕೊಂಡಿರುವುದು ಅದರ ನಿಜವಾದ ಫ್ಯಾಸಿಸ್ಟ್ ಮುಖವನ್ನು ತೋರಿಸುತ್ತದೆ ಎಂಬುದು ಸ್ವಷ್ಟವಾಗಿದೆ.
ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಜನರಿಗೆ ಪರಿಹಾರವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸುವ ಬದಲು ಆರೋಗ್ಯ ಸೇತು ಅಪ್ಲಿಕೇಶನ್ ಅಂತಹ ಅಪ್ಲಿಕೇಶನ್ ಗಳನ್ನು ಆರೋಗ್ಯ ಕಾರ್ಡುಗಳು, ಇ-ಶ್ರಮಾ ಕಾರ್ಡುಗಳು ಇತ್ಯಾದಿಗಳನ್ನು ನೀಡುವುದನ್ನು ಬಳಸಿಕೊಂಡು ಕಣ್ಗಾವಲನ್ನು ಆಕ್ರಮಣಕಾರಿಯಾಗಿ ಮುಂದುವರಿಸಲು ತಂತ್ರಜ್ಞಾನವನ್ನು ಬಳಸಿದೆ.
ಕರ್ನಾಟಕವು, ಭದ್ರತೆಯ ಹೆಸರಿನಲ್ಲಿ ಅಥವಾ ಕಲ್ಯಾಣ ಕಾರ್ಯಕ್ರಮಗಳ ಮೇಲ್ವಿಚಾರಣೆಯ ಹೆಸರಿನಲ್ಲಿ ಪೊಲೀಸ್ ಕೆಲಸದಲ್ಲಿ ಮುಖ ಗುರುತಿಸುವಿಕೆ ದತ್ತಾಂಶ ಆಪ್ ಗಳು ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಣ್ಗಾವಲು ಕಾರ್ಯವಿಧಾನಗಳನ್ನು ಬಲಪಡಿಸುವ ಮುಂಚೂಣಿಯಲ್ಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೋವಿಡ್-19 ರೋಗಿಗಳ ಬಗ್ಗೆ ಮಾಹಿತಿಯನ್ನು ದಾಖಲೀಕರಿಸಿತು, ಅದು ಸ್ವಲ್ಪ ಸಮಯದವರೆಗೆ ಕೇವಲ ಫೋನ್ ಸಂಖ್ಯೆಯ ಸಹಾಯದಿಂದ ಎಲ್ಲರಿಗೂ ಲಭ್ಯವಾಗುವ ರೀತಿಯಲ್ಲಿತ್ತು. ಹೆಸರು, ವಯಸ್ಸು, ಲಿಂಗ, ರೋಗಿಯ ಗುರುತು ಮಾಹಿತಿ, ಐಸಿಎಂಆರ್ ಪರೀಕ್ಷೆಯ ಗುರುತು ಸಂಖ್ಯೆ, ಲ್ಯಾಬ್ ಹೆಸರು, ಪರೀಕ್ಷಾ ಫಲಿತಾಂಶ(ಪಾಸಿಟಿವ್/ನೆಗೆಟಿವ್), ಮಾದರಿ ಸಂಗ್ರಹಿಸಿ ಸ್ವೀಕರಿಸಿದ ದಿನಾಂಕ, ಮಾದರಿ ವಿಧನ, ರೋಗಿಯು ಆಸ್ಪತ್ರೆಗೆ ದಾಖಲಾಗಿದ್ದರೆ ಆಸ್ಪತ್ರೆಯ ಹೆಸರು ಸೇರಿದಂತೆ ಹಲವು ವಿವರಗಳನ್ನು ದತ್ತಾಂಶ ತೋರಿಸಿದೆ ಎನ್ನಲಾಗಿದೆ. ರೋಗ ಲಕ್ಷಣಗಳ ಸ್ಥಿತಿ. ಅವರ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳು, ಕಣ್ಗಾವಲು ಮತ್ತು ಹಿಂಬಾಲಿಕೆ (PHAST) ವೆಬ್ಸೈಟ್ ಭಾಗವಾಗಿ ದತ್ತಾಂಶವನ್ನು ಸಮಕಾಲಿಕಗೊಳಿಸಲಾಗುತ್ತಿತ್ತು. ನಮ್ಮ ಜನಾಂದೋಲನದ ಮಧ್ಯಪ್ರವೇಶದಿಂದ ಅದನ್ನು ಹಿಂತೆಗೆದುಕೊಳ್ಳಲಾಯಿತು. ಈಗ ಪ್ರಭುತ್ವವು ಅಂತಹ ಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು ಪ್ರಭುತ್ವದ ಕಣ್ಗಾವಲು ದತ್ತಾಂಶವನ್ನು ನಗದೀಕರಿಸಲು ಕಾರ್ಪೊರೇಟ್ಗಳಿಗೆ ಅವಕಾಶ ಕೊಡುವ ಮುಕ್ತ ದತ್ತಾಂಶ ನೀತಿಯನ್ನು ಪ್ರಕಟಿಸಿದೆ.
ಈ ಕುರಿತಂತೆ ನಮ್ಮ ಆಗ್ರಹಗಳು ಹೀಗಿವೆ:
- ರಾಜ್ಯ ಸರ್ಕಾರವು ಮುಕ್ತ ದತ್ತಾಂಶ ನೀತಿಯನ್ನು ಹಿಂಪಡೆಯಬೇಕು.
- ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಪ್ರತಿಯೊಬ್ಬರಿಗೂ ದತ್ತಾಂಶ ಖಾಸಗಿತ್ವ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುವ ನೀತಿಯನ್ನು ರಚಿಸಬೇಕು.
- ವಿವಿಧ ನಾಗರಿಕರ ದತ್ತಾಂಶಗಳನ್ನು ಸಂಗ್ರಹಿಸಲು ಬಳಸುವ ಎಲ್ಲಾ ಪ್ರಭುತ್ವ ಸಾಧನಗಳನ್ನು ಮುಕ್ತ ತಂತ್ರಾಂಶ ಬಳಸಿ ಅಭಿವೃದ್ಧಿಪಡಿಸಬೇಕು ಮತ್ತು ಅವುಗಳ ಮೂಲ(ಸೋರ್ಸ್)ಕೋಡ್ ಗಳನ್ನು ಸಾರ್ವಜನಿಕಗೊಳಿಸಬೇಕು.
- ಎಲ್ಲಾ ಇ-ಆಡಳಿತ ಕಾರ್ಯಕ್ರಮಗಳನ್ನು ಅವು ದತ್ತಾಂಶ ಖಾಸಗಿತ್ವ ಮತ್ತು ರಕ್ಷಣೆ ಕಾಯ್ದೆಗೆ ಅನುಗುಣವಾಗಿರುವಂತೆ ದೂರು ಎಂದು ಖಚಿತಪಡಿಸಿಕೊಳ್ಳಲು ಅವುಗಳ ಮರು-ಮೌಲ್ಯಮಾಪನ ಮಾಡಬೇಕು.
- ಅಂತಹ ಯಾವುದೇ ಕಾರ್ಯಕ್ರಮವನ್ನು ಸಾರ್ವಜನಿಕ ಮೌಲ್ಯಮಾಪನಕ್ಕೆ ಲಭ್ಯವಾಗುವಂತೆ ಮಾಡಬೇಕು.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ 23ನೇ ಸಮ್ಮೇಳನವು ಇ-ಸಾಕ್ಷರತಾ ಅಭಿಯಾನ, ಮುಕ್ತದತ್ತಾಂಶ ನೀತಿ, ಮತದಾರ ಗುರುತು ಚೀಟಿಯೊಂದಿಗೆ ಆಧಾರ್ ಜೋಡಣೆ ಹಾಗು ಪ್ರಭುತ್ವ ಗೂಢಚಾರಿಕೆ ಇವುಗಳ ಕುರಿತ ಮೇಲಿನ ಸಲಹೆ ಸೂಚನೆಗಳ ಜಾರಿಯನ್ನು ಒತ್ತಾಯಿಸುತ್ತದೆ.
ಮಂಡನೆ: ಕಾಂ. ನವೀನ್
ಅನುಮೋದನೆ: ಕಾಂ. ಜಾಕಬ್ ಜಾನ್ಸನ್