ಕೃಷಿಯ ಕಾರ್ಪೋರೇಟೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ, ದಲಿತ, ಜನವಿರೋಧಿ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದು ಮಾಡಲು ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನದ ಆಗ್ರಹ, “ರೈತಾಪಿ ಕೃಷಿ”ಯನ್ನು ಬಲಪಡಿಸಲು ಪ್ರಬಲ ಹೋರಾಟಗಳಿಗೆ ಕರೆ:
ಕೃಷಿಯ ಕಾರ್ಪೋರೇಟೀರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗು ಜಾನುವಾರು ಹತ್ಯೆ ನಿಷೇದ ಕಾಯ್ದೆಗಳ ರೈತ, ದಲಿತ, ಜನವಿರೋಧಿ ತಿದ್ದುಪಡಿಗಳನ್ನು ಕೂಡಲೇ ರದ್ದು ಮಾಡಬೇಕೆಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ಆಗ್ರಹಿಸುತ್ತದೆ. ಈ ಶತಮಾನದ ಚಾರಿತ್ರಿಕ ದೆಹಲಿಯ ರೈತ ಹೋರಾಟದ ಪರಿಣಾಮವಾಗಿ ಬಿಜೆಪಿ ಕೇಂದ್ರ ಸರ್ಕಾರ, ಈಗಾಗಲೇ ತನ್ನ ತಪ್ಪು ಒಪ್ಪಿಕೊಂಡು ಕರಾಳ ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಇದೇ ಮೂರು ಕೃಷಿ ಕಾಯ್ದೆಗಳ ಭಾಗವಾಗಿ ರಾಜ್ಯದಲ್ಲಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ತಕ್ಷಣ ರದ್ದುಪಡಿಸಿ, “ರೈತಾಪಿ ಕೃಷಿ”ಯನ್ನು ಬಲಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರಬಲ ಹೋರಾಟಗಳನ್ನು ಸಂಘಟಿಸಲು ರೈತರು, ದಲಿತರು, ಕೃಷಿ ಕೂಲಿಕಾರರ ಇತ್ಯಾದಿ ದುಡಿಯುವ ಜನ ಮುಂದಾಗಬೇಕೆಂದು ಸಿಪಿಐ(ಎಂ) ಸಮ್ಮೇಳನ ಕರೆ ನೀಡುತ್ತದೆ.
ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆಯನ್ನು ಜಗತ್ತಿನ ಮತ್ತು ದೇಶದ ಕಾರ್ಪೋರೇಟ್ ಕಂಪನಿಗಳಿಗೆ ದಾರೆ ಏರೆದು, ಸದ್ಯದ “ರೈತಾಪಿ ಕೃಷಿ” ಯನ್ನು ಕಾರ್ಪೋರೇಟೀಕರಣ ಮಾಡುವ ಉದ್ದೇಶದಿಂದ ಬಿಜೆಪಿ ಕೇಂದ್ರ ಸರ್ಕಾರ, ಕೊರೊನಾ ಲಾಕ್ಡೌನ್ಗಳಿಂದ ರೈತರು, ಜನತೆ ಮನೆಗಳಿಂದ ಹೊರ ಬರಲಾರದಂತಹ ಪರಿಸ್ಥಿತಿಯಲ್ಲಿ ಆರಂಭದಲ್ಲಿ ಸುಗ್ರೀವಾಜ್ಞೆಗಳ ಮೂಲಕ, ಆ ನಂತರ ಅಪ್ರಜಾಸತ್ತಾತ್ಮಕವಾಗಿ ಸಂಸತ್ತಿನಲ್ಲಿ ಅಂಗೀಕರ ಪಡೆದು ಕರಾಳ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿತ್ತು. `ರೈತಾಪಿ ಕೃಷಿ’ಯನ್ನು ನಾಶ ಮಾಡುವ ಕೇಂದ್ರ ಸರ್ಕಾರದ ಈ “ರೈತ ದ್ರೋಹಿ” ಧೋರಣೆಗಳ ವಿರುದ್ಧ ದೇಶದ ನೂರು ರೈತ ಸಂಘಟನೆಗಳು ಸಿಡಿದೆದ್ದವು. 26, 27 ನವೆಂಬರ್ 2021ರ ಕಾರ್ಮಿಕ ಮುಷ್ಕರ ಹಾಗು ರೈತರ ಹೋರಾಟಗಳು ಸಮ್ಮೇಳನಗೊಂಡು ಪಾರ್ಲಿಮೆಂಟ್ ಎದುರು ಪ್ರತಿಭಟನೆಗೆ ರೈತರು ಮುಂಗಾರು, “ದೆಹಲಿಗೆ ಪ್ರವೇಶವಿಲ್ಲ” ಎನ್ನುವ “ಸರ್ಕಾರ”ದ ಹಠಮಾರಿ ಧೋರಣೆಯ ಫಲವಾಗಿ ದೆಹಲಿ ನಾಲ್ಕು ಐದು ಗಡಿಗಳಲ್ಲಿ ನವೆಂಬರ್ 26, 2020ರಂದು ಲಕ್ಷಾಂತರ ರೈತರ ಹೋರಾಟ ಶುರುವಾಗಿ, ಅನೇಕ ಆರೋಪಗಳು, ಕಷ್ಟ ಕರ್ಪಣ್ಯಗಳು, ಸುಮಾರು 700 ಜನ ರೈತರ ಹುತಾತ್ಮರಾದ ಒಂದು ವರ್ಷದ ಬಳಿಕ ಕೇಂದ್ರ ಸರ್ಕಾರ ಕರಾಳ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ. ಅಲ್ಲದೆ ಡಾ|| ಎಂ.ಎಸ್.ಸ್ವಾಮಿನಾಥ್ನ್ ವರದಿಯನ್ವಯ ಉತ್ಪಾದನಾ ವೆಚ್ಚದ ಮೇಲೆ ಶೇಕಡ 50 ರಷ್ಟು ಲಾಭವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ “ಕನಿಷ್ಠ ಬೆಂಬಲ ಬೆಲೆ” ಕಾತರಿ ಮಾಡುವ ಕಾನೂನು ರೂಪಿಸುವ ಕುರಿತು ಸಮಿತಿಯ ರಚನೆ, ರೈತರ ನೀರಾವರಿ ಪಂಪ್ಸೆಟ್ಗಳು, ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ವಿದ್ಯುತ್ ಸಂಪರ್ಕಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ರದ್ದತಿ, ಇತರರಿಗೆ ಸಬ್ಸಿಡಿ ರದ್ದತಿ, ವಿದ್ಯುತ್ ಕ್ಷೇತ್ರದ ಮಾರಾಟದಂತಹ ಅಂಶಗಳನ್ನು ಒಳಗೊಂಡಿರುವ ವಿದ್ಯುತ್ ಮಸೂದೆ-2020, ರೈತರು ಮೇಲೆ ಹಾಕಿರುವ ಸಾವಿರಾರು ಕೇಸ್ಗಳ ವಾಪಸಾತಿ ಇತ್ಯಾದಿ ಬೇಡಿಕೆಗಳನ್ನು ಒಪ್ಪಿರುವುದು ಈಗ ಚರಿತ್ರೆ ಸೃಷ್ಠಿಸಲು ಸಾಧ್ಯವೆಂಬುದನ್ನು ಈ ಹೋರಾಟ ಮತ್ತೊಮ್ಮೆ ಸಾಬೀತುಪಡಿಸಿದೆ. ಇಂತಹ ಚಾರಿತ್ರಿಕ ಹೋರಾಟ ನಡೆಸಿದ ರೈತಾಪಿ ಜನತೆ, ಈ ಹೋರಾಟಕ್ಕೆ ಬೆಂಬಲವಾಗಿ ನಿಂತ ದೇಶದ ಕಾರ್ಮಿಕ ವರ್ಗವನ್ನು ಸಿಪಿಐ(ಎಂ) ಸಮ್ಮೇಳನ ಅಭಿನಂದಿಸುತ್ತದೆ.
ಈ ಕಾಲಾವಧಿಯಲ್ಲಿ ರಾಜ್ಯದಲ್ಲಿಯು ರಾಷ್ಟ್ರ ಮಟ್ಟದ ಈ ರೈತ ಹೋರಾಟಕ್ಕೆ ಪೂರಕವಾಗಿ ಅತ್ಯಂತ ಪ್ರಬಲ ಹೋರಾಟಗಳನ್ನು ಸಂಘಟಿಸಲಾಗಿದೆ.
ಆದರೆ, ಕೇಂದ್ರ ಸರ್ಕಾರ, ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ್ದ ನಂತರವೂ, ರಾಜ್ಯದಲ್ಲಿ ಜಾರಿಯಲ್ಲಿರುವ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡುತ್ತಿರುವ ಸ್ಥಿತಿಯಿಂದ ರಾಜ್ಯದ “ಕೃಷಿ ಕ್ಷೇತ್ರ”ಕ್ಕೆ ಗಂಭೀರವಾದ ಗಂಡಾಂತರ ಮುಂದುವರಿದಿದೆ.
“ಕೃಷಿಕ” ರಲ್ಲದವರು “ಕೃಷಿ ಭೂಮಿ”ಯನ್ನು ಮಾಡಬಹುದು “ಕೃಷಿಕರು” ಮಾತ್ರ “ಕೃಷಿ ಭೂಮಿ”ಯನ್ನು ಖರೀದಿ ಮಾಡಬಹುದೆಂದಿದ್ದ ಅಂಶವನ್ನು “ಕೃಷಿಕ”ರಲ್ಲದವರು ಯಾವುದೇ ಷರತ್ತು ಇಲ್ಲದೆ “ಕೃಷಿ ಭೂಮಿ” ಖರೀದಿ ಮಾಡಬಹುದು ಹಾಗೂ 5 ಜನರ ಕುಟುಂಬ ಗರಿಷ್ಠ 54 ಎಕರೆ, 10 ಜನರ ಕುಟುಂಬ 108 ಎಕರೆ ಕೃಷಿ ಭೂಮಿಯ ಒಡೆತನ ಮಾತ್ರ ಹೊಂದಬಹುದು ಎಂದಿದ್ದ ಭೂ ಮಿತಿಯನ್ನು ತೆಗೆದು ಕ್ರಮವಾಗಿ 104, 2016 ಎಕರೆಯವರಿಗೂ “ಭೂಮಿ ಒಡೆತನ” ಹೊಂದಬಹುದೆಂಬ ತಿದ್ದುಪಡಿಗಳನ್ನು “ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961”ಕ್ಕೆ ತರುವುದರ ಮೂಲಕ “ಉಳುವವನ್ನೇ ಹೊಲದೊಡೆಯ” ಎನ್ನುವ ತತ್ವಕ್ಕೆ ತಿಲಾಂಜಲಿಯನ್ನು ನೀಡಲಾಗಿದೆ ಮಾತ್ರವಲ್ಲ “ಕೃಷಿ ಭೂಮಿ”ಯ ಒಡೆತನವನ್ನು ಶ್ರೀಮಂತರಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ ವರ್ಗಾಹಿಸಲಾಗುತ್ತಿದೆ. ಇದರ ಫಲವಾಗಿ ಮುಂದಿನ ದಿನಗಳಲ್ಲಿ, ಕೃಷಿ ಬಿಕ್ಕಟ್ಟಿನ ಫಲವಾಗಿ “ಕೃಷಿ ನಷ್ಟದಾಯಕ ಕ್ಷೇತ್ರ”ವಾಗಿ ಮಾರ್ಪಟಿರುವ ಸ್ಥಿತಿಯಲ್ಲಿ ರೈತರು ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿರುವ ಶೇ. 85 ಕ್ಕಿಂತ ಹೆಚ್ಚಿನ ಸಣ್ಣ, ಅತಿ ಸಣ್ಣ ರೈತರು ತಮ್ಮ ಭೂಮಿಗಳನ್ನು ಮಾರಾಟ ಮಾಡಲಿದ್ದಾರೆ. ಈ ಪ್ರಕ್ರಿಯೆಯೂ ಈಗಾಗಲೇ ರಾಜ್ಯದಲ್ಲಿ ರಾಜ್ಯದಲ್ಲಿ ಆರಂಭವಾಗಿದ್ದು ಕಳೆದ ಒಂದು ವರ್ಷದಲ್ಲಿಯೇ ಶೇ. 70 ಕ್ಕಿಂತ ಹೆಚ್ಚಿನ “ಭೂಮಿ”ಗಳ ನೊಂದಾವಣೆ ದರ ಏರಿಕೆಯಾಗಿದೆ. ಈ ಎಲ್ಲಾ ಬೆಳೆವಣಿಗೆಗಳ ಫಲವಾಗಿ ಬಂಡವಾಳಶಾಹಿ ಭೂ ಮಾಲೀಕ ವರ್ಗ ಮತ್ತು ಕಾರ್ಪೋರೇಟ್ ಕೃಷಿ ದೊಡ್ಡ ಪ್ರಮಾಣದಲ್ಲಿ ಸೃಷ್ಠಿಯಾಗಲಿದ್ದು, ಕೃಷಿಕರನ್ನು ಕೃಷಿಯಿಂದ ಹೊರಕ್ಕೆ ದಬ್ಬಲಾಗುತ್ತದೆ.
ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಸಲು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಪ್ರಾಂಗಾಣದಲ್ಲಿ ಮಾತ್ರ ನಡೆಯಬೇಕೆಂದು ಇದ್ದ ಅಂಶವನ್ನು ತೆಗೆದುಹಾಕಿ ಮಾರುಕಟ್ಟೆಗಳ ಹೊರಗೂ ಕೃಷಿ ಉತ್ಪನ್ನಗಳ ಖರೀದಿ, ಮಾರಾಟ ನಡೆಸಬಹುದೆಂಬ ತಿದ್ದುಪಡಿಯನ್ನು “ಕರ್ನಾಟಕ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕಾಯ್ದೆ-1966”ಕ್ಕೆ ತರಲಾಗಿದ್ದು ಈ ಮೂಲಕ “ರೈತರ ಮನೆಯು ಬಾಗಿಲುಗೆ ಮಾರುಕಟ್ಟೆ” ಎನ್ನುವ ಆಕರ್ಷಕ್ಕೆ ಘೋಷಣೆಗಳ ಮೂಲಕ ಕೃಷಿ ಮಾರುಕಟ್ಟೆಯನ್ನು ಸಹ ಕಾಪೋರೇಟ್ ಕಂಪನಿ ವಹಿಸಲಾಗುತ್ತಿದೆ. ಮಾತ್ರವಲ್ಲ ಕೆಲವು ಗಂಭೀರ ದೋಷಗಳ ನಡುವೆಯು ರೈತರ ಪರವಾಗಿ ಕೆಲಸ ಮಾಡುತ್ತಿದ್ದ ಎಪಿಎಂಸಿ ಮಾರುಕಟ್ಟೆಗಳನ್ನು ಮುಗಿಸಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಈಗಾಗಲೇ ಸುಮಾರು 80 ಮಾರುಕಟ್ಟೆ ಸಮಿತಿಗಳು ವಿದ್ಯುತ್ ಬಿಲ್ನ್ನು ಕಟ್ಟಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ನಿಧಾನವಾಗಿ ಕೃಷಿ ಮಾರುಕಟ್ಟೆಗಳು ಮುಚ್ಚಿ, ಇಡೀ “ಕೃಷಿ ಮಾರುಕಟ್ಟೆ” ಕಾರ್ಪೋರೇಟ್ ಕಂಪನಿಗಳ ಪಾಲಾಗಲಿದೆ.
ರಾಜ್ಯದ “ಜಾನುವಾರು ಹತ್ಯೆ ನಿಷೇದ ಕಾಯ್ದೆ-1964”ಕ್ಕೆ ಹಸು ಸೇರಿದಂತೆ ಎಮ್ಮೆ, ಕೋಣ, ದನಗಳ ಹತ್ಯೆಯನ್ನು ನಿಷೇಧಿಸುವ, ಖರೀದಿ, ಸಾಗಾಣಿಕೆ ಇತ್ಯದಿಗಳಿಗೆ ಸಂಬAಧಿಸಿ ಇತ್ತೀಚಿನ ತಿದ್ದುಪಡಿಗಳಿಂದ, ಆಹಾರದ ಹಕ್ಕಿನ ಮೇಲೆ ದಾಳಿ, ಈ ವ್ಯಾಪಾರದಲ್ಲಿ ತೊಡಗಿದ್ದ ಹತ್ತಾರ್ ಸಾವಿರಾರು ಕುಟುಂಬಗಳ ಬದುಕಿನ ಮೇಲೆ ದಾಳಿ ನಡೆಸಿರುವುದು ಮಾತ್ರವಲ್ಲ ಬಾರಿ ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ, ಪಶು ಸಂಗೋಪನೆಯ ಮೇಲೆ ದಾಳಿ ನಡೆದಿದೆ. ಸಂಕಷ್ಟದಲ್ಲಿ ಇರುವ ಹೈನುಗಾರಿಕೆಯನ್ನು ಮತ್ತು ಪಶು ಸಂಗೋಪನೆಯನ್ನು ರೈತರು, ಕೃಷಿ ಕೂಲಿಕಾರರು ಕೈ ಬಿಡುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸರ್ಕಾರಗಳ ಉದ್ದೇಶವೂ ಇದೆ. ಆಗಿದ್ದು, ಈ ಇಡೀ “ಕ್ಷೇತ್ರ”ವನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ಪಿತೂರಿಯು ಅಡಗಿದೆ. ಹೀಗಾಗಿ ಈ ಕಾಯ್ದೆಯ ತಿದ್ದುಪಡಿಗಳಲ್ಲಿ ಇರುವ “ಕೋಮುವಾದಿ ಅಜೆಂಡಾ”ಗಳನ್ನು ವಿರೋಧಿಸುವ ಸಂದರ್ಭದಲ್ಲಿಯೇ ದುಡಿಯುವ ಜನರ ಆರ್ಥಿಕ ಅಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪ್ರಧಾನವಾಗಿ ಎತ್ತಬೇಕಿದೆ.
ಹೀಗೆ “ಕೃಷಿ ಭೂಮಿ” ಕೃಷಿ ಉತ್ಪಾದನೆ “ಕೃಷಿ ಮಾರುಕಟ್ಟೆ” ಯನ್ನು “ಕೃಷಿಕರು” “ಸಾಮಾಜಿಕ ಒಡೆತನ”ದಿಂದ ಹೊರಗೆ ತಂದು ಕಾರ್ಪೋರೇಟ್ ಕಂಪನಿಗಳ ಒಡೆತನಕ್ಕೆ, ಆ ಮೂಲಕ “ಕಾರ್ಪೋರೇಟ್ ಕೃಷಿಗೆ” ಒಡ್ಡುವುದೇ ಈ ಮೂರು ಕಾಯ್ದೆಗಳ ತಿದ್ದುಪಡಿಗಳ ಹಿಂದಿರುವ ಅಜೆಂಡಾಗಳು ಎಂಬುದನ್ನು ಅರಿತುಕೊಳ್ಳಬೇಕಿದೆ. ಈ ಕಾಯ್ದೆ ತಿದ್ದುಪಡಿಗಳ ಮುಂದುವರಿದ ಭಾಗವಾಗಿ ಅಗತ್ಯ ವಸ್ತು ಕಾಯ್ದೆ ತಿದ್ದುಪಡಿಗಳನ್ನು ತಂದು ಚಿಲ್ಲರೆ ವ್ಯಾಪಾರವನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವುದು, ಕನಿಷ್ಠ ಬೆಂಬಲ ಬೆಲೆ”ಯಲ್ಲಿ ಖರೀದಿ ನಿಲ್ಲಿಸುವುದು ರೇಷನ್ ವ್ಯವಸ್ಥೆಯನ್ನು ನಾಶ ಪಡಿಸುವುದು, ಇತ್ಯಾದಿ ಮಹತ್ವದ ಅಂಶಗಳನ್ನು ಒಟ್ಟಿಗೆ ಸೇರಿಸಿ ಸಮಗ್ರವಾಗಿ ನೋಡಲು ಸಾಧ್ಯವಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಕೃಷಿಯಿಂದ “ಉಳುವವನೇ ಹೊಲದೊಡೆಯ” ಎನ್ನುವ ಘೋಷಣೆಯ ಜಾರಿಗಾಗಿ ಅತ್ಯಂತ ಸಂಘರ್ಷಮಯ ಹೋರಾಟವನ್ನು ನಡೆಸಿದ ಚರಿತ್ರೆಯಿರುವ ನಮ್ಮ ಪಕ್ಷ ಮತ್ತು ಸಾಮೂಹಿಕ ಸಂಘಟಣೆಗಳಿಗೆ “ಕೃಷಿಕರ” ಕೈಯಲ್ಲಿ ಭೂಮಿ ಉಳಿಸುವ, ಭೂಮಿ ಸಿಗುವಂತೆ ಮಾಡುವ ಚಳುವಳಿಯು ಆದ್ಯತೆಯಾಗಬೇಕಿದೆ. ಅಲ್ಲದೆ ರೇಷನ್ ಪದ್ಧತಿಯನ್ನು ಬಲಪಡಿಸುವ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ, ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮಾಡುವ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವುದು ಮೂಲಕ “ರೈತಾಪಿ ಕೃಷಿ”ಯನ್ನು ಸಂರಕ್ಷಿಸಲು, ಕೃಷಿಯ ಕಾರ್ಪೋರೇಟ್ ಕರಣದ ವಿರುದ್ಧ ಹೋರಾಟವನ್ನು ಅತ್ಯಧಿಕ ವ್ಯಾಪಕವಾಗಿ, ಸಮರಶೀಲವಾಗಿ ಸಂಘಟಿಸಬೇಕಿದೆ. ಇದೊಂದು ರಾಜಕೀಯ ಹೋರಾಟವಾಗಿದ್ದು, ರೈತ, ಕಾರ್ಮಿಕ ಸಖ್ಯತೆ, ವಿಶಾಲವಾದ ದೇಶ ಪ್ರೇಮಿಗಳನ್ನು ಒಗ್ಗೂಡಿಸುವುದರ ಮೂಲಕ ಈ ಸಂಘರ್ಷವನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ದೆಹಲಿಯ ರೈತ ಹೋರಾಟ ನಮ್ಮ ಮಾದರಿಯಾಗಬೇಕಿದೆ.
ಮಂಡನೆ: ಜಿ.ಸಿ ಬಯ್ಯಾರೆಡ್ಡಿ
ಅನುಮೋದನೆ: ಎಚ್.ಎಸ್ ಸುನಂದಾ