ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ವಿಸ್ತರಣೆಗೊಳಿಸಬೇಕು ಮತ್ತು ನಗರ ಪ್ರದೇಶಗಳಿಗೂ ಈ ಕಾಯ್ದೆಯನ್ನು ವಿಸ್ತರಣೆಗಾಗಿ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ನಿರ್ಣಯ
ದೇಶವು ತೀವ್ರ ನಿರುದ್ಯೋಗದಲ್ಲಿ ನರಳುತ್ತಿದೆ. ಕೋವಿಡ್ ನಂತರದಲ್ಲಿ ಇದರ ಪ್ರಮಾಣವು ಅಗಾಧವಾಗಿ ಬೆಳೆದಿದೆ. ಆರ್ಥಿಕ ಹಿಂಜರಿತವು 2009ಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 2020ರ ಸಾಂಕ್ರಾಮಿಕ ಲಾಕ್ಡೌನ್ ನಲ್ಲಿ 11 ಕೋಟಿ 40 ಲಕ್ಷ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ(ಐಎಲ್ಓ) ಪ್ರಕಾರ 840 ಬಿಲಿಯನ್ ಡಾಲರ್ ಮತ್ತು 3.44 ಟ್ರಿಲಿಯನ್ ಡಾಲರ್ ನಡುವಿನ ಕಾರ್ಮಿಕರ ಆದಾಯವು ಕಳೆದು ಹೋಗಿದೆ. ಈ ಆರ್ಥಿಕ ಧಾಳಿಯು ಮಹಿಳೆಯರ ಮೇಲೆ ಪ್ರಭಾವ ಬೀರಿದೆ. ಜಾಗತಿಕವಾಗಿ 3.9 ರಷ್ಟು ಪುರುಷರು ತಮ್ಮ ಕೆಲಸ ಕಳೆದುಕೊಂಡರೆ ಶೇಕಡ 5ರಷ್ಟು ಮಹಿಳೆಯರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಯುಎಸ್ಎ ಒಂದೇ ದೇಶದಲ್ಲಿ ಶೇಕಡ 55% ಮಹಿಳೆಯರಿಗೆ ಉದ್ಯೋಗದ ನಷ್ಟವಾಗಿದೆ.
ಸಂವಿಧಾನದಲ್ಲಿ ಉದ್ಯೋಗವು ಮೂಲಭೂತ ಹಕ್ಕಾಗಿಲ್ಲ ಎನ್ನುವ ಕಾರಣಕ್ಕಾಗಿಯೂ ಆಳುವ ವರ್ಗವು ಜನತೆಗೆ ಉದ್ಯೋಗ ಒದಗಿಸುವಲ್ಲಿ ಯಾವುದೇ ಬದ್ಧತೆ ಹೊಂದಿಲ್ಲ. ಮತ್ತು ಉದ್ಯೋಗ ಒದಗಿಸುವ ಕರ್ತವ್ಯದಿಂದ ಬಹಳ ನಿರಾಯಾಸವಾಗಿ ತಪ್ಪಿಸಿಕೊಳ್ಳುವರು. ಹೀಗಾಗಿ ದೇಶದ ನಗರಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿಯೂ ಬಹುದೊಡ್ಡ ಸಂಖ್ಯೆಯ ನಿರುದ್ಯೋಗಿಗಳು ತೀವ್ರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ನವವಸಾಹತು ನೀತಿಯ ಕಾರಣವಾಗಿ ಉದ್ಯೋಗ ಎಲ್ಲ ಬಾಗಿಲುಗಳು ಮುಚ್ಚಿ ಹೋಗಿವೆ. ಖಾಸಗೀಕರಣ ಉದಾರೀಕರಣ ಜಾಗತೀಕರಣ(ಖಾಉಜಾ)ವು ಉದ್ಯೋಗದ ಎಲ್ಲ ಅವಕಾಶಗಳನ್ನು ಆಪೋಷನಗೈದಿದೆ. ಮೀಸಲಾತಿಯು ಹಿಂಬಾಗಿಲಿನಿಂದ ಲುಪ್ತಗೊಳಿಸಲಾಗುತ್ತಿದೆ. ಖಾಸಗಿ ವಲಯಗಳಲ್ಲಿಯಂತೂ ಮೀಸಲಾತಿಗೆ ಸ್ಥಾನವೇ ಇಲ್ಲವಾಗಿದೆ. ಸ್ಕಿಲ್ (ನೈಪುಣ್ಯತೆ) ನೆಪದಲ್ಲಿ ತಳವರ್ಗದ ಶ್ರ,ಮಿಕಲೋಕದ ಕೌಶಲ್ಯವನ್ನು ಮೂಲೆಗುಂಪಾಗಿಸಲಾಗಿದೆ. ಈ ಕಾರಣವಾಗಿ ಹಸಿವಿನ ಸೂಚ್ಯಾಂಕದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ.
ಇದೆಲ್ಲದಕ್ಕೂ ಪರಿಣಾಮಕಾರಿಯಾದ ಪರಿಹಾರವಾಗಿ 2005-06 ರಲ್ಲಿ ದೇಶದ 200 ಜಿಲ್ಲೆಗಳಲ್ಲಿ ಆರಂಭವಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ನೂರು ದಿನಗಳ ಉದ್ಯೋಗದ ಖಾತ್ರಿಯನ್ನು ಒದಗಿಸಿತು. ನಂತರದಲ್ಲಿ ದೇಶದಾದ್ಯಂತ ಈ ಕಾಯ್ದೆಯು ಜಾರಿಯಾಗತೊಡಗಿತು. ಇದರ ಶ್ರೇಯಸ್ಸು ಎಡಪಕ್ಷಗಳಿಗೆ ಅದರಲ್ಲಿಯೂ ಸಿಪಿಐ(ಎಂ) ಪಕ್ಷಕ್ಕೆ ಸಲ್ಲುವುದು. ಉದ್ಯೋಗ ಮೂಲಭೂತ ಹಕ್ಕಾಗಿಸಬೇಕೆನ್ನುವ ನಮ್ಮ ಚಳುವಳಿಯ ಆಶಯಕ್ಕೆ ಬಲವಾಗಿ ಬಂದಿದ್ದು ಉದ್ಯೋಗ ಖಾತ್ರಿ ಕಾಯ್ದೆ. ಅನೇಕ ದೌರ್ಬಲ್ಯಗಳ ನಡುವೆ ಬಹಳಷ್ಟು ತಿದ್ದುಪಡಿಯಾಗಲೇಬೇಕಾದ ಅಂಶಗಳನ್ನೂ ಒಳಗೊಂಡು ಈ ಕಾಯ್ದೆಯು ದೇಶದ ಗ್ರಾಮೀಣ ಪ್ರದೇಶದಲ್ಲಿ ಜನತೆಯ ಕೈಗೆ ಉದ್ಯೋಗ ಒದಗಿಸಿದೆ. ಹಾಗೆ ನೋಡಿದರೆ ಬೇಡಿಕೆಗನುಸರಿಸಿ ಕೆಲಸ ದೊರೆತಿಲ್ಲ. ಎಪ್ರಿಲ್ 2020ರಲ್ಲಿ ಕೆಲಸ ಮಾಡಿದ ಕುಟುಂಬಗಳ ಸಂಖ್ಯೆಯು ಸುಮಾರು 95 ಲಕ್ಷ. ಹಿಂದಿನ ಹಲವಾರು ವರ್ಷಗಳನ್ನು ನೋಡಿದರೆ ಇದು ತುಂಬ ಕಡಿಮೆ. ಮೇ ತಿಂಗಳಲ್ಲಿ ಇದೇ ಸಂಖ್ಯೆಯು 3.05 ಕೋಟಿಗೆ ಏರಿದೆ. ಜೂನ್ ಮೂರನೆ ವಾರದವರೆಗೆ 2.84 ಕೋಟಿ ಕುಟುಂಬಗಳಿಗೆ ಕೆಲಸ ಸಿಕ್ಕಿದ್ದು ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚಾದಂತೆ. ಸರಾರಿ 23 ದಿನಗಳ ಕೆಲಸ ಮತ್ತು 200 ರೂಪಾಯಿ ದಿನಗೂಲಿಯೊಂದಿಗೆ ತಿಂಗಳಿಗೆ ಸರಾಸರಿ 1500 ರೂಪಾಯಿ ಗಳಿಸಿದ್ದಾರೆ. ಇದು ಅಲ್ಪವಾದರೂ ಸಹ ಮನರೇಗಾ ಕೆಲಸ ಮತ್ತಷ್ಟು ವಿಸ್ತರಿಸಲ್ಪಟ್ಟಂತಾಗಿದೆ. ಕೋವಿಡ್ ಕಾರಣವಾಗಿ ಸರಕಾರವು ಹೇರಿದ ಅತಾರ್ಕಿಕವಾದ ಮತ್ತು ಪೂರ್ವತಯಾರಿ ಇಲ್ಲದೆ ಹೇರಲ್ಪಟ್ಟ ಲಾಕ್ಡೌನ್ ಹಿನ್ನೆಲೆಯಲ್ಲಿ ದುಡಿಯುವ ಜನತೆಯು ಗ್ರಾಮಗಳಿಗೆ ವಲಸೆ ಹೊರಟಿದ್ದರು. ಅಥವ ಕೇಂದ್ರದ ಬಿಜೆಪಿ ಸರಕಾರವೇ ಶ್ರಮಿಕರನ್ನು ಅವರ ಕುಟುಂಬಗಳನ್ನು ನಿರ್ದಯವಾಗಿ ಬೀದಿಗೆ ದೂಡಿಬಿಟ್ಟಿತು. ಅಂಥವರಿಗೆ ಗ್ರಾಮಗಳಲ್ಲಿ ನೆರವಿಗೆ ಬಂದಿದ್ದು ಮನರೇಗಾ ಕಾಯ್ದೆಯೇ. ಈ ಹಿನ್ನೆಲೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕೆಲಸದ ಬೇಡಿಕೆ ಹೆಚ್ಚಿತು. ಆದರೆ ಕೆಲಸ ಕೇಳಿ ಬಂದ 1.82 ಕೋಟಿ ಜನರಿಗೆ ಕೆಲಸವನ್ನು ನಿರಾಕರಿಸಲ್ಪಟ್ಟಿತು.ಇದು ಅತ್ಯಂತ ಮನಕಲಕುವ ಸಂಗತಿ. 8.07 ಕೋಟಿ ಕಾರ್ಮಿಕರು ಕೆಲಸ ಕೇಳಿದ್ದರು. 6.25 ಕೋಟಿ ಕಾರ್ಮಿಕರು ಮಾತ್ರ ಕೆಲಸ ಪಡೆಯಲು ಸಾಧ್ಯವಾಯಿತು. ಉಳಿದೆಲ್ಲರಿಗೂ ಕೆಲಸ ದೊರೆತಿದ್ದಲ್ಲಿ ನಿರುದ್ಯೋಗದ ಪ್ರಮಾಣವು ತಗ್ಗುವ ಸಾಧ್ಯತೆಗಳಿದ್ದವು. ಕೇರಳ ಸರಕಾರವು ಪ್ರವಾಹದ ಸಮಯದಲ್ಲಿಯೂ ಮತ್ತು ಕೊರೊನಾ ಸೃಷ್ಟಿಸಿದ ನಿರುದ್ಯೋಗದ ಸಮಯದಲ್ಲಿಯೂ ಮನರೇಗಾವನ್ನು ಸಮರ್ಥವಾಗಿ ಬಳಸಿಕೊಂಡು ನಿರುದ್ಯೋಗ ತೊಡೆಯಲು ಸಾಧ್ಯವಾಯಿತು. ಅಲ್ಲಿನ ಎಡರಂಗ ಸರಕಾರಕ್ಕೆ ಯಶಸ್ಸಿನ ಶ್ರೇಯಸ್ಸು ಸಲ್ಲುವುದು. ಆದರೆ ಇತರೆ ರಾಜ್ಯಗಳಲ್ಲಿ ಮೂರನೆ ಒಂದು ಭಾಗದಷ್ಟು ಜನತೆಯನ್ನು ಕೆಲಸದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಮನರೇಗಾವನ್ನು ದುರ್ಬಲಗೊಳಿಸಲು ‘ಗರೀಬ್ ಕಲ್ಯಾಣ ರೋಜಗಾರ ಅಭಿಯಾನವನ್ನು’ ಕೇಂದ್ರ ಸರಕಾರವು ಆರಂಭಿಸಿತು. ಕಾಯ್ದೆಬದ್ದ ನಿಬಂಧನೆಯಿಲ್ಲದ ಈ ಯೋಜನೆಯ ಮೂಲಕ ಮನರೇಗಾವನ್ನು ಜನಮಾನಸದಿಂದ ದೂರ ಮಾಡುವ ಹುನ್ನಾರ ಕೇಂದ್ರ ಸರಕಾರವು ಹೊಂದಿತ್ತು. ಮಾತ್ರವಲ್ಲ ಕಳೆದ ವರ್ಷದ ಬಜೆಟ್ಟಿನಲ್ಲಿ ಮನರೇಗಾ ಅನುಷ್ಠಾನಕ್ಕಾಗಿ ಹೆಚ್ಚಿನ ಹಣವನ್ನು ಒದಗಿಸುವ ಬದಲಿಗೆ ಕಳೆದ ವರ್ಷಕ್ಕಿಂತಳು ಶೇಕಡಾ 40ರಷ್ಟು ಕಡಿಮೆ ಹಣವನ್ನು ಒದಗಿಸಲಾಯಿತು. ಇದು ಮನರೇಗಾದ ಕತ್ತು ಹಿಚುಕುವ ಹುನ್ನಾರವೇ ಹೌದು. ಆದರೆ ಗ್ರಾಮೀಣ ಪ್ರದೇಶದಲ್ಲಿ ಜನತೆಯು ಕೆಲಸಕ್ಕಾಗಿ ಸಂಘಟಿತರಾಗಿ ಸಂಘರ್ಷಕ್ಕೂ ಸಿದ್ಧರಾದ ಅನೇಕ ಉದಾಹರಣೆಗಳು ಸಿಗುತ್ತುವೆ. ಮನರೇಗಾ ಅಂದರೆನೇ ಸಂಘರ್ಷ ಎನ್ನುವಂತಾಗಿದ್ದರಿAದ ಮನರೇಗಾ ಜಾರಿಗಾಗಿ ಜನತೆಯ ನಡುವೆ ನಿರಂತರ ಕೆಲಸ ಮಾಡಬೇಕಾದ ಬಹುದೊಡ್ಡ ಹೊಣೆಯು ನಮ್ಮ ಪಕ್ಷದ್ದಾಗಿದೆ. 200 ದಿನಗಳ ಕೆಲಸಕ್ಕಾಗಿ ಮತ್ತು ರೂ.600 ಕೂಲಿಗಾಗಿ ಆಗ್ರಹಿಸಬೇಕಿದೆ. ದಲಿತ, ಆದಿವಾಸಿ, ಅಲೆಮಾರಿ, ದೇವದಾಸಿ ಸಮುದಾಯಕ್ಕೆ ನಿರ್ಬಂಧವಿಲ್ಲದೆ ವರ್ಷಪೂರ್ತಿ ಬೇಡಿಕೆಗನುಸರಿಸಿ ಕೆಲಸ ಕೊಡಲು ಸಾಧ್ಯವಾಗಬೇಕು ಎಂದು ಸಿಪಿಐ(ಎಂ) ಪಕ್ಷದ 23ನೇ ರಾಜ್ಯ ಸಮ್ಮೇಳನವು ಆಗ್ರಹಿಸುವುದು.
ಕೋವಿಡ್ ಮತ್ತು ಕೋವಿಡ್ ಹೆಸರಿನ ಲಾಕ್ಡೌನ್ ನಂತರದಲ್ಲಿ ನಗರ ಪ್ರದೇಶಗಳಲ್ಲಿಯೂ ವಿಪರೀತವಾಗಿ ನಿರುದ್ಯೋಗ ಬೆಳೆದಿದೆ. ಜನತೆಯ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿದ್ದು ಕೇಂದ್ರ ಸರಕಾರದ ಆರ್ಥಿಕ ನೀತಿಯೇ ಆಗಿದೆ. ಕಾರ್ಪೋರೆಟ್ ಸಂಪತ್ತು ಹೆಚ್ಚಿಸಲೆಂದೇ ತಾನು ಅಧಿಕಾರದಲ್ಲಿರುವುದು ಎಂಬುದಕ್ಕೆ ಕೇಂದ್ರ ಸರಕಾರದ ‘ದೇಶೀಯ ಸಂಪತ್ತು ಮಾರಾಟ’ ನೀತಿಯೇ ಬಹುದೊಡ್ಡ ಪುರಾವೆ. ಈ ಎಲ್ಲ ಕಾರಣಗಳಿಂದ ನಗರದ ಸ್ಲಂ ಪ್ರದೇಶ ಮಾತ್ರವಲ್ಲ ಎಲ್ಲ ಕಡೆಯೂ ನಿರುದ್ಯೋಗ ತಾಂಡವವಾಡುತ್ತಿದೆ. ಶ್ರಮ ಮಾರಾಟದ ವೃತ್ತಗಳು ಬೆಳೆಯುತ್ತಿವೆ. ಕೆಲಸ ದೊರೆಯದ ಕಾರಣವಾಗಿ ದೇಹಕ್ಕೆ ಬೇಕಾದಷ್ಟು ಕ್ಯಾಲರಿ ಆಹಾರ ದೊರೆಯುತ್ತಿಲ್ಲ. ಕ್ರಮೇಣ ದೇಹವು ದುರ್ಬಲವಾಗಿ ಅನೇಕ ರೋಗಗಳ ಕೇಂದ್ರವಾಗುತ್ತಿದೆ. ಸಣ್ಣ ಪುಟ್ಟ ರೋಗಗಳಿಗೂ ಸಾವುಗಳು ಹೆಚ್ಚುತ್ತಿರುವುದು ನೋಡಿದರೆ ಇವೆಲ್ಲವೂ ಹಸಿವಿನ ಸಾವುಗಳೇ ಆಗಿರುವ ಎಲ್ಲ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ಆದ್ದರಿಂದ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ನಗರಕ್ಕೂ ವಿಸ್ತರಿಸುವ ಅಗತ್ಯವಿದೆ. ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಲು ಸಿಪಿಐಎಂ ಪಕ್ಷವು ಆಗ್ರಹಿಸುವುದು.
ಮಂಡನೆ: ಕಾಂ. ದೇವಿ
ಅನುಮೋದನೆ: ಕಾಂ. ಅಂಬುಬಾಯಿ