ರಾಜ್ಯದಲ್ಲಿನ ಲಕ್ಷಾಂತರ ಸಾರ್ವಜನಿಕ ಹಾಗೂ ಸಮುದಾಯಗಳ ಮಸಣಗಳಲ್ಲಿ ಸಾರ್ವಜನಿಕ ಹೆಣಗಳನ್ನು ಹೂಳಲು ಕುಣಿ ಅಗೆಯುವ ಮತ್ತು ಮುಚ್ಚುವ ಹಾಗೂ ಮಸಣಗಳ ಸ್ವಚ್ಛತೆಯಲ್ಲಿ ತೊಡಗಿರುವ ಲಕ್ಷಾಂತರ ಮಸಣ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೇ ವಂಚನೆಗೊಳಗಾಗಿದ್ದಾರೆ. ಸಾಮಾಜಿಕ ದೌರ್ಜನ್ಯಕ್ಕೊಳಗಾದ ದಲಿತ ಸಮುದಾಯದವರೇ ಹೆಚ್ಚಾಗಿ, ಶತ ಶತಮಾನಗಳಿಂದ ಸಾರ್ವಜನಿಕ ಮಸಣಗಳಲ್ಲಿ ತಮ್ಮನ್ನು ಬಿಟ್ಟಿ ಚಾಕರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸುವ ಈ ದಿನಗಳಲ್ಲೂ ಅವರ ಕೆಲಸವನ್ನು ಸೇವೆಯೆಂದು ಪರಿಗಣಿಸದಿರುವುದು ತೀವ್ರ ಖಂಡನೀಯವಾಗಿದೆ.
ಬಿಟ್ಟಿ ಚಾಕರಿಯನ್ನು ತೊಡೆದು ಅವರ ಸಾರ್ವಜನಿಕ ಕೆಲಸವನ್ನು ಸೇವೆಯೆಂದು ಪರಿಗಣಿಸಿ, ಅವರನ್ನು ಸಾರ್ವಜನಿಕ ಮಸಣಗಳ ನಿರ್ವಾಹಕರನ್ನಾಗಿ ಸ್ಥಳೀಯ ಸಂಸ್ಥೆಗಳು ನೇಮಿಸಿಕೊಳ್ಳುವಂತೆ, ರಾಜ್ಯ ಸರಕಾರ ಅಗತ್ಯ ಕ್ರಮವಹಿಸಬೇಕೆಂದು ಮತ್ತು ಅಗತ್ಯ ಸೇವಾ ನಿಯಮಾವಳಿಗಳನ್ನು ರೂಪಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ 23ನೇ ಸಮ್ಮೇಳನ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.
ಸದರಿ ಮಸಣ ಕಾರ್ಮಿಕರಿಗೆ ಮಾಸಿಕ 3,000 ರೂ.ಗಳ ಪೆನ್ಷನ್ ಜಾರಿಗೊಳಿಸಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ, ಪ್ರತಿ ಕುಣಿಗೆ 2,500 ರೂ.ಗಳ ವೇತನ ಒದಗಿಸಬೇಕು. ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು ಮತ್ತು ಮಸಣಗಳನ್ನು ವನಗಳಂತೆ ಅಭಿವೃದ್ಧಿ ಪಡಿಸಿ ಸಾರ್ವಜನಿಕ ಸೇವೆಯನ್ನು ಬಲಗೊಳಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸುತ್ತದೆ.