ನಿರುದ್ಯೋಗದ ಸಮಸ್ಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗರಿಷ್ಟ ಮಟ್ಟ ತಲುಪುತ್ತಿದೆ. ನವ ಉದಾರವಾದ ನೀತಿಗಳು ವೇಗ ಪಡೆಯುತ್ತಿದ್ದಂತೆ ನಿರುದ್ಯೋಗದ ದರವೂ ಹೊಸ ಎತ್ತರಕ್ಕೆ ಏರುತ್ತಿದೆ. `ಪ್ರತಿ ಕುಟುಂಬದಲ್ಲೂ ಕನಿಷ್ಟ ಒಬ್ಬ ನಿರುದ್ಯೋಗಿ ಇದ್ದಾನೆ’ ಎಂಬಷ್ಟು ನಿರುದ್ಯೋಗ ಇಂದು ಮನೆ ಮನೆ ಸಮಸ್ಯೆಯೆಯಾಗಿ ವ್ಯಾಪಕತೆ ಪಡೆದಿದೆ.
ಸ್ವತಂತ್ರ ಭಾರತದಲ್ಲಿ ಕೈಗಾರಿಕೆ, ಉದ್ಯಮಗಳ ಸ್ಥಾಪನೆಯ ಸಂದರ್ಭ ಉದ್ಯೋಗ ಸೃಷ್ಟಿಯೂ ಅದರ ಪ್ರಧಾನ ಉದ್ದೇಶಗಳಲ್ಲಿ ಒಂದಾಗಿತ್ತು. ಅದರಲ್ಲಿಯೂ ಸಾರ್ವಜನಿಕ ರಂಗದ ಉದ್ಯಮಗಳು ಉದ್ಯೋಗ ಸೃಷ್ಟಿಯನ್ನು ಆದ್ಯತೆಯಾಗಿ ಹೊಂದಿದ್ದವು. ಆದರೆ ಮುಕ್ತ ಮಾರುಕಟ್ಟೆ, ನವ ಉದಾರವಾದದ ನೀತಿಗಳು ಜಾರಿಗೊಂಡ ಮೇಲೆ ಬಂಡವಾಳ ಹೂಡಿಕೆಯ ಪ್ರಧಾನ ಉದ್ದೇಶ ಲಾಭ ಮಾತ್ರ ಎಂಬ ಮನೋಭಾವ ಖಾಸಗಿ, ಸಾರ್ವಜನಿಕ ರಂಗ ಎರಡರಲ್ಲೂ ಎದ್ದು ಕಾಣುತ್ತಿದೆ. ಉದ್ಯೋಗಿಗಳ ಕಡಿತ, ಗುತ್ತಿಗೆ ಹೊರಗುತ್ತಿಗೆ ಪದ್ದತಿಗಳು ಉದ್ಯೋಗವಕಾಶಗಳನ್ನು ಸೀಮಿತಗೊಳಿಸಿದವು. ಬಳಸು, ಬಿಸಾಕು ಕಣ್ಣೋಟಗಳು, ಭದ್ರತೆ ಇಲ್ಲದ ಅರೆ ವೇತನದ, ಗೌರವ ಧನದ ಉದ್ಯೋಗಗಳು ಬಹುತೇಕರನ್ನು ಜೀವನ ನಿರ್ವಹಣೆ ನಡೆಸಲಾಗದ ಆದಾಯದ ಅರೆ ಉದ್ಯೋಗಿಗಳನ್ನಾಗಿಸಿದೆ. ಸಾರ್ವಜನಿಕ ರಂಗದ ಉದ್ಯಮಗಳ ಖಾಸಗೀಕರಣ ಉದ್ಯೋಗ ನಷ್ಟಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ.
ಬ್ಯಾಂಕ್ಗಳು, ರೈಲ್ವೆ ಸೇರಿದಂತೆ ಸರಕಾರದ ಬಹುತೇಕ ಇಲಾಖೆಗಳಲ್ಲಿ ಹೆಚ್ಚಿನ ಹುದ್ಧೆಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ಕರ್ನಾಟಕ ರಾಜ್ಯ ಸರಕಾರದ ಇಲಾಖೆಗಳಲ್ಲೇ ಸರಿಸುಮಾರು ಎರಡು ಲಕ್ಷ ಉದ್ಯೋಗಗಳು ಭರ್ತಿಯಾಗದೆ ಖಾಲಿ ಬಿದ್ದಿರುವುದು ಆತಂಕಕಾರಿ ವಿಷಯ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಸರಕಾರದ ಖಜಾನೆಗೆ ದೊಡ್ಡ ಹೊರೆ ಬೀಳಲಿದೆ ಎಂದು ರಾಜ್ಯದ ಕಂದಾಯ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿರುವುದು ಸರಕಾರಗಳನ್ನು ನಡೆಸುವವರು ನಿರುದ್ಯೋಗ ಸಮಸ್ಯೆಯ ಕುರಿತು ಹೊಂದಿರುವ ದೃಷ್ಟಿಕೋನವನ್ನು ಜಾಹೀರುಗೊಳಿಸುತ್ತದೆ.
ಏಳು ವರ್ಷಗಳ ಹಿಂದೆ ಅಧಿಕಾರಕ್ಕೇರುವಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಯುವಜನರಿಗೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಯ ಕುರಿತು ಯಾವ ಪ್ರಯತ್ನವನ್ನೂ ಮಾಡಿಲ್ಲ. ಬದಲಿಗೆ, ಕಾರ್ಪೊರೇಟ್ ಬಂಡವಾಳವಾದದ ಪರವಾದ ಬಿಜೆಪಿ ಸರಕಾರದ ನೀತಿಗಳು ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ತಪ್ಪಾದ ಆರ್ಥಿಕ ನೀತಿಗಳ ಜೊತೆಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ಅವೈಜ್ಞಾನಿಕ ಲಾಕ್ಡೌನ್ ಪದ್ದತಿಯನ್ನು ಅಳವಡಿಸಿಕೊಂಡದ್ದು ಉದ್ಯೋಗದ ಬಿಕ್ಕಟ್ಟನ್ನು ಮತ್ತಷ್ಟು ಹಿಗ್ಗಿಸಿತು. ಇಂದು ಉದ್ಯೋಗ ಸೃಷ್ಟಿಯ ಬದಲಿಗೆ ಉದ್ಯೋಗ ನಷ್ಟದ ಕಡೆಗೆ ದೇಶ ದಾಪುಗಾಲು ಇಡುತ್ತಿದೆ.
ದುಬಾರಿಯಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತವಾದ ಸರ್ಟಿಫಿಕೇಟ್ ಪಡೆದು ಲಕ್ಷಾಂತರ ಸಂಖ್ಯೆಯಲ್ಲಿ ಹೊರಬರುವ ವಿದ್ಯಾವಂತ ಯುವಜನತೆಗೆ ಅವರು ಪಡೆದ ಸರ್ಟಿಫಿಕೇಟ್ಗಳಿಗೆ ಅನುಗುಣವಾದ ಉದ್ಯೋಗಗಳು ಲಭ್ಯವಿಲ್ಲದೆ ಅಸಹಾಯಕರಾಗುತ್ತಿದ್ದಾರೆ. ಇದು ಸಾಮಾಜಿಕವಾಗಿಯೂ ಅಶಾಂತಿಗೆ ಕಾರಣವಾಗುತ್ತಿದೆ. ಹತಾಶ ಯುವಜನತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಮತಾಂಧ, ಛಿದ್ರಕಾರಕ ವಿಚಾರಗಳತ್ತ ಆಕರ್ಷಿತರಾಗುವುದು, ಕ್ಷೋಭೆ ಹುಟ್ಟಿಸುವ ಶಕ್ತಿಗಳ ಕೈಗೆ ಸಿಲುಕಿ ಬಲಿಪಶುಗಳಾಗುತ್ತಿರುವುದು ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಗೈಯ್ಯುವವವರ ಪ್ರಮಾಣವೂ ಹೆಚ್ಚುತ್ತಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ನಿರುದ್ಯೋಗ ಸಮಸ್ಯೆ ಬಗೆಹರಿಸಲು, ಉದ್ಯೋಗ ಸೃಷ್ಟಿಸುವ ನೀತಿಗಳನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ 2022ರ ಜನವರಿ 2 ರಿಂದ 4ರ ವರೆಗೆ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)- ಸಿಪಿಐ(ಎಂ) ಪಕ್ಷದ 23ನೇ ಕರ್ನಾಟಕ ರಾಜ್ಯ ಸಮ್ಮೇಳನವು ಆಗ್ರಹಿಸುತ್ತದೆ ಹಾಗೂ ನಿರುದ್ಯೋಗದ ಸಮಸ್ಯೆಗೆ ಎದುರಾಗಿ ವಿದ್ಯಾರ್ಥಿ, ಯುವಜನರನ್ನು ಸಂಘಟಿಸಿ ಪ್ರಬಲ ಹೋರಾಟ ರೂಪಿಸಲು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.