ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿರುವುದು ಮಹಾನಗರದ ಜನತೆಗೆ ದೊಡ್ಡ ಅಪಾಯದ ಸಂಕೇತವಾಗಿದೆ. ಇದರಿಂದ ದುಡಿಯುವ ಸಾಮಾನ್ಯ ಜನತೆಯ ಜೀವ, ಜೀವನ ಎರಡು ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಕೆಲಸ ಮತ್ತು ಜೀವನ ನಿರ್ವಹಣೆಗಾಗಿ ಪ್ರತಿ ನಿತ್ಯ 40 ಲಕ್ಷಕ್ಕೂ ಹೆಚ್ಚಿನ ಜನ ಬಿಎಂಟಿಸಿ ಬಸ್ ಸೇವೆ ಅವಲಂಬಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಮತ್ತು ಬಿಎಂಟಿಸಿ ಸಂಸ್ಥೆ ಕೂಡಲೇ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ ಅಂತರ ಕಾಪಾಡಿಕೊಂಡು ಪ್ರಯಾಣಿಸಲು ಅನುವುಗೊಳಿಸಬೇಕು. ಅಂತರ ಕಾಪಾಡಲು ಬಸ್ ಪ್ರಯಾಣಿಕರ ಸಾಮರ್ಥ್ಯವನ್ನು ಅರ್ಧಕ್ಕೆ ಇಳಿಸಬೇಕು ಹಾಗೂ ಸರಿಯಾದ ರೀತಿಯಲ್ಲಿ ಬಸ್ಸುಗಳನ್ನು ಸ್ಯಾನಿಟೈಸ್ ಮಾಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.
ಈಗಲೂ ಹಲವು ಮಾರ್ಗಗಳಲ್ಲಿ ಬಸ್ಸುಗಳು ತುಂಬಿ ತುಳುಕುತ್ತಿವೆ. ಬದುಕಿನ ಅನಿವಾರ್ಯತೆ ಆರ್ಥಿಕ ಅಸಹಾಯಕತೆ ದುಡಿಯುವ ಜನತೆಯನ್ನು ಅಂತಹ ತುಂಬಿ ತುಳುಕುವ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ದೂಡಿವೆ. ಇದು ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಂತರ ಕಾಪಾಡಿಕೊಂಡು ಸೋಂಕು ಹರಡದಂತೆ ತಡೆಯಲು ಕ್ರಮ ವಹಿಸಬೇಕೆಂದು ಹಾಗೂ ಬಸ್ಸುಗಳ ಸಂಖ್ಯೆಗಳನ್ನು ಹೆಚ್ಚಿಸಿ ಜನರ ಜೀವಗಳ ಬಗ್ಗೆ ಉದಾಸೀನ ಮಾಡಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ. ಇಲ್ಲವಾದಲ್ಲಿ ಸಂಭವನೀಯ ಅನಾಹುತಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.
ಜನರ ಜೀವ ಉಳಿಸಿ ಬದುಕನ್ನು ರಕ್ಷಿಸುವ ಜೊತೆಗೆ ರಾಜ್ಯ ಸರ್ಕಾರ ಸಧ್ಯ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಯಿಂದ ಜನತೆಯ ಆದಾಯಕ್ಕೆ ಉಂಟಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಬೇಕೆಂದು ಸಿಪಿಐ(ಎಂ) ಪಕ್ಷವು ಒತ್ತಾಯಿಸಿದೆ.
ಬಿ.ಎನ್.ಮಂಜುನಾಥ್, ಕಾರ್ಯದರ್ಶಿ, ಸಿಪಿಐ(ಎಂ), ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ.
ಎನ್.ಪ್ರತಾಪ್ ಸಿಂಹ, ಕಾರ್ಯದರ್ಶಿ, ಸಿಪಿಐ(ಎಂ), ಬೆಂಗಳೂರು ಉತ್ತರ ಜಿಲ್ಲಾ ಸಮಿತಿ